ಕರ್ನಾಟಕ

ಕಲೆಯಲ್ಲಿ ಇಂಡೋನೇಷ್ಯಾದ ಗಮನ ಸೆಳೆದ ಹಾವೇರಿ ಜಿಲ್ಲೆಯ ಬ್ಯಾಡಗಿಯ ಮೋಟೆಬೆನ್ನೂರು ಗ್ರಾಮದ ಯುವಕ

Pinterest LinkedIn Tumblr

kdec10guru

ಹಾವೇರಿ ಜಿಲ್ಲೆಯ ಬ್ಯಾಡಗಿಯ ಮೋಟೆಬೆನ್ನೂರು ಎಂಬ ಪುಟ್ಟ ಗ್ರಾಮದ ಈ ಯುವಕ ಕಲೆಯ ಮೂಲಕ ಇಂಡೋನೇಷ್ಯಾದ ಗಮನ ಸೆಳೆದಿದ್ದಾರೆ. ದೇಹದ ಪಡಿಯಚ್ಚಿನಲ್ಲಿ ಕಲಾಕೃತಿ ರಚಿಸುವ ವಿಶಿಷ್ಟ ಕಲೆ ಇವರಿಗೆ ಕರಗತವಾಗಿದೆ. ರಾಜ್ಯದ ವಿವಿಧೆಡೆ ನೂರಾರು ಪುತ್ಥಳಿಗಳನ್ನು, ಖ್ಯಾತನಾಮರ ಪ್ರತಿಮೆಗಳನ್ನೂ ಇವರು ನಿರ್ಮಿಸಿದ್ದಾರೆ.

​ಒಮ್ಮೆ ಇವರು ಪೇಂಟಿಂಗ್‌ ಮಾಡುತ್ತಿದ್ದಾಗ ನೆಲದ ಮೇಲೆ ಬಣ್ಣ ಚೆಲ್ಲಿತು. ಅಕಸ್ಮಾತಾಗಿ ಅದರ ಮೇಲೆ ಕೈ ಊರಿದರು. ಕೈ ಗುರುತು ಅದರ ಮೇಲೆ ಬಿತ್ತು. ಕೈಬೆರಳಿನ ರೇಖೆಗಳೂ ಗಾಢವಾಗಿ ಅಚ್ಚೊತ್ತಿದವು. ಅದೇ ಒಂದು ಕಲಾಕೃತಿಯಂತೆ ಕಂಡಿತು. ಕೈ, ಕಾಲು, ಮುಖ ಎಲ್ಲದರ ಪಡಿಯಚ್ಚು ತೆಗೆದುಕೊಂಡರು. ಒಮ್ಮೆ ದೊಡ್ಡ ಕ್ಯಾನ್‌ವಾಸ್‌ ತೆಗೆದುಕೊಂಡು ಅದರ ಮೇಲೆ ಬಣ್ಣ ಹಾಕಿ ಅತಿ ಕಡಿಮೆ ಬಟ್ಟೆ ಧರಿಸಿ ಅದರ ಮೇಲೆ ಉರುಳಾಡಿದರು. ಅಲ್ಲಿ ದೊರೆತ ಚಿತ್ರಣದ ಆಧಾರದ ಮೇಲೆ ಕಲಾಕೃತಿಗಳನ್ನು ರಚಿಸಲು ಮುಂದಾದರು. ಒಂದಕ್ಕಿಂತ ಒಂದು ಅದ್ಭುತ ಕಲೆ ಅಲ್ಲಿ ಅನಾವರಣಗೊಂಡಿತು.

ಇದು ದೇಶದಲ್ಲಷ್ಟೇ ಅಲ್ಲ, ತಮ್ಮ ಕಲೆಯ ಛಾಪನ್ನು ವಿದೇಶದಲ್ಲಿಯೂ ಮುದ್ರಿಸಿ ಅಸಂಖ್ಯ ಕಲಾಕೃತಿಗಳನ್ನು ರಚಿಸಿರುವ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರಿನ ಹರೀಶ್ ವಸಂತ ಮಾಳಪ್ಪನವರ ಎಂಬ 29ರ ಯುವಕ ಅವರ ‘ಎಕ್ಸ್‌ಪ್ರೆಷನ್‌ ಆಫ್‌ ಇಂಪ್ರೆಷನ್‌’ ಎಂಬ ವಿಶಿಷ್ಟ ಕಲೆಯ ಕಥೆ.

