ಕರ್ನಾಟಕ

ಮತ್ತೊಂದು ಕೊಲೆ, ಗೂಡಂಗಡಿ, ಬೈಕ್‌ಗೆ ಬೆಂಕಿ: ಶಿವಮೊಗ್ಗ ಬಂದ್‌ ಸಂಪೂರ್ಣ ಯಶಸ್ವಿ–ಗೃಹ ಸಚಿವರ ಭೇಟಿ

Pinterest LinkedIn Tumblr

fire

ಶಿವಮೊಗ್ಗ: ನಗರದಲ್ಲಿ ನಡೆದ ಕೋಮು ಘರ್ಷಣೆ ಹಾಗೂ ಕೊಲೆ ಪ್ರಕರಣ ಖಂಡಿಸಿ ವಿಶ್ವ ಹಿಂದೂ ಪರಿಷತ್‌ ಶನಿವಾರ ಕರೆ ನೀಡಿದ್ದ ಶಿವಮೊಗ್ಗ ನಗರ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಬಂದ್‌ ಆರಂಭಕ್ಕೂ ಮುನ್ನವೇ ಬೆಳಕಿಗೆ ಬಂದ ತುಂಗಾ ನಗರ ಠಾಣೆ ವ್ಯಾಪ್ತಿಯ ಮಲ್ಲಿಕಾರ್ಜುನ ನಗರದ ಮಂಜುನಾಥ್‌ (38) ಅವರ ಕೊಲೆ ಪ್ರಕರಣ ನಗರವನ್ನು ತಲ್ಲಣಗೊಳಿಸಿತ್ತು.

ಮಿಳ್ಳಗಟ್ಟ ರಸ್ತೆಯ ಪದ್ಮಾ ಟಾಕೀಸ್‌ ಹಿಂಭಾಗದ ದಾರಿಯಲ್ಲಿ ಬೆಳಗಿನ ಜಾವ ವಾಯುವಿಹಾರಕ್ಕೆ ಬಂದವರು ಮಂಜುನಾಥ್‌ ಶವ ನೋಡಿ ಸ್ಥಳೀಯರಿಗೆ ಸುದ್ದಿ ಮುಟ್ಟಿಸಿದ್ದಾರೆ. ಎದೆಗೆ ಚಾಕುವಿನಿಂದ ಇರಿದು ಶುಕ್ರವಾರ ರಾತ್ರಿಯೇ ಈ ಕೊಲೆ ನಡೆದಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.

ಮಂಜುನಾಥ ಮದ್ಯದ ಅಂಗಡಿಯ ಕೆಲಸಗಾರರಾಗಿದ್ದು, ಆತನ ಹೆಂಡತಿ ಹಾಗೂ ಇಬ್ಬರು ಮಕ್ಕಳು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಕೊರಚರಹಟ್ಟಿಯ ಅವರ ತವರಿಗೆ ಹೋಗಿದ್ದರು. ಮನೆಯಲ್ಲಿ ಒಬ್ಬರೇ ಇದ್ದರು. ಶುಕ್ರವಾರ ರಾತ್ರಿ ಮನೆಯ ಸಮೀಪವೇ ಇದ್ದ ಸಹೋದರಿಯ ಮನೆಗೆ ಹೋಗಿ ಊಟ ಮಾಡಿಕೊಂಡು ಎಲೆ ಅಡಿಕೆ ತರಲು ಹೋದವರು ಮರಳಿ ಬಂದಿರಲಿಲ್ಲ. ಶನಿವಾರ ಬೆಳಿಗ್ಗೆ ಕೊಲೆಯಾದ ಸಂಗತಿ ತಿಳಿಯಿತು ಎಂದು ಸಂಬಂಧಿಗಳು ಮಾಹಿತಿ ನೀಡಿದರು.

