ಕರ್ನಾಟಕ

ಬೆಂಗಳೂರಲ್ಲಿ ಡಬಲ್ ಮರ್ಡರ್ : ಗಂಡನಿಂದಲೇ ಹೆಂಡತಿ ಮತ್ತು ಅತ್ತೆ ಕೊಲೆ

Pinterest LinkedIn Tumblr

22

ಬೆಂಗಳೂರು, ಜ.21: ಟ್ರ್ಯಾಕ್ಟರ್ ಚಾಲಕನೊಬ್ಬ ತನ್ನ ಪತ್ನಿ ಹಾಗೂ ಅತ್ತೆಯನ್ನು ರುಬ್ಬುಗುಂಡಿನಿಂದ ತಲೆ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ನೆಲಗದರನಹಳ್ಳಿಯ ಶಿವಪುರದಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದವರಾದ ಚಂದ್ರಕಲಾ (23) ಹಾಗೂ ಈಕೆಯ ತಾಯಿ ಓಂಕಾರಮ್ಮ(45) ಕೊಲೆಯಾದ ದುರ್ದೈವಿಗಳಾಗಿದ್ದು, ಈ ದುಷ್ಕೃತ್ಯ ನಡೆಸಿದ ಟ್ರ್ಯಾಕ್ಟರ್ ಚಾಲಕ ಬಸವರಾಜು ಪರಾರಿಯಾಗಿದ್ದಾನೆ.ಕಳೆದ ರಾತ್ರಿ 10 ಗಂಟೆ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಮಕ್ಕಳು ಎದ್ದಾಗ ಪ್ರಕರಣ ಬೆಳಕಿಗೆ ಬಂದಿದೆ.

ಘಟನೆ ವಿವರ: ಟ್ರ್ಯಾಕ್ಟರ್ ಚಾಲಕನಾದ ಬಸವರಾಜು ಕಳೆದ 6 ವರ್ಷಗಳ ಹಿಂದೆ ಹೊಸದುರ್ಗದ ಚಂದ್ರಕಲಾ ಅವರನ್ನು ಮದುವೆಯಾಗಿ ಸ್ವಗ್ರಾಮದಲ್ಲೇ ನೆಲೆಸಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಹಣಕ್ಕಾಗಿ ಪತ್ನಿಯೊಂದಿಗೆ ಆಗಾಗ ಜಗಳ ಮಾಡುತ್ತಿದ್ದ ಬಸವರಾಜು ಹೊಸದುರ್ಗದಲ್ಲಿದ್ದಾಗ ಅತ್ತೆ-ಮಾವನ ಜತೆಯೂ ಜಗಳ ಮಾಡಿ ಪತ್ನಿ ಚಂದ್ರಕಲಾಳ ಮೇಲೆ ಹಲ್ಲೆ ಮಾಡಿ ತಲೆಗೆ ಗಾಯ ಮಾಡಿದ್ದು, ಆ ಸಂದರ್ಭದಲ್ಲಿ ಅಲ್ಲಿನ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

3

ಆಗ ಹಿರಿಯರು ಸಂಧಾನ ನಡೆಸಿ ಬಸವರಾಜುಗೆ 20 ಸಾವಿರ ರೂ. ಹಣ ನೀಡಿದ್ದರು ಎನ್ನಲಾಗಿದೆ. ಹಣಕ್ಕಾಗಿ ಗಂಡ ಜಗಳ ಮಾಡುತ್ತಿದ್ದರಿಂದ ಬೇಸತ್ತ ಚಂದ್ರಕಲಾ ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಪೀಣ್ಯದಲ್ಲಿ ನೆಲೆಸಿರುವ ಅಕ್ಕ ಕವಿತಾಳೊಂದಿಗೆ ವಾಸವಾಗಿದ್ದರು. ಅಕ್ಕ ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರಿಂದ ಈಕೆಯೂ ಗಾರ್ಮೆಂಟ್‌ನಲ್ಲಿ ಕೆಲಸಕ್ಕೆ ಸೇರಿದ್ದರು. ಆಗಾಗ ಪತ್ನಿಯನ್ನು ಹುಡುಕಿಕೊಂಡು ಬಸವರಾಜು ನೆಲದರನಹಳ್ಳಿಯಲ್ಲಿರುವ ಕವಿತಾರ ಮನೆಗೆ ಬಂದಿದ್ದು, ಕವಿತಾ ಅವರು ಈತನನ್ನು ಮನೆಗೆ ಸೇರಿಸುತ್ತಿರಲಿಲ್ಲ ಎನ್ನಲಾಗಿದೆ.

