ಕರ್ನಾಟಕ

ಪರಮೇಶ್ವರ್ ಆಸೆಗೆ ತಣ್ಣೀರೆರಚಿದ ದಿಗ್ವಿಜಯ್ ಸಿಂಗ್

Pinterest LinkedIn Tumblr

Parameshvar

ಬೆಂಗಳೂರು, ಫೆ.21: ದಲಿತ ಮುಖ್ಯಮಂತ್ರಿ ವಿಷಯವಾಗಿ ಚರ್ಚಿಸಲು ಇದು ಸೂಕ್ತ ಸಮಯವಲ್ಲ ಎಂದು ರಾಜ್ಯ ಉಸ್ತುವಾರಿ ಕಾಂಗ್ರೆಸ್ ನಾಯಕ ದಿಗ್ವಿಜಯ್‌ಸಿಂಗ್ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಈ ಮೂಲಕ ದಲಿತ ಮುಖ್ಯಮಂತ್ರಿ ವಿಷಯವಾಗಿ ಹೈಕಮಾಂಡ್ ಸ್ಪಷ್ಟ ಉತ್ತರ ನೀಡುವ ಬದಲು ಅಡ್ಡಗೋಡೆ ಮೇಲೆ ದೀಪ ಇಟ್ಟಿದೆ. ಬೆಂಗಳೂರಿನಲ್ಲಿಂದು ಸುದ್ದಿ ಗಾರರೊಂದಿಗೆ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ಸಿಂಗ್, ದಲಿತ ಮುಖ್ಯಮಂತ್ರಿ ವಿಷಯವಾಗಿ ಚರ್ಚಿಸಲು ಇದು ಸೂಕ್ತ ಸಮಯವಲ್ಲ ಎಂದಿದ್ದಾರೆ.

ಇಂದು ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ದಲಿತ ನಾಯಕರು ಮುಖ್ಯಮಂತ್ರಿ ಹುದ್ದೆಯನ್ನು ಕೇಳುವುದರಲ್ಲಿ ತಪ್ಪೇನಿದೆ ಎಂದು ಕೇಳಿದ ಬೆನ್ನಲ್ಲೇ ದಿಗ್ವಿಜಯ್‌ಸಿಂಗ್ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

ಮುಂದಿನ ಐದು ವರ್ಷವರೆಗೂ ನಾನೇ ಮುಖ್ಯಮಂತ್ರಿ. ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸುತ್ತಿದ್ದಾರೆ. ದಲಿತ ಸಂಘಟನೆಗಳ ಸಭೆ ಸಂಚಲನ ಮೂಡಿಸಿದೆ. ಕಳೆದ ಎರಡು ದಿನಗಳಿಂದಲೂ ಬೆಂಗಳೂರಿನಲ್ಲಿ ಪರಿಸ್ಥಿತಿ ಅವಲೋಕಿಸಿರುವ ದಿಗ್ವಿಜಯ್‌ಸಿಂಗ್ ಅವರು ದಲಿತ ಮುಖ್ಯಮಂತ್ರಿಯ ಬೇಡಿಕೆಯನ್ನು ಸ್ಪಷ್ಟವಾಗಿ ತಳ್ಳಿ ಹಾಕಬಹುದು ಎಂಬ ನಿರೀಕ್ಷೆಗಳು ಹುಸಿಯಾಗಿವೆ. ಸದ್ಯಕ್ಕೆ ನಾನು ಯಾವುದೇ ಗೊಂದಲಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಸಮಯ ಬಂದಾಗ ಉತ್ತರಿಸುತ್ತೇನೆ. ದಲಿತ ಮುಖ್ಯಮಂತ್ರಿಯ ಚರ್ಚೆ ಸದ್ಯಕ್ಕೆ ಪ್ರಸ್ತುತವಲ್ಲ ಎಂದು ದಿಗ್ವಿಜಯ್‌ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಪರಮೇಶ್ವರ್ ಭೇಟಿ: ನಿನ್ನೆ ತಡರಾತ್ರಿವರೆಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ದಿಗ್ವಿಜಯ್‌ಸಿಂಗ್ ರಹಸ್ಯ ಮಾತುಕತೆ ನಡೆಸಿದ್ದಾರೆ. ಇಂದು ಬೆಳಗ್ಗೆಯೂ ಕೂಡ ಪರಮೇಶ್ವರ್ ದಿಗ್ವಿಜಯ್‌ಸಿಂಗ್ ಅವರ ಜತೆ ಎರಡು-ಮೂರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕುತೂಹಲ ಕೆರಳಿಸಿದರು.