ವೈದ್ಯನಾಗಬೇಕೆಂಬ ಅಪ್ಪ- ಅಮ್ಮನ ಆಕಾಂಕ್ಷೆಯಂತೆ ಕೈಯಲ್ಲಿ ಆಪರೇಷನ್‌ ಸಾಮಗ್ರಿ ಹಿಡಿಯದಿದ್ದರೂ, ಕುಂಚ ಹಿಡಿದು ಸಹಸ್ರಾರು ಕಲಾಕೃತಿಗಳನ್ನು ರಚಿಸಿದ್ದಾರೆ, ಪ್ರತಿಮೆ- ಪುತ್ಥಳಿಗಳಿಗೆ ಜೀವ ತುಂಬಿದ್ದಾರೆ.

ಉಡುಪಿಯ ಮಲ್ಪೆ ಬೀಚ್‌ನಲ್ಲಿರುವ ಮಹಾತ್ಮ ಗಾಂಧೀಜಿ ಪುತ್ಥಳಿ, ಮಣಿಪಾಲದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ದಂಡಿಯಾತ್ರೆಯ ಪ್ರತಿಮೆಗಳು, ಕೋಟದ ಕಾರಂತ ಭವನದಲ್ಲಿ ಪ್ರತಿಷ್ಠಾಪಿಸಿರುವ ಶಿವರಾಮರ ಕಂಚಿನ ಪುತ್ಥಳಿ, ಬ್ಯಾಡಗಿಯ ಮಿನಿ ವಿಧಾನಸೌಧದ ಆವರಣದಲ್ಲಿರುವ ಸ್ವಾತಂತ್ರ್ಯಸೇನಾನಿ ಮೈಲಾರ ಮಹಾದೇವಪ್ಪನವರ ಪ್ರತಿಮೆ, ಕನಕದಾಸರ ಹುಟ್ಟೂರಾದ ಬಾಡ ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವ ಯುವ ಕನಕದಾಸರ (ತಿಮ್ಮಪ್ಪ ನಾಯಕ) ಕಂಚಿನ ಪುತ್ಥಳಿ… ಹೀಗೆ ಗಮನ ಸೆಳೆಯುವ ಈ ಕಲಾಕೃತಿಗಳನ್ನು ರಚಿಸಿದವರು ಇವರೇ.

ಎಲ್ಲ ಮಕ್ಕಳಂತೆ ಮಣ್ಣಿನಲ್ಲಿಯೇ ಆಡುತ್ತಾ ಬೆಳೆದವರು ಹರೀಶ್. ಅದರಲ್ಲೇ ಮೂರ್ತಿಗಳನ್ನು ಮಾಡುವುದು, ಗಣೇಶನನ್ನು ಮಾಡುತ್ತಾ, ಮನೆ ಕಟ್ಟುತ್ತಾ ಇದ್ದವರು.

ಮಗನನ್ನು ವೈದ್ಯನನ್ನಾಗಿಸಬೇಕು ಎಂಬ ಆಸೆಯಿಂದ ಹರೀಶ್ ಅವರನ್ನು ಪಿಯು ವಿಜ್ಞಾನ ವಿಭಾಗಕ್ಕೆ ಸೇರಿಸಿದರು ಅವರ ತಂದೆ. ಆದರೆ, ತಂದೆಯ ನಿರೀಕ್ಷೆ ಹುಸಿಗೊಳಿಸಿ, ತಮ್ಮ ನಿರೀಕ್ಷೆಯಂತೆ ಪಿಯುಸಿಯಲ್ಲಿ ಅನುತ್ತೀರ್ಣರಾದರು ಹರೀಶ್! ಮಗ ಆಸಕ್ತಿ ಹೊಂದಿರುವ ಕ್ಷೇತ್ರದಲ್ಲಿಯೇ ಕಲಿಯಲಿ ಬಿಡಿ ಎಂಬ ಹಿತೈಷಿಗಳ ಸಲಹೆಗೆ ಓಗೊಟ್ಟ ತಂದೆ ಮಗನನ್ನು ದಾವಣಗೆರೆಯ ಲಲಿತಕಲಾ ಕಾಲೇಜಿಗೆ ಸೇರಿಸಿದರು.

