ಕರ್ನಾಟಕ

ಕರ್ನಾಟಕದ ಆದಿವಾಸಿಗಳ ಆಶಾಕಿರಣ ಜಾಜಿ ಎಂಬ ಕಾಡು ಮಲ್ಲಿಗೆ

Pinterest LinkedIn Tumblr

pvec22jaji

ಕರ್ನಾಟಕದ ಆದಿವಾಸಿಗಳ ಆಶಾಕಿರಣದಂತೆ ಬದುಕಿದ ಜಾಜಿ ತಿಮ್ಮಯ್ಯ ತಮ್ಮ ಬದುಕಿನ ಪಯಣವನ್ನು ಮುಗಿಸಿದ್ದಾರೆ. ಹುಣಸೂರು ತಾಲ್ಲೂಕು ಹನಗೋಡು ಕಾಡಿನಲ್ಲಿಯೇ ಬದುಕಿದ್ದರೂ ಆದಿವಾಸಿಗರ ಬದುಕಿನಲ್ಲಿ ಕಿಚ್ಚು ಹಚ್ಚಿದ ಜಾಜಿ ಅವರ ಕನಸು ಇನ್ನೂ ನನಸಾಗಿಲ್ಲ. ಅವರು ಹಚ್ಚಿದ ಕಿಚ್ಚು ಇನ್ನೂ ಆರಿಲ್ಲ.

ಇಂದಿರಾ ಗಾಂಧಿ ಅವರಂತೆ ಜಾಜಿ ದೇಶವನ್ನು ಆಳಿದವರಲ್ಲ. ಶ್ರೀಮಂತ ಕುಟುಂಬದಿಂದ ಬಂದವರೂ ಅಲ್ಲ. ಕಿರಣ್‌ ಬೇಡಿ ಅವರಂತೆ ಖಡಕ್‌ ಅಧಿಕಾರಿಯಲ್ಲ. ಮೇಧಾ ಪಾಟ್ಕರ್‌ ಅವರಂತೆ ದೇಶಮಟ್ಟದ ಹೋರಾಟಗಾರರಲ್ಲ. ಅವರು ಅಕ್ಷರ ಲೋಕದ ಗೊಂಬೆಯೂ ಅಲ್ಲ. ಅವರಿಗೆ ಅಕ್ಷರ ಹುಟ್ಟಿನಿಂದ ಬರಲೇ ಇಲ್ಲ. ಆದರೆ ಸಹಸ್ರಾರು ವರ್ಷಗಳಿಂದ ಕಾಡಿನ ಚಿಪ್ಪಿನೊಳಗೇ ಇದ್ದ ಆದಿವಾಸಿಗರ ನೋವಿನ ಪ್ರತಿನಿಧಿಯಾಗಿದ್ದರು ಅವರು. ಅಕ್ಷರ ಇಲ್ಲದಿದ್ದರೂ ಪ್ರಜ್ಞೆಯ ಸೆಲೆಯಲ್ಲಿಯೇ ಬೆಳೆದು ಬಂದ ಕಾಡಿನ ಮಗಳು ಅವರು. ಅಧಿಕಾರದ ಗದ್ದುಗೆಯನ್ನು ಏರಿದರೂ ಅಧಿಕಾರ ಚಲಾಯಿಸಲು ಹೆದರುವ ನಾಡಿನ ಹೆಣ್ಣು ಮಕ್ಕಳಂತೆ ಅಲ್ಲ ಅವರು. ಕಾಡಿನಿಂದ ಬಂದು ನಾಡಿನಲ್ಲಿ ಗರ್ಜಿಸಿದವರು.

ಜಾಜಿ ಅವರ ಬದುಕು ಸಂಪೂರ್ಣ ಹೋರಾಟಮಯ. ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡಿದ ಅವರು ರಾಜಕೀಯದಲ್ಲಿಯೂ ತಮ್ಮ ಪ್ರಭಾವವನ್ನು ಬೀರಿದ್ದಾರೆ. ಗ್ರಾಮ ಪಂಚಾಯ್ತಿ ರಾಜಕಾರಣದಿಂದ ಆರಂಭಿಸಿ ಜಿಲ್ಲಾ ಪಂಚಾಯ್ತಿ ಮಟ್ಟದವರೆಗೆ ಬೆಳೆದವರು. ಮೈಸೂರು ಜಿಲ್ಲಾ ಪಂಚಾಯ್ತಿಯ ಉಪಾಧ್ಯಕ್ಷೆಯಾಗಿ ತಮ್ಮನ್ನು ನಂಬಿದ ಕಾಡು ಮಂದಿಗೆ ನ್ಯಾಯ ಒದಗಿಸಿದವರು. ರಾಜ್ಯದಲ್ಲಿ ಈ ಮಟ್ಟಕ್ಕೆ ಬೆಳೆದ ಮೊದಲ ಆದಿವಾಸಿ ಮಹಿಳೆ ಅವರು. ವಿಧಾನಸಭೆ ಚುನಾವಣೆಗೆ ನಿಂತು ಸೋತಿದ್ದರೂ ಹೋರಾಟದ ಹಾದಿಯನ್ನು ಬಿಟ್ಟವರಲ್ಲ.

