ಕರ್ನಾಟಕ

ಮೊದಲ ದಿನವೇ ಮಕ್ಕಳಿಗೆ ಗುಡಿಸುವ ಶಿಕ್ಷೆ!: ಘಟನೆ ನಡೆದು 12 ದಿನ ಕಳೆದರೂ ಸ್ವಚ್ಛಗೊಳ್ಳದ ಶಾಲೆ

Pinterest LinkedIn Tumblr

pvec200115SCHOOL-15

ಪುನರಾರಂಭಗೊಂಡ ಹೊಸಗುಡ್ಡದ­ಹಳ್ಳಿಯ ಶಾಲೆಯಲ್ಲಿ ಸೋಮವಾರ ವಿದ್ಯಾರ್ಥಿನಿಯರು ತರಗತಿಯೊಂದನ್ನು ಸ್ವಚ್ಛಗೊಳಿಸಿದರು ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ್‌

ಬೆಂಗಳೂರು: ಕ್ಷಣಮಾತ್ರದಲ್ಲಿ ಕಣ್ಣೆ­ದುರೇ ಘಟಿಸಿದ ಹಿಂಸಾಚಾರದ ಘಟ­ನೆಗೆ ಸಾಕ್ಷಿಯಾಗಿ ಭಯ, ತಲ್ಲಣಗಳಲ್ಲಿ ದಿನಗಳನ್ನು ದೂಡಿದ ಅವರು ಆತಂಕ­ದಿಂದಲೇ ಶಾಲೆಯತ್ತ ಹೆಜ್ಜೆ ಹಾಕಿದ್ದರು. ಅವರನ್ನು ಸ್ವಾಗತಿಸಿದ್ದು ಮಾತ್ರ ಮುದ ನೀಡುವ ಸ್ವಚ್ಛ ಶಾಲೆಯಲ್ಲ. ಬದಲು, ದಳ್ಳುರಿಯಲ್ಲಿ ಸುಟ್ಟು ಕರಕಲಾಗಿ ಮತ್ತಷ್ಟು ಭಯ ಮೂಡಿಸುವಂತಿದ್ದ ಭಗ್ನಾವಶೇಷಗಳು.

ಲೈಂಗಿಕ ದೌರ್ಜನ್ಯದ ಆರೋಪದ ತರು­ವಾಯ ನಡೆದ ಹಿಂಸಾಚಾರದ ನಂತರ ಸೋಮ­ವಾರ ಮತ್ತೆ ಆರಂಭ­ಗೊಂಡ ಹೊಸಗುಡ್ಡದ­ಹಳ್ಳಿ ಶಾಲೆ­ಯಲ್ಲಿ ಕಂಡುಬಂದ ದೃಶ್ಯ ಇದು.

ಘಟನೆ ನಡೆದು 12 ದಿನದ ತರುವಾಯ ಶಾಲೆಗೆ ಬಂದ ವಿದ್ಯಾರ್ಥಿ­ಗಳು ಮೊದಲ ದಿನ ಪಾಠ ಪ್ರವಚನ­ಕ್ಕಿಂತ ಹೆಚ್ಚಾಗಿ ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿಕೊಳ್ಳ ಬೇಕಾಯಿತು.

ಬೆಳಿಗ್ಗೆ ಶಾಲೆಗೆ ಬರುತ್ತಿದ್ದಂತೆ ಮಾಧ್ಯಮಗಳ ಎದುರು ಜನಪ್ರತಿನಿಧಿ­ಗಳಿಂದ ಚಾಕೋಲೇಟ್‌ ಸ್ವಾಗತ ಪಡೆದ ಮಕ್ಕಳು ನಂತರ ತಮ್ಮ ತಮ್ಮ ತರಗತಿಗಳಿಗೆ ತೆರಳಿ ಅಸ್ತವ್ಯಸ್ತಗೊಂಡ ಕೋಣೆಗಳನ್ನು ಅಚ್ಚುಕಟ್ಟುಗೊಳಿಸುವ ಕಾರ್ಯಕ್ಕೆ ಅಣಿಯಾದರು.

ದೂಳು ತೆಗೆಯುವುದು, ನೆಲ ಒರೆಸುವುದು, ಶೌಚಾಲಯ ಸ್ವಚ್ಛಗೊಳಿ­ಸು­ವುದು, ಸುಟ್ಟು ಕರ­ಕ­ಲಾಗಿ ಮುರಿದು ಬಿದ್ದ ಪೀಠೋಪಕರಣ­ಗಳನ್ನು ತೆಗೆ­ದುಹಾಕುವುದು, ಆವರಣ ಕಸ ಗುಡಿಸಿ ರಸ್ತೆಯ ಪಕ್ಕದ ಕೈಪಂಪ್‌ನಿಂದ ನೀರು ಹೊತ್ತು ತಂದು ತೊಳೆಯುವುದು ಇತ್ಯಾದಿ ಕೆಲಸ ಮಾಡಿದರು.