ನನಗೆ ಮುಖ್ಯಮಂತ್ರಿ ಯಾಗುವ ಎಲ್ಲಾ ಅರ್ಹತೆಗಳಿದ್ದು, ಅವಕಾಶ ಬಂದರೆ ಆ ಸ್ಥಾನ ಅಲಂಕರಿಸುತ್ತೇನೆ
ಬೆಂಗಳೂರು: ನನಗೆ ಮುಖ್ಯಮಂತ್ರಿ ಯಾಗುವ ಎಲ್ಲಾ ಅರ್ಹತೆಗಳಿದ್ದು, ಅವಕಾಶ ಬಂದರೆ ಆ ಸ್ಥಾನ ಅಲಂಕರಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ದಲಿತರೊಬ್ಬರು ಮುಖ್ಯಮಂತ್ರಿ ಯಾಗಬೇಕೆಂಬ ಕೂಗು ದಿನದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ ಪರಮೇಶ್ವರ್ ಹೇಳಿಕೆ ಕಾಂಗ್ರೆಸ್ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ. ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಎಂದು ಸಿದ್ದರಾಮಯ್ಯ ಬೆಂಬಲಿತ ದಲಿತ ಸಚಿವರು ಹೇಳಿದ್ದಕ್ಕೆ ಪರಮೇಶ್ವರ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ದ್ರಾಕ್ಷಿ ರಸ ಉತ್ಸವದಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ನಾನು ವಿಧಾನಸಭೆ ಚುನಾವಣೆಗೂ ಮುನ್ನಾ ಮುಖ್ಯಮಂತ್ರಿ ಅಕಾಂಕ್ಷಿಯಾಗಿದ್ದು ನಿಜ. ಆದರೆ ಜನತೆ ನನ್ನನ್ನು ಚುನಾವಣೆಯಲ್ಲಿ ತಿರಸ್ಕರಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ನನಗೆ ಮುಖ್ಯಮಂತ್ರಿಯಾಗುವ ಅರ್ಹತೆ ಇಲ್ಲವೇ ಎಂದು ಪ್ರಶ್ನಿಸಿದರು.

ಕೆಲವು ದಲಿತ ಪರ ಸಂಘಟನೆಗಳು ನನ್ನನ್ನು ಮುಖ್ಯಮಂತ್ರಿ ಮಾಡಲು ಬಯಸಿರುವುದು ತಪ್ಪಲ್ಲ. ಸಮುದಾಯದ ಮುಖಂಡರು ತಮ್ಮ ಅಭಿಪ್ರಾಯ ಹೇಳುವುದೇ ತಪ್ಪು ಎನ್ನುವುದಾದರೆ ವಾಕ್ ಸ್ವಾತಂತ್ರ್ಯಕ್ಕೆ ಅರ್ಥವೇನಿದೆ ಎಂದು ಪರಮೇಶ್ವರ್ ಕಿಡಿಕಾರಿದರು.

ಕಳೆದ ೩-೪ ದಿನಗಳಿಂದ ನಾನು ಪ್ರತಿಯೊಬ್ಬರ ಹೇಳಿಕೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇನೆ. ಪಕ್ಷದ ಹೊರಗಿನವರು ನನ್ನ ಬಗ್ಗೆ ಏನಾದರೂ ಮಾತನಾಡಿದ್ದರೆ ಪ್ರತಿಕ್ರಿಯೆ ಕೊಡಬಹುದಾಗಿತ್ತು. ಹೊರಗಿನವರ ಬಗ್ಗೆ ಪ್ರತಿಕ್ರಿಯಿಸುವುದು ಸಮಂಜಸವಲ್ಲ ಎಂದರು. ನಾನೇ ಮುಖ್ಯಮಂತ್ರಿಯಾಗಬೇಕೆಂದು ದಲಿತ ಸಂಘಟನೆಗಳ ಮೂಲಕ ಒತ್ತಡ ಹಾಕುತ್ತಿದ್ದೇವೆ ಎಂಬ ಆರೋಪದಲ್ಲಿ ಹುರುಳಿಲ್ಲ. ನಾನು ಅಂತಹ ಕೆಲಸವನ್ನು ಮಾಡಿಲ್ಲ. ಅನಗತ್ಯವಾಗಿ ನನ್ನ ಹೆಸರನ್ನು ತಳಕು ಹಾಕಲಾಗುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ವಿಷಾದಿಸಿದರು. ಕೆಲವರು ಇನ್ನು ಮುಂದಾದರೂ ಗೊಂದಲದ ಹೇಳಿಕೆಯನ್ನು ನೀಡಬಾರದು. ನನ್ನ ವಿರುದ್ಧ ಹೈಕಮಾಂಡ್‌ಗೆ ದೂರು ನೀಡುವುದಾದರೆ ಯಾವ ಅಭ್ಯಂತರವೂ ಇಲ್ಲ. ಹೈಕಮಾಂಡ್ ನಿರ್ದೇಶನದ ಮೇರೆಗೆ ಕೆಲಸ ಮಾಡುತ್ತಿದ್ದೇನೆ ಎಂದರು. ಮುಂಬರುವ ಗ್ರಾಮ ಪಂಚಾಯ್ತಿ ಚುನಾವಣೆಗೆ ಪಕ್ಷ ಸಂಘಟಿಸುವ ದೃಷ್ಟಿಯಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದಾಗಿ ಹೇಳಿದರು.

