ರಾಷ್ಟ್ರೀಯ

9 ತಿಂಗಳಾಯ್ತು;ಬದಲಾವಣೆ ಕಾಣದಾಯ್ತು: ಕೇಂದ್ರ ಸರ್ಕಾರದ ಆಡಳಿತ ವೈಖರಿಗೆ ಪಾರೇಖ್‌ ಬೇಸರ

Pinterest LinkedIn Tumblr

pvec18com-deepak-parekh

ಮುಂಬೈ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೊದಲ 9 ತಿಂಗಳುಗಳ ಆಡಳಿತಾವಧಿಯಲ್ಲಿ ಯಾವುದೇ ದೊಡ್ಡ ಬದಲಾವಣೆ ಕಾಣಬರದೇ ಇರುವುದು ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ನಿಧಾನವಾಗಿಯಾದರೂ ಅಸಹನೆ  ಮೂಡುವಂತೆ ಮಾಡಿದೆ ಎಂದು ಎಚ್‌ಡಿಎಫ್‌ಸಿ ಅಧ್ಯಕ್ಷ ದೀಪಕ್‌ ಪಾರೇಖ್‌ ಹೇಳಿದ್ದಾರೆ.

ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಪಾರೇಖ್‌, ಆಶಾವಾದ, ಭರವಸೆಗಳೇನೋ ಅಪಾರವಾಗಿವೆ. ಆದರೆ, ಅವು ಯಾವುವೂ ಆದಾಯ ತರುವ ಅಂಶಗಳಾಗಿ ಪರಿವರ್ತನೆಗೊಳ್ಳುತ್ತಿಲ್ಲ. ಯಾವ ಉದ್ಯಮ ವಲಯದಲ್ಲಿ ವಿಪರೀತ ಆಶಾವಾದ ಇರುತ್ತದೆಯೋ ಅಲ್ಲಿ ಪ್ರಗತಿಯ ಗತಿಯೂ ಬಹಳ ವೇಗವಾಗಿಯೇ ಇರುತ್ತದೆ ಎಂದು ವಿಶ್ಲೇಷಿಸಿದ್ದಾರೆ.

ಬ್ಯಾಂಕಿಂಗ್‌ ಕ್ಷೇತ್ರ ಸೇರಿದಂತೆ ಹಣಕಾಸು ಮಾರುಕಟ್ಟೆಯಲ್ಲಿ ಹೆಸರು ಮಾಡಿರುವ ಪಾರೇಖ್‌, ಕೇಂದ್ರ ಸರ್ಕಾರದಿಂದ ರಚನೆಯಾದ ಹಲವು ಸಮಿತಿಗಳಲ್ಲಿ ಸದಸ್ಯರೂ ಆಗಿದ್ದಾರೆ ಎಂಬುದು ಉಲ್ಲೇಖಾರ್ಹ.

ವಾಣಿಜ್ಯೋದ್ಯಮ ವಲಯ ಸುಲಭವಾಗಿ ಹಾಗೂ ವೇಗವಾಗಿ ಉದ್ಯಮ ಚಟುವಟಿಕೆ ನಡೆಸಬೇಕೆಂದು ಬಯಸುತ್ತದೆ. ಅದಕ್ಕಾಗಿ ಆಡಳಿತ ಮತ್ತು ನಿಯಂತ್ರಣ ನೀತಿಗಳನ್ನು ಸರಳೀಕರಿಸಬೇಕಿದೆ. ಇದು ದೇಶದ ಉದ್ಯಮ ವಲಯದ ಮುಖ್ಯ ಆಶಯವೂ ಆಗಿದೆ ಎಂದಿದ್ದಾರೆ.

