ಕರ್ನಾಟಕ

ಬಿಎಸ್‌ವೈ, ದೇಶಪಾಂಡೆ ವಿರುದ್ಧ ತನಿಖೆ: ಎಫ್‌ಐಆರ್‌ ದಾಖಲಿಸಲು ಲೋಕಾಯುಕ್ತ ಕೋರ್ಟ್‌ ಸೂಚನೆ

Pinterest LinkedIn Tumblr

BSY-AND-RVD

ಬೆಂಗಳೂರು: ನಗರದ ಹೊರವಲಯದ ಬೆಳ್ಳಂದೂರು ಮತ್ತು ದೇವರಬೀಸನ­ಹಳ್ಳಿ­ಯಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್‌ ನಿರ್ಮಾಣಕ್ಕೆ ಗುರುತಿಸಿದ್ದ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಅಕ್ರಮವಾಗಿ ಕೈಬಿಡಲಾಗಿದೆ ಎಂಬ ಆರೋಪ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಇಲ್ಲಿನ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶಿಸಿದೆ.

ದೂರಿಗೆ ಸಂಬಂಧಿಸಿದಂತೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಿಕೊಂಡು, ಅಕ್ರಮದಲ್ಲಿ ಈಗಿನ ಉನ್ನತ ಶಿಕ್ಷಣ ಸಚಿವ ಆರ್‌.ವಿ. ದೇಶಪಾಂಡೆ ಮತ್ತು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ಪಾತ್ರ ಏನು ಎಂಬ ಬಗ್ಗೆ ತನಿಖೆ ನಡೆಸಿ ಏ. 18ರೊಳಗೆ ವರದಿ ಸಲ್ಲಿಸಲು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿ.ಜಿ. ಬೋಪಯ್ಯ ಅವರು ಬುಧವಾರ ನೀಡಿರುವ ಆದೇಶದಲ್ಲಿ ಸೂಚಿಸಿದ್ದಾರೆ.

ದೇಶಪಾಂಡೆ 2001ರಲ್ಲಿ ರಾಜ್ಯದ ಕೈಗಾರಿಕಾ ಸಚಿವರಾಗಿದ್ದಾಗ ಮತ್ತು ಯಡಿಯೂರಪ್ಪ ಅವರು ಉಪ ಮುಖ್ಯ­ಮಂತ್ರಿ ಆಗಿದ್ದ ಅವಧಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದಲೇ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿದ್ದಾರೆ ಎಂದು ವಾಸುದೇವ ರೆಡ್ಡಿ ಎಂಬುವವರು 2013ರಲ್ಲಿ ದೂರು ನೀಡಿದ್ದರು.

ಬೆಳ್ಳಂದೂರು ಮತ್ತು ದೇವರಬೀಸನ­ಹಳ್ಳಿ­ಯಲ್ಲಿ ಐಟಿ ಪಾರ್ಕ್‌ ನಿರ್ಮಾಣ ಆಗಲಿದೆ ಎಂದು ಸರ್ಕಾರ ಪ್ರಕಟಿಸಿದ ಬೆನ್ನಲ್ಲೇ, ಮೂರು ರಿಯಲ್ ಎಸ್ಟೇಟ್

