ರಾಷ್ಟ್ರೀಯ

ಸರೋಜಿನಿ ಮಹಿಷಿ ಇನ್ನಿಲ್ಲ: ಸ್ವಂತ ಪರಿಶ್ರಮದಿಂದ ಉತ್ತುಂಗಕ್ಕೇರಿದ್ದ ಸರೋಜಿನಿ…; ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ ಸಾವಿತ್ರಿ ಮಹಿಷಿ: ಧಾರವಾಡದ ಸರೋಜಿನಿ ಮಹಿಷಿ ಮನೆಯಲ್ಲಿ ನೀರವ ಮೌನ

Pinterest LinkedIn Tumblr

pvec26jan15rjSarojiniMahish

ನವದೆಹಲಿ: ಹಿರಿಯ ಲೇಖಕಿ ಮತ್ತು ಕೇಂದ್ರದ ಮಾಜಿ ಸಚಿವೆ ಡಾ. ಸರೋ­ಜಿನಿ ಮಹಿಷಿ (88) ಅವರು ಭಾನು­ವಾರ ಬೆಳ­ಗಿನ ಜಾವ ಉತ್ತರ ಪ್ರದೇಶದ ಘಾಜಿ­ಯಾ­ಬಾದ್‌­ನಲ್ಲಿ ನಿಧನ­ರಾದರು.

ಘಾಜಿಯಾಬಾದಿನ ಬಾಡಿಗೆ ಮನೆ­ಯಲ್ಲಿ ವಾಸವಾಗಿದ್ದ ಅವರು ಅವಿವಾ­ಹಿ-ತ­ರಾ­ಗಿದ್ದರು. ಅಂತ್ಯ ಸಂಸ್ಕಾರ ಎಲ್ಲಿ ನಡೆಸಬೇಕು ಎಂದು ಇನ್ನೂ ತೀರ್ಮಾನ ಮಾಡಿಲ್ಲ ಎಂದು ಮೃತರ ಸಹೋದರ ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಪ್ರಹ್ಲಾದ್‌ ಬಿ. ಮಹಿಷಿ  ತಿಳಿಸಿದ್ದಾರೆ.

ಕನ್ನಡದಲ್ಲಿ ಕವಿತೆಗ­ಳನ್ನು ಬರೆದಿರುವ ಸರೋಜಿನಿ ಹಿಂದಿ ಭಾಷೆ ಮೇಲೂ ಪ್ರಭುತ್ವ ಹೊಂದಿದ್ದರು. ಕೇಂದ್ರದಲ್ಲಿ ಮಂತ್ರಿಯಾ­ಗಿದ್ದ ಮಹಿಷಿ 4 ಸಲ ಲೋಕ­ಸಭೆ, 2 ಅವಧಿಗೆ ರಾಜ್ಯಸಭೆ ಸದಸ್ಯರಾಗಿ­ದ್ದರು. ಇಂದಿರಾ­ಗಾಂಧಿ ಅವರ ಭಾಷಣ­ವನ್ನು ಕನ್ನಡಕ್ಕೆ ಭಾಷಾಂತರಿ­ಸುತ್ತಿದ್ದ ಹೆಗ್ಗಳಿಕೆಯೂ ಅವರದು.

ಸ್ವಂತ ಪರಿಶ್ರಮದಿಂದ ಉತ್ತುಂಗಕ್ಕೇರಿದ್ದ ಸರೋಜಿನಿ…
ಧಾರವಾಡ: ಯಾವ ರಾಜಕೀಯದ ಹಿನ್ನೆಲೆಯೂ ಇಲ್ಲದೆ, ಪರಿಶ್ರಮ ಹಾಗೂ ಅದಮ್ಯ ಸಾಹಸ, ಪ್ರಯತ್ನಗಳ ಮೂಲಕ ಉತ್ತುಂಗ ಶಿಖರಕ್ಕೇರಿದವರು ಡಾ. ಸರೋಜಿನಿ ಮಹಿಷಿ. ಸಾಕಷ್ಟು ಓದಿಕೊಂಡಿದ್ದರು, ಉತ್ತಮ ವಾಗ್ಮಿ, ಅಸಾಮಾನ್ಯ ಮೇಧಾವಿ ಹಾಗೂ ಎಲ್ಲಿಲ್ಲದ ಚುರುಕು ತನದಿಂದ ಹಲವು ಚಟುವಟಿಕೆಗಳನ್ನು ಏಕಕಾಲಕ್ಕೆ ನಿಭಾಯಿ­ಸಬಲ್ಲವರಾಗಿದ್ದರು ಎನ್ನುವುದು ಉತ್ಪ್ರೇಕ್ಷೆ ಎನಿಸಿದರೂ ಸತ್ಯ.

