ಸಕಲೇಶಪುರ: ಎತ್ತಿನಹೊಳೆ ತಿರುವು ಯೋಜನೆ ಹೆಸರಿನಲ್ಲಿ ಗುತ್ತಿಗೆದಾರರು ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಪರಿಸರ ಸಂರಕ್ಷಣೆಯ ಕಾನೂನು ಉಲ್ಲಂಘಿಸಿ, ಪಶ್ಚಿಮಘಟ್ಟದ ಸೆರಗಿನಲ್ಲಿದ್ದ ಸಾವಿರಾರು ಮರಗಳನ್ನು ಕಡಿದು , ಹಳ್ಳ, ದಿಣ್ಣೆ, ಗುಡ್ಡಗಳನ್ನು ಬಗೆದಿರುವ ಪ್ರಕರಣ ತಾಲ್ಲೂಕಿನ ಕೆಸಗಾನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ.
ಯೋಜನೆಗೆ ಸಂಬಂಧಿಸಿ ಅಣೆಕಟ್ಟೆ ನಿರ್ಮಾಣ, ಪೈಪ್‌ಲೈನ್ ಹಾದುಹೋಗುವ ಪ್ರದೇಶಗಳ ಸರ್ವೆ ಕೆಲಸವೇ ಇನ್ನೂ ಪೂರ್ಣಗೊಂಡಿಲ್ಲ. ಯೋಜನೆಗೆ ಬಳಕೆ ಆಗುವ ಪ್ರದೇಶದಲ್ಲಿರುವ ಮರಗಳನ್ನು ಅರಣ್ಯ ಇಲಾಖೆ ಗುರುತು ಮಾಡಿಲ್ಲ. ಖಾಸಗಿ ಹಾಗೂ ಸರ್ಕಾರಿ ಭೂಮಿಯಲ್ಲಿ ಒಂದೇ ಒಂದು ಮರವನ್ನು ಕಡಿಯುವುದಕ್ಕೆ ಅರಣ್ಯ ಇಲಾಖೆಯಿಂದ ಈವರೆಗೆ ಅನುಮತಿಯೂ ದೊರೆತಿಲ್ಲ. ಭೂ ಸ್ವಾಧೀನ ಪ್ರಕ್ರಿಯೆಯೇ ಇನ್ನೂ ಆರಂಭವಾಗಿಲ್ಲ. ಖಾಸಗಿ ಜಮೀನಿನಲ್ಲಾಗಲಿ, ಸರ್ಕಾರಿ ಭೂಮಿಯಲ್ಲಾಗಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಆರಂಭಿಸುವುದಕ್ಕೆ ಮೊದಲು ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯಬೇಕು. ಆದರೆ, ಯಾವುದೇ ಅನುಮತಿ ಇಲ್ಲದೆ ಎತ್ತಿನಹೊಳೆ ತಿರುವು ಯೋಜನೆಯ ಗುತ್ತಿಗೆ ಪಡೆದಿರುವ ಬೆಂಗಳೂರಿನ ಅಮೃತ್ ಕನ್‌ಸ್ಟ್ರಕ್ಷನ್ ಕಂಪೆನಿಯವರು ಕೆಸಗಾನಹಳ್ಳಿಯ ಸರ್ವೆ ನಂ. 16 ಹಾಗೂ ಕುಂಬರಡಿ ಸರ್ವೆ ನಂಬರ್ 1ರಲ್ಲಿ ಈಗಾಗಲೇ ಕಾಮಗಾರಿ ಶುರು ಮಾಡಿದ್ದಾರೆ.
