ಕರ್ನಾಟಕ

ಗಾಂಧಿ ಮಾತಾಡಿಸೋರು ಯಾರೂ ಇಲ್ಲ; ಸೇಂದಿ ಮಾತಾಡೋರೇ ಎಲ್ಲ: ವಿಧಾನಸಭೆಯಲ್ಲಿ ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ

Pinterest LinkedIn Tumblr

444_0

ಬೆಂಗಳೂರು: ‘ಡಾಕ್ಟ್ರು ಪ್ರತಿಭಟನೆ ನಡೆಸಿದ್ರೆ ಕರೆದು ಮಾತಾಡ್ತೀರಿ. ಹೆಂಡದಂಗಡಿ ಬಾಗಿಲು ಹಾಕಿದ್ರೆ ಏನು ಸಮಸ್ಯೆ ಅಂತ ಕೇಳ್ತೀರಿ. ಗಾಂಧಿ ಫೋಟೊ ಇಟ್ಕೊಂಡು ಕುಳಿತ ರೈತರು ನಿಮ್‌ ಕಣ್ಣಿಗೆ ಬೀಳೋದೇ ಇಲ್ಲ. ಹೌದು, ಗಾಂಧಿ ಮಾತಾಡಿಸೋರು ಯಾರೂ ಇಲ್ಲ; ಸೇಂದಿ ಮಾತಾಡೋರೇ ಎಲ್ಲ’

–ಸರ್ವೋದಯ ಕರ್ನಾಟಕ ಪಕ್ಷದ ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ ವಿಧಾನಸಭೆಯಲ್ಲಿ ಬುಧವಾರ ಸರ್ಕಾರಕ್ಕೆ ತಿವಿದ ರೀತಿಯಿದು. ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಅವರು ಮಾತನಾಡಿದರು.

‘ಸೂಟು ಹಾಕ್ಕೊಂಡು ಬಂದ ಅಮೆರಿಕದವರಿಗೆ ಕರೆದು ಸೈಟ್‌ ಕೊಡ್ತೀರಿ. ರಾಜ್ಯದ 28 ಸಾವಿರ ಹಳ್ಳಿಗಳಿಗೆ ಕಂದಾಯ ಗ್ರಾಮದ ಸ್ಥಾನಮಾನ ನೀಡಲು ಕೇಳಿದರೆ ಇಲ್ಲದ ನೆಪ ಹೇಳ್ತೀರಿ.ಗುಡಿಸಲುಮುಕ್ತ ಕರ್ನಾಟಕದ ಕುರಿತು ಮಾತಾಡ್ತೀರಿ. 400 ಮನೆ ಕೇಳಿದರೆ, ನಾಲ್ಕು ಮನೆ ಕೊಡ್ತೀರಿ’ ಎಂದು ಚುಚ್ಚಿದರು.

ಆಹಾ ಎಂಥಾ ಮನೆ: ‘ನೀವು ಕಟ್ಟಿಕೊಡುವ ಮನೆಗಳಾದರೂ ಎಂಥವು? ಚೋಟುದ್ದದ ಆ ಮನೆಗಳಲ್ಲಿ ಎಡಕ್ಕೆ ಆಡು, ಬಲಕ್ಕೆ ಎಮ್ಮೆ ಕಟ್ಕೊಂಡು ಮಲಗುವ ಗಂಡ–ಹೆಂಡ್ತಿ ಪ್ರೀತಿ ಮಾಡೋದು ಹೇಗೆ? ಪ್ರೀತಿಯ ಮಾತೆತ್ತಿದರೆ ಆ ಕಡೆ ಆಡು, ಈ ಕಡೆ ಎಮ್ಮೆ ಒದರ್ತವೆ. ಹೀಗಾದ್ರೆ ಸಂತೋಷ ಎಲ್ಲಿ ಇರ್ತದೆ’ ಎಂದು ಪ್ರಶ್ನಿಸಿದರು.

‘ಮನೆ ಮಂದಿಗೆ ಮಲಗೋಕೇ ಜಾಗ ಇಲ್ದಿದ್ದಾಗ ಜಾತ್ರೆಗೆ ಬಂದ ನೆಂಟರನ್ನು ಮಲಗಿಸೋಕೆ ಎಲ್ಲಿ ಸ್ಥಳವಿರುತ್ತೆ? ಈ ಸಮಸ್ಯೆಗೆ ನಮ್ಮ ಹಳ್ಳಿಯ ಜನ ಕಂಡ್ಕೊಂಡ ಪರಿಹಾರ ಊರಲ್ಲಿ ರಾತ್ರಿಯಿಡೀ ನಾಟಕ ಆಡಿಸೋದು’ ಎಂದು ಪುಟ್ಟಣ್ಣಯ್ಯ ಹೇಳಿದಾಗ ಸದನದ ತುಂಬಾ ನಗೆಯ ಸದ್ದೇ ಸದ್ದು.

