ಕರ್ನಾಟಕ

‘ಗುಂಡು’ ಇಲ್ಲದ ಸಾಹಿತ್ಯ ಸಮ್ಮೇಳನ: ಸಮ್ಮೇಳನ ಅವಧಿಯಲ್ಲಿ ‘ಒಣದಿನ ‘ಘೋಷಣೆ

Pinterest LinkedIn Tumblr

* ನಾಗರಾಜ್ ನವೀಮನೆ, ಮೈಸೂರು
Siddalingaiah

ಮುಂಜಾನೆಯಿಂದ ಮುಸ್ಸಂಜೆವರೆಗೆ ಸಾಹಿತ್ಯಾರಾಧನೆ, ಬಳಿಕ ಮದ್ಯಾರಾಧನೆ ಎಂಬ ವೇಳಾಪಟ್ಟಿಯೊಂದಿಗೆ ಸಮ್ಮೇಳನಕ್ಕೆ ಬರುವ ಪ್ರತಿನಿಧಿಗಳಿಗೆ ಈ ಬಾರಿ ನಿರಾಶೆ ಕಟ್ಟಿಟ್ಟ ಬುತ್ತಿ. ಜ.31 ರಿಂದ ಫೆ.3ರವರೆಗೆ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭ ಶ್ರವಣಬೆಳಗೊಳದಲ್ಲಿ ಮದ್ಯ ಮಾರಾಟ ನಿಷೇಧಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದ್ದು, ಇನ್ನೆರಡು ದಿನದಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ.

”ಹೆಚ್ಚು ಜನ ಸೇರುವ ಕಡೆ ಮದ್ಯಮಾರಾಟಕ್ಕೆ ಅವಕಾಶ ನೀಡಿದರೆ, ಗಲಾಟೆ ನಡೆಯುವ ಸಾಧ್ಯತೆ ಇರುತ್ತದೆ. ಇದು ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗುತ್ತದೆ” ಎಂಬ ಕಾರಣವನ್ನು ಮುಂದಿಟ್ಟುಕೊಂಡು ಜಿಲ್ಲಾಡಳಿತ ಈ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಜತೆಗೆ, ಜೈನಕಾಶಿಯಲ್ಲಿ ಸಮ್ಮೇಳನ ನಡೆಯುತ್ತಿರುವುದರಿಂದ ಧಾರ್ಮಿಕ ಕ್ಷೇತ್ರದ ನಂಬಿಕೆಗಳನ್ನು ಗೌರವಿಸುವ ಇರಾದೆಯೂ ನಿರ್ಬಂಧ ಚಿಂತನೆಯ ಹಿಂದಿದೆ ಎನ್ನಲಾಗಿದೆ. ಈ ಆಲೋಚನೆಯನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಹಾಗೂ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಸಿದ್ದಲಿಂಗಯ್ಯ ಅವರು ಸ್ವಾಗತಿಸಿದ್ದಾರೆ.

ಯಾಕೆ ಬೇಕು ಹೇಳಿ?:
ಈ ಕುರಿತು ವಿಜಯ ಕರ್ನಾಟಕಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಉಮೇಶ್ ಕುಸುಗಲ್,” ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೊರ ಜಿಲ್ಲೆಗಳಿಂದ ಸಾಕಷ್ಟು ಸಾಹಿತ್ಯಾಸಕ್ತರು ಬರುತ್ತಾರೆ. ಇದರಿಂದ ಸಹಜವಾಗಿ ಜನದಟ್ಟಣೆ ಹೆಚ್ಚಿರುತ್ತದೆ. ಮದ್ಯಪಾನಕ್ಕೆ ಅವಕಾಶ ನೀಡಿದರೆ ಕುಡಿದವರು ಗದ್ದಲ ಉಂಟು ಮಾಡಬಹುದು. ಕಾನೂನು ಸುವ್ಯವಸ್ಥೆ ಹದಗೆಡಬಹುದು. ಹಾಗಾಗಿ ಜ.31ರಿಂದ ಫೆ.3ರವರೆಗೆ ಮದ್ಯದ ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚಲು ಯೋಚಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆ ಸುತ್ತೋಲೆ ಇನ್ನೂ ನನ್ನ ಕೈಸೇರಿಲ್ಲ. ಬಂದ ತಕ್ಷಣ ಸಹಿ ಮಾಡಿ, ಆದೇಶ ಹೊರಡಿಸುವೆ” ಎಂದು ತಿಳಿಸಿದರು.