ದೆಹಲಿಯಲ್ಲಿಯೂ ಚಳವಳಿಯನ್ನು ಮಾಡಿ ರಾಜಕಾರಣಿಗಳನ್ನು ನಡುಗಿಸಿದ ಜಾಜಿ ತಿಮ್ಮಯ್ಯ ತಮ್ಮ ಅಧಿಕಾರದಲ್ಲಿ ಯಾರೂ ತಲೆ ಹಾಕದಂತೆ ಮಾಡಿದ್ದರು. ಅವರು ಜಿಲ್ಲಾ ಪಂಚಾಯ್ತಿ ಸದಸ್ಯೆಯಾಗಿದ್ದಾಗ ತಮ್ಮ ಪತಿ ಆ ಕಡೆ ಬರದಂತೆ ನೋಡಿಕೊಂಡಿದ್ದರು. ಕಾಡಿನಲ್ಲಿದ್ದ ಜಾಜಿಯನ್ನು ಗುರುತಿಸಿ ಅವರಿಗೆ ಅಕ್ಷರ ಕಲಿಸಿ ಹೋರಾಟದ ಹಾದಿಯನ್ನು ತೋರಿದವರು ಹುಣಸೂರಿನ ಡೀಡ್‌ ಸಂಸ್ಥೆಯ ಶ್ರೀಕಾಂತ್‌, ಆದರೆ ಅಧಿಕಾರ ಬಂದಾಗ ಅವರನ್ನೂ ತಮ್ಮ ಹೆಸರಿನಲ್ಲಿ ಅಧಿಕಾರ ನಡೆಸಲು ಬಿಡಲಿಲ್ಲ.

ಆದಿವಾಸಿಗಳ ಅರಣ್ಯ ಹಕ್ಕು, ಭೂಮಿ ಹಕ್ಕು, ಬೆಟ್ಟದ ಕಾಡು, ನಾಗರಹೊಳೆಯಲ್ಲಿ ತಾಜ್‌ ಹೋಟೆಲ್‌ ವಿರುದ್ಧದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಜಾಜಿ ತಿಮ್ಮಯ್ಯ ಕಾಡಿನಿಂದ ಹೊರಬಂದ ಆದಿವಾಸಿಗಳಿಗೆ ಭೂಮಿ ಕೊಡಿಸಲು ನಿರಂತರ ಹೋರಾಟ ನಡೆಸಿದ್ದರು. ‘ಕಾಡಿನಿಂದ ಹೊರಬಂದ ನಮಗೆ ಬದುಕಲು ಒಂದಿಷ್ಟು ಭೂಮಿ ಕೊಡಿ ಎಂಬ ಕೂಗು ಸರ್ಕಾರಕ್ಕೆ ಕೇಳುತ್ತಿರಲಿಲ್ಲ. ನಮ್ಮ ಭೂಮಿಯನ್ನು ಅಪಹರಿಸಿದವರಿಂದ ನಾವು ಭೂಮಿಯನ್ನು ಪಡೆದುಕೊಳ್ಳಬೇಕಾಗಿತ್ತು. ಈ ಭೂಮಿ ನಮ್ಮದೇ ಆಗಿತ್ತು. ನಾವು ಈ ಕಾಡನ್ನು ಸಾವಿರಾರು ವರ್ಷಗಳಿಂದ ನೋಡಿಕೊಂಡು ಬಂದಿದ್ದೇವೆ. ನಾವು ಕಾಡಿನಲ್ಲಿ ಇದ್ದಾಗ ಕಾಡು ಸಮೃದ್ಧವಾಗಿತ್ತು. ನಾಡಿನ ಮಂದಿ ಕಾಡಿಗೆ ಬಂದ ಮೇಲೆ ಕಾಡು ಹಾಳಾಯಿತು. ನಮ್ಮನ್ನು ಬಲವಂತವಾಗಿ ಕಾಡಿನಿಂದ ಹೊರಕ್ಕೆ ಹಾಕಿದ ಮೇಲೆ ನಾವು ಭಿಕಾರಿಗಳಂತೆ ನಿಂತುಕೊಂಡಿದ್ದೇವೆ.

