– ಕೆ.ಟಿ. ಗಟ್ಟಿ
ನಾವು ಇಂಗ್ಲಿಷರನ್ನು ಸೋಲಿಸಿದ್ದೇವೆ. ಆದರೆ ಇಂಗ್ಲಿಷನ್ನು ಸೋಲಿಸಲಾಗಿಲ್ಲ; ಗೆಲ್ಲಲೂ ಆಗಿಲ್ಲ. ಇಂಗ್ಲಿಷಿನ ಗ್ಲಾಮರ್‌ನಿಂದ ನಮ್ಮನ್ನು ನಾವು ಬಿಡಿಸಿಕೊಂಡರೆ ಇಂಗ್ಲಿಷನ್ನು ಗೆಲ್ಲಬಹುದು. ಅದಕ್ಕೆ ಮಾಡಬೇಕಾದ್ದು ಒಂದಿಷ್ಟು ಇಂಗ್ಲಿಷ್ ಕಲಿತ ಎಲ್ಲರೂ ಇಂಗ್ಲಿಷನ್ನು ಮನಸೋ ಇಚ್ಛೆ ಬಾಯಿಗೆ ಬಂದಂತೆ ಮಾತಾಡುವುದು. ಕನ್ನಡಕ್ಕೆ ಈಗ ಅಡರಿರುವ ಈ ದುರಭ್ಯಾಸದ ಕುತ್ತನ್ನು ಇಂಗ್ಲಿಷಿಗೆ ವರ್ಗಾಯಿಸಬೇಕು. ಆಗ ಇಂಗ್ಲಿಷಿನ ಸಾಮಾಜಿಕ ಪಾರಮ್ಯ ತೊಲಗುತ್ತದೆ.
ಇಂಗ್ಲಿಷ್ ಶ್ರೇಷ್ಠವೂ ಅಲ್ಲ, ಕನ್ನಡ ನಿಕೃಷ್ಟವೂ ಅಲ್ಲ. ಇಂಗ್ಲಿಷ್ ಬಲಿಷ್ಠವೆನಿಸುತ್ತಿರುವುದು ಇಂಗ್ಲಿಷಿನ ಕಾರಣದಿಂದ ಅಲ್ಲ, ಕನ್ನಡದ ಬಳಕೆ ದುರ್ಬಲವಾಗಿರುವುದರಿಂದ. ಇಂಗ್ಲಿಷಿನಲ್ಲಿ ಒಂದು ತಪ್ಪುಚ್ಚಾರ, ತಪ್ಪು ಸ್ಪೆಲ್ಲಿಂಗ್, ತಪ್ಪು ಪದ ಬಳಕೆ ಉಂಟಾದರೆ ಅದು ಎದ್ದೆದ್ದು ಕಾಣಿಸುತ್ತದೆ. ಕನ್ನಡ ಮಾತಿನಲ್ಲಿ ಮತ್ತು ಬರಹದಲ್ಲಿ ಈ ಮೂರು ಬಗೆಯ ದುರ್ಬಳಕೆ ಇವತ್ತು ‘ಪರವಾಗಿಲ್ಲ’ ಎಂಬಂತೆ ಎಲ್ಲೆಲ್ಲೂ ಚಾಲ್ತಿಯಲ್ಲಿದೆ.
