ಕರ್ನಾಟಕ

ಕಾರ್ಮಿಕರು-ನಿರ್ಮಾಪಕರ ಹಗ್ಗ ಜಗ್ಗಾಟ : ಛಿದ್ರವಾದ ಚಿತ್ರರಂಗ

Pinterest LinkedIn Tumblr

film_chembar

ಬೆಂಗಳೂರು, ಫೆ.21: ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಹಾಗೂ ಚಲನಚಿತ್ರ ಕಾರ್ಮಿಕರ ಒಕ್ಕೂಟದ ನಡುವೆ ಹೆಚ್ಚುವರಿ ವೇತನಕ್ಕಾಗಿ ನಡೆಯುತ್ತಿ ರುವ ಹಗ್ಗ-ಜಗ್ಗಾಟ ಮುಂದುವರಿದಿದ್ದು, ಒಂದೆಡೆ ಚಲನಚಿತ್ರ ನಿರ್ಮಾಣ ಕೆಲಸಗಳು ಸ್ಥಗಿತವಾಗಿದ್ದರೆ, ಮತ್ತೊಂದೆಡೆ ಕಾರ್ಮಿಕರು ಕೆಲಸವಿಲ್ಲದೆ ಪರದಾಡುವಂತಹ ಸ್ಥಿತಿ ತಲೆದೋರಿದೆ.

ವೇತನ ಪರಿಷ್ಕರಣೆಗೆ ಒತ್ತಾಯಿಸಿ ಕಾರ್ಮಿಕರ ಒಕ್ಕೂಟ ಮಾಡಿದ್ದ ಮನವಿ ಹಿನ್ನೆಲೆಯಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಮಾಪಕರ ಸಂಘದ ಮುಂದೆ ಶೇಕಡಾವಾರು ವೇತನ ಹೆಚ್ಚಳದ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಅದಕ್ಕೆ ನಿರ್ಮಾಪಕರು ಒಪ್ಪದ ಕಾರಣ ಮತ್ತೆ ಗೊಂದಲ ಉಂಟಾಗಿದೆ. ಇದೀಗ ಈ ಗೊಂದಲ ಕಾರ್ಮಿಕರ ಆಯುಕ್ತರ ಕಚೇರಿ ಕದ ತಟ್ಟಿದ್ದು, ಇಂದು ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ ಕಾರ್ಮಿಕರ ಒಕ್ಕೂಟ ಮತ್ತು ನಿರ್ಮಾಪಕರ ಸಂಘದೊಂದಿಗೆ ಸಭೆ ನಡೆಯಲಿದೆ.

ಈ ಹಿಂದೆ ನಿರ್ಮಾಪಕರು ತಾವು ಪರಭಾಷಾ ಚಿತ್ರಗಳ ಹಾವಳಿಯಿಂದ ಸಾಕಷ್ಟು ಅನುಭವಿಸುತ್ತಿದ್ದು, ನಾಲ್ಕು ತಿಂಗಳು ಸಮಯಾವಕಾಶ ನೀಡಿದರೆ ಕಾರ್ಮಿಕರ ವೇತನ ಹೆಚ್ಚಳ ಸಂಬಂಧ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ, ನಾಲ್ಕು ತಿಂಗಳು ಪೂರ್ಣಗೊಂಡರೂ ಈ ಬಗ್ಗೆ ಚಕಾರವೆತ್ತದೆ ಹೋದಾಗ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ನಡೆಸಿ ಕಾರ್ಮಿಕ ಒಕ್ಕೂಟದ ವಿವಿಧ ವಿಭಾಗಗಳಿಗೆ ಇಂತಿಷ್ಟು ಮೊತ್ತ ವೇತನ ಹೆಚ್ಚಳಕ್ಕೆ ಸೂಚಿಸಿತ್ತು. ಆದರೆ, ಇದಕ್ಕೂ ನಿರ್ಮಾಪಕರು ಮಣಿಯದಿದ್ದರಿಂದ ಮತ್ತೆ ಸಂಕಷ್ಟ ಉಲ್ಬಣಿಸಿದೆ. ಹಾಗಾಗಿ ಕಳೆದ 10 ದಿನಗಳಿಂದ ಪ್ರಮುಖ ನಾಯಕರ ಚಿತ್ರಗಳು ಚಿತ್ರೀಕರಣ ನಡೆಯದೆ ಸ್ಥಗಿತಗೊಂಡಿವೆ.

ಚಲನಚಿತ್ರ ಕಾರ್ಮಿಕರ ಒಕ್ಕೂಟದ ಮತ್ತೊಂದು ಬಣದವರು ಕೆಲವೊಂದು ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಈ ರೀತಿ ಚಿತ್ರೀಕರಣ ಸ್ಥಗಿತಗೊಂಡರೆ ಹಣ ಹಾಕಿರುವ ನಾವು ಎಲ್ಲಿ ಹೋಗಬೇಕು, ನಮ್ಮ ಸಂಕಷ್ಟವನ್ನು ಕೇಳುವವರು ಯಾರು ಎಂದು ನಿರ್ಮಾಪಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಒಟ್ಟಾರೆ ಚಿತ್ರರಂಗದ ಈ ಗೊಂದಲ ಬಗೆಹರಿಯದ ಹೊರತು ಚಿತ್ರೀಕರಣ ಸೇರಿದಂತೆ ನಿರ್ಮಾಪಕರು ಹಾಗೂ ಕಾರ್ಮಿಕರಿಗೆ ತೊಂದರೆ ತಪ್ಪಿದ್ದಲ್ಲ. ಕಾರ್ಮಿಕರು ಸಹ ವೇತನ ಹೆಚ್ಚಳವಿಲ್ಲದೆ ಕೆಲಸ ಮಾಡಲು ಮುಂದಾಗುತ್ತಿಲ್ಲ. ಕೆಲವರಂತು ತೀವ್ರ ಬಡತನದಲ್ಲಿ ಪರದಾಡುವ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇಂದು ನಡೆಯುವ ಸಭೆಯಲ್ಲಿ ಎಲ್ಲ ತೀರ್ಮಾನವಾಗುವ ಸಾಧ್ಯತೆಗಳು ಕಡಿಮೆಯಿದ್ದು, ಮತ್ತೆ ಚಿತ್ರರಂಗ ಗೊಂದಲದಲ್ಲೇ ಮುಂದುವರಿಯುವ ಲಕ್ಷಣಗಳು ಕಾಣಬರುತ್ತಿವೆ.

Write A Comment