”ಗೊಮ್ಮಟಗಿರಿ ಶ್ರವಣಬೆಳಗೊಳ ಜೈನ ಕಾಶಿ. ಇಲ್ಲಿ ಯಾವುದೇ ಮದ್ಯ, ಮಾಂಸ ಸೇವನೆಗೆ ಅವಕಾಶವಿಲ್ಲ. ಇದು ಮದ್ಯಪಾನ ನಿಷೇಧಕ್ಕೆ ಒಂದು ಕಾರಣವಾದರೆ, ಮದ್ಯ ಮಾರಾಟದಿಂದ ಕುಡಿಯುವವರ ಸಂಖ್ಯೆ ಹೆಚ್ಚಾಗಿ ಕಾನೂನು ಸುವ್ಯವಸ್ಥೆ ಹದಗೆಡಬಹುದು. ಹಾಗಾಗಿ ಶಾಂತಿ ಕಾಪಿಡಲು ಕ್ರಮ ಕೈಳ್ಳಲಾಗಿದೆ ”’ಎಂಬ ಅಭಿಪ್ರಾಯ ಕೇಳಿ ಬಂದಿದೆ. ಸಹಜವಾಗಿ ಇದು ಪಾನ ಸಾಹಿತ್ಯಾಸಕ್ತರಿಗೆ ನಿರಾಸೆ ತಂದರೂ ಅಚ್ಚರಿ ಇಲ್ಲ. ಸಮ್ಮೇಳನದಲ್ಲಿ ಬೆಳಗ್ಗೆ ಬೇಸರವಾದರೆ ಸಿಗರೇಟ್ ಸೇದುವಂತಿಲ್ಲ, ರಾತ್ರಿ ಚಳಿಗೆ ಒಂದು ಪೆಗ್ ಅಂತ ಮದ್ಯದ ಮೊರೆಯೂ ಹೋಗುವಂತಿಲ್ಲ. ಸಂಪೂರ್ಣ ವಿರಾಗಿಗಳಾಗಿ ಮೂರು ದಿನ ಕನ್ನಡ ಹಬ್ಬದಲ್ಲಿ ಭಾಗವಹಿಸಬೇಕು.

ಪಾನಗೋಷ್ಠಿಗೆ ಬ್ರೇಕ್:
ಹಾಗೆ ನೋಡಿದರೆ ಈ ಹಿಂದೆ ಬೇರೆ ಬೇರೆ ಜಿಲ್ಲೆಗಳಲ್ಲಿ ‘ಕನ್ನಡ ನುಡಿಹಬ್ಬ’ ನಡೆದಿದೆ. ಕಳೆದ ವರ್ಷ ಮಡಿಕೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಗೋಷ್ಠಿ ಜತೆ, ಪಾನಪ್ರಿಯರು ಪಾನಗೋಷ್ಠಿ ನಡೆಸಿ ಸಂಭ್ರಮಿಸಿದ್ದರು. ಆದರೆ, ಈ ಬಾರಿ ಸಾಹಿತ್ಯ ಸಮ್ಮೇಳನ ಅವೆಲ್ಲಕ್ಕೂ ಬ್ರೇಕ್ ನೀಡಿದ್ದು, ಮೂರು ದಿನವೂ ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಸಡಗರವೇ ಮೇಳೈಸಲಿದೆ.
—–

ಕುಡಿಯದೆ ಕುಡಿದಂತೆ ಇರುವವನೇ ನಿಜವಾದ ಸಾಹಿತಿ !
ಪವಿತ್ರ ಕ್ಷೇತ್ರ ಶ್ರವಣಬೆಳಗೊಳದಲ್ಲಿ ಸಮ್ಮೇಳನ ನಿಮಿತ್ತ ಮದ್ಯಪಾನ ನಿಷೇಧಿಸಿರುವುದು ಸೂಕ್ತ. ಮದ್ಯ ಪ್ರಿಯರು ಇದನ್ನು ತಾಳ್ಮೆಯಿಂದ ಸಹಿಸಿಕೊಳ್ಳಬೇಕು. ಸಾಹಿತಿಗಳು ಪೆಗ್ ತೆಗೆದುಕೊಂಡರೆ ಕವನ, ಕೃತಿ ಹುಟ್ಟುತ್ತವೆ ಎಂಬ ಮಾತು ಸಾರ್ವಜನಿಕರಲ್ಲಿದೆ. ಆದರೆ, ಇದು ತಪ್ಪು. ಮದ್ಯ ಸೇವಿಸಿದರೆ ನಿದ್ರೆ ಬರುತ್ತದೆ ವಿನಃ ಕವನ ಹುಟ್ಟುವುದಿಲ್ಲ. ಕುಡಿದವರು ಅರೆಪ್ರಜ್ಞೆ ಸ್ಥಿತಿಯಲ್ಲಿರುತ್ತಾರೆ. ಹೀಗಿರುವಾಗ ಸಾಹಿತ್ಯ ರಚನೆಯಾಗಲು ಹೇಗೆ ಸಾಧ್ಯ? ಸಾಹಿತ್ಯ ಎಂದೂ ಕುಡಿದಾಗ ಬರುವುದಿಲ್ಲ. ಕುಡಿಯುವವನು ಒಳ್ಳೆಯ ಸಾಹಿತಿಯೂ ಆಗಲಾರ. ಕುಡಿಯದೆ ಕುಡಿದಂತೆ ಇರುವವನೇ ನಿಜವಾದ ಸಾಹಿತಿ.
-ಸಿದ್ದಲಿಂಗಯ್ಯ, ಸಮ್ಮೇಳನದ ಸರ್ವಾಧ್ಯಕರು

