ಕರ್ನಾಟಕ

ಹೀಟರ್‌ನಿಂದ ನೀರು ಕಾಯಿಸುವ ವೇಳೆ ಅವಘಡ; ಮಲಗಿದ್ದಲ್ಲೇ ಮಕ್ಕಳು ಸಜೀವ ದಹನ

Pinterest LinkedIn Tumblr

saavu10

ಬೆಂಗಳೂರು: ಹೀಟರ್‌ನಿಂದ ನೀರು ಕಾಯಿಸುತ್ತಿದ್ದ ವೇಳೆ ಬಕೆಟ್‌ಗೆ ಹೊತ್ತಿ­ಕೊಂಡ ಬೆಂಕಿಯು ಇಡೀ ಮನೆಯನ್ನು ವ್ಯಾಪಿಸಿ ಇಬ್ಬರು ಮಕ್ಕಳು ಸಜೀವ ದಹನವಾಗಿರುವ ಧಾರುಣ ಘಟನೆ ಆಡುಗೋಡಿ ಸಮೀಪದ ಲಕ್ಷ್ಮಣರಾವ್‌­ನಗರ 36ನೇ ಅಡ್ಡ­ರಸ್ತೆಯಲ್ಲಿ ಸೋಮ­ವಾರ ನಡೆದಿದೆ.

ತಮಿಳುನಾಡು ಮೂಲದ ಮಂಜುನಾಥ್­–ಸತ್ಯ ದಂಪತಿಯ ಮಕ್ಕಳಾದ ನವೀನ್ (6) ಹಾಗೂ ಕನಿಷ್ಕಾ ರಾಣಿ (3) ಮೃತಪಟ್ಟವರು.

ಇಡಬ್ಲ್ಯೂಎಸ್ (ಆರ್ಥಿಕವಾಗಿ ಹಿಂದು­ಳಿದ ವರ್ಗದವರು) ವಸತಿ ಸಮು­ಚ್ಚ­ಯದ 3ನೇ ಮಹಡಿಯಲ್ಲಿ ಈ ಕುಟುಂಬ ನೆಲೆಸಿತ್ತು. ಸಂಜೆ 5.30ರ ಸುಮಾರಿಗೆ ಮಕ್ಕಳು ಮಂಚದ ಮೇಲೆ ಮಲಗಿದ್ದರು. ಮಕ್ಕಳಿಗೆ ಸ್ನಾನ ಮಾಡಿ­ಸಲು ಬಕೆಟ್‌ನಲ್ಲಿ ನೀರು ತುಂಬಿ ಹೀಟರ್‌ ಹಾಕಿದ್ದ ಸತ್ಯ, ಅದನ್ನು ಆ ಮಂಚದ ಕೆಳಗೇ ಇಟ್ಟು ನೀರು ತರಲು ನೆಲ ಅಂತಸ್ತಿಗೆ ಬಂದಿದ್ದರು.

ಈ ವೇಳೆ ನೆರೆಮನೆಯ ಮಹಿಳೆಯರ ಜತೆ ಮಾತನಾಡುತ್ತಾ ನಿಂತ ಸತ್ಯ, ಹೀಟರ್‌ ಹಾಕಿರುವುದನ್ನು ಮರೆತಿದ್ದರು. ಅರ್ಧ ತಾಸಿನ ನಂತರ ಅವರ ಮನೆ­ಯಿಂದ ದಟ್ಟ ಹೊಗೆ ಹೊರಬರಲಾ­ರಂ­ಭಿ­ಸಿತು. ಅದನ್ನು ಕಂಡ ಸತ್ಯ, ಚೀರಿ­ಕೊಂಡು ಮನೆಯತ್ತ ಓಡಿದರು. ಈ ವೇಳೆಗಾಗಲೇ ಬೆಂಕಿ ಇಡೀ ಮನೆಯನ್ನು ವ್ಯಾಪಿಸಿತ್ತು.

ಕೂಡಲೇ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿದ ಸ್ಥಳೀಯರು, ಮನೆ ಒಳಗೆ ಹೋಗದಂತೆ ಸತ್ಯ ಅವರನ್ನು ತಡೆದರು. ಒಂದು ವಾಹನ­ದಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, 20 ನಿಮಿಷಗಳಲ್ಲಿ ಇಡೀ ಬೆಂಕಿಯನ್ನು ನಂದಿಸಿದರು. ಆದರೆ, ಮಕ್ಕ­ಳಿಬ್ಬರು ಮಲಗಿದ್ದ ಸ್ಥಳದಲ್ಲೇ ಸುಟ್ಟು ಹೋಗಿದ್ದರು.

‘ಹೆಚ್ಚು ಕಾಲ ನೀರು ಕಾದಿದ್ದರಿಂದ ಬಕೆಟ್ ಜಿನುಗಿ ಬೆಂಕಿ ಹೊತ್ತಿಕೊಂಡಿದೆ. ಬೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಅವರು ಸಲ್ಲಿಸುವ ವರದಿ ಆಧರಿಸಿ ಮುಂದಿನ ಕ್ರಮ ತೆಗೆ­ದು­ಕೊಳ್ಳಲಾಗುವುದು. ಸದ್ಯ ಆಡು­ಗೋಡಿ ಠಾಣೆಯಲ್ಲಿ ಅಸಹಜ ಸಾವು  ಪ್ರಕರಣ ದಾಖಲಿಸಿಕೊಳ್ಳಲಾ­ಗಿದೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

ಎರಡು ವರ್ಷಗಳ ಹಿಂದೆ ಈ ವಸತಿ ಸಮುಚ್ಚಯ ನಿರ್ಮಾಣವಾಗಿದೆ. ಸರಕು ಸಾಗಣೆ ವಾಹನ ಚಾಲಕರಾದ ಮಂಜುನಾಥ್, ಘಟನೆ ವೇಳೆ ಕೆಲಸಕ್ಕೆ ಹೋಗಿದ್ದರು. ಮೃತ ನವೀನ್, ಸಮೀಪದ ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿದ್ದ.

Write A Comment