ಹೀಗಾಗಿ ಬೇರೆ ಮನೆ ಮಾಡು ನಾನು ನಿನ್ನೊಂದಿಗೆ ಇರುತ್ತೇನೆ ಎಂದು ಬಸವರಾಜು ಪತ್ನಿಗೆ ಪುಸಲಾಯಿಸಿದ್ದು, ಇದರಿಂದ ಚಂದ್ರಕಲಾ ಕಳೆದ ಮೂರು ತಿಂಗಳ ಹಿಂದಷ್ಟೇ ನೆಲಗದರನಹಳ್ಳಿಯ ಶಿವಪುರದಲ್ಲಿ ಮನೆ ಮಾಡಿದ್ದರು. ಕಳೆದ 15 ದಿನಗಳಿಂದ ಪತ್ನಿಯೊಂದಿಗೆ ಇರುತ್ತಿದ್ದ ಬಸವರಾಜು ಮತ್ತೆ ಹಣಕ್ಕಾಗಿ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಚಂದ್ರಕಲಾ ಅವರ ತಾಯಿ ಓಂಕಾರಮ್ಮ (45) ಹಾಗೂ ತಂದೆಗೆ ಹುಷಾರಿಲ್ಲದ ಕಾರಣ ಇಬ್ಬರು ಮಗಳ ಮನೆಗೆ ಬಂದಿದ್ದರು. ನಿನ್ನೆಯೂ ದಂಪತಿ ನಡುವೆ ಜಗಳವಾಗಿದ್ದು, ರಾತ್ರಿ ಎಲ್ಲರೂ ಮಲಗಿದ್ದಾಗ ಬಸವರಾಜು ರುಬ್ಬುಗುಂಡು ತಂದು ಅತ್ತೆ ಹಾಗೂ ಪತ್ನಿಯ ತಲೆ ಮೇಲೆ ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಬೆಳಿಗ್ಗೆ ಮಕ್ಕಳು ನಿದ್ದೆಯಿಂದ ಎದ್ದಾಗ ಅಜ್ಜಿ ಹಾಗೂ ಅಮ್ಮ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಹೆದರಿ ಸಮೀಪದಲ್ಲೇ ಇರುವ ದೊಡ್ಡಮ್ಮನ ಮನೆಗೆ ಹೋಗಿ ವಿಷಯ ತಿಳಿಸಿದ್ದಾರೆ. ಕವಿತಾ ಅವರು ಸ್ಥಳಕ್ಕೆ ಬಂದು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕುಡಿತದ ಚಟ ಹೊಂದಿದ್ದ ಬಸವರಾಜು ಸದಾ ಪತ್ನಿಯೊಂದಿಗೆ ಹಣಕ್ಕಾಗಿ ಪೀಡಿಸಿ ಜಗಳ ಮಾಡುತ್ತಿದ್ದರಿಂದ ಆತನೆ ಕೃತ್ಯ ಎಸಗಿ ಪರಾರಿಯಾಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಪೀಣ್ಯ ಠಾಣೆಯಲ್ಲಿ ಜೋಡಿ ಕೊಲೆ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಬಸವರಾಜುನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್, ಡಿಸಿಪಿ ಸುರೇಶ್, ಪೀಣ್ಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Write A Comment