ಶಾಂತಿಯುತ ಬಂದ್‌: ಸಾಗರ  ರಸ್ತೆಯ ಎಪಿಎಂಸಿ ಬಳಿಯ ಗೂಡಂಗಡಿ, ಗಾಡಿಕೊಪ್ಪದ ಬಳಿ ಸರಕು ಸಾಗಣೆ ಲಘು ವಾಹನ ಹಾಗೂ ಬೈಕ್‌ಗೆ ಬೆಂಕಿ ಹಚ್ಚಿದ ಪ್ರಕರಣ ಹೊರತುಪಡಿಸಿದರೆ ಬಂದ್‌ ವೇಳೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಶಾಲಾ– ಕಾಲೇಜುಗಳಿಗೆ ಶನಿವಾರವೂ ರಜೆ ಘೋಷಿಸಲಾಗಿತ್ತು. ಅಂಗಡಿ–ಮುಂಗಟ್ಟುಗಳು, ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳೂ ಬಾಗಿಲು ತೆರೆಯಲಿಲ್ಲ.

ರೈಲು ಸಂಚಾರ ಎಂದಿನಂತೆ ಇತ್ತು. ಆದರೆ, ರೈಲಿನ ಮೂಲಕ ನಗರಕ್ಕೆ ಬಂದವರು ವಾಹನಗಳು ಇಲ್ಲದೇ ಮನೆಗೆ ತೆರಳಲು ಹಾಗೂ ಜಿಲ್ಲೆಯ ಇತರೆ ಭಾಗಗಳಿಗೆ ಹೋಗಲು ಒದ್ದಾಡಿದರು. ಪೆಟ್ರೋಲ್‌ ಬಂಕ್‌ಗಳು ಮುಚ್ಚಿದ್ದ ಕಾರಣ ತುರ್ತು ವಾಹನಗಳ ಚಾಲಕರೂ ಪರದಾಡಿದರು.

ಕೋಮು ಸಂಘರ್ಷ ಆರಂಭವಾದ ಗುರುವಾರದಿಂದ ಎರಡು ದಿನ ಅಘೋಷಿತ ಬಂದ್‌ ಇದ್ದರೆ, ಶನಿವಾರ ಘೋಷಿತ ಬಂದ್‌ ಇತ್ತು. ಹೀಗಾಗಿ, ಅಗತ್ಯ ಸಾಮಗ್ರಿ ಖರೀದಿಗಾಗಿ ಜನ ಪರದಾಡುತ್ತಿದ್ದ ದೃಶ್ಯ ಕಂಡು ಬಂತು.

ಗೃಹ ಸಚಿವರ ಭೇಟಿ: ಹೆಲಿಕಾಪ್ಟರ್‌ನಲ್ಲಿ ಮಧ್ಯಾಹ್ನ ನಗರಕ್ಕೆ ಆಗಮಿಸಿದ ಗೃಹ ಸಚಿವ ಕೆ.ಜೆ.ಜಾರ್ಜ್‌ ಪ್ರವಾಸಿ ಮಂದಿರದಲ್ಲಿ ಪೊಲೀಸ್ ಅಧಿಕಾರಿಗಳು, ಮುಖಂಡರ  ಸಭೆ ನಡೆಸಿ, ಘಟನೆಯ ಮಾಹಿತಿ ಪಡೆದರು.