ಕಂಪೆನಿಗಳು ಅಲ್ಲಿ ಖಾಸಗಿ­ಯವ­ರಿಂದ ಜಮೀನು ಖರೀದಿಸಿದವು. ಆದರೆ ಕಂಪೆನಿ ಮಾಲೀಕರ ವಾರ್ಷಿಕ ಆದಾಯ ₨ 2 ಲಕ್ಷಕ್ಕಿಂತ ಹೆಚ್ಚಿದ್ದ ಕಾರಣ, ಕಂದಾಯ  ಅಧಿಕಾರಿ­ಗಳು ಜಮೀನನ್ನು ಮುಟ್ಟುಗೋಲು ಹಾಕಿ­ಕೊಂಡರು. ಆದರೆ ಈ ಕಂಪೆನಿಗಳು ಅಲ್ಲಿ ಐಟಿ ಉದ್ಯಮ ಆರಂಭಿಸುವ ಪ್ರಸ್ತಾಪ ಮುಂದಿಟ್ಟು ಅದೇ ಜಮೀನನ್ನು ಮರಳಿ ಪಡೆದಿವೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಮಿಥಿಲೇಶ್ ಕುಮಾರ್ ತ್ರಿಪಾಠಿ, ಸಂತೋಷ್ ಕುಮಾರ್ ಗರ್ಗ್, ಸತೀಶ್ ಗರ್ಗ್, ಕುಸುಮ ಲತಾ ಗರ್ಗ್, ದೇವಿದಾಸ್ ಗರ್ಗ್, ಅನಿತಾ ಗರ್ಗ್, ರಾಕೇಶ್ ಕುಮಾರ್ ಗರ್ಗ್ ಮತ್ತು ಕುಪೇಂದ್ರ ರೆಡ್ಡಿ ಅವರು ಈ ರಿಯಲ್ ಎಸ್ಟೇಟ್ ಕಂಪೆನಿಗಳ ಪಾಲುದಾರರು ಎಂದು ದೂರಿನಲ್ಲಿ ಹೇಳಲಾಗಿದೆ.

ಆಗ ನಡೆದದ್ದೇನು?: ಸರ್ಜಾಪುರ ಮತ್ತು ಮಾರತ­ಹಳ್ಳಿ ನಡುವಿನ ವರ್ತುಲ ರಸ್ತೆಗೆ ಹೊಂದಿ­ಕೊಂಡ ಈ ಜಮೀನು ಐಟಿ ಕಾರಿಡಾರ್ ವ್ಯಾಪ್ತಿಗೆ ಬರುತ್ತದೆ ಎಂದು ರಾಜ್ಯ ಸರ್ಕಾರ 2001ರಲ್ಲಿ ಪ್ರಕಟಿಸಿತು. 500 ಎಕರೆ ಜಮೀನು ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) 434 ಎಕರೆಗೆ ಮಾತ್ರ ಅಂತಿಮ ಅಧಿಸೂಚನೆ ಹೊರಡಿಸಿತು.

‘ವಿಕಾಸ್ ಟೆಲಿಕಾಂ, ಸುಪ್ರೀಂ ಬಿಲ್ಡ್ ಕ್ಯಾಪ್ ಪ್ರೈ. ಲಿ. ಮತ್ತು ರಾಯಲ್ ಫ್ರ್ಯಾಗ್ರೆನ್ಸ್ ಪ್ರೈ. ಲಿ. ಹೆಸರಿನಲ್ಲಿ ಈ ರಿಯಲ್ ಎಸ್ಟೇಟ್ ಉದ್ಯಮಿಗಳು ಕೆಐಎಡಿಬಿಯಿಂದ ಅದೇ ಜಮೀನನ್ನು ಅಕ್ರಮ­ವಾಗಿ ಮರಳಿ ಪಡೆದುಕೊಂಡರು. ಮಾಹಿತಿ ತಂತ್ರಜ್ಞಾನ ಉದ್ದಿಮೆ ಆರಂಭಿಸುವುದಾಗಿ ಅವರು ಸಲ್ಲಿಸಿದ ಪ್ರಸ್ತಾವವನ್ನು ರಾಜ್ಯ ಮಟ್ಟದ ಏಕ ಗವಾಕ್ಷಿ ಏಜೆನ್ಸಿ ಮರು ಮಾತಿಲ್ಲದೆ ಒಪ್ಪಿ­ಕೊಂಡಿತು. ವಿಕಾಸ್ ಟೆಲಿಕಾಂಗೆ 106.25 ಎಕರೆ, ಸುಪ್ರೀಂ ಬಿಲ್ಡ್ ಕ್ಯಾಪ್‌ಗೆ 14 ಎಕರೆ, ರಾಯಲ್ ಫ್ರ್ಯಾಗ್ರೆನ್ಸ್ ಪ್ರೈ. ಲಿ.ಗೆ 29 ಎಕರೆ ನೀಡಲಾಯಿತು’ ಎಂದು ದೂರುದಾರರು ಹೇಳಿದ್ದಾರೆ.

