ಕರ್ನಾಟಕ

ಹಿಂದೂಸ್ತಾನಿ ಗಾಯನದ ಖ್ಯಾತಿಯ ಗಂಗೂಬಾಯಿ ಹುಟ್ಟೂರು ಈ ಹಾನಗಲ್

Pinterest LinkedIn Tumblr

ab7_0

ಭಾರತದಲ್ಲಷ್ಟೇ ಅಲ್ಲದೆ ಜಗತ್ತಿನಾದ್ಯಂತ ಹಿಂದೂಸ್ತಾನಿ ಗಾಯನದ ಖ್ಯಾತಿಯನ್ನು ಪಸರಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ಗಂಗೂಬಾಯಿ ಅವರ ಹುಟ್ಟೂರು ಈ ಹಾನಗಲ್ – ಈಗಿನ ಹಾವೇರಿ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಕೇಂದ್ರ.

ಇದೇ ಊರು ಒಂದು ಕಾಲದಲ್ಲಿ ದಕ್ಷಿಣ ಭಾರತದ ಪ್ರಮುಖ ರಾಜಮನೆತನಗಳ ಪ್ರತಿಷ್ಠೆಯ ಬೀಡಾಗಿತ್ತೆಂಬುದೂ ಅಷ್ಟೇ ಸತ್ಯ. ಸಾವಿರಾರು ವರ್ಷಗಳ ಇತಿಹಾಸದಲ್ಲಿ ಪಾನುಂಗಲ್, ಹಾನುಂಗಲ್ಲು, ಹಾನಗಲ್ಲು ಎಂದೆಲ್ಲಾ ಕರೆಸಿಕೊಂಡಿರುವ ಈ ಊರು ಕದಂಬ, ಕಲ್ಯಾಣಿ ಚಾಲುಕ್ಯ ಮತ್ತು ಹೊಯ್ಸಳ ರಾಜಸಂಸ್ಥಾನಗಳ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿ ಉತ್ತುಂಗದಲ್ಲಿತ್ತು. ಹಾನಗಲ್ ಕೋಟೆಯನ್ನು ವಶಪಡಿಸಿಕೊಳ್ಳುವುದರ ಮೂಲಕವೇ ಹೊಯ್ಸಳ ದೊರೆಗಳಾದ ವಿಷ್ಣುವರ್ಧನ ಮತ್ತು ಎರಡನೇ ವೀರ ಬಲ್ಲಾಳರು ಕಲ್ಯಾಣಿ ಚಾಲುಕ್ಯರ ಸಾಮಂತಿಕೆಯಿಂದ ಹೊರಬರುವ ಮತ್ತು ತಮ್ಮದೇ ಆದ ಸಾಮ್ರಾಜ್ಯವನ್ನು ಸ್ಥಾಪಿಸುವ ಕೆಚ್ಚು ತೋರಿದ್ದು. ಹೀಗೆ ಕರ್ನಾಟಕದ ಇತಿಹಾಸದಲ್ಲಿ ಹಾನಗಲ್ಲಿನ ಪಾತ್ರ ಅವಿಸ್ಮರಣೀಯ.

ಇಂತಹ ಐತಿಹಾಸಿಕ ಜಾಡು ಹೊಂದಿರುವ ಹಾನಗಲ್ಲಿನಲ್ಲಿ 11ರಿಂದ 13ನೇ ಶತಮಾನಗಳವರೆಗೆ ರಾಜಮನೆತನಗಳು ಕಟ್ಟಿಸಿದ ದೇವಾಲಯಗಳೂ ಹಲವಿವೆ. ಪಶ್ಚಿಮ ಚಾಲುಕ್ಯ ಶಿಲ್ಪಕಲಾ ಶೈಲಿಯ ಶ್ರೇಷ್ಠ ಉದಾಹರಣೆಗಳಲ್ಲೊಂದಾದ ತಾರಕೇಶ್ವರ ದೇವಾಲಯ ಇಂದಿನ ಹಾನಗಲ್ ಊರಿನೊಳಗೇ ಇದ್ದು ಬಹುಪರಿಚಿತವಾಗಿದೆ. ಈ ದೇವಾಲಯದ ಮಧ್ಯಭಾಗದಲ್ಲಿರುವ ಭವ್ಯವಾದ ಭುವನೇಶ್ವರಿಯು ಶಿಲ್ಪಕಲೆಯ ಪರಾಕಾಷ್ಠೆ ಎಂದರೆ ಅತಿಶಯೋಕ್ತಿಯಾಗಲಾರದು. ಅಷ್ಟೇ ಅಲ್ಲದೆ, ಹಾನಗಲ್ ಇನ್ನೂ ಹಲವು ಚಾರಿತ್ರಿಕ ಸ್ಮಾರಕಗಳ ನೆಲೆವೀಡು. ಆದರೆ ಅವುಗಳಲ್ಲಿ ಹೆಚ್ಚಿನವು ಶೋಚನೀಯ ಸ್ಥಿತಿಯಲ್ಲಿವೆ. ಇತಿಹಾಸದ ಹಲವು ಗುಟ್ಟುಗಳನ್ನು ತಮ್ಮೊಳಗೇ ಹುದುಗಿಸಿಟ್ಟುಕೊಂಡು ವಿನಾಶದಂಚು ತಲುಪುತ್ತಿವೆ.