ಮಾತು, ಓದು ಮತ್ತು ಬರಹದ ಮೂಲಕ ಮಾತ್ರವೇ ಒಂದು ಭಾಷೆಯನ್ನು ಸಶಕ್ತವಾಗಿರಿಸಲು ಸಾಧ್ಯ. ಮಾತು, ಓದು ಮತ್ತು ಬರಹ ಸಾಹಿತ್ಯದ ಕಕ್ಷೆಯಲ್ಲಿ ನಡೆಯುವ ನಿರಂತರ ಕ್ರಿಯೆಯಾಗಿದ್ದರೆ ಸಾಹಿತ್ಯ ಕೂಡ ಸಶಕ್ತವಾಗಿ ಬೆಳೆಯುತ್ತಿರುತ್ತದೆ. ನುಡಿ ಶುದ್ಧತೆ, ಭಾಷೆಯ ಶಕ್ತಿ ಮತ್ತು ಸೌಂದರ್ಯಕ್ಕೆ ಅಗತ್ಯ. ಇಂಗ್ಲಿಷ್ ಭಾಷೆಯಲ್ಲಿ ಅದಕ್ಕೆ ಕಿಂಚಿತ್ತೂ ಧಕ್ಕೆ ಉಂಟಾಗಿಲ್ಲ. ಕನ್ನಡಕ್ಕೆ ಯಾಕೆ ಈ ಕೇಡು ಬಂತು?
ಇವತ್ತು ಇಂಗ್ಲಿಷ್ ಎಂಬ ಭಾಷೆ ಜಗತ್ತನ್ನೇ ಗೆಲ್ಲುತ್ತಿದೆ ಎನ್ನುವ ಭಯದಿಂದ ಜಗತ್ತಿನ ಎಲ್ಲಾ ಭಾಷೆಗಳೂ ನಡುಗುತ್ತಿವೆ.
ಜಗತ್ತಿನಾದ್ಯಂತ ಎಲ್ಲಾ ಭಾಷೆಗಳೂ ಇಂಗ್ಲಿಷ್ ಭಾಷೆಯ ಹೊಡೆತಕ್ಕೆ ಗುರಿಯಾಗುತ್ತಿರುವ ವಾರ್ತೆಗಳು ಕೇಳಿಬರುತ್ತಿವೆ. ಕೆಲವು ಭಾಷೆಗಳನ್ನಂತೂ ಇಂಗ್ಲಿಷ್ ಕೊಂದು ಅಥವಾ ತಿಂದು ಮುಗಿಸಿದೆ. ಕನ್ನಡವನ್ನು ಅದು ನಿಧಾನವಾಗಿ ತಿನ್ನುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಕನ್ನಡದ ಬಾಯಿಗೆ ಇಂಗ್ಲಿಷನ್ನು ತುರುಕುವ ಶೈಲಿಯ ಇಂದಿನ ಆಡುಗನ್ನಡವನ್ನು ನಾವು ದಿನಾ ಆಲಿಸುತ್ತಾ ಇದ್ದೇವೆ.
‘ಇಂಗ್ಲಿಷ್ ಒಂದು ಕೊಲೆಗಡುಕ ಭಾಷೆ’ ಎಂದು ಮೊನ್ನೆ ಮೊನ್ನೆ ಮರಾಠಿ ಲೇಖಕ ಭಾಲಚಂದ್ರ ನೇಮಾಡೆ ತನಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿದ ಹೊತ್ತಿನಲ್ಲೇ ಹೇಳಿದ್ದು ನಿಜವೆಂದು ಇಡೀ ಭಾರತ ದೇಶದಲ್ಲಿ ಎಲ್ಲರಿಗೂ ಅನಿಸಿರಬಹುದು. ಆದರೆ ಈ ಮಾತನ್ನು ಸ್ವಲ್ಪ ವಿಶ್ಲೇಷಣೆಗೆ ಗುರಿ ಮಾಡಬೇಕಾದ ಅಗತ್ಯ ಇದೆ.