‘ಹಿಂಸಾಚಾರ ನಡೆದು 12 ದಿನ ಕಳೆದರೂ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿ­ಗಳು, ಜನಪ್ರತಿನಿಧಿಗಳು ಇವ­ರಲ್ಲಿ ಯಾರೊ­ಬ್ಬರಿಗೂ ಶಾಲೆಯನ್ನು ಆರಂಭ­ಗೊಳಿಸುವ ಪೂರ್ವದಲ್ಲಿ ಸ್ವಚ್ಛಗೊಳಿ­ಸ­ಬೇ­ಕೆಂಬ ಕನಿಷ್ಠ ಜ್ಞಾನ ಇರಲಿಲ್ಲವೆ ಅಥವಾ ಜಾಣ ಮರೆವು ಪ್ರದರ್ಶಿಸಿ­ದರೇ’ ಎಂದು ಪೋಷಕರೊಬ್ಬರು ಪ್ರಶ್ನಿಸಿದರು.

‘ಪಾಲಕರು ಆತಂಕದಲ್ಲಿ ಕರೆತಂದ ಮಕ್ಕಳಿಗೆ ಮೊದಲ ದಿನವೇ ಪಾಠದ ಬದಲು ಕೆಲಸಕ್ಕೆ ಹಚ್ಚಿದ್ದು ಎಷ್ಟು ಸರಿ. ಶಿಸ್ತು ಕಾಯ್ದು­ಕೊಳ್ಳ­ಬೇಕಾದ ಶಿಕ್ಷಣ ಸಂಸ್ಥೆಯಲ್ಲಿ ಕಂಡುಬಂದ ಈ ಅಶಿಸ್ತಿಗೆ ಯಾರು ಹೊಣೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇದು ಒಂದು ದಿನದ ಕೆಲಸವಲ್ಲ. ನಿತ್ಯವೂ ಈ ಶಾಲೆಯಲ್ಲಿ ಎಲ್ಲ ಸ್ವಚ್ಛತೆ ಕಾರ್ಯವನ್ನು ಮಕ್ಕಳೇ ಮಾಡುತ್ತಾರೆ. ಮಧ್ಯಾಹ್ನದ ಊಟದ ನಂತರ ಆಹಾರ ಪೂರೈಕೆಯ ಎಲ್ಲ ಸಾಮಗ್ರಿಗಳನ್ನು ಮಕ್ಕಳೇ ತೊಳೆಯುತ್ತಾರೆ. ಅಮಾಯಕ ಮಕ್ಕಳಿಗೆ ಈ ರೀತಿಯ ಶಿಕ್ಷೆ ನೀಡುವುದು ಎಷ್ಟು ಸರಿ’ ಎಂದರು ಹೆಸರು ಹೇಳಲು ಇಚ್ಛಿಸದ ಸ್ಥಳೀಯ ನಿವಾಸಿಯೊಬ್ಬರು.

ಈ ಕುರಿತಂತೆ ಪ್ರಶ್ನಿಸಿದರೆ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಆನಂದ್‌, ‘ಶಾಲೆಗೆ ‘ಡಿ’ ದರ್ಜೆಯ ಸಿಬ್ಬಂದಿಯನ್ನು ಇಲಾಖೆ ನೇಮಕ ಮಾಡಿಲ್ಲ. ಆದ್ದರಿಂದ, ಮಕ್ಕಳು ಸ್ವಚ್ಛತೆ ಕೆಲಸ ಮಾಡು­ತ್ತಾರೆ. ಅವರೊಂದಿಗೆ ನಾವು ಸಹ ಕೈಜೋಡಿಸು­ತ್ತೇವೆ. ಮಕ್ಕಳಲ್ಲದಿದ್ದರೆ ಮೇಷ್ಟ್ರು ಕಸ ಗುಡಿಸೋಕಾಯ್ತದಾ’ ಎಂದು ಅವರು ಮರು ಪ್ರಶ್ನಿಸಿದರು.

‘ವಿದ್ಯಾರ್ಥಿಗಳು ಶಾಲೆಯನ್ನು ಸ್ವಚ್ಛ­ಗೊ­ಳಿಸಿ­ದರೆ ಏನು ತಪ್ಪು. ನಾವೆಲ್ಲ ಚಿಕ್ಕ­ವರಾಗಿದ್ದಾಗ ಇಂತಹ ಕೆಲಸಗಳನ್ನು ಮಾಡಿದ್ದೇವೆ. ಇದೇನು ದೊಡ್ಡ ಪ್ರಮಾದವಲ್ಲ’ ಎಂದು ಸಮರ್ಥಿಸಿ­ಕೊಂಡರು ಶಾಲೆಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀಕಂಠಯ್ಯ.