ಊರಿನ ಹೊರವಲಯದಲ್ಲಿರುವ ಕೆರೆಯ ತಪ್ಪಲಿನ ಬಿಲ್ಲೇಶ್ವರ ದೇವಾಲಯ ಮತ್ತು ಕೋಟೆಯ ವೀರಭದ್ರ ದೇವಾಲಯಗಳು ಕೆಲ ಸಮಯದ ಹಿಂದಷ್ಟೇ ಪುನರುತ್ಥಾನ ಕಂಡಿರುವಂತಿದ್ದರೂ ಅವುಗಳ ರಕ್ಷಣೆಗೆ ಇನ್ನೂ ಬಹಳ ಕೆಲಸ ನಡೆಯುವ ಅಗತ್ಯವಿದೆ. ಅಷ್ಟೇ ಅಲ್ಲದೆ ಇವುಗಳ ಸುತ್ತಮುತ್ತ ಯಾವ ರೀತಿಯ ಚಾರಿತ್ರಿಕ ಕುರುಹುಗಳು ನಮಗೆ ದೊರಕಬಹುದು ಎಂಬುದು ಸದ್ಯಕ್ಕೆ ಊಹೆಯಾಗಿಯೇ ಉಳಿಯುತ್ತದೆ. ಆ ಕಾಲದಲ್ಲಿ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಹಾನಗಲ್ ಕೋಟೆಯ ಅವಶೇಷಗಳೂ ಇಂದು ಕಾಣಸಿಗುವುದಿಲ್ಲ. ಕೋಟೆಯ ಭಾಗದಲಿತ್ತು ಎಂದು ಹೇಳಲಾಗುವ, ಸಂಪೂರ್ಣ ಶಿಥಿಲಾವಸ್ಥೆಯಲ್ಲಿರುವ ದೇಗುಲವೊಂದು ಹಸಿರು ತೋಟವೊಂದರ ನಡುವೆ ಕಾಣಸಿಗುತ್ತದೆ. ವಸಂತ ಋತುವಿನಲ್ಲಂತೂ ಹಸಿರನ್ನೇ ಹೊದ್ದಂತೆ ಭಾಸವಾಗುವ ಹಾನಗಲ್ಲಿನ ಹೊರವಲಯದ ತೋಟಗಳ ನಡುವೆ ದಟ್ಟ ಹಸಿರಿನ ಎತ್ತರದ ಪೊದೆಯೇನೋ ಎಂಬಂತೆನಿಸುವ ಆಕೃತಿಯೊಂದು ಹತ್ತಿರ ಹೋದಂತೆ ಪುರಾತನ ದೇಗುಲವೆಂದು ಮನದಟ್ಟಾಗುತ್ತದೆ.