ಇಂಗ್ಲಿಷ್ ಭಾಷೆ ಇವತ್ತು ಜಗದ್ವ್ಯಾಪಿಯಾಗಿದೆಯೆಂದರೆ, ಇಂಗ್ಲಿಷ್ ಸಾಹಿತ್ಯವನ್ನು ಜನ ಅಪ್ಪಿಕೊಂಡು ತಮ್ಮ ಭಾಷೆಯ ಸಾಹಿತ್ಯವನ್ನು ತಿಪ್ಪೆಗೆ ಎಸೆದಿದ್ದಾರೆ ಎಂದು ಅರ್ಥವಲ್ಲ. ತಮ್ಮ ಸಂಸ್ಕೃತಿಯನ್ನು ತೊರೆದು ಬ್ರಿಟಿಷ್ ಸಂಸ್ಕೃತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದೂ ಅರ್ಥವಲ್ಲ. ಇಂಗ್ಲಿಷ್ ಭಾಷೆಯ ಇಂದಿನ ಪಾರಮ್ಯಕ್ಕೆ ಅದು ತಂತ್ರಜ್ಞಾನದ, ಸರ್ವ ಬಗೆಯ ತಾಂತ್ರಿಕ ಶಿಕ್ಷಣದ ಭಾಷೆಯಾಗಿ ಬೆಳೆದು ಬಂದು ಆ ಕಾರಣಕ್ಕೆ ಸರ್ವತ್ರ ಸ್ವೀಕೃತವಾಗಿರುವುದೇ ಕಾರಣ. ಅದಲ್ಲದೆ ಬೇರೆ ಕಾರಣವೇ ಇಲ್ಲ.
ಇಂಗ್ಲಿಷ್ ಇವತ್ತು ಒಂದು ಸಣ್ಣ ಸಂಖ್ಯೆಯ ಮಂದಿಯ ಅರೆಬರೆ ಆಡುಭಾಷೆಯಾಗಿರುವಂತೆಯೇ ತುಸು ಚೆನ್ನಾಗಿ ಕಲಿತುಕೊಂಡವರ ಒಂದು ‘ಟೂಲ್’ನಂತೆ ಬಳಕೆಯಲ್ಲಿದೆ. ಆದ್ದರಿಂದ ಅದು ಇವತ್ತು ಎಲ್ಲಾ ವಿಷಯ ಕಲಿಕೆಯ ಪ್ರಭುವಾಗಿದೆ. ಆದರೆ ಇಂಗ್ಲಿಷಿಗಿರುವ ಮೌಲ್ಯ ಇಷ್ಟೆ, ನಮ್ಮ ಬದುಕಿನಲ್ಲಿ, ನಮ್ಮ ಸಂಸ್ಕೃತಿಯಲ್ಲಿ ಇಂಗ್ಲಿಷಿಗೆ ಬೇರೆ ಮೌಲ್ಯ ಇಲ್ಲ. ಆದರೆ ಇಂಗ್ಲಿಷಿನ ಅಗತ್ಯ ಇಷ್ಟಕ್ಕೆ ಮಾತ್ರ ಎಂಬ ಅರಿವು ಇಲ್ಲದ ಪೋಷಕರ ಅಜ್ಞಾನವನ್ನು ಬಂಡವಾಳವಾಗಿಸಿಕೊಂಡಿರುವ ಶಿಕ್ಷಣ ಸಂಸ್ಥೆಗಳು ಇಂಗ್ಲಿಷಿಗಿಂತ ದೊಡ್ಡದಾಗಿ ಬೆಳೆದಿವೆ ನಿಜ.
ಈ ಶಿಕ್ಷಣ ಸಂಸ್ಥೆಗಳ ನೆರವಿಲ್ಲದೆ ಇಂಗ್ಲಿಷ್ ಭಾಷೆಯನ್ನು ಕೆಲವು ಗಂಟೆಗಳ ಕಲಿಕೆಯಲ್ಲಿ ಕರಗತ ಮಾಡಿಕೊಳ್ಳಲು ಸಾಧ್ಯವಿದೆ ಎಂಬ ಅರಿವನ್ನು ವಿದ್ಯಾರ್ಥಿಗಳ ಪೋಷಕರಲ್ಲಿ ಉಂಟುಮಾಡುವ ಪ್ರಯತ್ನವನ್ನು ಯಾರೂ ಮಾಡುತ್ತಿಲ್ಲ. ಕೇವಲ ಒಂದೇ ಒಂದು ನಿರ್ಧಾರದಿಂದ ಸರ್ಕಾರ ಇದನ್ನು ಮಾಡಬಹುದು. ಆದರೆ ಧೃತರಾಷ್ಟ್ರ ಸರ್ಕಾರಗಳು ಅದನ್ನು ಮಾಡುತ್ತಿಲ್ಲ.