2004ರಿಂದ 2008ರವರೆಗೆ ದಾವಣಗೆರೆಯಲ್ಲಿ ಬಿವಿಎ (ಬ್ಯಾಚುಲರ್‌ ಆಫ್‌ ವಿಷುವಲ್‌ ಆರ್ಟ್ಸ್‌) ಅಭ್ಯಾಸ ಮಾಡಿದ ಅವರು ವರ್ಣಕೃತಿ, ಶಿಲ್ಪಕೃತಿ, ಉಬ್ಬು ಚಿತ್ರಗಳು ಸೇರಿದಂತೆ ಎಲ್ಲ ಪ್ರಕಾರದ ಕಲೆ ಕಲಿತರು.

ಎಲ್ಲ ಪ್ರಕಾರಗಳಲ್ಲಿಯೂ ಸಹಜ ಕುತೂಹಲ ಹೊಂದಿದ್ದ ಹರೀಶ್, ತಮ್ಮ ಖರ್ಚಿಗೆ, ಅಭ್ಯಾಸಕ್ಕೆ ಅಗತ್ಯವಿದ್ದ ಹಣವನ್ನು ಸಂಪಾದಿಸುತ್ತಿದ್ದದ್ದು ಕಲೆಯ ಮೂಲಕವೇ. ಬಿ.ಇಡಿ ವಿದ್ಯಾರ್ಥಿಗಳಿಗೆ 10 ರೂಪಾಯಿಗೊಂದರಂತೆ ಚಿತ್ರ  ಬರೆದುಕೊಡುತ್ತಿದ್ದರು. ಅದೇ ಹಣದಿಂದ ಊಟದ ಖರ್ಚು ನೀಗುತ್ತಿತ್ತು. ಹೆಚ್ಚು ಹಣ ಉಳಿದರೆ, ಅದರಿಂದ ಚಿತ್ರರಚನೆಗೆ ಅಗತ್ಯವಾದ ಸಾಮಗ್ರಿ ಖರೀದಿಸಿ ಅದರಲ್ಲಿ ಉತ್ತಮ ಕಲಾಕೃತಿಯೊಂದನ್ನು ರಚಿಸುತ್ತಿದ್ದರು. ಹೀಗೆ ‘ಕಲಿಕೆಯೊಂದಿಗೆ ಗಳಿಕೆ’ ಪದ್ಧತಿ ಚಾಲ್ತಿಯಲ್ಲಿಟ್ಟರು ಹರೀಶ್.

ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ವಿದ್ಯಾರ್ಥಿ ವೇತನ ಪಡೆದ ಇವರು, ಎಂವಿಎ ಮಾಡಿದ್ದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ. ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದರು. ವ್ಯಾಸಂಗದ ಅವಧಿಯಲ್ಲಿಯೇ ಇಂಡೊನೇಷ್ಯಾ, ಕೊಲ್ಕತ್ತಾ, ದೆಹಲಿ, ಹೈದರಾಬಾದ್, ಚೆನ್ನೈ, ಕೇರಳ ಸೇರಿದಂತೆ ಹಲವೆಡೆ ನಡೆದ ಕಲಾ ಪ್ರದರ್ಶನದಲ್ಲಿ ಪಾಲ್ಗೊಂಡು ಹಲವು ವರ್ಣಕೃತಿ, ಶಿಲ್ಪಕೃತಿಗಳನ್ನು ರಚಿಸಿ ಪ್ರದರ್ಶಿಸಿದರು.

ಕೇಂದ್ರ ಲಲಿತಾ ಕಲಾ ಅಕಾಡೆಮಿ 2012ರಲ್ಲಿ ಚೆನ್ನೈನಲ್ಲಿ ರಾಷ್ಟ್ರೀಯ ಮಟ್ಟದ ಕಲಾಕೃತಿ ರಚನೆ ಕಾರ್ಯಾಗಾರ ಆಯೋಜಿಸಿತ್ತು. ದೇಶದಿಂದ ಆಯ್ಕೆಯಾದ ಆರು ಕಲಾವಿದರಲ್ಲಿ ಹರೀಶ್, ರಾಜ್ಯವನ್ನು ಪ್ರತಿನಿಧಿಸಿದ್ದರು. ಕೊರಿಯಾದಿಂದಲೂ ಆರು ಕಲಾವಿದರು ಭಾಗವಹಿಸಿದ್ದರು. ರಾಜ್ಯದ ಸಂಸ್ಕೃತಿ, ಕಲೆ ಬಿಂಬಿಸುವ ಕಲಾಕೃತಿ ರಚಿಸಿದ ಹರೀಶ್ ಎಲ್ಲರ ಮೆಚ್ಚುಗೆ ಗಳಿಸಿದರು. ಕೊರಿಯಾ ಮತ್ತು ಭಾರತದ ಕಲೆಗಳ ವಿನಿಮಯವೂ ನಡೆಯಿತು.

