ಕರ್ನಾಟಕ

ಸಾಹಿತ್ಯ ಸಮ್ಮೇಳನದ ಜಾತ್ರೆಯಲ್ಲಿ ಅಂಧನ ಅದ್ಭುತ ಜ್ಞಾನಕೋಶ

Pinterest LinkedIn Tumblr

pvec020215Lokesh

ಶ್ರವಣಬೆಳಗೊಳ: ಸಾಹಿತ್ಯ ಸಮ್ಮೇಳನದ ಜಾತ್ರೆಯಲ್ಲಿ ಕಪ್ಪು ಕನ್ನಡದ ಧರಿಸಿ ಅಮ್ಮನ ಕೈ ಹಿಡಿದು ನಿಂತಿದ್ದ ಹುಡುಗನೊಬ್ಬನನ್ನು ವಿದ್ಯಾರ್ಥಿಗಳು ಮುತ್ತಿಕೊಂಡು ಪ್ರಶ್ನೆಗಳ ಸುರಿಮಳೆಗರೆಯುತ್ತಿದ್ದರು. ಅಷ್ಟೇ   ಶಾಂತವಾಗಿ ಪಟಪಟನೆ ಉತ್ತರಿಸುತ್ತಿದ್ದ ಯುವಕನ ಬುದ್ಧಿಮತ್ತೆಗೆ ಎಲ್ಲರೂ ಬೆರಗುಗಣ್ಣಿನಿಂದ ತಲೆದೂಗುತ್ತಿದ್ದರು.

ಬಿ.ವಿ. ಲೋಕೇಶ್ ಇಂತಹ ಒಂದು ಅದ್ಭುತ ಜ್ಞಾನಕೋಶ ಹೊಂದಿರುವ ಯುವಕ.
ಹುಟ್ಟು ಅಂಧನಾದ ಲೋಕೇಶ್ ಅವರು, ಹಾಸನದ ಪೆನ್ಶನ್‌ ಮೊಹಲ್ಲಾ­ದವರು. 7ನೇ ತರಗತಿವರೆಗಿನ ಆರಂಭಿಕ ಶಿಕ್ಷಣವನ್ನು ಅಂಧರ ಶಾಲೆಯಲ್ಲಿ ಮುಗಿಸಿದ ಇವರು, ನಂತರ ಸರ್ಕಾರಿ ಶಾಲೆಗಳಲ್ಲಿ ಎಲ್ಲರಂತೆ ಶಾಲೆ ಮತ್ತು ಕಾಲೇಜಿಗೆ ಹೋಗಿ ಕಲಿತವರು. ಬಿ.ಎ ಜತೆಗೆ ಸಂಗೀತ ವಿಷಯದಲ್ಲಿ ಸೀನಿಯರ್‌ ಕೋರ್ಸ್‌ ಮುಗಿಸಿರುವ ಇವರು, ಸದ್ಯ ಹಾಸನದ ಎರಡು ಶಾಲೆಗಳಲ್ಲಿ ಸಂಗೀತ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.

ಅಗಾಧ ಜ್ಞಾನ ಭಂಡಾರ…: ಯಾವುದೇ ಐತಿಹಾಸಿಕ ಘಟನೆಗಳ ಕುರಿತು ಕೇಳಿದರೆ, ಲೋಕೇಶ್ ಅವರು  ಆ ಘಟನೆ ನಡೆದ ದಿನಾಂಕವನ್ನು ವಾರ ಸಮೇತ ಕೇಳುಗರ ಮುಂದೆ ಬಿಚ್ಚಿಡು­ತ್ತಾರೆ. ಅಲ್ಲದೆ, ಇದುವರೆಗೂ ನಡೆದಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಇಸವಿ, ಅಧ್ಯಕ್ಷರು, ಸ್ಥಳ ಇತ್ಯಾದಿ ವಿವರಗಳು ಇವರ ನಾಲಗೆ ತುದಿಯಲ್ಲಿವೆ. ಜತೆಗೆ,  ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಇತಿಹಾಸದ ಅಗಾಧ ಮಾಹಿತಿ ಹೊಂದಿ­ರುವ ಇವರು, ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಎರಡು ಪುಸ್ತಕಗಳನ್ನು ಸಹ ಬರೆದಿದ್ದಾರೆ.

ತಲೆಯಲ್ಲಿದೆ ಸಾವಿರ ವರ್ಷದ ಕ್ಯಾಲೆಂಡರ್‌!: ಸಾವಿರ ವರ್ಷಗಳ ಕ್ಯಾಲೆಂಡರ್‌ ಅನ್ನು ತಮ್ಮ ಮಿದುಳಿನಲ್ಲಿ ಇಟ್ಟುಕೊಂಡಿರುವ ಲೋಕೇಶ್‌, ಯಾವುದೇ ಜನ್ಮ ದಿನಾಂಕವನ್ನು ಹೇಳಿದರೆ ಆ ದಿನ ಯಾವ ವಾರ ಬರುತ್ತದೆ ಎಂದು ನಿಖರವಾಗಿ ಹೇಳು­ತ್ತಾರೆ. ಅಲ್ಲದೆ, ಯಾವುದಾದರೂ ಘಟನೆಯನ್ನು ನೆನಪಿಸಿದರೂ ಅದರ ದಿನಾಂಕವನ್ನು ಹೇಳಬಲ್ಲಂತಹ ಕುಶಲಮತಿಯಾಗಿದ್ದಾರೆ.

ತಾಯಿಯೇ ಸರ್ವಸ್ವ…
‘ಅಂಧನಾಗಿದ್ದೂ ನಾನೇನಾದರೂ ಸಾಧನೆ ಮಾಡಿ­ದ್ದರೆ ಅದಕ್ಕೆ ನನ್ನ ತಾಯಿ ಕೆ.ಎಂ. ಪ್ರಮೀಳಾ ಅವರೇ ಕಾರಣ. ಹುಟ್ಟಿದಾಗಿನಿಂದ ನನಗಾಗಿ ತಮ್ಮ ಸರ್ವಸ್ವವನ್ನು ಅರ್ಪಿಸಿರುವ ನನ್ನಮ್ಮ ನನ್ನ ಬದುಕಿನ ಊರು­ಗೋಲಾ­ಗಿದ್ದಾರೆ. ಚಿಕ್ಕಂದಿನಲ್ಲಿ ಶಾಲೆ­ಯಿಂದ ಹಿಡಿದು, ಈಗ ಕೆಲಸಕ್ಕೆ ಸಹ ಅವರೇ ನನ್ನ ಕೈ ಹಿಡಿದು ಕರೆ­ದೊ­ಯ್ಯು­ತ್ತಾರೆ. ಅವರೇ ನನ್ನ ಬದುಕಿನ ಸರ್ವಸ್ವ’ ಎಂದು ಲೋಕೇಶ್‌ ಹೇಳುತ್ತಾರೆ.

Write A Comment