ಕರ್ನಾಟಕ

ನನಗೆ ಸಿಎಂ ಆಗುವ ಎಲ್ಲಾ ಅರ್ಹತೆಗಳಿವೆ : ಸಿದ್ದು ಗೆ ಪರಂ ಟಾಂಗ್

Pinterest LinkedIn Tumblr

siddu-paramesh

ಬೆಂಗಳೂರು, ಫೆ.21: ನನಗೆ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆಗಳಿದ್ದು, ಅವಕಾಶ ಬಂದರೆ ಆ ಸ್ಥಾನ ಅಲಂಕರಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ದಲಿತರೊಬ್ಬರು ಮುಖ್ಯಮಂತ್ರಿಯಾಗಬೇಕೆಂಬ ಕೂಗು ದಿನದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ ಪರಮೇಶ್ವರ್ ಹೇಳಿಕೆ ಕಾಂಗ್ರೆಸ್ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ. ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಎಂದು ಸಿದ್ದರಾಮಯ್ಯ ಬೆಂಬಲಿತ ದಲಿತ ಸಚಿವರು ಹೇಳಿದ್ದಕ್ಕೆ ಪರಮೇಶ್ವರ್ ಈ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ದ್ರಾಕ್ಷಿ ರಸ ಉತ್ಸವದಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಾನು ವಿಧಾನಸಭೆ ಚುನಾವಣೆಗೂ ಮುನ್ನಾ ಮುಖ್ಯಮಂತ್ರಿ ಅಕಾಂಕ್ಷಿಯಾಗಿದ್ದು ನಿಜ. ಆದರೆ ಜನತೆ ನನ್ನನ್ನು ಚುನಾವಣೆಯಲ್ಲಿ ತಿರಸ್ಕರಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ನನಗೆ ಮುಖ್ಯಮಂತ್ರಿಯಾಗುವ ಅರ್ಹತೆ ಇಲ್ಲವೇ ಎಂದು ಪ್ರಶ್ನಿಸಿದರು. ಕೆಲವು ದಲಿತ ಪರ ಸಂಘಟನೆಗಳು ನನ್ನನ್ನು ಮುಖ್ಯಮಂತ್ರಿ ಮಾಡಲು ಬಯಸಿರುವುದು ತಪ್ಪಲ್ಲ. ಸಮುದಾಯದ ಮುಖಂಡರು ತಮ್ಮ ಅಭಿಪ್ರಾಯ ಹೇಳುವುದೇ ತಪ್ಪು ಎನ್ನುವುದಾದರೆ ವಾಕ್ ಸ್ವಾತಂತ್ರ್ಯಕ್ಕೆ ಅರ್ಥವೇನಿದೆ ಎಂದು ಪರಮೇಶ್ವರ್ ಕಿಡಿಕಾರಿದರು.

ಕಳೆದ 3-4 ದಿನಗಳಿಂದ ನಾನು ಪ್ರತಿಯೊಬ್ಬರ ಹೇಳಿಕೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇನೆ. ಪಕ್ಷದ ಹೊರಗಿನವರು ನನ್ನ ಬಗ್ಗೆ ಏನಾದರೂ ಮಾತನಾಡಿದ್ದರೆ ಪ್ರತಿಕ್ರಿಯೆ ಕೊಡಬಹುದಾಗಿತ್ತು. ಹೊರಗಿನವರ ಬಗ್ಗೆ ಪ್ರತಿಕ್ರಿಯಿಸುವುದು ಸಮಂಜಸವಲ್ಲ ಎಂದರು.

ನಾನೇ ಮುಖ್ಯಮಂತ್ರಿಯಾಗಬೇಕೆಂದು ದಲಿತ ಸಂಘಟನೆಗಳ ಮೂಲಕ ಒತ್ತಡ ಹಾಕುತ್ತಿದ್ದೇವೆ ಎಂಬ ಆರೋಪದಲ್ಲಿ ಹುರುಳಿಲ್ಲ. ನಾನು ಅಂತಹ ಕೆಲಸವನ್ನು ಮಾಡಿಲ್ಲ. ಅನಗತ್ಯವಾಗಿ ನನ್ನ ಹೆಸರನ್ನು ತಳಕು ಹಾಕಲಾಗುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ವಿಷಾದಿಸಿದರು. ಕೆಲವರು ಇನ್ನು ಮುಂದಾದರೂ ಗೊಂದಲದ ಹೇಳಿಕೆಯನ್ನು ನೀಡಬಾರದು. ನನ್ನ ವಿರುದ್ಧ ಹೈಕಮಾಂಡ್‌ಗೆ ದೂರು ನೀಡುವುದಾದರೆ ಯಾವ ಅಭ್ಯಂತರವೂ ಇಲ್ಲ. ಹೈಕಮಾಂಡ್ ನಿರ್ದೇಶನದ ಮೇರೆಗೆ ಕೆಲಸ ಮಾಡುತ್ತಿದ್ದೇನೆ ಎಂದರು. ಮುಂಬರುವ ಗ್ರಾಮ ಪಂಚಾಯ್ತಿ ಚುನಾವಣೆಗೆ ಪಕ್ಷ ಸಂಘಟಿಸುವ ದೃಷ್ಟಿಯಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದಾಗಿ ಹೇಳಿದರು.

Write A Comment