ಹೀಗೆ ಪಡೆದ ಜಮೀನನ್ನು ಈ ಮೂರು ಕಂಪೆನಿ­ಗಳು ರಿಯಲ್ ಎಸ್ಟೇಟ್ ಕಂಪೆನಿಗಳಿಗೆ ಭಾರಿ ಮೊತ್ತಕ್ಕೆ ಮಾರಾಟ ಮಾಡಿವೆ ಎಂದೂ ದೂರಿ­ದ್ದಾರೆ. ದೇಶಪಾಂಡೆ ಅವರ ಸೂಚನೆ ಮೇರೆಗೆ ಕೆಲವು ಜಮೀನನ್ನು ಅಧಿಸೂಚನೆಯ ನಂತರವೂ ಕೈಬಿಡಲಾಗಿದೆ. 2004ರಿಂದ 2006ರ ನಡುವಿನ ಅವಧಿಯಲ್ಲಿ ಬೆಳ್ಳಂದೂರು ಪ್ರದೇಶದಲ್ಲಿ ಅನೇಕ ಕಡೆ ಜಮೀನನ್ನು ಅಧಿಸೂಚನೆಯಿಂದ ಅಕ್ರಮ­ವಾಗಿ ಕೈಬಿಡಲಾಗಿದೆ ಎಂದು ರೆಡ್ಡಿ ಆರೋಪಿಸಿದ್ದಾರೆ.

ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ದೇವರಬೀಸನಹಳ್ಳಿ ಮತ್ತು ಬೆಳ್ಳಂದೂರಿನಲ್ಲಿ ಜಮೀನನ್ನು ಡಿನೋಟಿಫೈ ಮಾಡಿದ್ದಾರೆ. ಅವ್ಯಾಹತವಾಗಿ ನಡೆದ ಡಿನೋಟಿಫಿಕೇಷನ್ ಗಮನಿಸಿ, ಇನ್ಫೋಸಿಸ್ ಲಿಮಿಟೆಡ್ ಕಂಪೆನಿ ಯೋಜನೆಯಿಂದ ಹಿಂದೆ ಸರಿಯಿತು. ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟ ನಂತರ ಅಲ್ಲಿ ವಸತಿ ಉದ್ದೇಶದ ಕಟ್ಟಡಗಳು ತಲೆ ಎತ್ತಿವೆ. ಇಂಥ ಕಟ್ಟಡ ನಿರ್ಮಿಸಿದ ಕಂಪೆನಿಗಳಲ್ಲಿ ದೇಶಪಾಂಡೆ ಅವರೂ ಪಾಲು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.

ಮುಖ್ಯಾಂಶಗಳು
*ಏ. 18ರೊಳಗೆ ತನಿಖಾ ವರದಿ ಸಲ್ಲಿಸಲು ಸೂಚನೆ.
*ದೇವರಬೀಸನಹಳ್ಳಿ, ಬೆಳ್ಳಂದೂರಿನಲ್ಲಿ ಡಿನೋಟಿಫಿಕೇಷನ್.
*2013ರಲ್ಲಿ ಸಲ್ಲಿಸಿದ್ದ ದೂರು.
*ಐ.ಟಿ ಉದ್ಯಮದ ಹೆಸರಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ
*ಕಟ್ಟಡ ಕಂಪೆನಿಗಳಲ್ಲಿ ದೇಶಪಾಂಡೆ ಪಾಲು: ಆರೋಪ

Write A Comment