ಹೈಟೆಕ್ ಜೆಸಿಬಿ ಯಂತ್ರಗಳನ್ನು ಬಳಸಿ ಸಾವಿರಾರು ಮರಗಳನ್ನು ಬೇರು ಸಮೇತ ಕಿತ್ತು, ಮರಗಳನ್ನು ಲೆಕ್ಕಕ್ಕೆ ಸಿಗದಂತೆ ಆಳವಾದ ಗುಂಡಿಯೊಳಗೆ ಹಾಕಿ ಮಣ್ಣು ಮುಚ್ಚುವ ಮೂಲಕ ಅಪರಾಧ ಎಸಗಿದ್ದಾರೆ. ಕುಂಬರಡಿ ಎಸ್ಟೇಟ್ ಹಾಗೂ ಪಕ್ಕದ ಸರ್ಕಾರಿ ಜಾಗದಲ್ಲಿ ಬೆಲೆ ಬಾಳುವ ತೇಗ, ಬೀಟೆ, ನಂದಿ ಮರಗಳು ಇದ್ದು ಆ ಎಲ್ಲಾ ಮರಗಳನ್ನು ಸಹ ಬೇರು ಸಮೇತ ಕಿತ್ತು ಸಾಕ್ಷ್ಯ ನಾಶ ಮಾಡುವ ಹುನ್ನಾರ ನಡೆಸಿದ್ದಾರೆ. ವಾಟೆ ಹಾಗೂ ಬಿದಿರನ್ನು ಸಹ ಸಾಕಷ್ಟು ಪ್ರಮಾಣದಲ್ಲಿ ನಾಶ ಮಾಡಲಾಗಿದೆ. ದೂರು ನೀಡಲು ಹೋದವರಿಗೆ ಮರಗಳು ಇದ್ದವು ಎಂಬುದಕ್ಕೆ ಸಾಕ್ಷಿ ನೀಡಿ ಎಂದು ಕೇಳುತ್ತಾರೆ. ಇದು ಸರ್ವಾಧಿಕಾರಿ ಧೋರಣೆ ಎಂದು ಆಲುವಳ್ಳಿ ಸುಭಾಷ್ ‘ಪ್ರಜಾವಾಣಿ’ಗೆ ತಿಳಿಸಿದರು.
ಆರ್‌ಎಫ್‌ಒ ಹೇಳಿದ್ದು: ಕುಂಬರಡಿ ಸರ್ವೆ ನಂಬರ್ 1 ಮತ್ತು ಕೆಸಗಾನಹಳ್ಳಿ ಸರ್ವೆ ನಂಬರ್ 16ರಲ್ಲಿ ಎತ್ತಿನಹೊಳೆ ತಿರುವು ಯೋಜನೆ ಗುತ್ತಿಗೆದಾರರು ಭಾರಿ ಪ್ರಮಾಣದಲ್ಲಿ ಭೂಮಿಯನ್ನು ಅಗೆದಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದಾಗ ಮರಗಳನ್ನು ನಾಶ ಮಾಡಿರುವುದಕ್ಕೆ ಸರಿಯಾದ ಸಾಕ್ಷ್ಯಗಳು ದೊರೆತಿಲ್ಲ. ನಾಶ ಮಾಡಿರುವ ಮರಗಳನ್ನು ಮಣ್ಣಿನಲ್ಲಿ ಮುಚ್ಚಿರುವ ಸಾಧ್ಯತೆ ಇರುವುದರಿಂದ ಸೋಮವಾರ ಸ್ಥಳಕ್ಕೆ ತೆರಳಿ ಮಣ್ಣು ತೆಗೆಸಿ ಪರಿಶೀಲನೆ ನಡೆಸಲಾಗುವುದು. ಗೂಗಲ್ ಮ್ಯಾಪ್‌ನಲ್ಲಿ ಪರಿಶೀಲನೆ ನಡೆಸಲಾಗಿದ್ದು, ಸಾಕಷ್ಟು ಮರಗಳು ಕಾಣಸಿಗುತ್ತಿವೆ. ಈ ಬಗ್ಗೆ ಗುತ್ತಿಗೆದಾರರ ವಿರುದ್ಧ ಕೂಡಲೆ ಮೊಕದ್ದಮೆ ದಾಖಲು ಮಾಡಲಾಗುವುದು ಎಂದರು.
