ಚಿಕ್ಕಮಗಳೂರು: ‘ವಿಶ್ವಕಪ್‌ನಲ್ಲಿ ಭಾರತ ತಂಡವೇ ನನ್ನ ಫೇವರಿಟ್. ಈ ಬಾರಿಯೂ ನಮ್ಮ ತಂಡವೇ ಟ್ರೋಫಿ ಗೆಲ್ಲಲಿದೆ’ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅಭಿಪ್ರಾಯ ಪಟ್ಟರು.
ಕರಡಿಹಳ್ಳಿ ಕಾವಲ್‌ನಲ್ಲಿರುವ ಗಾಲ್ಫ್ ಕ್ಲಬ್‌ನಲ್ಲಿ ಶನಿವಾರ ಮರುವಿನ್ಯಾಸಗೊಂಡ ಗಾಲ್ಫ್ ಕೋರ್ಸ್ ಉದ್ಘಾಟಿಸಿದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
’ನಮ್ಮ ಬೌಲರ್‌ಗಳು ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಗೆದ್ದಿರುವ ನಾಲ್ಕು ಪಂದ್ಯಗಳಲ್ಲಿ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದಾರೆ. ತಂಡವಾಗಿ ಎಲ್ಲರೂ ಚೆನ್ನಾಗಿ ಆಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
’ವೆಸ್ಟ್‌ಇಂಡೀಸ್ ವಿರುದ್ಧದ ಪಂದ್ಯ ಅತ್ಯಂತ ಕಷ್ಟಕರವೇ ಆಗಿತ್ತು. ಆ ಪಂದ್ಯದಲ್ಲಿ ನಮ್ಮವರು ಗೆದ್ದಿದ್ದಾರೆ. ಸರಿಯಾದ ಸಮಯಕ್ಕೆ ಭಾರತದ ಆಟಗಾರರು ಪಂದ್ಯದಿಂದ ಪಂದ್ಯಕ್ಕೆ ಹೆಚ್ಚಿನ ಸಾಮರ್ಥ್ಯ ತೋರುತ್ತಿದ್ದಾರೆ. ಮುಂದಿನ ಪಂದ್ಯಗಳಲ್ಲೂ ಇದೇ ರೀತಿ ಚೆನ್ನಾಗಿ ಆಡಿದರೆ ನಾವು ಸುಲಭವಾಗಿ ಟ್ರೋಫಿ ಉಳಿಸಿಕೊಳ್ಳ ಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಾಕಿಸ್ತಾನದ ಮಾಜಿ ಕ್ರಿಕೆಟಿಗರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ’ನಾನು ಪಾಕಿಸ್ತಾನ ವಿರುದ್ಧದ ಪಂದ್ಯ ವೀಕ್ಷಿಸಿದ್ದೇನೆ. ಪಿಚ್, ವಿಕೆಟ್ ಚೆನ್ನಾಗಿಯೇ ಇತ್ತು. ನಮ್ಮವರು ಅಲ್ಲಿ ಚೆನ್ನಾಗಿ ಆಡಿದರು. ಅಷ್ಟಕ್ಕೂ ಪಿಚ್ ಸಿದ್ಧಪಡಿಸಿದವರು ನಮ್ಮವರಲ್ಲ, ಆಸ್ಟ್ರೇಲಿಯಾದವರು’ ಎಂದರು.
ಕಪ್ ಗೆಲ್ಲಲು ಉತ್ತಮ ಅವಕಾಶ: ಕುಂಬ್ಳೆ:
‘ವಿಶ್ವಕಪ್ ಗೆಲ್ಲಲು ನಮ್ಮವರಿಗೆ ಒಳ್ಳೆಯ ಅವಕಾಶವಿದೆ. ನಮ್ಮವರು ಅದ್ಭುತವಾಗಿ ಆಡುತ್ತಿದ್ದಾರೆ’ ಎಂದು ಭಾರತ ತಂಡದ ಮಾಜಿ ನಾಯಕ, ಲೆಗ್‌ಸ್ಪಿನ್ ಬೌಲರ್ ಅನಿಲ್‌ಕುಂಬ್ಳೆ ನುಡಿದರು.
‘ನಾಕೌಟ್ ಹಂತದಲ್ಲಿ ಭಾರತಕ್ಕೆ ಮೊದಲು ಇಂಗ್ಲೆಂಡ್ ಅಥವಾ ಬಾಂಗ್ಲಾದೇಶ ಎದುರಾಗುವ ನಿರೀಕ್ಷೆ ಇದೆ. ಕ್ವಾರ್ಟರ್ ಫೈನಲ್‌ನಲ್ಲೂ ಇದೇ ರೀತಿ ಉತ್ತಮ ಪ್ರದರ್ಶನ ಮುಂದುವರಿಸಿದರೆ ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಬಹುದು. ನಮ್ಮ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.