ಬಡ ಕುಟುಂಬದಿಂದ ಬಂದಿದ್ದ ಸರೋಜಿನಿ ಅವರು 1947ರಲ್ಲಿ ಬಿ.ಎ ಮುಗಿಸಿ ಸಾಂಗ್ಲಿಯ ವೆಲ್ಲಿಂಗ್ಟನ್‌ ಕಾಲೇಜಿಗೆ ಪದವಿ ತರಗತಿಗೆ ಬೋಧನೆ ಮಾಡಲು ಬರುತ್ತಿದ್ದರು. ಆಗ ನಾನು ಅವರ ವಿದ್ಯಾರ್ಥಿ.

ಬೆಳಗಾವಿಯಲ್ಲಿ ಕಾನೂನು ಪದವಿ ಮಾಡಿದ್ದರು. ಹೆಸರಿಗೆ ಮಾತ್ರ ವಕೀಲೆ­ಯಾಗಿದ್ದ ಅವರು ಸಮಾಜ ಸೇವೆ­ಯಲ್ಲೇ ಹೆಚ್ಚು ತೊಡಗಿಸಿ­ಕೊಂಡಿದ್ದರು. ಉತ್ತಮ ವಾಗ್ಮಿಯಾಗಿದ್ದ ಇವರಿಗೆ 1966ರ ಸಂದರ್ಭದಲ್ಲಿ ಧಾರವಾಡಕ್ಕೆ ಭೇಟಿ ನೀಡಿದ್ದ ಇಂದಿರಾ ಗಾಂಧಿ ಅವರ ಪರಿಚಯವಾಯಿತು. ಇವರ ಚುರುಕುತನವನ್ನು ಮೆಚ್ಚಿದ ಇಂದಿರಾ ಗಾಂಧಿ ಅವರು ಸರೋಜಿನಿ ಅವರನ್ನು ದೆಹಲಿಗೆ ಕರೆಯಿಸಿಕೊಂಡರು.

ಇಂದಿರಾ ಗಾಂಧಿ ಅವರ ಅಲೆ ಇದ್ದ ಆ ಸಂದರ್ಭದಲ್ಲಿ ಇವರು ಧಾರವಾಡ­ದಿಂದ ಸಂಸತ್‌ ಚುನಾವಣೆಗೆ ಸ್ಪರ್ಧಿಸಿ ಅನಾಯಾಸವಾಗಿ ಗೆದ್ದು ಬಂದರು. ಆ ಮೂಲಕ ಇಂದಿರಾ ಗಾಂಧಿ ಸಚಿವ ಸಂಪುಟದಲ್ಲಿ ವಿಮಾನಯಾನ, ಪರಿಸರ ಹಾಗೂ ಕಾನೂನು ಸಚಿವೆಯಾಗಿ ಸೇವೆ ಸಲ್ಲಿಸಿದರು. ಇವರಲ್ಲಿ ಅಪಾರ ನಂಬಿಕೆ ಇಟ್ಟಿದ್ದ ಇಂದಿರಾ ಗಾಂಧಿ ತಮ್ಮ ಬಂಗಲೆಯ ಪಕ್ಕದಲ್ಲೇ ಇವರಿಗೆ ಮನೆ ನೀಡಿದ್ದರು. ಹೀಗಾಗಿ ಪ್ರಧಾನಿ ಅವರ ಬಹುತೇಕ ಕಡತಗಳನ್ನು ಇವರೇ ನೋಡಿ­ಕೊಳ್ಳುತ್ತಿದ್ದರು. ಆ ಮೂಲಕ ಇಂದಿರಾ ಅವರ ‘ಬಲಗೈ’ ಎಂದೇ ಬಿಂಬಿತ­ವಾಗಿದ್ದರು.