‘ನಾನು ಕನ್ನಡ ಪುಸ್ತಕ ಓದುವುದಿಲ್ಲ’, ‘ನನಗೆ ಕನ್ನಡ ಮರೆತುಹೋಗಿದೆ’ ಎಂದು ಮುಂತಾಗಿ ಹೇಳುವವರು ಅಲ್ಲೊಬ್ಬರು ಇಲ್ಲೊಬ್ಬರು ಇರುತ್ತಾರೆ. ಇವರೆಲ್ಲಾ ವಿದ್ಯಾವಂತರು, ಮತ್ತು ಮುಖ್ಯವಾಗಿ, ಒಳ್ಳೆಯ ಗಳಿಕೆಯುಳ್ಳವರು ಎನ್ನುವುದನ್ನು ಗಮನಿಸಬಹುದು. ಇಂಥ ಅಪವಾದಗಳು ಭಾಷೆಯ ಬಳಕೆಯಲ್ಲೇ ಏಕೆ, ಎಲ್ಲಾ ವಿಚಾರಗಳಲ್ಲಿಯೂ ಎಲ್ಲಾ ಅಭ್ಯಾಸ ಮತ್ತು ಕ್ರಿಯೆಗಳಲ್ಲಿಯೂ ಇರುತ್ತವೆ. ಅದನ್ನು ಗಣನೆಗೆ ತೆಗೆದುಕೊಳ್ಳಬೇಕಾದ ಅಗತ್ಯವೇ ಇಲ್ಲ.
ಕನ್ನಡ ಮರೆತೋ ಅಥವಾ ಮರೆಯದೆಯೋ ಇಂಗ್ಲಿಷ್, ಹಿಂದಿ, ತೆಲುಗು ಅಥವಾ ಬೇರೆ ಯಾವುದೋ ಭಾಷೆಯನ್ನು ಮನೆ ಭಾಷೆಯಾಗಿ ಆಡುವವರನ್ನು ಹೀಗಳೆಯುವುದು ಸರಿಯಲ್ಲ. ನಮ್ಮ ನಾಡು ಸಾಕಷ್ಟು ದೊಡ್ಡದು. ಹಲವು ಭಾಷೆಗಳನ್ನು ಚೆನ್ನಾಗಿ ಆಡುವ ಸಾಮರ್ಥ್ಯ ಕೂಡ ನಮಗಿದೆ. ನಾವು ವಿಚಾರ ಮಾಡಬೇಕಾದ್ದು ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ಮತ್ತು ಬೆಳೆಸುವ ಜೊತೆಗೆ, ಇತರ ಯಾವ್ಯಾವ ಭಾಷೆಗಳನ್ನು, ಎಷ್ಟು ಭಾಷೆಗಳನ್ನು ಕಲಿಯುವ ಅಗತ್ಯ, ಕಲಿಯುವ ಆಸಕ್ತಿ ಇದೆಯೋ ಆ ಭಾಷೆಗಳನ್ನು ಕಲಿತುಕೊಳ್ಳುವುದು ಮತ್ತು ನಮ್ಮ ಶಿಕ್ಷಣ ಸಂಸ್ಥೆಗಳ ಒಳಗೆ, ಹೊರಗೆ ಹಾಗೆ ಕಲಿಯಲು ಆಗುವ ವಾತಾವರಣವನ್ನು ನಿರ್ಮಿಸುವುದು.