ನಮ್ಮ ಹಕ್ಕನ್ನು ನಾವು ಮತ್ತೆ ಪಡೆದುಕೊಳ್ಳಲೇ ಬೇಕು. ಅದಕ್ಕಾಗಿ ನಮಗೆ ಅಧಿಕಾರ ಬೇಕಾಗಿತ್ತು. ಅದಕ್ಕಾಗಿಯೇ ನಾನು ರಾಜಕೀಯಕ್ಕೆ ಬಂದೆ’ ಎಂದು ಹೇಳುತ್ತಿದ್ದ ಅವರು ನಿರಂತರವಾಗಿ ಅದರ ಬಗ್ಗೆ ಹೋರಾಟ ನಡೆಸುತ್ತಿದ್ದರು. 2006ರಲ್ಲಿ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬರಲು ಜಾಜಿ ತಿಮ್ಮಯ್ಯ ಅವರ ಹೋರಾಟದ ಕೊಡುಗೆ ಬಹಳಷ್ಟು ಇದೆ.

ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೆಹಲಿನಲ್ಲಿ ನಡೆದ ಅಖಿಲ ಭಾರತ ಆದಿವಾಸಿಗಳ ಸಮ್ಮೇಳನದಲ್ಲಿ ಭಾಗಿಯಾಗಿ ಜೇನು ಕುರುಬ ಸಮುದಾಯದ ಬಗ್ಗೆ ಭಾಷಣ ಮಾಡಿದ ಜಾಜಿ ಅಲ್ಲಿ ಆಗ ನಡೆಯುತ್ತಿದ್ದ ಅಯೋಡಿನ್‌ ಉಪ್ಪು ವಿರುದ್ಧದ ಚಳವಳಿಯಲ್ಲಿ ಭಾಗಿಯಾಗಿ ದೆಹಲಿ ಪೊಲೀಸರಿಂದ ಬಂಧನಕ್ಕೂ ಒಳಗಾಗಿದ್ದರು. 1999ರಲ್ಲಿ ಗಣರಾಜ್ಯೋತ್ಸವದ ವಿಶೇಷ ಅತಿಥಿಯಾಗಿ ದೆಹಲಿಗೆ ಹೋಗಿದ್ದ ಅವರು ಮತ್ತೊಮ್ಮೆ ದೆಹಲಿಯಲ್ಲಿ ಮಿಂಚಿದ್ದರು.

ನಾಗರಹೊಳೆ ಕಾಡಿನಿಂದ ಆದಿವಾಸಿಗರನ್ನು ಶಾಶ್ವತವಾಗಿ ಹೊರ ಹಾಕಲು ಯತ್ನಿಸಿದ ಸರ್ಕಾರದ ವಿರುದ್ಧ ನಡೆಸಿದ ಹೋರಾಟ ಹಾಗೂ ನಾಗರಹೊಳೆಯ ಮೂರ್ಕಲ್‌ನಲ್ಲಿ ತಾಜ್‌ ಹೊಟೇಲ್‌ ನಿರ್ಮಾಣದ ವಿರುದ್ಧ ಜಾಜಿ ನಡೆಸಿದ ಹೋರಾಟ ಅವರ ಬದುಕಿನ ಅತ್ಯಂತ ಮಹತ್ವದ ಕ್ಷಣಗಳಾಗಿದ್ದವು. ‘ನಮ್ಮನ್ನು ಕಾಡಿನಿಂದ ಹೊರಕ್ಕೆ ಅಟ್ಟಿ, ಹಣ ಇದ್ದವರ ಮೋಜು ಮೇಜುವಾನಿಗೆ ಹೊಟೇಲ್‌ ನಿರ್ಮಾಣ ಮಾಡುವುದನ್ನು ನಾವು ಸಹಿಸುವುದಿಲ್ಲ’ ಎಂದು ಕರೆ ಕೊಟ್ಟ ಅವರು ನಿರಂತರವಾಗಿ ತಿಂಗಳುಗಟ್ಟಲೆ ಹೋರಾಟ ನಡೆಸಿದ್ದೇ ಅಲ್ಲದೆ ಸುಪ್ರೀಂಕೋರ್ಟ್‌ವರೆಗೂ ಹೋಗಿ ತಾಜ್‌ ಹೋಟೆಲ್ ಬರುವುದನ್ನು ತಡೆದರು.