‘ಪಟ್ಟಣದ ಜನಕ್ಕೆ ನಿತ್ಯ ತಲಾ 135 ಲೀಟರ್‌ ನೀರು ಕೊಡ್ತೀವಿ ಅಂತೀರಿ. ಹಳ್ಳಿ ಜನಕ್ಕೆ ಮಾತ್ರ ನಿತ್ಯ ತಲಾ 85 ಲೀಟರ್‌ ಫಿಕ್ಸ್‌ ಮಾಡೀರಿ. ಯಾಕೆ ಹಳ್ಳಿ ಜನ ಪ್ರತಿದಿನ ಸ್ನಾನ ಮಾಡಿ, ಸ್ವಚ್ಛವಾಗಿ ಇರಬಾರದೆ? ವಾರಕ್ಕೊಮ್ಮೆ ದನಗಳ ಮೈ ತೊಳೆದಂತೆ ನಾವೂ ವಾರಕ್ಕೊಮ್ಮೆ ಸ್ನಾನ ಮಾಡಬೇಕೇ’ ಎಂದು ಕೇಳಿದರು.

‘ನಮ್‌ ಹಳ್ಳಿಗಳಲ್ಲಿ ಒಳಚರಂಡಿ ಮಾಡೋದು ತಾಲ್ಲೂಕು ಪಂಚಾಯ್ತಿ. ಅದರ ಮೇಲೆ ರಸ್ತೆ ಮಾಡೋದು ಜಿಲ್ಲಾ ಪಂಚಾಯ್ತಿ. ಚರಂಡಿಯಲ್ಲಿ ನೀರು ಬಿಡೋದು ಗ್ರಾಮ ಪಂಚಾಯ್ತಿ. ಆರು ವರ್ಷದಿಂದ ಈ ಪಂಚಾಯ್ತಿಗಳ ಕೆಲ್ಸ ನಿಂತಲ್ಲೇ ನಿಂತಿದೆ. ಮರಿ ಕದ್ದು ಪಾಲು ಹಕ್ಕೊಂಡ್ರಂತೆ. ಹಾಗಾಗಿದೆ ನಮ್ಮ ಗ್ರಾಮ ಯೋಜನೆಗಳ ಸ್ಥಿತಿ’ ಎಂದು ಹೇಳಿದರು.

‘ಕನ್ನಡ ಭಾಷೆ ಉಳಿಸಿ ಅನ್ನೋದು ಕಾನ್ವೆಂಟ್‌ ಶಾಲೆಗೆ ಪರ್‌್ಮಿಶನ್‌ ಕೊಡೋದು, ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಅನ್ನೋದು ಹೆಂಡದಂಗಡಿಗೆ ಲೈಸೆನ್ಸ್‌ ಕೊಡೋದು ಇದೇ ಏನು ಸರ್ಕಾರದ ನೀತಿ’ ಎಂದು ಕೆಣಕಿದರು.

‘ಭೂಮಿಯ ಜ್ಞಾನವೇ ಅಧಿಕಾರಿಗಳಿಗೆ ಇಲ್ಲ. ಅಂಥವ್ರು ಭೂಮಿ ಬೆಲೆ ನಿಗದಿ ಮಾಡ್ತಾರೆ. ಭೂಸ್ವಾಧೀನ ಕಾಯ್ದೆ ಮೂಲಕ ಹಿಂದಿನ ಯುಪಿಎ ಸರ್ಕಾರ ರೈತನನ್ನು ಬಿಸಿಲಿಗೆ ತಳ್ಳಿದರೆ, ಈಗಿನ ಮೋದಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಬೆಂಕಿಗೆ ತಳ್ಳಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜಮೀನಿನಲ್ಲಿ ಕಾಯಿ, ಕಡ್ಡಿ, ಉಡದಾರ ಹಿಡ್ಕೊಂಡು ಅದು ಅಲುಗಾಡಿದಲ್ಲಿ ನೀರು ಸಿಗುತ್ತೆ ಅಂತ ಕೊಳವೆಬಾವಿ ಕೊರೆಸಲಾಗ್ತದೆ. ಹೀಗಾಗಿ ಒಂದೊಂದು ಜಮೀನಿನಲ್ಲಿ 3–4 ತೂತುಗಳು ಬಿದ್ದಿವೆ. ಇದಕ್ಕೆಲ್ಲ ಯಾರು ಹೊಣೆ’ ಎಂದು ಪ್ರಶ್ನಿಸಿದರು.