ಆದರೆ, ಮುಂದೆ ಒಂದು ಸಂದರ್ಭ­ದಲ್ಲಿ ಮಾಜಿ ಪ್ರಧಾನಿ ಚಂದ್ರಶೇಖರ್‌ ಅವರ ಟೀ ಪಾರ್ಟಿಗೆ ಹೋಗಿದ್ದ ಸರೋಜಿನಿ ಅವರ ನಿಲುವನ್ನು ಇಷ್ಟಪಡದ ಇಂದಿರಾ ಗಾಂಧಿ ಕ್ರಮೇಣ ಇವರನ್ನು ದೂರ ಸರಿಸಲು ಆರಂಭಿ­ಸಿದರು. ಅಲ್ಲಿಂದಲೇ ಇವರ ರಾಜ­ಕೀಯ ಜೀವನ ಅವಸಾನದತ್ತ ಸಾಗಿತ್ತು.

ನಂತರದ ಸಂಸತ್‌ ಚುನಾವಣೆಯಲ್ಲಿ ಅವರು ಸ್ವತಂತ್ರ್ಯ ಅಭ್ಯರ್ಥಿಯಾಗಿ ಧಾರವಾಡ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಆದರೆ ಆಗ ಅವರು ಸೋತರು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಇವರಿಗೆ ಒಮ್ಮೆ ಯಾರೋ ಕಿಡಿಗೇಡಿ­ಗಳು ಕಲ್ಲು ಎಸೆದಿದ್ದರು. ಆಗ ‘ಈ ಒಂದು ಕಲ್ಲು ಲಕ್ಷ ಮತಗಳಾಗಿ ಪರಿ­ವರ್ತನೆ­­ಯಾಗಲಿದೆ’ ಎಂದು ಹೇಳಿ­ದ್ದರು. ಆದರೆ ದುರದೃಷ್ಟ ವಶಾತ್‌ ಅವರು ಚುನಾವಣೆಯಲ್ಲಿ ಸೋತರು. ಅಲ್ಲಿಂದ ಇವರ ರಾಜಕೀಯ ಬದುಕು ಇನ್ನಷ್ಟು ಕ್ಷೀಣಿಸುತ್ತಾ ಸಾಗಿತು.

ನಾನು ಮತ್ತು ಸರೋಜಿನಿ: 1976ರಲ್ಲಿ ಐಆರ್‌ಎಸ್‌ ಪಾಸು ಮಾಡಿದ್ದ ನಾನು ಆದಾಯ ತೆರಿಗೆ ಇಲಾಖೆಯ ಉಪ ಕಾರ್ಯದರ್ಶಿ­ಯಾಗಿ ದೆಹಲಿಗೆ ಹೋದೆ. ಆಗ ಸರೋಜಿನಿ ಅವರನ್ನು ಭೇಟಿ­ಯಾಗಲು ಹೋಗಿದ್ದೆ. ಆಗ ಅವರು ಕಾನೂನು ಸಚಿವರಾಗಿದ್ದರು. ಅದಾಗಲೇ ಸರೋಜಿನಿ ಹಾಗೂ ಇಂದಿರಾ ನಡುವಣ ಸಂಬಂಧ ಹಳಸಿತ್ತು. ಸರೋಜಿನಿ ಮನೆಯ ಮುಂದೆ ಸೈನಿಕರನ್ನು ನೇಮಿಸಿ ಇವರ ಮನೆಗೆ ಬಂದು ಹೋಗುವವರ ವರದಿಯನ್ನು ದಾಖಲಿಸಲಾಗುತ್ತಿತ್ತು.