ತಹಶೀಲ್ದಾರ್ ಹೇಳಿಕೆ: ಎತ್ತಿನಹೊಳೆ ತಿರುವು ಯೊಜನೆ ಸಂಬಂಧ ತಾಲ್ಲೂಕಿನ ಯಾವುದೇ ಪ್ರದೇಶದಲ್ಲಿಯೂ ಕಾಮಗಾರಿ ನಡೆಸಲು ಇದುವರೆಗೆ ಅನುಮತಿ ನೀಡಿಲ್ಲ. ಕುಂಬರಡಿ ಸರ್ವೆ ನಂಬರ್ 1 ಹಾಗೂ ಕೆಸಗಾನಹಳ್ಳಿ ಸರ್ವೆ ನಂಬರ್ 16ರಲ್ಲಿ ಕಾಮಗಾರಿ ಮಾಡುವುದಕ್ಕೆ ಯಾರಿಗೂ ಅನುಮತಿ ನೀಡಿಲ್ಲ. ಈ ಬಗ್ಗೆ ಕೂಡಲೆ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಪಾರ್ವತಿ ಹೇಳಿದರು.
ಯೋಜನೆಯ ಕಾಮಗಾರಿ ಆರಂಭಿಸಲು ಇದುವರೆಗೆ ಅನುಮತಿ ಪಡೆದಿಲ್ಲ. ಅರಣ್ಯ ಇಲಾಖೆ ಹಾಗೂ ಇತರ ಇಲಾಖೆಗಳಿಂದ ಮುಂದೆ ಅನುಮತಿ ಪಡೆಯಬೇಕು ಎಂದು ಅಮೃತ್ ಕನ್‌ಸ್ಟ್ರಕ್ಷನ್ ವ್ಯವಸ್ಥಾಪಕ ರಾಜನ್ ಹೇಳಿದರು.
ಯಾವ ಅನುಮತಿಯೂ ಇಲ್ಲದೆ ಸಾವಿರಾರು ಮರಗಿಡಗಳು, ಸಸ್ಯ ಸಂಕುಲ, ಜೀವ ಸಂಕುಲಗಳನ್ನು ನಾಶ ಮಾಡಿ ಎತ್ತಿನಹೊಳೆ ತಿರುವು ಯೋಜನೆ ಕಾಮಗಾರಿ ಮಾಡುತ್ತಿರುವುದು ಅಪರಾಧ. ಈ ಪರಿಸರ ನಾಶವನ್ನು ತಡೆಯುವ ಶಕ್ತಿ ನ್ಯಾಯಾಂಗಕ್ಕಿದೆ. ಈ ನಿಟ್ಟಿನಲ್ಲಿ ಕಾನೂನು ಹೋರಾಟ ನಡೆಸುತ್ತೇವೆ ಎಂದು ಪಶ್ಚಿಮಘಟ್ಟ ಸಂರಕ್ಷಣಾ ಹೋರಾಟ ವೇದಿಕೆ ರಾಜ್ಯ ಸಂಚಾಲಕ ಕೆ.ಎನ್. ಸೋಮಶೇಖರ್ ತಿಳಿಸಿದರು.
ಎತ್ತಿನಹೊಳೆ ಯೋಜನೆಗೆ 2013ರ ಹೊಸ ಭೂಸ್ವಾಧೀನ ಕಾಯ್ದೆಯಡಿ ಇದುವರೆಗೆ ಯಾವುದೇ ಸ್ವತ್ತನ್ನು ಸ್ವಾಧೀನಪಡಿಸಿಕೊಂಡಿಲ್ಲ, ಸಾರ್ವಜನಿಕ ಅಹವಾಲು ಸಭೆಗಳನ್ನು ನಡೆಸಿಲ್ಲ. ಪತ್ರಿಕಾ ಪ್ರಕಟಣೆ ಹೊರಡಿಸಿಲ್ಲ. ಈ ಯಾವ ಪ್ರಕ್ರಿಯೆಗಳೂ ನಡೆಯದೆ ಕಾಮಗಾರಿಯನ್ನು ಏಕಾಏಕಿ ಆರಂಭಿಸಿರುವ ಗುತ್ತಿಗೆದಾರರ ವಿರುದ್ಧ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಕಿಶೋರ್‌ಕುಮಾರ್ ಆಗ್ರಹಿಸಿದ್ದಾರೆ.