ಆಘಾತಕಾರಿ ಸಂಗತಿ: ‘ಇಂತಹ ಹಿಂಸಾಚಾರದ ಘಟನೆಗಳ ತರುವಾಯ ಶಾಲೆ ಪುನಃ ಆರಂಭ­ವಾಗುವಾಗ ಅಲ್ಲಿ ಮಕ್ಕಳಿಗೆ ಸಂತಸವಾಗು­ವಂತಹ ವಾತಾ­ವರಣ ನಿರ್ಮಿಸಿರಬೇಕಿತ್ತು. ಅದರ ಬದಲು, ಗಲಾಟೆಯಿಂದ ಅಸ್ತವ್ಯಸ್ತ­ಗೊಂಡ ಶಾಲೆಯನ್ನು ಮಕ್ಕಳಿಂದ ಸ್ವಚ್ಛಗೊಳಿಸಿ­ರುವುದು ಆಘಾತಕಾರಿ ಸಂಗತಿ’ ಎನ್ನುತ್ತಾರೆ ಚೈಲ್ಡ್‌ ರೈಟ್‌ ಟ್ರಸ್ಟ್‌ ನಿರ್ದೇಶಕ ವಾಸುದೇವ ಶರ್ಮ.

‘ಅಷ್ಟೊಂದು ದೊಡ್ಡ ಪ್ರಮಾಣದ ಘಟನೆ ನಡೆದಾಗಲೂ ರಾಜ್ಯ ಸರ್ಕಾರ­ವಾಗಲಿ ಅಥವಾ ಪಾಲಿಕೆಯಾಗಲಿ ಎಚ್ಚೆತ್ತುಕೊಂಡು ಶಾಲೆಯ ಪರಿಸ್ಥಿತಿ­ಯನ್ನು ಅವಲೋಕಿಸಬೇಕಿತ್ತು.

ಇಂತಹ ಸಂಗತಿಗಳು ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಭಯ ಮೂಡಿಸುತ್ತವೆ. ಸಂಬಂಧಪಟ್ಟ­ವರು ಇದನ್ನು ಗಂಭೀರವಾಗಿ ಪರಿ­ಗಣಿಸಬೇಕು’ ಎನ್ನುತ್ತಾರೆ ವಾಸುದೇವ ಶರ್ಮ.

ಕ್ರಮ ಜರುಗಿಸಲಾಗುತ್ತದೆ
ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಯಾವುದೇ ರೀತಿಯ ಕೆಲಸ ಮಾಡಿಸುವುದು ಖಂಡಿತ ತಪ್ಪು. ಹಾಗೊಮ್ಮೆ ಮಾಡಿಸಿದರೆ ಅದು ಮಕ್ಕಳ ಹಕ್ಕುಗಳ ಉಲ್ಲಂಘನೆ­ಯಾ­ಗುತ್ತದೆ. ಇದಕ್ಕೆ ಕಾರಣರಾದವರ ವಿರುದ್ಧ ಆಯೋಗ ಕ್ರಮ ತೆಗೆದುಕೊಳ್ಳುತ್ತದೆ.
– ಎಚ್‌.ಆರ್‌.ಉಮೇಶ್‌ ಆರಾಧ್ಯ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ

ಗಾಯದ ಮೇಲೆ ಬರೆ
ದೊಡ್ಡ ಹಿಂಸಾಚಾರ ಕಂಡು ಭಯಗೊಂಡ ಮಕ್ಕಳಿಂದಲೇ ಭಗ್ನಾವಶೇಷಗಳನ್ನು ಸ್ವಚ್ಛಗೊಳಿಸಿರುವುದು ವಿದ್ಯಾರ್ಥಿಗಳಲ್ಲಿ ಭಾವನಾತ್ಮಕ ಪರಿಣಾಮ ಬೀರುತ್ತದೆ. ಶಾಲೆ ಆರಂಭಕ್ಕೂ ಪೂರ್ವದಲ್ಲಿ ಅಲ್ಲಿ ಮೊದಲಿನ ಪರಿಸರ ನಿರ್ಮಿಸುವುದು ಶಾಲೆ ಆಡಳಿತ ಮಂಡಳಿ ಜವಾಬ್ದಾರಿ. ಕೆಲ ದಿನಗಳಿಂದ ಬಾಕಿ ಇರುವ ಪಠ್ಯಕ್ರಮ ತುಂಬಿಕೊಡುವ ಕಾರ್ಯದ ಬದಲು ಕಲಿಕೆ ಮೇಲೆ ಪರಿಣಾಮ ಬೀರುವ ಕೆಲಸ ಮಾಡಿಸಿದ್ದು ತಪ್ಪು.
– ಡಾ.ವಿ.ಪಿ.ನಿರಂಜನಾರಾಧ್ಯ, ಮಗು ಮತ್ತು ಕಾನೂನು ಕೇಂದ್ರದ ಶಿಕ್ಷಣ ತಜ್ಞ

Write A Comment