ಕರ್ನಾಟಕ

ವಿಶ್ವ ಹಿಂದೂ ಪರಿಷತ್‌ ಮುಖಂಡ ಪ್ರವೀಣ್‌ ತೊಗಾಡಿಯಾ ಅರ್ಜಿ: ಇಂದು ತೀರ್ಪು

Pinterest LinkedIn Tumblr

to

ಬೆಂಗಳೂರು: ಬೆಂಗಳೂರು ನಗರ ಪ್ರವೇಶಿ­ಸದಂತೆ ಪೊಲೀಸರು ತಮ್ಮ ಮೇಲೆ ಹೇರಿದ ನಿರ್ಬಂಧ ಪ್ರಶ್ನಿಸಿ ವಿಶ್ವ ಹಿಂದೂ ಪರಿಷತ್‌ ಮುಖಂಡ ಪ್ರವೀಣ್‌ ತೊಗಾಡಿಯಾ  ಹಾಕಿರುವ ಅರ್ಜಿಯ ವಿಚಾರಣೆ  ನ್ಯಾಯಮೂರ್ತಿ ಎಸ್‌. ಅಬ್ದುಲ್‌ ನಜೀರ್‌ ಅವರ ಪೀಠದ ಎದುರು ಗುರುವಾರ ಮುಕ್ತಾಯ­ಗೊಂಡಿತು. ಶುಕ್ರವಾರ ತೀರ್ಪು ಪ್ರಕಟವಾಗಲಿದೆ.

ತೊಗಾಡಿಯ ಪರ  ಹಿರಿಯ ವಕೀಲ ಬಿ.ವಿ. ಆಚಾರ್ಯ ಅವರು ವಾದ ಮಂಡಿಸಿದರು. ‘ವಿಶ್ವ ಹಿಂದೂ ಪರಿಷತ್‌ನ ಸುವರ್ಣ ಮಹೋತ್ಸವ ಕಾರ್ಯಕ್ರಮ­ದಲ್ಲಿ ಧರ್ಮಸ್ಥಳ ವೀರೇಂದ್ರ ಹೆಗ್ಗಡೆ, ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ ಗುರೂಜಿ ಮುಂತಾ­ದವರು ಭಾಗವ­ಹಿಸುತ್ತಿದ್ದಾರೆ. ಆದರೆ, ತೊಗಾಡಿಯಾ ಅವ­ರನ್ನು ನಗರಕ್ಕೆ ಬಾರ­ದಂತೆ ನಿಷೇಧ ಹೇರಿರು­ವುದು ಮೂಲ­ಭೂತ ಹಕ್ಕಿನ ಉಲ್ಲಂಘನೆಯಾಗಿದೆ’ ಎಂದು ಹೇಳಿದರು.

ಹತ್ತು ವರ್ಷದ ಹಿಂದೆ ನಡೆದ ಪ್ರಕ­ರಣವನ್ನು ಆಧಾರ­ವಾಗಿಟ್ಟು­ಕೊಂಡು ತೊಗಾಡಿಯ ಮೇಲೆ ನಿಷೇಧ ಹೇರಿರು­ವುದು ಸರಿ­ಯಲ್ಲ ಎಂದು ವಾದಿಸಿದರು. ‘ವ್ಯಕ್ತಿಯೊಬ್ಬನನ್ನು ನಿಷೇಧಿಸುವ ಅಧಿಕಾರ ಪೊಲೀಸ್‌ ಕಮಿಷನರ್‌ಗೆ ಇಲ್ಲ. ಅದು ಸರ್ಕಾರಕ್ಕೆ ಮಾತ್ರ ಇದೆ’ ಎಂಬ ಅಂಶವನ್ನು ಎತ್ತಿ ತೋರಿಸಿದ ಅವರು,  ‘ತೊಗಾಡಿಯಾ ನಗರಕ್ಕೆ ಬಂದು ಭಾಷಣ ಮಾಡಿದರೆ ಕೋಮು ಸೌಹಾರ್ದಕ್ಕೆ ಅಡ್ಡಿಯಾಗುತ್ತದೆ ಎಂಬ ವಾದ ಪೂರ್ವಗ್ರಹಪೀಡಿತ. ಹಾಗಾಗಿ ನಿರ್ಬಂಧ ತೆರವುಗೊಳಿಸಬೇಕು’ ಎಂದರು.

ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ ಪ್ರೊ. ರವಿವರ್ಮ ಕುಮಾರ್‌, ‘2002ರಿಂದ ತೊಗಾಡಿಯಾ ಅವರು ಭಾಷಣ ಮಾಡಿ­ದಲ್ಲೆಲ್ಲ ಕೋಮು ಸೌಹಾರ್ದಕ್ಕೆ ಧಕ್ಕೆಯಾಗಿದೆ. ಅವರು ಉದ್ದೇಶ­ಪೂರ್ವಕ­ವಾಗಿ ಜನರನ್ನು ಕೆರಳಿಸುವಂತೆ ಭಾಷಣ ಮಾಡುತ್ತಾರೆ. ಅವರ ವಿರುದ್ಧ 19 ಪ್ರಕರಣಗಳು ದಾಖಲಾಗಿದೆ. ಪಶ್ಚಿಮ ಬಂಗಾಳ, ಗಾಂಧಿನಗರ, ಹೈದರಾಬಾದ್‌ಗಳಲ್ಲಿ ಕೋಮು ಗಲಭೆ­ಗಳಾಗಿವೆ. ಈ ಕಾರಣದಿಂದ ನಿರ್ಬಂಧ ಹೇರಿರು­ವುದರಲ್ಲಿ ತಪ್ಪಿಲ್ಲ’ ಎಂದು ಸಮರ್ಥಿಸಿಕೊಂಡರು.

ತೊಗಾಡಿಯಾ  ಅವರು ಬೆಂಗ­ಳೂರಿನಲ್ಲಿ ಭಾಷಣ ಮಾಡಿದರೆ ವಾಟ್ಸ್‌ ಆ್ಯಪ್‌ ಮೂಲಕ ರಾಜ್ಯದ ಮೂಲೆ ಮೂಲೆಗಳಿಗೆ ಸುದ್ದಿ ಕ್ಷಣದಲ್ಲಿ ಹರಿದಾ­ಡುತ್ತದೆ. ಅದು ಎಲ್ಲಿ ಬೇಕಾ­ದರೂ ಗಲಭೆಗೆ ಕಾರಣ­ವಾಗ­ಬಹುದು. ಕೋಮು ಸಾಮರಸ್ಯ ಹಾಳುಗೆಡವಲು ಅವಕಾಶ ನೀಡಬಾರದು ಎಂದೂ ಸಂವಿಧಾನ ಹೇಳಿದೆ ಎಂದರು.

‘ತೊಗಾಡಿಯಾ ತುಂಬ ಅಪಾಯ­ಕಾರಿ ಮನುಷ್ಯ. ಅವರ ಭಾಷಣದಿಂದ ಆಗುವ ಅಪಾಯವನ್ನು ತಡೆಯುವುದು ಕಷ್ಟ. ಅಲ್ಲದೆ, ಇದೇ ಸಮಯದಲ್ಲಿ ವಿಧಾನ ಸಭೆ ಅಧಿವೇಶನ ನಡೆಯು­ತ್ತಿರುವ ಕಾರಣ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಿರ್ಬಂಧ ಮುಂದು­ವರಿಸಬೇಕು’ ಎಂದು ಮನವಿ ಮಾಡಿದರು.

Write A Comment