ಕರ್ನಾಟಕ

ಬಂಡೆ ಮೇಲೂ ಶೌಚ ಗುಂಡಿ!

Pinterest LinkedIn Tumblr

pvec25janukpl02

ಕೊಪ್ಪಳ: ಬಂಡೆಯ ಮೇಲೂ ಶೌಚ ಗುಂಡಿ ನಿರ್ಮಾಣ ತಂತ್ರವನ್ನು ಜಿಲ್ಲಾ ಪಂಚಾಯಿತಿ ರೂಪಿಸಿ ಅನುಷ್ಠಾನಗೊಳಿಸಿದೆ!
ತಾಲ್ಲೂಕಿನ ಕಲ್‌ತಾವರೆಗೆರೆ ಗ್ರಾಮವನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದ್ದು, ಗ್ರಾಮದ ಎಲ್ಲ ಮನೆಗಳಿಗೆ ಇದೇ ತಂತ್ರವನ್ನು ಬಳಸಿ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ.

ಏನಿದು ತಂತ್ರ?: ‘ಇಡೀ ಗ್ರಾಮವನ್ನು ಬಂಡೆ ಆವರಿಸಿದೆ. ಇಲ್ಲಿರುವ ನೂರು ಮನೆಗಳಿಗೂ ತಳಪಾಯವಿಲ್ಲ. ಬಂಡೆಯ ಹಾಸಿನ ಮೇಲೆ ಮನೆ ನಿರ್ಮಾಣ ಮಾಡಲಾಗಿದೆ. ಇಂಥ ಪ್ರದೇಶ­ದಲ್ಲಿ ಶೌಚಗುಂಡಿ ತೆಗೆಯು­ವುದು ತೀರಾ ಕಠಿಣ. ಅದಕ್ಕೆಂದೇ ವಿಶಿಷ್ಟ ತಂತ್ರ ರೂಪಿಸಲಾಗಿದೆ’ ಎಂದು ಇದರ ರೂವಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದುಪುಡಿ ಹೇಳಿದರು.

ಜಾಗದ ಲಭ್ಯತೆ ನೋಡಿಕೊಂಡು ಅಂದಾಜು ಐದು ಅಡಿ ಉದ್ದ, ಐದು ಅಡಿ ಅಗಲ, ಐದು ಅಡಿ ಎತ್ತರದ ಗೋಡೆ ನಿರ್ಮಿಸಲಾಗುತ್ತದೆ. ಅದರ ಒಳಗೆ ಎರಡು ಅಡಿ ಅಂತರ ಬಿಟ್ಟು ಇನ್ನೊಂದು ಸುತ್ತಿನ ಗೋಡೆ ನಿರ್ಮಿಸಲಾಗುತ್ತದೆ. ಇದರ ಒಳಗೆ ಎರಡು ಸೆಪ್ಟಿಕ್‌ ಟ್ಯಾಂಕ್‌ಗಳಿವೆ. ಇವೆರಡೂ ಮನೆಯ ಮುಂದೆ ಕಟ್ಟೆ ನಿರ್ಮಾಣ ಮಾಡಿದಂತೆ ಕಾಣುತ್ತದೆ.

ಕಟ್ಟೆಯ ಮೇಲೆ ಶೌಚಾಲಯದ ಕೊಠಡಿ ನಿರ್ಮಾಣ ಮಾಡಲಾಗು­ತ್ತದೆ. ಶೌಚಾಲಯದ ಕಮೋಡ್‌ಗೆ ಬಿದ್ದ ಮಲ, ನೀರು ಸುರಿದಾಗ ನೇರ­ವಾಗಿ ಕೆಳಭಾಗದಲ್ಲಿ ನಿರ್ಮಿಸ­ಲಾದ ಒಂದನೇ ಸೆಪ್ಟಿಕ್‌ ಟ್ಯಾಂಕ್‌ಗೆ ಹೋಗು­ತ್ತದೆ. ಅಲ್ಲಿಂದ ನೀರು ಮುಂದಿನ ಸೆಪ್ಟಿಕ್‌ ಟ್ಯಾಂಕ್‌ಗೆ ಹರಿಯುತ್ತದೆ.

ಇಲ್ಲಿಂದ ಬಳಿಕ ಒಳ ಆವರಣದ ಗೋಡೆ­ಯಲ್ಲಿ ಅಳವಡಿಸಲಾದ ಮುಕ್ಕಾಲು ಇಂಚು ವ್ಯಾಸದ ಪೈಪ್‌­ಗಳ ಮೂಲಕ ಹೊರ ಆವರಣಕ್ಕೆ ಪ್ರವೇಶಿಸುತ್ತದೆ. ಹೊರ ಗೋಡೆ ಮತ್ತು ಒಳ ಗೋಡೆಗಳ ನಡುವಿನ ಅಂತರದಲ್ಲಿ ಕೆಂಪುಮಣ್ಣು ತುಂಬಿಡ­ಲಾ­ಗುತ್ತದೆ. ಈ ಮಣ್ಣಿನಲ್ಲಿ ಹೆಚ್ಚು ನೀರು ಹೀರುವ ಹೂವಿನ ಗಿಡಗಳು, ಬೇರು ಹೆಚ್ಚು ವ್ಯಾಪಿಸದ ಅಲಂಕಾರಿಕ ಗಿಡಗಳನ್ನು ನೆಡಲಾಗುತ್ತದೆ.

ಹೀಗೆ ನೀರನ್ನು ಮಣ್ಣು ಹೀರಿಕೊಂಡು ಗಿಡಗಳಿಗೆ ಒದಗಿಸುತ್ತದೆ. ಮತ್ತೂ ನೀರು ಹೆಚ್ಚಾದರೆ ಹೊರ ಆವರಣ ಗೋಡೆಗೆ ಅಳವಡಿಸಿದ ಚಿಕ್ಕ ಪೈಪ್‌ ಮೂಲಕ ಅತ್ಯಲ್ಪ ಪ್ರಮಾಣದಲ್ಲಿ ಸೋಸಿ­ಕೊಂಡು ಹೊರ ಹರಿಯುತ್ತದೆ. ಲಭ್ಯ ವಸ್ತುಗಳನ್ನೇ ಬಳಸಿಕೊಂಡು ಹೊಸ ಪ್ರಯೋಗ ಮಾಡಲಾಗಿದೆ.

Write A Comment