ಕರ್ನಾಟಕ

ಕಾಂಗ್ರೆಸ್ ಶಾಸಕರನ್ನು ಹತೋಟಿಯಲ್ಲಿಟ್ಟುಕೊಳ್ಳಿ : ಡಿವಿಎಸ್

Pinterest LinkedIn Tumblr

Sadananda Gowda - PTI_0_0_0

ಕೆ.ಆರ್.ಪುರ, ಫೆ.21: ಮುಖ್ಯಮಂತ್ರಿಗಳೇ ಮೊದಲು ನಿಮ್ಮ ಕಾಂಗ್ರೆಸ್ ಶಾಸಕರನ್ನು ಹತೋಟಿಯಲ್ಲಿಟ್ಟುಕೊಳ್ಳಿ. ಒಳ್ಳೆಯ ವರ್ತನೆಯನ್ನು ಕಲಿಸಿ…. ಹೀಗೆಂದು ಕೇಂದ್ರ ಸಚಿವ ಡಿ.ವಿ. ಸದಾ ನಂದಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚ್ಯವಾಗಿ ಹೇಳಿದರು.

ಕೆ.ಆರ್.ಪುರ ಕ್ಷೇತ್ರದ ವಿಜ್ಞಾನನಗರ ವಾರ್ಡ್‌ನ ಎಂಇಜೆ ಬಡಾವಣೆಯಲ್ಲಿ ವಿವಿದ್ದೋದ್ದೇಶ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿದ್ದು, ಸ್ಥಳೀಯ ಪಾಲಿಕೆ ಸದಸ್ಯೆ ಗೀತಾವಿವೇಕಾನಂದ ಹಾಗೂ ಶಾಸಕ ಬೈರತಿ ಬಸವರಾಜು ಅವರ ಮುಸುಕಿನ ಗುದ್ದಾಟದಿಂದಾಗಿ ಇಂದು ನಡೆಯಬೇಕಿದ್ದ ಉದ್ಘಾಟನಾ ಕಾರ್ಯ ರದ್ದುಗೊಂಡಿದೆ.

ಈ ಹಿನ್ನೆಲೆಯಲ್ಲಿ ಕೇವಲ ಕಟ್ಟಡ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಸದಾನಂದಗೌಡ, ವಿವಿದ್ದೋದ್ದೇಶ ಕಟ್ಟಡ ಕಾಮಗಾರಿ ಕೇವಲ ಶೇ.7ರಷ್ಟು ಬಾಕಿ ಇದೆ. ಯಾವುದೇ ಕಟ್ಟಡ ಸಂಪೂರ್ಣವಾದ ನಂತರವೇ ಉದ್ಘಾಟನೆಯಾಗಬೇಕೆಂದಿಲ್ಲ. ಮೊದಲು ಉದ್ಘಾಟಿಸಿ ಅಲ್ಪಸ್ವಲ್ಪ ಕೆಲಸ ಬಾಕಿ ಉಳಿದಿದ್ದರೆ ಅದನ್ನು ನಂತರ ಮುಗಿಸಲಾಗುತ್ತದೆ. ಇದು ಕಾಂಗ್ರೆಸಿನವರಿಗೆ ಗೊತ್ತಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.

ಕೆ.ಆರ್.ಪುರ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ಸ್ಥಳೀಯ ಪಾಲಿಕೆ ಸದಸ್ಯರಿಂದ ನಡೆದಿದೆ. ಇಲ್ಲಿನ ಕಟ್ಟಡ ಬಿಬಿಎಂಪಿ ಅನುದಾನದಲ್ಲಿ ನಿರ್ಮಿತವಾಗಿದೆ. ಎಸ್.ಕೆ.ನಟರಾಜ್ ಮೇಯರ್ ಆಗಿದ್ದಾಗ 1 ಕೋಟಿ, ಕಟ್ಟೆ ಸತ್ಯನಾರಾಯಣ ಮೇಯರ್ ಆಗಿದ್ದಾಗ 1 ಕೋಟಿ ರೂ. ಅನುದಾನ ನೀಡಿದ್ದರು. ಕಾಂಗ್ರೆಸ್‌ನವರಿಗೆ ಬೇಕಿದ್ದರೆ ಮತ್ತೆ ಅನುದಾನ ತಂದು ಇನ್ನೂ ಅಭಿವೃದ್ಧಿ ಮಾಡಿಕೊಂಡು ಕಟ್ಟಡವನ್ನು ಉದ್ಘಾಟನೆ ಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದರು. ನಿನ್ನೆ ಕಟ್ಟಡ ಕಾಮಗಾರಿ ವೇಳೆ ಗೂಂಡಾ ಗಳಿಂದ ಕೆಲಸಗಾರರನ್ನು ಓಡಿಸಲಾಗಿದೆ. ಮೊದಲು ಸಣ್ಣ ಮನಸ್ಸಿನ ರಾಜಕಾರಣ ಬಿಡಿ. ನಿಮ್ಮ ವರ್ತನೆಗೆ ಜನರೇ ಉತ್ತರ ಹೇಳುತ್ತಾರೆ ಎಂದರು.

ಈ ಕಟ್ಟಡ ಉದ್ಘಾಟನೆ ಆಗುವ ಅಗತ್ಯವೇ ಇಲ್ಲ. ಹಾಗೆಯೇ ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟುಕೊಡೋಣ. ಉದ್ಘಾಟನೆ ಮಾಡುವುದೇ ಬೇಡ ಎಂದು ಸದಾನಂದಗೌಡ ತಿಳಿಸಿದರು. ಬಿಬಿಎಂಪಿಯ ಬಿಜೆಪಿ ಸದಸ್ಯರ ಅಭಿವೃದ್ಧಿ ಕಾರ್ಯಗಳನ್ನು ಇಲ್ಲಿನ ಕಾಂಗ್ರೆಸ್ ಶಾಸಕರು ಹ್ಯಾಂಪರ್ ಮಾಡುತ್ತಿದ್ದಾರೆ. ಸಣ್ಣತನ ತೋರುತ್ತಾ ಅನುಚಿತವಾಗಿ ನಡೆದುಕೊಳ್ಳುತ್ತಿದ್ದಾರೆ. ಮೊದಲು ಇಂತಹ ಶಾಸಕರಿಗೆ ಮುಖ್ಯಮಂತ್ರಿಗಳು ಬಿದ್ದಿ ಹೇಳಲಿ ಎಂದು ಸಲಹೆ ನೀಡಿದರು. ಮಾಜಿ ಶಾಸಕ ನಂದೀಶ್‌ರೆಡ್ಡಿ, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ವೀರಣ್ಣ, ಮಾಜಿ ಮೇಯರ್‌ಗಳಾದ ಕಟ್ಟೆಸತ್ಯನಾರಾಯಣ, ಎಸ್.ಕೆ.ನಟರಾಜ್, ಪಾಲಿಕೆ ಸದಸ್ಯರಾದ ಗೀತಾ ವಿವೇಕಾನಂದ, ವಿಜಯ ಎಸ್.ಎಸ್. ಪ್ರಸಾದ್, ಸಿದ್ದಲಿಂಗಯ್ಯ ಮತ್ತಿತರರು ಹಾಜರಿದ್ದರು.

Write A Comment