ವಿವಾದಿತ ಮಹಿಳೆ: ಅದೇ ಸಂದರ್ಭದಲ್ಲಿ ಅವರು ದೆಹಲಿಯ ಕರ್ನಾಟಕ ಸಂಘ ಆರಂಭಿಸಿದ್ದರು. ತಮ್ಮ ಮಂತ್ರಿ ಪದವಿಯನ್ನು ಬಳಸಿಕೊಂಡು ದೆಹಲಿಯ ಏರ್‌ಪೋರ್ಟ್‌ ರಸ್ತೆಯ ಆರ್‌.ಕೆ. ಪುರಂನಲ್ಲಿ ಜಾಗ ಪಡೆದು ಕರ್ನಾಟಕ ಸಂಘ ಹಾಗೂ ಕನ್ನಡ ಶಾಲೆ ಆರಂಭಿಸಿದ್ದರು. ಅಲ್ಲಿಂದ ಅವರು ವಿವಾದಿತ ಮಹಿಳೆಯಾಗಿ ರೂಪು­ಗೊಂಡರು.

ಕೆಲವೇ ಜನರ ಕೂಟವನ್ನೊಳಗೊಂಡ ಸಂಘ ಕಟ್ಟಬೇಕೆನ್ನುವುದು ಅವರ ಇರಾದೆಯಾಗಿತ್ತು. ಆದರೆ ಕರ್ನಾಟಕದ ಹೆಸರಿನಲ್ಲಿರಬೇಕಾದ ಸಂಘ ಹಾಗೂ ಶಾಲೆ ಸಮಸ್ತ ಕನ್ನಡಿಗರಿಗೆ ಸೇರಬೇಕಾ­ದ್ದರಿಂದ ಪ್ರತಿಯೊಬ್ಬರಿಗೂ ಸದಸ್ಯತ್ವ ಪಡೆಯುವ ಹಕ್ಕು ನೀಡಬೇಕು. ಅಲ್ಲೂ ಚುನಾವಣೆಗಳು ನಡೆಯಬೇಕು ಎಂಬ ವಾದದೊಂದಿಗೆ ಪ್ರತಿಭಟನೆಗಳು ನಡೆದವು. ಸಂಘಕ್ಕಾಗಿ ಪಡೆದ ಜಮೀನಿನ ಒಡೆತನ ತಮ್ಮ ಹೆಸರಿನಲ್ಲೇ ಇರಬೇಕೆಂಬ ಅವರ ನಿಲುವನ್ನು ಪ್ರತಿಯೊಬ್ಬರೂ ವಿರೋಧಿ ಸಿದರು. ಎರಡು ವರ್ಷ ಯಾರೊಬ್ಬರನ್ನೂ ಹತ್ತಿರಕ್ಕೆ ಬರಲು ಬಿಡಲಿಲ್ಲ.

ನಾನೂ ಸರೋಜಿನಿ ಅವರ ನಿಲುವಿನ ವಿರುದ್ಧ ಹೋರಾಟದಲ್ಲಿ ಪಾಲ್ಗೊಂ­ಡಿದ್ದೆ. ನಾವೆಲ್ಲರೂ ಪ್ರತಿಭಟನೆ ರೂಪ­ದಲ್ಲಿ ಸಂಘಕ್ಕೆ ಹೋಗಿ ಮುಚ್ಚಿದ್ದ ಗೇಟನ್ನು ತಳ್ಳಿ ಒಳಗೆ ಹೋಗಿ ಘೋಷಣೆಗಳನ್ನು ಕೂಗಿ ಅವರ ನಿಲುವನ್ನು ಖಂಡಿಸಿದೆವು. ನಂತರ ಅವರು ಸಂಘ ಹಾಗೂ ಶಾಲೆ ಎರಡರಲ್ಲೂ ತಮ್ಮ ಪ್ರಭಾವವನ್ನು ಕಳೆದುಕೊಂಡರು. ನಾನೂ ಕರ್ನಾಟಕ ಸಂಘದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ.