‘ಜನ ಹೆಲ್ತ್‌ ಕಾರ್ಡ್‌ ಕೇಳಿದ್ರೆ, ನಾವು ತಿಥಿ ಕಾರ್ಡ್‌ ಹಂಚ್ತಾ ಇದ್ದೀವಿ’ ಎಂದು ವ್ಯಂಗ್ಯವಾಡಿದ ಪುಟ್ಟಣ್ಣಯ್ಯ, ‘ಗ್ರಾಮ ವಿಕಾಸ ಯೋಜನೆಗೆ ಕಾಸೇ ಇಲ್ಲ, ಹೀಗಾಗಿ ವಿಕಾಸವೂ ಇಲ್ಲ’ ಎಂದು ಛೇಡಿಸಿದರು.

ಶ್ಯಾಂಪೂ ಯೋಜನೆ: ಆಗ ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ, ‘ಈ ಯೋಜನೆ ಮೂಲಕ ಸಚಿವ ಎಚ್‌.ಕೆ. ಪಾಟೀಲರು ಹಳ್ಳಿಗರಿಗೆ ಶ್ಯಾಂಪೊ ಕಿಟ್‌ ಸಹ ಕೊಡ್ತಾರಂತೆ’ ಎಂದು ಹೇಳಿದರು.

‘ಶ್ರಮ ಪಡುವವರಿಗೆ, ಬೆವರು ಸುರಿಸುವವರಿಗೆ ಶ್ಯಾಂಪೊ ಬೇಕಿಲ್ಲ. ಬೆವರಿನ ಮೂಲಕವೇ ಎಲ್ಲವೂ ಹೊರಹೋಗ್ತದೆ. ಅದೇನಿದ್ದರೂ ಹೊಟ್ಟೆ ಬೆಳೆಸಿಕೊಂಡು ಹವಾನಿಯಂತ್ರಿತ ರೂಮ್‌ನಲ್ಲಿ ಬೆವರದೆ ಕುಳಿತವರಿಗೆ ಯೋಗ್ಯ’ ಎಂದು ಪುಟ್ಟಣ್ಣಯ್ಯ ಪ್ರತಿಕ್ರಿಯಿಸಿದರು.

ಜಿಂಕ್‌ ಚಕ್‌ ಜಿಂಕ್‌
ಸಭಾಧ್ಯಕ್ಷರೇ (ಕಾಗೋಡು ತಿಮ್ಮಪ್ಪ ಅವರನ್ನು ಕುರಿತು), ನೀವು ಆರಡಿ ಎತ್ತರ ಇದ್ದೀರಿ. ನಿಮಗೆ ಚಿಕ್ಕಂದಿನಿಂದಲೇ ಸರಿಯಾದ ತರಬೇತಿ ನೀಡಿದ್ದರೆ ನೀವೂ ಒಲಿಂಪಿಕ್‌ ಪದಕ ಗೆದ್ದು ತರುತ್ತಿದ್ದಿರಿ. ಕಂಬಳದಲ್ಲಿ ಕೋಣದ ಹಿಂದೆ ಓಡುವವರನ್ನು ದತ್ತು ತೆಗೆದ್ಕೊಂಡು ಒಳ್ಳೆಯ ತರಬೇತಿ ನೀಡಿದರೆ ಒಲಿಂಪಿಕ್‌ ಪದಕ ಸಿಕ್ಕೇ ಸಿಗ್ತವೆ. ಈಗಿನ ಯುವಕರು ಇಯರ್‌ ಫೋನ್‌ ಹಾಕಿಕೊಂಡು ‘ಜಿಂಕ್‌ ಚಕ ಜಿಂಕ್‌’ ಅಂತ (ತಲೆ–ಕೈ ಆಡಿಸಿ ತೋರಿಸುತ್ತಾ) ಮೈ–ಕೈ ಕುಣಿಸ್ತಾರೆ. ಅವರಿಗೆ ಆಟದ ಬೆಲೆಯೇ ಗೊತ್ತಿಲ್ಲ. ಸರ್ಕಾರ ಶಾಲೆಯಲ್ಲಿ ಆಟಕ್ಕೆ ಹತ್ತು ಅಂಕ ನಿಗದಿ ಮಾಡಬೇಕು.
–ಕೆ.ಎಸ್‌. ಪುಟ್ಟಣ್ಣಯ್ಯ

Write A Comment