ತಾಜ್‌ ಹೋಟೆಲ್ ವಿರುದ್ಧ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಆಗ ಅರಣ್ಯ ಸಚಿವರಾಗಿದ್ದ ಗುರುಪಾದಪ್ಪ ನಾಗಮಾರಪಲ್ಲಿ ಅವರು ಹೋರಾಟಗಾರರೊಂದಿಗೆ ಸಂಧಾನಕ್ಕೆ ಬಂದಾಗ ‘ಪ್ರವಾಸೋದ್ಯಮದ ದೃಷ್ಟಿಯಿಂದ ತಾಜ್‌ನವರಿಗೆ ಹೋಟೆಲ್ ಮಾಡಲು ಜಾಗ ಕೊಟ್ಟಿದ್ದೇವೆ. ಅದರಿಂದ ಹಣ ಬರುತ್ತದೆ. ಅದನ್ನು ಆದಿವಾಸಿಗಳ ಪುನರ್‌ವಸತಿಗೇ ಬಳಸುತ್ತೇವೆ’ ಎಂದು ಹೇಳಿದರು. ಇದನ್ನು ಕೇಳಿ ಸಿಡಿದೆದ್ದ ಜಾಜಿ ‘ಕಾಡು ನಿಮ್ಮಪ್ಪನ ಆಸ್ತಿಯಲ್ಲ. ಅದು ನಮ್ಮಪ್ಪನ ಆಸ್ತಿ. ನಾವು ಇಲ್ಲಿನ ಮೂಲ ನಿವಾಸಿಗಳು. ನಮ್ಮನ್ನು ಹೊರಕ್ಕೆ ಹಾಕಿ ಅತಂತ್ರರನ್ನಾಗಿ ಮಾಡಿ ತಾಜ್‌ನವರಿಗೆ ಕಾಡು ಕೊಡಲು ಬಿಡಲ್ಲ. ಇಷ್ಟೆಲ್ಲಾ ಮಾತನಾಡುತ್ತೀರಲ್ಲ. ದೇಶ ಸೇವೆ ಮಾಡುವ ನೀವು ನಿಮ್ಮ ಆಸ್ತಿಯನ್ನು ದೇಶಕ್ಕಾಗಿ ಎಷ್ಟು ಬಿಟ್ಟುಕೊಟ್ಟಿದ್ದೀರಿ’ ಎಂದು ಸಚಿವರ ಬೆವರು ಇಳಿಸಿದರು. ಸಂಧಾನ ವಿಫಲವಾಯಿತು. ಹೋರಾಟ ಮುಂದುವರಿಯಿತು. ತಾಜ್‌ ಕಂಬಿ ಕಿತ್ತಿತು.

‘ಆ ಶಿವ ಕೊಟ್ಟಿದ್ದು ನಂಗ ಕಾಡು. ಸರ್ಕಾರ ಕಾಡಿಗೂ ಬೀಜ ನೆಟ್ಟಿಲ್ಲೆ’ ಎಂದು ಕೂಗುತ್ತಿದ್ದ ಜಾಜಿ ತಮ್ಮ ಬದುಕಿನ ಬಹುತೇಕ ಸಮಯವನ್ನು ಕಾಡಿನಲ್ಲಿಯೇ ಕಳೆದವರು. ‘ನಾಡು ನಮ್ಮನ್ನು ಬಾ ಎಂದು ಆತ್ಮೀಯವಾಗಿ ಕರೆಯಬೇಕಿತ್ತು. ಆದರೆ ನಾಡು ನಮ್ಮನ್ನು ಕಾಡಿನಿಂದ ಬಲವಂತವಾಗಿ ದಬ್ಬಿತು. ನೀರಿನಿಂದ ಹೊರ ಬಂದ ಮೀನಿನಂತಾದ ನಾವು ಇನ್ನೂ ನಾಡಿನಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದೇವೆ’ ಎಂದು ಅವರು ಯಾವಾಗಲೂ ಹೇಳುತ್ತಿದ್ದರು.

‘ಕಾಡಿನಲ್ಲಾದರೆ ನಮಗೆ ಯಾವ ಪ್ರಾಣಿ ಯಾವಾಗ ಹಾಯುತ್ತದೆ. ಯಾವಾಗ ಒದೆಯುತ್ತದೆ ಎನ್ನುವುದು ಗೊತ್ತಿರುತ್ತದೆ. ಆದರೆ ನಾಡಿನ ಪ್ರಾಣಿಯ ಚಲನವಲನ ಗೊತ್ತೇ ಆಗುವುದಿಲ್ಲ’ ಎಂದು ಹೇಳುತ್ತಿದ್ದ ಜಾಜಿ ಅವರಿಗೆ ಕಡೆಗೂ ನಾಡಿನ ಪ್ರಾಣಿಯ ಚಲನೆ ಅರ್ಥವಾಗಲೇ ಇಲ್ಲ.

Write A Comment