ಅದೇ ಸಂದರ್ಭದಲ್ಲಿ ಒಂದು ದಿನ ನನ್ನನ್ನು ಉಪಾಹಾರಕ್ಕೆಂದು ಅವರು ಮನೆಗೆ ಕರೆದಿದ್ದರು. ತಮ್ಮ ವಿಶಾಲ ಬಂಗಲೆ ತೋರಿಸಿದರು. ಬೆಣ್ಣೆಯ ದೋಸೆ ಮಾಡಿ ಬಡಿಸಿದ್ದು ಇನ್ನೂ ನೆನಪಿದೆ.

ನಂತರ ಚಂದ್ರಶೇಖರ್‌ ಅವರು ಅಧಿಕಾರಕ್ಕೆ ಬಂದಾಗ ಸರೋಜಿನಿ ಅವರಿಗೆ ಸಂಸ್ಥೆಯೊಂದರ ಜವಾಬ್ದಾರಿ ವಹಿಸಿದ್ದರು. ಅದಾದ ನಂತರ ಅವರು ದೆಹಲಿ ಯಿಂದ ದೂರದ ಘಾಜಿಯಾ-­ಬಾದ್‌ನಲ್ಲಿ ನೆಲೆಸಿದರು. ಅಲ್ಲಿ ಏಕೆ ನೆಲೆಸಿದರು ಎಂಬುದು ತಿಳಿದಿಲ್ಲ.
(ಆದಾಯ ತೆರಿಗೆ ಇಲಾಖೆಯ ನಿವೃತ್ತ ಮುಖ್ಯ ಆಯುಕ್ತ)

ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ ಸಾವಿತ್ರಿ ಮಹಿಷಿ: ಧಾರವಾಡದ ಸರೋಜಿನಿ ಮಹಿಷಿ ಮನೆಯಲ್ಲಿ ನೀರವ ಮೌನ
ಧಾರವಾಡ: ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸತತ 4 ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಹಾಗೂ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಸಚಿವ ಸಂಪುಟದಲ್ಲಿ ಪ್ರವಾಸೋದ್ಯಮ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವರಾಗಿ ಕೆಲಸ ಮಾಡಿದ್ದ ಸರೋಜಿನಿ ಮಹಿಷಿ (87) ಅವರು ಭಾನುವಾರ ನವದೆಹಲಿಯಲ್ಲಿ ನಿಧನರಾದುದರಿಂದ ಧಾರ ವಾಡದ­ಲ್ಲಿರುವ ಅವರ ಮನೆಯಲ್ಲಿ ಶೋಕ ಮಡುಗಟ್ಟಿತ್ತು.

ಅವರ ತಂಗಿ ಸಾವಿತ್ರಿ ಮಹಿಷಿ, ಅಕ್ಕನ ಅಗಲಿಕೆ ಯಿಂದಾಗಿ ತಮ್ಮ ಬಾಲ್ಯದ ನೆನಪುಗಳನ್ನು ಮೆಲಕು ಹಾಕುತ್ತಾ ಕಣ್ಣೀರಿಡುತ್ತಿದ್ದರು.
ಈ ದುಃಖದ ನಡುವೆಯೇ ತಮ್ಮ ಅಕ್ಕ ಸರೋಜಿನಿ ಅವರ ಕೆಲವೊಂದಿಷ್ಟು ವಿಚಾರಗ ಳನ್ನು ಮಾಧ್ಯಮ ದವರ ಎದುರು ಬಿಚ್ಚಿಟ್ಟ ಸಾವಿತ್ರಿ, ‘ಸರೋಜಿನಿ ಅತ್ಯಂತ ಕ್ರಿಯಾಶೀಲ ಹಾಗೂ ಉತ್ಸಾಹಿ ಮಹಿಳೆಯಾಗಿದ್ದರು. ವಿದ್ಯಾರ್ಥಿ ಜೀವನದಿಂದಲೇ ಅವರು ರಾಜಕೀಯ­ದಲ್ಲಿ ಹೆಚ್ಚು ಆಸಕ್ತಿ ವಹಿಸಿ, 1962ರಲ್ಲಿ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಅಂದು ಕೇವಲ ₨ 10 ಸಾವಿರ ಖರ್ಚು ಮಾಡಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದರು. ಸರೋಜಿನಿಗೆ ನಾನೂ ಸೇರಿದಂತೆ ಐವರು ಸಹೋದರಿಯರು ಹಾಗೂ ಇಬ್ಬರು ಸಹೋದರರಿದ್ದಾರೆ’ ಎಂದರು.

