‘ಸೌಲಭ್ಯಗಳನ್ನು ಸಕಾಲಕ್ಕೆ ಜನರಿಗೆ ಸಿಗುವಂತೆ ಮಾಡಿದರೆ ಈ ವ್ಯವಸ್ಥೆ ಸರ್ಕಾರವಾಗಿ ಉಳಿಯುವುದಿಲ್ಲ. ಅಲ್ವೇನ್ರೀ?’: ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ
ಬೆಂಗಳೂರು: ‘ಅಯ್ಯಯ್ಯೋ, ಸೌಲಭ್ಯಗಳನ್ನು ಸಕಾಲಕ್ಕೆ ಜನರಿಗೆ ಸಿಗುವಂತೆ ಮಾಡಿದರೆ ಈ ವ್ಯವಸ್ಥೆ ಸರ್ಕಾರವಾಗಿಯೇ ಉಳಿಯುವುದಿಲ್ಲ. ಜನರು ಎಡತಾಕುವಂತೆ ಮಾಡುವು ದರಿಂದಲೇ ಇದಕ್ಕೆ ಸರ್ಕಾರ ಅಂತ ಕರೆಯುವುದು, ಅಲ್ವೇನ್ರೀ?’
–ಸರ್ಕಾರದ ವಿರುದ್ಧ ಗುರುವಾರ ಹೀಗೆ ಚಾಟಿ ಬೀಸಿದವರು ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ.
ಸೊರಬ ತಾಲ್ಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ದೊರೆಯದ ಬಗೆಗೆ ಜಾತ್ಯತೀತ ಜನತಾ ದಳ ಪಕ್ಷದ (ಜೆಡಿಎಸ್)ನ ಮಧು ಬಂಗಾರಪ್ಪ ಅವರು ವಿಷಯ ಪ್ರಸ್ತಾಪಿಸಿದಾಗ ಸಭಾಧ್ಯಕ್ಷರು ಈ ರೀತಿ ಪ್ರತಿಕ್ರಿಯಿಸಿದರು.
‘ಸೌಲಭ್ಯಗಳು ಜನರಿಗೆ ಸರಿಯಾಗಿ ತಲುಪಿಲ್ಲ ಎನ್ನುತ್ತೀರಲ್ಲ. ಸರ್ಕಾರ ಇದೆ ಜನರಿಗೆ ತಿಳಿಯುವುದು ನಿಮಗೆ ಇಷ್ಟವಿಲ್ಲವೆ’ ಎಂದು ಚುಚ್ಚಿದರು.
ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರತ್ತ ತಿರುಗಿ, ‘ನೋಡ್ರಿ, ನಿಮ್ಮ ಸರ್ಕಾರದ ಸಚಿವರ ಮಾತಿಗೂ ಕೃತಿಗೂ ಅಂತರ ಇರಬಾರದು’ ಎಂದು ಹೇಳಿದರು.
ಪ್ರಶ್ನೆಗೆ ಉತ್ತರಿಸಿದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು, ‘ಬ್ಯಾಂಕ್‌ನಲ್ಲಿ ಚೆಕ್ ಕಳೆದಿದ್ದರಿಂದ ಸೊರಬ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.
ಶುಕ್ರವಾರವೇ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಾಗುತ್ತದೆ. ಈ ಬಗ್ಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.
‘ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಹಣ ಜಮೆ ಮಾಡುವ ಮೂಲಕ ಶೋಷಣೆಯನ್ನು ತಪ್ಪಿಸಲಾಗಿದೆ’ ಎಂದು ಸಮಾಜ ಕಲ್ಯಾಣ ಸಚಿವರು ಹೇಳಿದರು.
ಸೂಟು, ಆರತಕ್ಷತೆ, ಗುಂಗು, ಯೌವ್ವನ…
ಬೆಂಗಳೂರು: ಡಿ.ಎಚ್. ಶಂಕರಮೂರ್ತಿ ಅವರ ಗೈರು ಹಾಜರಿಯಲ್ಲಿ ಸಭಾಪತಿ ಪೀಠ ಅಲಂಕರಿಸಿದ್ದ ಉಪ ಸಭಾಪತಿ ಪುಟ್ಟಣ್ಣ ಅವರು ಧರಿಸಿದ್ದ ಬಿಳಿ ಬಣ್ಣದ ಸೂಟು ವಿಧಾನಪರಿಷತ್ತಿನಲ್ಲಿ ಗುರುವಾರ ಸ್ವಾರಸ್ಯಕರ ಚರ್ಚೆ ಹುಟ್ಟು ಹಾಕಿತು.
ಪುಟ್ಟಣ್ಣ ಅವರು ಪೀಠದಲ್ಲಿ ಆಸೀನರಾಗುತ್ತಿದ್ದಂತೆಯೇ ಮಾತ ನಾಡಲು ಆರಂಭಿಸಿದ ಬಿಜೆಪಿಯ ಗೋ. ಮಧುಸೂದನ್, ‘ ಸಭಾಪತಿಗಳು ಇವತ್ತು ಎಂದಿನಂತೆ ಕಾಣುತ್ತಿಲ್ಲ. ಮಿಂಚುತ್ತಿದ್ದಾರೆ’ ಎಂದು ಅವರು ತೊಟ್ಟ ದಿರಿಸಿಗೆ ಮೆಚ್ಚುಗೆ ಸೂಸಿದರು. ಇದಕ್ಕೆ ಆಡಳಿತ ಪಕ್ಷದ ಹಾಗೂ ಪ್ರತಿಪಕ್ಷಗಳ ಸದಸ್ಯರು ದನಿ ಗೂಡಿಸಿದರು.
ನಂತರ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ‘ಸದನಕ್ಕೆ ಮುಖ್ಯಮಂತ್ರಿಗಳು ಬಂದಿದ್ದಾರೆ. ಸಭಾಪತಿಗಳು ಆರತಕ್ಷತೆಗೆ ಬಂದ ಹಾಗೆ ಕಾಣುತ್ತಿದ್ದಾರೆ’ ಎಂದರು.
ತಕ್ಷಣ ಎದ್ದುನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಈಶ್ವರಪ್ಪ ಅವರಿಗೆ ಆರತಕ್ಷತೆಯದ್ದೇ ಗುಂಗು’ ಎಂದು ಕಾಲೆಳೆದಾಗ ಸದನದಲ್ಲಿ ನಗುವಿನ ಅಲೆ ಉಂಟಾಯಿತು.
‘ಹೌದು. ನಾನಿನ್ನೂ ಯುವಕನೇ. ಮುಖ್ಯಮಂತ್ರಿಗಳೇ ನೀವೂ ಯುವಕರಲ್ಲವೇ?’ ಎಂದು ಈಶ್ವರಪ್ಪ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಮಾನಸಿಕವಾಗಿ ಯುವಕನೇ. ದೈಹಿಕವಾಗಿ ಅಲ್ಲ’ ಎಂದಾಗ ಮತ್ತೆ ಸದನದಲ್ಲಿ ನಗು ಉಕ್ಕಿತು.