ಪರಮೇಶ್ವರ್‌ಗೆ ಸಿಎಂ ಪಟ್ಟ ನೀಡದಿದ್ದರೆ ಬೀದಿಗಿಳಿದು ಹೋರಾಟ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡುವ ಸಂಬಂಧ ದೆಹಲಿ ಕಾಂಗ್ರೆಸ್ ನಾಯಕರು ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಬೀದಿಗಿಳಿದು ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ವಿವಿಧ ದಲಿತ ಸಂಘಟನೆಗಳು ಇಂದಿಲ್ಲಿ ಎಚ್ಚರಿಕೆ ನೀಡಿವೆ.

ಪ್ರೆಸ್‌ಕ್ಲಬ್‌ನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಸಮತಾ ಸೈನಿಕದಳ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಡಾ.ಬಿ.ಆರ್.ಅಂಬೇಡ್ಕರ್ ಯುವಸೇನೆ, ಆದಿಜಾಂಬವ ಸೇನೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಲು ಒತ್ತಾಯಿಸಿದರು. ಸಮತಾ ಸೈನಿಕ ದಳದ ವೆಂಕಟಸ್ವಾಮಿ ಮಾತನಾಡಿ, ರಾಜ್ಯದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿಯಾಗಲು ಇದು ಸಕಾಲವಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ನಮ್ಮ ಪ್ರಕಾರ ಇದೇ ಸಕಾಲ. ನಾವು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ದಲಿತ ಸಂಘಟನೆಗಳ ಮುಖಂಡರಾಗಿ ನಮ್ಮ ಹಕ್ಕನ್ನು ಕೇಳುವುದು ತಪ್ಪೆ ಎಂದು ಪ್ರಶ್ನಿಸಿದರು. ನಾವು ಪಂಚತಾರಾ ಹೊಟೇಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರೆ ತಪ್ಪೇನಿಲ್ಲ. ನಮಗೆ ಅಂತಹ ಹೊಟೇಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸುವ ಅರ್ಹತೆ ಇದೆ. ಅದನ್ನು ಯಾರಿಂದಲೂ ಕೇಳಿ ಪಡೆಯುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.

ದಸಂಸ ಎನ್.ಮೂರ್ತಿ ಮಾತನಾಡಿ, ದಲಿತರನ್ನು ಕೇವಲ ಮತಬ್ಯಾಂಕ್‌ಗೆ ಸೀಮಿತಗೊಳಿಸಿರುವ ಕಾಂಗ್ರೆಸ್ ನಾಯಕರು ಈಗಲಾದರೂ ಪರಮೇಶ್ವರ್‌ಗೆ ಸಿಎಂ ಸ್ಥಾನ ನೀಡಬೇಕು. ಸ್ವತಂತ್ರ ಬಂದು 50 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ನಮ್ಮನ್ನು ಕೇವಲ ಜೀತದಾಳಾಗಿ ಮಾಡಿಕೊಂಡಿದೆಯೇ ಎಂದು ಹರಿಹಾಯ್ದರು. ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ಮಾತನಾಡಿ, ಇದೇ 24ರಂದು ತಾವು ರಾಜ್ಯಾದ್ಯಂತ ದಲಿತರನ್ನು ಜಾಗೃತಿಗೊಳಿಸಲು ಪ್ರವಾಸ ಕೈಗೊಳ್ಳುತ್ತಿದ್ದೇವೆ. ಕಾಂಗ್ರೆಸ್ ಪರವಾಗಿ ನಾವೆಲ್ಲರೂ ಕೆಲಸ ಮಾಡಿದ್ದರಿಂದ ಈ ಸಮುದಾಯಕ್ಕೆ ಸಿಎಂ ಸ್ಥಾನ ಕೊಡಬೇಕೆಂದು ಕೇಳುವ ಹಕ್ಕು ನಮಗಿದೆ. ನಮಗೆ ಬೇರೊಬ್ಬರಿಂದ ನೈತಿಕತೆ ಪಾಠ ತಿಳಿಯಬೇಕಿಲ್ಲ ಎಂದು ಪರೋಕ್ಷವಾಗಿ ಸಚಿವರಾದ ಆಂಜನೇಯ, ಶ್ರೀನಿವಾಸ ಪ್ರಸಾದ್‌ಗೆ ತಿರುಗೇಟು ನೀಡಿದರು. ಅಂಬೇಡ್ಕರ್ ಯುವಸೇನೆ ಹಾಗೂ ಮತ್ತಿತರ ಮುಖಂಡರು ಮಾತನಾಡಿ, ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿದರು.

Write A Comment