ಕರ್ನಾಟಕ

ಡೀಮ್ಡ್ ಫಾರೆಸ್ಟ್ ವರದಿ ನೀಡಲು ಮಾ.31ರ ವರೆಗೆ ಕಾಲಾವಕಾಶ: ಸಚಿವ ರಮಾನಾಥ ರೈ

Pinterest LinkedIn Tumblr

Ramanath rai

ಬೆಂಗಳೂರು, ಫೆ.9: ಡೀಮ್ಡ್ ಫಾರೆಸ್ಟ್‌ಗಳ ಸಮಸ್ಯೆ ಕುರಿತಂತೆ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿ ವರದಿ ನೀಡಲು ಮಾರ್ಚ್ 31ರ ವರೆಗೂ ಕಾಲಾವಕಾಶ ನೀಡಲಾಗಿದೆ ಎಂದು ಅರಣ್ಯ ಸಚಿವ ರಮಾನಾಥ ರೈ ವಿಧಾನಸಭೆಗೆ ತಿಳಿಸಿದರು.

ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಬಣಕಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಿಲ್ಲಾ ಮಟ್ಟದ ಸಮಿತಿ, ವಿಭಾಗೀಯ ಮಟ್ಟದ ಸಮಿತಿ ಹಾಗೂ ರಾಜ್ಯಮಟ್ಟದ ಸಮಿತಿಗಳು ರಚನೆಯಾಗಿದ್ದು, ಜಿಲ್ಲಾ ಮಟ್ಟದ ಸಮಿತಿಗೆ ಜಿಲ್ಲಾಧಿಕಾರಿ ಮುಖ್ಯಸ್ಥರಾದರೆ, ವಿಭಾಗೀಯ ಮಟ್ಟಕ್ಕೆ ಪ್ರಾದೇಶಿಕ ಆಯುಕ್ತರು, ರಾಜ್ಯ ಮಟ್ಟಕ್ಕೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ನೇತೃತ್ವ ವಹಿಸಲಿದ್ದಾರೆ.

ಜಿಲ್ಲಾಮಟ್ಟದ ಸಮಿತಿ ತಾಲೂಕುವಾರು ಸರ್ವೆ ನಡೆಸಿ ವರದಿ ತಯಾರಿಸಲಿದೆ. ಇದನ್ನು ರಾಜ್ಯಮಟ್ಟದ ಸಮಿತಿಗೆ ರವಾನಿಸಲಿದೆ. ನಂತರ ವರದಿಯಲ್ಲಿನ ಶಿಫಾರಸುಗಳನ್ನು ಅನುಸರಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದರು. ಯಾದಗಿರಿ, ಕಲಬುರಗಿ ಜಿಲ್ಲೆಯ ವರದಿ ಬಂದಿದ್ದು, ರಾಜ್ಯಮಟ್ಟದ ಸಮಿತಿ ಇದನ್ನು ಪರಿಶೀಲನೆ ಮಾಡಬೇಕಿದೆ. ಇದೇ ರೀತಿ ಇತರೆ ಜಿಲ್ಲೆಗಳ ವರದಿಗಳು ಬರಲು ಕಾಲಾವಕಾಶ ನೀಡಲಾಗಿದೆ ಎಂದರು. ಈ ವೇಳೆ ಮಾತನಾಡಿದ ಮಾಜಿ ಸ್ಪೀಕರ್ ಬೋಪಯ್ಯ, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತಿತರರು ಡೀಮ್ಡ್ ಫಾರೆಸ್ಟ್‌ಗಳ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದಾಗ, ಕೆಲಕಾಲ ಸದನದಲ್ಲಿ ಮಾತಿನ ಚಕಮಕಿ ನಡೆಯಿತು.

ಈ ವೇಳೆ ಕಾನೂನು ಸಚಿವ ಟಿ.ಬಿ.ಜಯಚಂದ್ರ ಡೀಮ್ಡ್ ಫಾರೆಸ್ಟ್ ಸಮಸ್ಯೆ ಶುರುವಾಗಿದ್ದೇ ನಿಮ್ಮ ಕಾಲದಲ್ಲಿ. ಎಲ್ಲ ಹಾಳು ಮಾಡಿದ್ದೀರಿ ಎಂದಾಗ, ಭೋಪಯ್ಯ ಆರಂಭವಾಗಿದ್ದೇ ನಿಮ್ಮ ಕಾಲದಲ್ಲಿ ಎಂದು ತಿರುಗೇಟು ನೀಡಿದರು. ಈ ವೇಳೆ ಮಾತನಾಡಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಪಂಚಾಯ್ತಿ ಮಟ್ಟದಿಂದಲೂ ಸರ್ವೆಕಾರ್ಯ ನಡೆದು ಸಮಸ್ಯೆ ಬಗೆಹರಿಸುವಂತೆ ಸಲಹೆ ಮಾಡಿದರು.

Write A Comment