ಸ್ಥಳೀಯರಲ್ಲಿ ಹಲವರಿಗೆ ಈ ದೇಗುಲ ಯಾವುದೆಂಬುದು ನಿಖರವಿಲ್ಲದಿದ್ದರೂ ಅದರ ಪ್ರಾಚೀನತೆಯನ್ನು ಅರಿಯುವುದು ಕಷ್ಟವೇನಲ್ಲ. ಬ್ರಿಟಿಷ್ ಲೈಬ್ರರಿ ಉಲ್ಲೇಖಿಸಿರುವಂತೆ ಹೆನ್ರಿ ಕೌಸೆನ್ಸ್ ಎಂಬುವವರು 1885ರಲ್ಲಿ ಸೆರೆಹಿಡಿದಿರುವ ಛಾಯಾಚಿತ್ರವೊಂದು ಇದನ್ನು ಜೈನ ದೇವಾಲಯವೆಂದು ಗುರುತಿಸಿದ್ದರೆ, ಸ್ಥಳೀಯರಲ್ಲಿ ಕೆಲವರು ಇದೊಂದು ಹೆಣ್ಣು ದೇವರ ದೇಗುಲವಾಗಿತ್ತೆನ್ನುತ್ತಾರೆ. ದೇವಾಲಯದ ಮುಂಭಾಗ ಮತ್ತು ಶಿಖರಗಳು ಕುಸಿದು ಸುತ್ತ ಗಿಡಗಂಟೆಗಳು ಬೆಳೆದಿದ್ದರೂ ತಿರುಗಣಿಯಿಂದ ನುಣುಪಾಗಿಸಲಾಗಿರುವ ಕಂಬಗಳು ಹೊರಚಾಚಿಕೊಂಡು ನಯನಮನೋಹರವಾಗಿವೆ. ತೋಟದ ಬದುವಿನಲ್ಲೇ ಮುಂದುವರೆದಾಗ ಬಹಳ ಹಿಂದಿನ ಕಾಲದ್ದೆನಿಸುವ ಕಲ್ಲಿನ ಚಕ್ರವೊಂದು ಹತ್ತಿರದ ಕೊಟ್ಟಿಗೆಯಲ್ಲಿ ಅನಾಥವಾಗಿ ಬಿದ್ದಿರುವುದು ಗೋಚರಿಸುತ್ತದೆ.

ಹೀಗೆಯೇ ಹಾನಗಲ್ ಊರಿನಾದ್ಯಂತ ಐತಿಹಾಸಿಕ ಕುರುಹುಗಳು ಹರಡಿರುವ ಸಾಧ್ಯತೆಗಳು ಹೆಚ್ಚು. ವ್ಯವಸ್ಥಿತವಾದ ಉತ್ಖನನವನ್ನು ಕೈಗೊಂಡಲ್ಲಿ ಇತಿಹಾಸದ ಹಲವು ಪುಟಗಳನ್ನು ತುಂಬಿಸುವ ವಿಚಾರಗಳು ಹಾನಗಲ್ ಆಸುಪಾಸಿನಲ್ಲಿ ಹೊರಬಂದರೆ ಆಶ್ಚರ್ಯವೇನಿಲ್ಲ. ಐಹೊಳೆ, ಲಕ್ಕುಂಡಿ, ಹಳೆಬೀಡುಗಳಂತೆ ಹಾನಗಲ್ ಸಹ ಶತಶತಮಾನಗಳ ಚಾರಿತ್ರಿಕ ಶ್ರೀಮಂತಿಕೆಯನ್ನು ಹೊಮ್ಮಿಸುವ ಸಾಮರ್ಥ್ಯ ಹೊಂದಿರುವುದರಲ್ಲಿ ಎರಡು ಮಾತಿಲ್ಲ.

ಪ್ರಶ್ನೆ ಹುಟ್ಟಿಸುವ ಶಿಲ್ಪಗಳು…
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಿಂದ ಕೇವಲ 10 ಕಿ.ಮಿ ದೂರದ ಬೇರಂಬಾಡಿ ಹಾಗೂ ಹೊಂಗಳ್ಳಿಯ ಮಧ್ಯೆ ಮಸಹಳ್ಳಿಯೆಡೆ ಹುಲಿಯ ಜಾಡು ಹಿಡಿದು ಹೋದ ನಮಗೆ, ಹುಲಿಯ ಹೆಜ್ಜೆ ಕಾಣಿಸಲಿಲ್ಲ, ಬದಲಿಗೆ ಅಲ್ಲಿ ಕಂಡದ್ದು ಮಳೆ ಗಾಳಿಗೆ ಸಿಲುಕಿ, ಕಾಲಗರ್ಭದಲ್ಲಿ ಹುದುಗಿ ಹೋದ ಅಮೂರ್ತ ಮೂರ್ತಿಗಳು.

ಒಂದಲ್ಲ, ಎರಡಲ್ಲ… ಬದಲಿಗೆ 50ಕ್ಕೂ ಅಧಿಕ ಸುಂದರ ಶಿಲ್ಪಗಳು ಅರ್ಧಂಬರ್ಧ ಭೂಮಿಯಲ್ಲಿ ಹುದುಗಿದ್ದು ಕಂಡುಬಂದಿತು. ಕೈಲಿ ಕತ್ತಿ, ಗದೆ ಹಿಡಿದಿರುವ ಮೂರ್ತಿ, ಮೀಸೆ ಮೇಲೆ ಕೈಹೊತ್ತು ನಿಂತ ಶಿಲ್ಪ, ರಾವಣನಂತೆ ಕಾಣುವ ಮೂರ್ತಿ… ಹೀಗೆ ಒಂದಕ್ಕಿಂತ ಇನ್ನೊಂದು ಅದ್ಭುತ ಶಿಲ್ಪಗಳು ಅಲ್ಲಿದ್ದವು. ಎಲ್ಲವೂ ಸುಮಾರು 3ಅಡಿ ಎತ್ತರದ ಶಿಲ್ಪಗಳು. ಅಲ್ಲೇ ಸಮೀಪದಲ್ಲಿ ಮತ್ತೊಂದೆಡೆ 3 ತಲೆಯ ಹೆಣ್ಣು ವಿಗ್ರಹ ಕಂಡುಬಂತು.