ನಂತರ ಮೆಗ್ಗಾನ್‌ ಆಸ್ಪತ್ರೆಗೆ ತೆರಳಿ ಕೊಲೆಯಾದ ಮಂಜುನಾಥ್‌ ಪಾರ್ಥಿವ ಶರೀರ ವೀಕ್ಷಿಸಿದರು. ಮೃತನ ಕುಟುಂಬಕ್ಕೆ ರೂ 7.5 ಲಕ್ಷ ಪರಿಹಾರ ಘೋಷಿಸಿದರು. ಗಲಭೆ ವೇಳೆ ಗಾಯಗೊಂಡವರ ಯೋಗಕ್ಷೇಮ ವಿಚಾರಿಸಿದರು. ಗುರುವಾರ ಹಲ್ಲೆಯಿಂದ ಸಾವಿಗೀಡಾಗಿದ್ದ ವಿಶ್ವನಾಥ ಶೆಟ್ಟಿ ಅವರ ಮನೆಗೆ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಎಸ್‌ಪಿ ಕಚೇರಿ ಮುಂದೆ ಬಿಜೆಪಿ ಪ್ರತಿಭಟನೆ: ಘಟನೆಗೆ ಸಂಬಂಧಿಸಿದಂತೆ ಅಮಾಯಕರನ್ನು ಬಂಧಿಸಲಾಗಿದೆ. ಕೊಲೆ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿ ಬಿಜೆಪಿ ಮುಖಂಡರು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್‌  ನೇತೃತ್ವದಲ್ಲಿ ಜಿಲ್ಲಾ ಪೊಲೀಸ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಮುಖಂಡರ ಪ್ರತ್ಯೇಕ ಭೇಟಿ: ನಗರಕ್ಕೆ ಆಗಮಿಸಿದ್ದ ಗೃಹ ಸಚಿವ ಜಾರ್ಜ್‌ ಅವರನ್ನು ಮುಸ್ಲಿಂ ಮುಖಂಡರು ಭೇಟಿಯಾಗಿ ಬೆಂಕಿಗೆ ಆಹುತಿಯಾದ ಅಂಗಡಿಗಳಿಗೆ ಪರಿಹಾರ ನೀಡಬೇಕು ಎಂದು ಕೋರಿದರು. ‘ಮೊದಲು ಶಾಂತಿ ಸ್ಥಾಪಿಸಲು ಸಹಕರಿಸಿ, ನಂತರ ಈ ಬಗ್ಗೆ ಚರ್ಚಿಸೋಣ’ ಎಂದು ಜಾರ್ಜ್‌ ಪ್ರತಿಕ್ರಿ ಯಿಸಿದರು.

ನಂತರ ಬಿಜೆಪಿ ಮುಖಂಡರು ಭೇಟಿಯಾಗಿ, ಎಷ್ಟು ಮಂದಿ ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ. ಹೆಸರು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಜಾರ್ಜ್‌ ತನಿಖೆ ಪೂರ್ಣಗೊಂಡ ತಕ್ಷಣ ಹೆಸರು ಬಹಿರಂಗಪಡಿಸಲಾಗುವುದು ಎಂದು ಭರವಸೆ ನೀಡಿದರು.

ಕರ್ಫ್ಯೂ ಅಗತ್ಯವಿಲ್ಲ; ನಿಷೇಧಾಜ್ಞೆ ಸಾಕು

ಕೋಮು ಗಲಭೆ ನಡೆದಾಗ ಅಲ್ಪಸಂಖ್ಯಾತರು, ಬಹು ಸಂಖ್ಯಾತರು ಎಂದು ನೋಡುವುದಿಲ್ಲ. ಕಾನೂನು ಸುವ ಸ್ಯಸ್ಥೆಗೆ ಧಕ್ಕೆ ತರುವ ಎಲ್ಲರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೊಲೆ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

ಇಂತಹ ವಿಷಯದಲ್ಲಿ ಎಲ್ಲರೂ ಸೇರಿ ಶಾಂತಿ ಸ್ಥಾಪನೆಗೆ ಒತ್ತು ನೀಡಬೇಕು. ಬೆಂಕಿ ಹಾಕುವ ಕೆಲಸ ಮಾಡಬಾರದು. ರಾಜಕಾರಣ ಬೆರೆಸಬಾರದು.

ರಾಜ್ಯದ ಅನುಭವಿ ಅಧಿಕಾರಿಗಳನ್ನು ಇಲ್ಲಿಗೆ ನಿಯೋಜಿ ಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಘಟನೆಗೆ ಸಂಬಂ ಧಿಸಿದಂತೆ ಕರ್ಫ್ಯೂ ವಿಧಿಸುವ ಅಗತ್ಯವಿಲ್ಲ. ನಿಷೇಧಾ ಜ್ಞೆಯನ್ನು ಪರಿಣಾಮಕಾರಿಯಾಗಿ ಬಳಸಲಾಗುವುದು.

ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆ ನಿಷೇಧಿಸುವ ಕುರಿತು ಪರಿಶೀಲಿಸಲಾಗುವುದು.

–ಕೆ.ಜೆ ಜಾರ್ಜ್‌, ಗೃಹ ಸಚಿವ0

Write A Comment