2014ರಲ್ಲಿ ಕೇರಳದ ಫೊಕುಲುರು ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರೀಯ ಟೆರ್ರಾಕೋಟಾ ಶಿಲ್ಪ ರಚನೆಯ ಶಿಬಿರ, 2013ರಲ್ಲಿ ಉದಯಪುರದ ಪಶ್ಚಿಮ ವಲಯ ಸಾಂಸ್ಕೃತಿಕ ಕೇಂದ್ರ, ರಾಜಾಸ್ತಾನದ ಶಿಲ್ಪಗ್ರಾಮದಲ್ಲಿ ಆಯೋಜಿಸಲಾಗಿದ್ದ ‘ಮಾತಿ ಕೆ ರಂಗ್‌’ ರಾಷ್ಟ್ರೀಯ ಟೆರ್ರಕೋಟಾ ಶಿಲ್ಪ ರಚನೆ ಶಿಬಿರದಲ್ಲಿ ಕರ್ನಾಟಕ ಸಂಸ್ಕೃತಿ ಬಿಂಬಿಸುವ ಕಲಾಕೃತಿಗಳನ್ನು ರಚಿಸಿ, ಕೇಂದ್ರ ಲಲಿತಕಲಾ ಅಕಾಡೆಮಿಯಿಂದ ಪ್ರಶಸ್ತಿಯನ್ನೂ ಪಡೆದರು.

ಎಲ್ಲ ಮಾಧ್ಯಮದಲ್ಲಿಯೂ ಕಲಾಕೃತಿ ಸಿದ್ಧ!
ಮೂರ್ತಿ ತಯಾರಿಕೆ ಕಲೆಯ ಒಂದು ಭಾಗ. ವರ್ಣಕಲಾಕೃತಿಗಳಿಗಿಂತ ಶಿಲ್ಪಕಲಾಕೃತಿಗಳು ಹೆಚ್ಚು ತ್ರೀ ಡೈಮೆನ್ಷನ್‌ ಅನುಭವ ಕೊಡುತ್ತವೆ. ಮಣ್ಣು, ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌, ಫೈಬರ್‌ ಗ್ಲಾಸ್‌, ಕಂಚು, ಸೆರಾಮಿಕ್‌, ಸಿಮೆಂಟ್‌, ರಬ್ಬರ್‌ ಮಾಧ್ಯಮದಲ್ಲಿ ಕೃತಿಗಳನ್ನು ರಚಿಸಲಾಗುತ್ತದೆ. ಎಲ್ಲಕ್ಕೂ ಮೂಲ ಮಾಧ್ಯಮವಾಗಿ ಬಳಸುವುದು ಮಣ್ಣನ್ನು. ಮೊದಲು ಕಬ್ಬಿಣದ ಆರ್ಮ್‌ಚೇರ್‌ ಸಿದ್ಧಪಡಿಸಲಾಗುತ್ತದೆ. ಅದರ ಮೇಲೆ ಮಣ್ಣನ್ನು ತುಂಬಿಸಲಾಗುತ್ತದೆ. ಕೊನೆಗೆ ಅಚ್ಚು ತೆಗೆದು ಯಾವುದೇ ಮಾಧ್ಯಮದಲ್ಲಿ ಮೂರ್ತಿ ತಯಾರಿಸಲಾಗುತ್ತದೆ.