‘ರಾಜಕೀಯಕ್ಕೆ ಹೋಗುವುದಕ್ಕೂ ಮುನ್ನ ಧಾರವಾಡದ ರಾಮನಗರದಲ್ಲಿ ಅವರು ಮನೆ ನಿರ್ಮಿಸಿದ್ದರು. ಅವರ ನೆನಪಿಗೆ ಇದೊಂದೇ ಮನೆ ನಮ್ಮೊಡನೆ ಇದೆ. ಸಹೋದರ, ಸಹೋದರಿ ಯರು ಸೇರಿ ನಾವು ಕಟ್ಟಿದ ಶಿಕ್ಷಣ ಸಂಸ್ಥೆಗಳು ಹಾಗೂ ಚಾರಿಟಬಲ್‌ ಟ್ರಸ್ಟ್‌ಗಳು ಹಲವಾರು ಜನಪರ ಕಾರ್ಯಗಳನ್ನು ಮಾಡುತ್ತಿವೆ. ಅವುಗಳು ಮಾಡುತ್ತಿರುವ ಜನಪರ ಕಾರ್ಯ ಗಳಲ್ಲಿ ಅಕ್ಕ ಸರೋಜಿನಿಯ ನೆನಪುಗಳಿರುತ್ತವೆ. ರಾಜ್ಯದ ಜನರ ಕಷ್ಟವನ್ನು ನೋಡ ಲಾರದೇ ಅಕ್ಕ ‘ಸರೋಜಿನಿ ಮಹಿಷಿ ವರದಿ’ಯನ್ನು ವರ್ಷ ಪೂರ್ಣ ರಾಜ್ಯದಾದ್ಯಂತ ಸಂಚರಿಸಿ ಸಿದ್ಧಪಡಿ­ಸಿದ್ದರು. ಇಲ್ಲಿಯವರೆಗೆ ಆಡಳಿತ ನಡೆಸಿದ ಸರ್ಕಾ ರಗಳು ಅದನ್ನು ಅನುಷ್ಠಾನ ಮಾಡಿಲ್ಲ. ಆದರೆ, ಇನ್ನು ಮುಂದಾದರೂ ಸರ್ಕಾರ ಅದನ್ನು ಅನುಷ್ಠಾನ ಗೊಳಿಸಿದರೆ ಜನರಿಗೆ ತುಂಬಾ ಅನುಕೂಲವಾಗುತ್ತದೆ’ ಎಂದು ಹೇಳುವಷ್ಟರಲ್ಲಿ ಸಾವಿತ್ರಿ ಅವರ ಕಣ್ಣುಗಳು ತೇವಗೊಂಡಿದ್ದವು.

ಸರೋಜಿನಿ ಶಿಕ್ಷಣ: ೧೯೨೭ರ ಮಾರ್ಚ್ ೩ರಂದು ಬಿಂದುರಾವ್‌ ಮಹಿಷಿ ಹಾಗೂ ಕಮಲಾಬಾಯಿ ಅವರ ಉದರದಲ್ಲಿ ಜನಿಸಿದ್ದ ಸರೋಜಿನಿ, ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ವನ್ನು ಧಾರವಾಡದಲ್ಲೇ ಪೂರ್ಣ್ ಗೊಳಿಸಿ, ಸಾಂಗ್ಲಿಯ ಮಿಲಿಂಗಟನ್ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತ ವಿಷಯದಲ್ಲಿ ಬಿ.ಎ. ಮತ್ತು ಎಂ.ಎ. ಪದವಿ ಪಡೆದಿದ್ದರು. ಕರ್ನಾಟಕ, ವಿಜಯಪುರ, ಹಂಪಿ  ಹಾಗೂ ಉಜ್ಜಯನಿ ವಿಶ್ವವಿದ್ಯಾಲಯಗಳು ಸರೋಜಿನಿ ಅವರಿಗೆ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದ್ದವು.

Write A Comment