ಕರ್ನಾಟಕ

ಸಿದ್ಧಗಂಗಾ ಮಠದ ಆವರಣದಲ್ಲಿ ವಿಕಲಚೇತನನ ಬರ್ಬರ ಹತ್ಯೆ

Pinterest LinkedIn Tumblr

Siddaganga-amurder

ತುಮಕೂರು, ಫೆ.9: ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಜಾತ್ರೆಗೆ ಆಗಮಿಸಿದ್ದ ವಿಕಲಚೇತನನೊಬ್ಬನನ್ನು ದುಷ್ಕರ್ಮಿಗಳು ತಲೆ ಮೇಲೆ ಸೈಜುಗಲ್ಲು ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೂಲತಃ ಚಾಮರಾಜನಗರದ ಅರಿವೆ ಗ್ರಾಮದ ಚಿಕ್ಕಮಾದಪ್ಪ (23) ಕೊಲೆಯಾದ ವಿಕಲಚೇತನ. ಸಿದ್ಧಗಂಗಾ ಮಠದಲ್ಲಿ ಜಾತ್ರೆ ಆರಂಭವಾಗಿದ್ದು, ರಾಜ್ಯಾದ್ಯಂತ ಸಮರೋಪಾದಿಯಲ್ಲಿ ಜನಸಾಗರ ಹರಿದುಬಂದಿದೆ. ಎಲ್ಲರೂ ಜಾತ್ರೆಯಲ್ಲಿ ತಲ್ಲೀನರಾಗಿದ್ದಾಗ ದುಷ್ಕರ್ಮಿಗಳು ಎರಡೂ ಕಾಲುಗಳಿಲ್ಲದ ಚಿಕ್ಕಮಾದಪ್ಪ ಎಂಬ ವಿಕಲಚೇತನನನ್ನು ಸಿದ್ಧಲಿಂಗೇಶ್ವರ ಪಿಯು ಇಂಟಿಗ್ರೇಡೆಟ್ ಕನ್ನಡ ಪಂಡಿತ್ ಕಾಲೇಜಿನ ಕೊಠಡಿಯೊಂದಕ್ಕೆ ಕರೆದೊಯ್ದು ಸೈಜುಗಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಕಚೇರಿ ಸಮೀಪವೇ ಈ ಕಾಲೇಜಿದ್ದು, ದುಷ್ಕರ್ಮಿಗಳು ಮುಂಜಾನೆ 3 ಗಂಟೆ ಸಮಯದಲ್ಲಿ ಈ ಕೃತ್ಯವೆಸಗಿ ಪರಾರಿಯಾಗಿದ್ದಾರೆ. ಬೆಳಿಗ್ಗೆ ವಿದ್ಯಾರ್ಥಿಗಳು ಕಾಲೇಜಿಗೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಸುದ್ದಿ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮನ್‌ಗುಪ್ತ, ಅಡಿಷನಲ್ ಎಸ್ಪಿ ಆರ್.ಲಕ್ಷ್ಮಣ್. ಡಿವೈಎಸ್ಪಿ ಜಗದೀಶ್, ವೃತ್ತ ನಿರೀಕ್ಷಕ ರವಿ ಅವರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ರಮನ್‌ಗುಪ್ತ, ಮಠದ ಆವರಣದಲ್ಲಿ ಇಂತಹ ಘಟನೆ ನಡೆದಿರುವುದು ಆತಂಕಕಾರಿ. ಕೊಲೆಯಾದ ವ್ಯಕ್ತಿ ಯಾರೆಂಬುದು ಪತ್ತೆಯಾಗಿದೆ. ವಿಕಲಚೇತನನಾದ ಈತನನ್ನು ಯಾರು, ಏತಕ್ಕಾಗಿ ಕೊಲೆ ಮಾಡಿದ್ದಾರೆಂಬ ಬಗ್ಗೆ ತನಿಖೆಗಾಗಿ ಮೂರು ವಿಶೇಷ ತಂಡ ರಚಿಸಲಾಗಿದ್ದು, ಸದ್ಯದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.

ಇಂತಹ ಪವಿತ್ರ ಕ್ಷೇತ್ರದಲ್ಲಿ ಅಪರಾಧ ಕೃತ್ಯಗಳು ನಡೆಯಬಾರದಿತ್ತು. ಈ ಘಟನೆಯಿಂದ ಜಾತ್ರೆಗೆ ಬಂದವರು ಭಯಭೀತರಾಗಿದ್ದಾರೆ. ಭಕ್ತಾದಿಗಳು ಯಾವುದೇ ಆತಂಕವಿಲ್ಲದೆ ನಿಶ್ಚಿಂತೆಯಿಂದ ಜಾತ್ರೆಯಲ್ಲಿ ಪಾಲ್ಗೊಳ್ಳಿ ಎಂದು ಅವರು ಅಭಯ ನೀಡಿದ್ದಾರೆ.

Write A Comment