ದೀರ್ಘಾವಧಿ ಬಾಳಿಕೆ ಬರಬೇಕು ಎಂದರೆ ಕಂಚಿನ ಪ್ರತಿಮೆಗಳನ್ನು, ಆಕರ್ಷಕವಾಗಿ ಇರಬೇಕು ಎಂದರೆ ಫೈಬರ್‌ ಗ್ಲಾಸ್‌ ಮೂರ್ತಿಗಳನ್ನು, ಸ್ಪರ್ಶದ ಅನುಭವವನ್ನೂ ನೀಡಬೇಕು ಎಂದರೆ ರಬ್ಬರ್‌ ಮಾಧ್ಯಮದಿಂದ ಕೃತಿಗಳನ್ನು ರಚಿಸಲಾಗುತ್ತದೆ. ಮನೆಯ ಗೋಡೆ ಅಥವಾ ಒಳಾಂಗಣಗಳಲ್ಲಿ ಉಬ್ಬು ಚಿತ್ರಗಳನ್ನು, ಸಾರ್ವಜನಿಕ ಸ್ಥಳಗಳಲ್ಲಿ ಶಿಲ್ಪ ಅಥವಾ ಕಂಚಿನ ಪ್ರತಿಮೆಗಳನ್ನು ರಚಿಸಲಾಗುತ್ತದೆ. ಎರಡೂವರೆ ಅಡಿ ಎತ್ತರದ ಕಂಚಿನ ಪ್ರತಿಮೆಗೆ ಒಂದೂವರೆ ಲಕ್ಷ ರೂಪಾಯಿ ಆಗುತ್ತದೆ. ಬಳಸಿದ ಮಾಧ್ಯಮ, ಗಾತ್ರ ಮತ್ತು ಶ್ರಮದ ಆಧಾರದ ಮೇಲೆ ಬೆಲೆಯನ್ನು ನಿರ್ಧರಿಸಲಾಗುತ್ತದೆ. ಈ ಎಲ್ಲ ಮಾಧ್ಯಮಗಳಲ್ಲಿ 400–500 ಕಲಾಕೃತಿಗಳನ್ನು ರಚಿಸಿದ್ದಾರೆ ಹರೀಶ್್. ಆದರೆ, ರಬ್ಬರ್‌ನಿಂದ ತಯಾರಿಸಿದ ಕಲಾಕೃತಿಗಳು ಅವರಿಗೆ ಹೆಚ್ಚು ತೃಪ್ತಿಕೊಟ್ಟಿದೆ.

ಪ್ರತಿಭಾ ಪ್ರದರ್ಶನಕ್ಕೆ ಬೇಕು ವೇದಿಕೆ !

ವ್ಯಕ್ತಿಯ ಕಲಾಕೃತಿಯನ್ನು ಆ ಸ್ಥಳದಲ್ಲಿಯೇ ರಚಿಸಿಕೊಡುವ ಕಲೆ ಹರೀಶ್್‌ಗೆ ಸಿದ್ಧಿಸಿದೆ. ಪ್ರಕೃತಿಯೇ ಎಲ್ಲ ಕಲೆಗೂ ಸ್ಫೂರ್ತಿ ಎನ್ನುವ ಅವರು ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ, ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

‘ಕಲೆ ತಪಸ್ಸಿದ್ದಂತೆ. ಮೂಲ ಕ್ರಮವನ್ನು ಕಲಿತ ನಂತರ, ಅದರ ಮೇಲೆ ಸತತ ಶ್ರಮ ಹಾಕಿ ಹೊಸದನ್ನು ಕೊಟ್ಟರೆ ಎಲ್ಲರೂ ಸ್ವೀಕರಿಸುತ್ತಾರೆ. ಯಾರೂ ನೋಡಿರದ್ದನ್ನು, ಊಹಿಸಲಾಗದ್ದನ್ನು ತೋರಿಸಿದಾಗ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಈ ಕಲೆಯನ್ನೇ ವೃತ್ತಿಯಾಗಿ ತೆಗೆದುಕೊಂಡರೂ ಉತ್ತಮ ಭವಿಷ್ಯವಿದೆ’ ಎನ್ನುವ ಅಭಿಪ್ರಾಯ ಅವರದ್ದು.

ಏಳೆಂಟು ಜನರ ತಂಡ ಕಟ್ಟಿಕೊಂಡು ಹರೀಶ್ ಕಲಾಕೃತಿಗಳ ರಚನೆಯಲ್ಲಿ ತೊಡಗಿದ್ದಾರೆ. ವಿವಿಧ ಕಲಾ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಅವರು, ಯುವ ಕಲಾವಿದರಿಗೆ ಮಾರ್ಗದರ್ಶನ ಮಾಡುತ್ತಾರೆ, ಹಿರಿಯರಿಂದ ಕಲಿಯುತ್ತಾರೆ. ಸಂಪರ್ಕಕ್ಕೆ 99640–05451.

Write A Comment