ಕರ್ನಾಟಕ

‘ಬಂಧಿತ ಉಗ್ರರ ಕುಟುಂಬಕ್ಕೆ ನೆರವು ನೀಡಬಹುದು’: ಗೃಹ ಸಚಿವ ಕೆ.ಜೆ.ಜಾರ್ಜ್

Pinterest LinkedIn Tumblr

George-PC-3

ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ನಗರದಲ್ಲಿ ಸೋಮವಾರ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ನಗರ ಪೊಲೀಸ್‌ ಕಮಿಷನರ್‌ ಎಂ.ಎನ್.ರೆಡ್ಡಿ, ಗೃಹ ಇಲಾಖೆ ಕಾರ್ಯದರ್ಶಿ ಎಸ್.ಕೆ.ಪಟ್ಟನಾಯಕ್‌, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಲಾಲ್‌ ರೋಕುಮ ಪಚಾವೊ, ಕೆಎಸ್‌ಆರ್‌ಪಿ ಎಡಿಜಿಪಿ ಪ್ರವೀಣ್‌ಸೂದ್ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಭಟ್ಕಳದಲ್ಲಿ ಬಂಧಿಸಲಾಗಿರುವ ಶಂಕಿತ ಉಗ್ರರ ಕುಟುಂಬ ಸದಸ್ಯರಿಗೆ ಸಾರ್ವಜನಿಕರು ಅಗತ್ಯ ನೆರವು ನೀಡಬಹುದು’ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು. ಗಣರಾಜ್ಯೋತ್ಸವ ಸಮಾರಂಭಕ್ಕೆ ಕೈಗೊಳ್ಳ­ಬೇಕಾದ ಭದ್ರತಾ ಕ್ರಮಗಳ ಸಂಬಂಧ ಸಚಿವರು ನಗರದಲ್ಲಿ ಸೋಮವಾರ ಪೊಲೀಸ್‌ ಅಧಿಕಾರಿ­ಗಳೊಂದಿಗೆ ಸಭೆ ನಡೆಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.

‘ಶಂಕಿತ ಉಗ್ರರ ಪೋಷಕರಲ್ಲಿ ಕೆಲವರಿಗೆ ಆರೋಗ್ಯ ಸಮಸ್ಯೆ ಇದೆ.  ಅವರಿಗೆ ಸಹಾಯ ಮಾಡಲು ಹೋದರೆ ತಮಗೂ ಉಗ್ರರ ಪಟ್ಟ ಕಟ್ಟುವ ಸಾಧ್ಯತೆ ಇದೆ ಎಂದು ಭಟ್ಕಳದ ಕೆಲ ಸಂಘಟನೆಗಳ ಸದಸ್ಯರು ನನ್ನನ್ನು ಭೇಟಿಯಾಗಿ ಆತಂಕ ವ್ಯಕ್ತಪಡಿಸಿದ್ದಾರೆ. ಅವರ ಕುಟುಂಬಗಳಿಗೆ ಸಾರ್ವಜನಿಕರು ಯಾವುದೇ ರೀತಿಯ ನೆರವು ನೀಡಬಹುದು. ಅದಕ್ಕೆ ಪೊಲೀಸರು ಅಡ್ಡಿಪಡಿಸ­ದಂತೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

‘ಭಟ್ಕಳದವರು ಎನ್ನುವ ಕಾರಣಕ್ಕೆ ಅವರನ್ನು ಬಂಧಿಸಿಲ್ಲ. ವಿನಾಕಾರಣ ಉಗ್ರರ ಪಟ್ಟ ಕಟ್ಟುವ ಉದ್ದೇಶ ಸಹ ಪೊಲೀಸರಿಗೆ ಇಲ್ಲ. ತನಿಖೆ ದೃಷ್ಟಿ­ಯಿಂದ ಈ ನಾಲ್ವರನ್ನು ಬಂಧಿಸಲಾಗಿದೆ. ರಾಜ್ಯದ ಯಾವುದೇ ಭಾಗದಲ್ಲಿ ಅನುಮಾನಾಸ್ಪದ ವ್ಯಕ್ತಿ­ಗಳು ಅಥವಾ ವಸ್ತುಗಳು ಕಂಡುಬಂದರೆ  ಸಾರ್ವ­ಜನಿ­ಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡ­ಬೇಕು’ ಎಂದು ಮನವಿ ಮಾಡಿದರು.

ಚರ್ಚ್‌ ಸ್ಟ್ರೀಟ್‌ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಉತ್ತಮವಾಗಿ ತನಿಖೆ ನಡೆಸುತ್ತಿದ್ದಾರೆ.  ತನಿಖೆಗಾಗಿ 200ಕ್ಕೂ ಹೆಚ್ಚು ದಕ್ಷ ಅಧಿಕಾರಿಗಳ ವಿಶೇಷ ತಂಡ ರಚಿಸಲಾಗಿದೆ ಎಂದರು. ನಗರ ಪೊಲೀಸ್‌ ಕಮಿಷನರ್‌ ಎಂ.ಎನ್.ರೆಡ್ಡಿ ಮಾತನಾಡಿ, ‘ಬಂಧಿತ  ಉಗ್ರರು ನೀಡಿದ ಮಾಹಿತಿ ಆಧರಿಸಿ ಅವರ ಮನೆಗಳಲ್ಲಿ ಸಂಗ್ರಹಿಸಿಟ್ಟಿದ್ದ ಸ್ಫೋಟಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಹೇಳಿದರು. ‘ಐಎಸ್‌ ಸಂಘಟನೆಯ   ಟ್ವಿಟರ್ ಖಾತೆ ನಿರ್ವಹಣೆ ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿರುವ ಮೆಹದಿ ಮಸ್ರೂರ್ ಬಿಸ್ವಾಸ್‌ ವಿರುದ್ಧದ ತನಿಖೆ ಪ್ರಗತಿಯಲ್ಲಿದೆ’ ಎಂದರು.

Write A Comment