ಕೇವಲ ಭಾಷೆಯ ಕಲಿಕೆಯಲ್ಲ, ಕಲಿತುಕೊಂಡ ಎಲ್ಲಾ ಭಾಷೆಗಳ ಪುಸ್ತಕಗಳನ್ನು ಓದುವ, ಓದಿದ್ದರ ಕುರಿತು ಮಾತಾಡುವ, ಚರ್ಚಿಸುವ ವಾತಾವರಣ ನಿರ್ಮಿಸಬೇಕು. ಪುಸ್ತಕಗಳು ಸಿಗುವಂತಿರಬೇಕು ಎಂದು ಪ್ರತ್ಯೇಕವಾಗಿ ಹೇಳಬೇಕಾದ್ದೇ ಇಲ್ಲ. ಓದುತ್ತಿರುವ ಕಾಲದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಯಾವುದೇ ಪಠ್ಯೇತರ ಪುಸ್ತಕಗಳನ್ನು ಓದುವುದಿಲ್ಲ ಎನ್ನುವುದು ನಿಜವಿರಬಹುದು. ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಕೆಲವು ಲಕ್ಷ ವಿದ್ಯಾರ್ಥಿಗಳು ಇಂಗ್ಲಿಷ್ ಮಾತಾಡಿ ಕನ್ನಡ ಓದುತ್ತಿರಬಹುದು. ಆದರೆ ಬೇಕಾದ ಪುಸ್ತಕ ಅವರಿಗೆ ಲಭ್ಯವಿರಬೇಕು. ಓದಿಗೆ ಉತ್ತೇಜನ ನೀಡುವ ಕಾರ್ಯಕ್ರಮಗಳಿರಬೇಕು.
ಇತ್ತೀಚಿನ ವರ್ಷಗಳಲ್ಲಿ ಲಕ್ಷೋಪಲಕ್ಷ ಯುವಕ ಯುವತಿಯರು ಇಂಗ್ಲಿಷ್ ಮಾಧ್ಯಮದಲ್ಲಿ ಓದಿ ಎಂಜಿನಿಯರಿಂಗ್ ಪದವಿ, ಡಿಪ್ಲೊಮಾ ಪಡೆದು ತಾಂತ್ರಿಕ ಉದ್ಯೋಗಿಗಳಾಗಿ ಕನ್ನಡ ಭಾಷೆಗೆ ದೂರವಾಗಿದ್ದಾರೆ ಎನ್ನುವ ಮಾತು ಇವತ್ತು ಒಂದು ಕ್ಲೀಷೆಯಾಗಿದೆ. ಆದರೆ ಅಪಾರ ಸಂಖ್ಯೆಯ ಈ ಹೊಸ ತಲೆಮಾರಿನಲ್ಲಿ ಯಾರೂ ಕನ್ನಡವನ್ನು ಮರೆತಿಲ್ಲ. ಅವರಲ್ಲಿ ಒಂದಷ್ಟು ಮಂದಿ ಕನ್ನಡ ಲೇಖಕರಾಗಿದ್ದಾರೆ. ಕೆಲವರು ಕನ್ನಡ ಪುಸ್ತಕ ಪ್ರಕಾಶಕರಾಗಿದ್ದಾರೆ. ಪುಸ್ತಕದ ಅಂಗಡಿಗಳನ್ನು ಇಟ್ಟುಕೊಂಡವರು ಕೂಡ ಇದ್ದಾರೆ.
ಓದುವವರು ಇಂಥದೇ ವರ್ಗಕ್ಕೆ ಸೇರಿದವರು, ಯಾವುದೇ ನಿರ್ದಿಷ್ಟ ವಿಷಯಗಳನ್ನು ಓದಿಕೊಂಡವರು ಆಗಿರುವುದಿಲ್ಲ. ಎಂಜಿನಿಯರುಗಳು, ವೈದ್ಯರು, ಬ್ಯಾಂಕ್‌ಗಳಲ್ಲಿ ಕೆಲಸ ಮಾಡುವವರಲ್ಲಿ ಪುಸ್ತಕ ಓದುಗರು ಇದ್ದಾರೆ. ಕೇವಲ ಎಸ್ಸೆಸ್ಸೆಲ್ಸಿ ತನಕ ಓದಿದ ಉದ್ಯಮಿಗಳಲ್ಲಿ, ವಿವಿಧ ವರ್ಗದ ಶ್ರಮ-ಜೀವಿಗಳಲ್ಲಿ ಓದುಗರಿದ್ದಾರೆ. ಆದರೆ ಕನ್ನಡ ನಾಡಿನ ದುರ್ಗತಿ ಏನೆಂದರೆ ಓದುವವರಿಗೆ ಪುಸ್ತಕಗಳು ಸಿಗುತ್ತಿಲ್ಲ.