ಒಂದು ಕೈಯಲ್ಲಿ ಕಮಲವಿದ್ದರೆ, ಇನ್ನೊಂದು ಕೈಲಿ ಕತ್ತಿ ಹಿಡಿದು ಶಾಂತಿಯೋ ಕ್ರಾಂತಿಯೋ ಎಂದು ಕೇಳುತ್ತಿರುವಂತೆ ಭಾಸವಾಯಿತು. ಮತ್ತೊಂದು ಶಿಲ್ಪವು ಯುದ್ಧದ ಚಿತ್ರಣವನ್ನು ಕಣ್ಣಮುಂದೆ ತಂದಿತು. ಯೋಧರು ಕತ್ತಿವರಸೆ ಮಾಡುವಂತೆ ಆ ಶಿಲೆ ಗೋಚರಿಸಿತು. ಅದರ ಮೇಲೆ ಏನೋ ಬರವಣಿಗೆ ಕಂಡುಬಂದರೂ ಅದು ತೀರಾ ಅಸ್ಪಷ್ಟವಾಗಿದ್ದರಿಂದ ಓದಲು ಆಗಲಿಲ್ಲ.

ಇವು ಸುಮಾರು 500 ವರ್ಷಗಳ ಪುರಾತನ ಶಿಲ್ಪಗಳಿರಬಹುದು ಎಂದು ಊಹಿಸಲಾಗಿದೆ. ‘ಇಲ್ಲಿ ಮುಂಚೆ ಶಿಥಿಲಾವಸ್ಥೆಯ ದೇವಸ್ಥಾನವಿದ್ದು, ಅದು ಕುಸಿದು ಇವು ಗೋಚರಿಸಿವೆ. ಈಗ ಊರವರ ಮುತುವರ್ಜಿಯಿಂದ ದೇವಸ್ಥಾನ ನಿರ್ಮಾಣವಾಗುತ್ತಿದೆ’ ಎಂಬ ಮಾಹಿತಿ ಸ್ಥಳೀಯರಿಂದ ಬಂತು. ಸೋಜಿಗವೆಂದರೆ ಇದೇ ಬಗೆಯ ಶಿಲ್ಪಗಳನ್ನು ಬಂಡಿಪುರ ಹುಲಿ ಸಂರಕ್ಷಣಾ ಕೇಂದ್ರದ ಸ್ವಾಗತ ಕಚೇರಿಯ ಬಳಿ ಸುಂದರವಾಗಿ ಜೋಡಿಸಿಟ್ಟಿದ್ದಾರೆ.

ಇದನ್ನು ಗಮನಿಸಿದರೆ ಇಡೀ ಪ್ರದೇಶ ಒಬ್ಬರೇ ರಾಜರ ಆಳ್ವಿಕೆಯಲ್ಲಿ ಇತ್ತೇ ಎಂದು ಸಂದೇಹ ಬರುತ್ತದೆ. ಇಲ್ಲಿ ಪ್ರಾಚ್ಯ ವಸ್ತು ಇಲಾಖೆಯವರು ಉತ್ಖನನ ಮಾಡಿದರೆ ಕಾಲ ಗರ್ಭದಲ್ಲಿ ಹುದುಗಿಹ ಮೂರ್ತಿಯಷ್ಟೇ ಅಲ್ಲ ಇತಿಹಾಸವನ್ನೂ ಬೆಳಕಿಗೆ ತರಬಹುದೇನೋ.