‘ಭಾರತದಲ್ಲಿ ತಯಾರಿಸಿ’ ಕನಸು
ಉದ್ಯಮ ಆರಂಭ ಮತ್ತು ವಾಣಿಜ್ಯ ಚಟುವಟಿಕೆ ಗಳನ್ನು ನಡೆಸುವುದು ಆದಷ್ಟೂ ಸರಳಗೊಳ್ಳದೇ ಇದ್ದರೆ, ನಿರ್ಧಾರಗಳನ್ನು ವೇಗವಾಗಿ ಕೈಗೊಳ್ಳದೇ ಇದ್ದರೆ ‘ಭಾರತದಲ್ಲಿ ತಯಾರಿಸಿ’ ಎಂಬ ಕನಸು ಕೈಗೂಡು ವುದು ಕಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನರೇಂದ್ರ ಮೋದಿ ಅವರ ಸರ್ಕಾರದತ್ತ ಜನರು ಮತ್ತು ಉದ್ಯಮಿಗಳು ಭಾರಿ ಆಶಾವಾದ ಹೊಂದಿದ್ದಾರೆ. ಸರ್ಕಾರ ವಾಣಿಜ್ಯೋದ್ಯಮ ವಲಯದ ಒಳಿತಿಗಾಗಿ ಉತ್ತಮ ಕ್ರಮಗಳನ್ನು ಶೀಘ್ರವಾಗಿ ಜಾರಿಗೊಳಿಸಲಿದೆ, ಭ್ರಷ್ಟಾಚಾರವನ್ನು ತಗ್ಗಿಸಲಿದೆ, ದೇಶದ ಪ್ರಗತಿಗೆ ವೇಗವನ್ನು ನೀಡಲಿದೆ ಎಂಬುದೇ ಎಲ್ಲರ ನಿರೀಕ್ಷೆಯಾಗಿದೆ. ಆದರೆ, ಅದಾಗಲೇ 9 ತಿಂಗಳುಗಳು ಕಳೆದು ಹೋಗಿವೆ. ತಾವು ನಿರೀಕ್ಷಿಸಿದಂತೆ ಯಾವುದೂ ಆಗುತ್ತಿಲ್ಲ ಎಂಬ ಅಸಮಾಧಾನದ ಕಿಡಿ ಜನರು ಮತ್ತು ಉದ್ಯಮಿಗಳು ನಡುವೆ ಸಣ್ಣದಾಗಿ ಕಾಣಿಸಿಕೊಳ್ಳಲಾರಂಭಿಸಿದೆ ಎಂದು ಪಾರೇಖ್‌ ಎಚ್ಚರಿಸಿದ್ದಾರೆ.

ನಿಜಕ್ಕೂ ಪ್ರಧಾನಿ ಅವರ ಪಾಲಿಗೆ ಈವರೆಗಿನ 9 ತಿಂಗಳು ಅದೃಷ್ಟದ ಅವಧಿಯದಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕುಸಿತ, ವಿವಿಧ ಸರಕುಗಳ ಧಾರಣೆ ಇಳಿಕೆ ಭಾರತದ ಪಾಲಿಗೂ ಅನುಕೂಲಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
……………………..
ಅದಾಗಲೇ 9 ತಿಂಗಳು ಕಳೆದುಹೋಗಿವೆ. ತಾವು ನಿರೀಕ್ಷಿಸಿದಂತೆ ಯಾವುದೂ ಆಗುತ್ತಿಲ್ಲ ಎಂಬ ಅಸಮಾಧಾನದ ಕಿಡಿ ಜನರು ಮತ್ತು ಉದ್ಯಮಿಗಳು ನಡುವೆ ಸಣ್ಣದಾಗಿ ಕಾಣಿಸಿಕೊಳ್ಳಲಾರಂಭಿಸಿದೆ. ಉದ್ಯಮ ಆರಂಭ ಮತ್ತು ವಾಣಿಜ್ಯ ಚಟುವಟಿಕೆ ನಡೆಸುವುದು ಸರಳಗೊಳ್ಳದೇ ಇದ್ದರೆ, ನಿರ್ಧಾರಗಳನ್ನು ವೇಗವಾಗಿ ಕೈಗೊಳ್ಳದಿದ್ದರೆ ‘ಭಾರತದಲ್ಲಿ ತಯಾರಿಸಿ’ ಎಂಬ ಕನಸು ಕೈಗೂಡುವುದು ಕಷ್ಟವಾಗುತ್ತದೆ’.

Write A Comment