ವರ್ಷಕ್ಕೊಮ್ಮೆ ಸಾಹಿತ್ಯದ ಜಾತ್ರೆಯಲ್ಲಿ ಕೆಲವು ಸಾವಿರ ಪುಸ್ತಕಗಳು ಮಾರಾಟವಾದುದನ್ನು ಪುಸ್ತಕದ ಅಂಗಡಿಗಳಲ್ಲಿ ನಡೆಯುವ ಪುಸ್ತಕ ಮಾರಾಟಕ್ಕಿಂತ ದೊಡ್ಡ ಮಾರಾಟದ ಸಾಧನೆ ಎಂದು ಹಾಡಿ ಹೊಗಳುವುದು ಹುಂಬತನವೇ ಸರಿ. ಇಂಗ್ಲೆಂಡಿನಲ್ಲಿ ಪುಸ್ತಕದ ಅಂಗಡಿಯಲ್ಲಿ ಅನೇಕ ವರ್ಷಗಳ ಹಿಂದೆ ಪ್ರಕಟವಾದ ಒಂದು ಪುಸ್ತಕ ಕೇಳಿದರೆ ಸಿಗುತ್ತದೆ. ‘ಇಲ್ಲ’ ಎಂದಾದರೆ ಓದುಗನಿಗೆ ಆಶ್ಚರ್ಯವಾಗುತ್ತದೆ, ‘ಇಲ್ಲ’ ಎಂದು ಹೇಳಲು ಮಾರಾಟಗಾರನಿಗೆ ನಾಚಿಕೆಯಾಗುತ್ತದೆ. ಈ ಆಶ್ಚರ್ಯ ಮತ್ತು ನಾಚಿಕೆ ಕನ್ನಡ ನುಡಿಯ ನಾಡಿನಲ್ಲಿ ಆಗಬೇಕು. ಹಾಗಾದರೆ ಕನ್ನಡ ಶ್ರೀಮಂತವಾಗಿ ಬದುಕುತ್ತದೆ.
ಇಂಗ್ಲಿಷ್ ನಮ್ಮ ವೈರಿ ಎನ್ನುವಂತೆ ಮಾತಾಡುವುದರಿಂದ, ಇಂಗ್ಲಿಷ್ ಓದಿದವರನ್ನು, ಓದುತ್ತಿರುವವರನ್ನು ಹಳಿಯುವುದರಿಂದ ಯಾವ ಪ್ರಯೋಜನವೂ ಇಲ್ಲ. ಕನ್ನಡವನ್ನು ಮಾತಾಡುವವರು, ಕನ್ನಡವನ್ನು ಓದುವವರು ಕನ್ನಡವನ್ನು ಉಳಿಸಿಕೊಂಡರೆ ಸಾಕು. ಇಂಗ್ಲಿಷ್ ಮಾತಾಡುವವರು, ಇಂಗ್ಲಿಷ್ ಓದುವವರು, ತಮ್ಮ ಉದ್ಯೋಗದಲ್ಲಿ ವೃತ್ತಿಯಲ್ಲಿ ಇಂಗ್ಲಿಷ್ ಬಳಸುವವರು ಇಂಗ್ಲಿಷ್ ಬಳಸಲಿ. ಅಷ್ಟಾದರೆ ಸಾಕು, ಇಂಗ್ಲಿಷ್ ಭಾಷೆಯ ಪಾರಮ್ಯದ ಕುರಿತಾದ ಭಯ ತೊಲಗುತ್ತದೆ.