ಶ್ರವಣಬೆಳಗೊಳ ಜೈನ ಕಾಶಿ. ಅಹಿಂಸೆ ಜೈನರ ಧರ್ಮವಾಗಿರುವುದರಿಂದ ಇಲ್ಲಿ ಮಾಂಸ, ಮದ್ಯ ನಿಷೇಧ. ಹಾಗಾಗಿ ಜಿಲ್ಲಾಡಳಿತದ ಕ್ರಮ ಸ್ವಾಗತಿಸುತ್ತೇನೆ. ಇದು ಕೇವಲ ಶ್ರವಣಬೆಳಗೊಳದಲ್ಲಿ ಮಾತ್ರವಲ್ಲ ಎಲ್ಲಾ ಉತ್ಸವ, ಕನ್ನಡ ಹಬ್ಬದ ಸಂದರ್ಭವೂ ಆಗಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿರುವಂತೆ ಮದ್ಯಪಾನವನ್ನು ನಿಷೇಧಿಸುವ ಕೆಲಸವಾಗಬೇಕು. ಇದರಿಂದ ಎಲ್ಲಾ ವರ್ಗದ ಜನರು ಸಂತೃಪ್ತಿ ಜೀವನ ನಡೆಸಲು ಸಾಧ್ಯವಾಗುತ್ತದೆ.
– ಪುಂಡಲೀಕ ಹಾಲಂಬಿ, ಕೇಂದ್ರ ಕಸಾಪ ಅಧ್ಯಕ್ಷ

ಆಹ್ವಾನಿತ ಗಣ್ಯರೇ 500 !
ಹಾಸನ: ಅಪಸ್ವರಕ್ಕೆ ಅವಕಾಶ ನೀಡದೆ, ಸ್ಥಳೀಯರು, ಹೊರಗಿನವರು ಎಂಬ ಪ್ರತ್ಯೇಕತೆಯ ಅಪಸ್ವರದ ಧ್ವನಿ ಕೇಳದಂತೆ ಸರ್ವರಿಗೂ ಸಮಪಾಲು ಎಂಬ ತತ್ವದಡಿ 81ನೇ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಬರೋಬ್ಬರಿ 502 ಆಹ್ವಾನಿತರು ಹೆಸರು ಮುದ್ರಿಸಲಾಗಿದೆ. ಜ.31ರ ಅಧ್ಯಕ್ಷರ ಮೆರವಣಿಗೆಯಿಂದ ಆರಂಭವಾಗಿ ಫೆ.1ರಿಂದ ಫೆ.3ರವರಗೆ ನಡೆಯುವ ಸಮ್ಮೇಳನದ ಉದ್ಘಾಟಕರು, ಅಧ್ಯಕ್ಷತೆ, ಪ್ರಧಾನ ಭಾಷಣಕಾರರು, ಸಮ್ಮೇಳನಾಧ್ಯಕ್ಷರು, ನಿಕಟಪೂರ್ವ ಸಮ್ಮೇಳನಾಧ್ಯಕ್ಷರು ಇತ್ಯಾದಿಯಾಗಿ ಒಟ್ಟು 502 ಆಹ್ವಾನಿತರ ಹೆಸರು ಒಟ್ಟು 16 ಪುಟದ ಆಕರ್ಷಕ ಆಹ್ವಾನ ಪತ್ರಿಕೆಯಲ್ಲಿ ರಾರಾಜಿಸುತ್ತಿದೆ.

Write A Comment