ಗಂಗಾಂಬಿಕೆಯ ವ್ಯಥೆ
ಇದು ಬಸವಾದಿ ಶಿವಶರಣರ ಐಕ್ಯ ಸ್ಥಳ. ಇದರ ಅಭಿವೃದ್ಧಿಗೆ ಖರ್ಚು ಮಾಡಿದ್ದು ಬರೋಬ್ಬರಿ ಆರೂವರೆ ಕೋಟಿ. ಆದರೆ ಪ್ರವಾಸಿಗರು ಮಾತ್ರ ಇತ್ತ ಸುಳಿಯುತ್ತಿಲ್ಲ. ಸಂಕ್ರಮಣ ಸಂದರ್ಭದಲ್ಲಿ ಝಗಮಗಿಸುತ್ತ ಕಂಗೊಳಿಸುವ ಈ ಸ್ಥಳ, ಸಂಕ್ರಮಣದ ಸೂರ್ಯ ಅತ್ತ ಜಾರುತ್ತಲೇ ಕತ್ತಲು ಆವರಿಸುತ್ತದೆ, ಇಲ್ಲೊಂದು ಅಪೂರ್ವ ಸ್ಥಳ ಇದೆ ಎಂಬುದೇ ತಿಳಿಯದಷ್ಟು ಅಜ್ಞಾತವಾಗುತ್ತಿದೆ. ಇದು ಬೀದರ ಜಿಲ್ಲೆಯ ಐತಿಹಾಸಿಕ ಹಿನ್ನೆಲೆ ಹೊಂದಿದ ಬೈಲಹೊಂಗಲ ತಾಲ್ಲೂಕಿನ ಗಂಗಾಂಬಿಕಾ ಕ್ಷೇತ್ರದ ಕಥೆ.

ತೀವ್ರ ಅಸಡ್ಡೆಗೊಳಗಾಗಿದ್ದ ಈ ಸ್ಥಳದ ಅಭಿವೃದ್ಧಿಗೆ 2011ರ ವೇಳೆಗೆ ಆಗಿನ ಸರ್ಕಾರ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. ಆನಂತರ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ಅಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಗೆ ಇದನ್ನು ಒಳಪಡಿಸಿ ಉತ್ತಮ ಕ್ಷೇತ್ರವನ್ನಾಗಿ ಮಾರ್ಪಡಿಸಲಾಯಿತು. ಇಲ್ಲಿಯವರೆಗೆ ಅದರ ಅಭಿವೃದ್ಧಿಗೆ ಆರೂವರೆ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ ಪ್ರವಾಸಿಗರು ಇತ್ತ ಸುಳಿಯುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ, ಪ್ರಚಾರ ಹಾಗೂ ಮೂಲ ಸೌಕರ್ಯದ ಕೊರತೆ.

ಬಸವಣ್ಣನ ಪತ್ನಿ ಶರಣೆ ಗಂಗಾಂಬಿಕೆಯ ಐಕ್ಯ ಸ್ಥಳವು ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡೇ ಇದೆ. ಆದರೆ ಇದಕ್ಕೂ ಮುಕ್ತಿ ಸಿಕ್ಕಿಲ್ಲ. ‘ಜಗಜ್ಯೋತಿ ಬಸವೇಶ್ವರ ಧರ್ಮಪತ್ನಿ ಗಂಗಾಂಬಿಕಾ ಮುಕ್ತಿ ಕ್ಷೇತ್ರ ಟ್ರಸ್ಟ್‌’ ಎಂಬುದು ಸ್ಥಾಪನೆಯಾಗಿದ್ದರೂ ಏನೂ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ.

ಈ ಕ್ಷೇತ್ರವನ್ನು ಜನಪ್ರಿಯಗೊಳಿಸಲು ಹೆದ್ದಾರಿಗೆ ಹಾಗೂ ಎಂ.ಕೆ. ಹುಬ್ಬಳ್ಳಿಯಲ್ಲಿ ಇಟಗಿ ಕ್ರಾಸಿನಲ್ಲಿ ಇತಿಹಾಸದ ಮಾಹಿತಿ ಫಲಕ ಹಾಕಬೇಕು. ಇಲ್ಲಿ ವಚನ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿ ಆ ಮೂಲಕ ಶರಣರ ಸಾಹಿತ್ಯಕ್ಕೆ ಇಂಬು ನೀಡುವಂತಾಗಬೇಕು. ಗಂಗಾಂಬಿಕೆಯ ಮುಕ್ತಿ ಕ್ಷೇತ್ರದ ಪಕ್ಕದಲ್ಲೇ ಒಂದು ಸಮುದಾಯ ಭವನ ನಿರ್ಮಿಸಿ ಆ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಅನುವು ಮಾಡಿಕೊಡಬೇಕಾಗಿದೆ. ಸಮಾಧಿ ಸುತ್ತಲೂ ನದಿಯ ನೀರು ನಿಲ್ಲುವಂತೆ ವ್ಯವಸ್ಥೆ ಕಲ್ಪಿಸಿದರೆ ಪ್ರವಾಸಿಗರನ್ನು ಸೆಳೆಯಬಹುದಾಗಿದೆ.

Write A Comment