ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ನೂತನ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್ ಅವರಿಗೆ ವಿದ್ಯಾರ್ಥಿಗಳು ಹಸ್ತಲಾಘವ ಮಾಡಿದರು. ದಿ ನ್ಯಾಷನಲ್ ಎಜುಕೇಷನ್ ಸೊಸೈಟಿಯ ಪ್ರೊ. ಎಸ್.ಎನ್.ನಾಗರಾಜ ರೆಡ್ಡಿ, ಅಧ್ಯಕ್ಷ ಡಾ.ಎ.ಎಚ್.ರಾಮರಾವ್ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಪಿಯುಸಿ ಕಲಿಯುತ್ತಿದ್ದಾಗ ವೈದ್ಯನಾಗಬೇಕು ಎಂಬ ಕನಸು ಇತ್ತು. ಇದಕ್ಕೆ ಪೂರಕವಾಗಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಅತ್ಯಧಿಕ ಅಂಕ ಪಡೆದು ತೇರ್ಗಡೆಯೂ ಆಗಿದ್ದೆ. ಆದರೆ, ಈ ಕನಸಿಗೆ ಅಡ್ಡಿಯಾದುದು ನನ್ನ ವಯಸ್ಸು’
–ಹೀಗೆಂದು ನೆನಪಿನ ಅಂಗಳಕ್ಕೆ ಜಾರಿದ್ದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ನೂತನ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್ ಅವರು.
ದಿ ನ್ಯಾಷನಲ್ ಎಜುಕೇಷನ್ ಸೊಸೈಟಿಯ ಆಶ್ರಯದಲ್ಲಿ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮನದುಂಬಿ ಮಾತನಾಡಿದರು. ‘ನಾನು ಆರಂಭಿಕ ಶಿಕ್ಷಣ ಪಡೆದುದು ಹಾಸನದಲ್ಲಿ. ವೈದ್ಯಕೀಯ ಶಿಕ್ಷಣ ಪಡೆಯಬೇಕು ಎಂಬ ಹಂಬಲದಿಂದ ಪಿಯುಸಿಯಲ್ಲಿ ಪಿಸಿಎಂ (ರಸಾಯನ ವಿಜ್ಞಾನ, ಭೌತವಿಜ್ಞಾನ, ಜೀವವಿಜ್ಞಾನ) ವಿಷಯವನ್ನು ಆಯ್ಕೆ ಮಾಡಿಕೊಂಡೆ.
ಆ ವರ್ಷ ಮೈಸೂರು ವಿವಿಯಲ್ಲಿ ಪಿಸಿಎಂನಲ್ಲಿ ಅತ್ಯಧಿಕ ಅಂಕ ನನಗೇ ಸಿಕ್ಕಿತು. ವೈದ್ಯಕೀಯ ಪದವಿ ಸೇರ್ಪಡೆಗೆ ಅರ್ಜಿ ಪಡೆಯಲು ಹೋದಾಗ ನನಗೆ ಆಘಾತ ಕಾದಿತ್ತು. ವೈದ್ಯಕೀಯ ಪದವಿ ಸೇರ್ಪಡೆಗೆ ನಿಗದಿಪಡಿಸಿದ ವಯಸ್ಸಿಗಿಂತ ನಾನು 22 ದಿನ ಚಿಕ್ಕವನಿದ್ದೆ’ ಎಂದು ಅವರು ನೆನಪಿಸಿಕೊಂಡರು.
‘ಮುಂದಿನ ವರ್ಷ ವೈದ್ಯಕೀಯ ಪದವಿಗೆ ಸೇರೋಣ ಎಂದು ತೀರ್ಮಾನಿಸಿ ಹಾಸನದಲ್ಲಿ ಬಿಎಸ್ಸಿಗೆ ದಾಖಲಾದೆ. ಅದೇ ಸಮಯದಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಶಿಕ್ಷಣ ಪಡೆಯಬೇಕು ಎಂಬ ಆಸೆ ಅಂಕುರಿಸಿತ್ತು. ಬೆಂಗಳೂರು ವಿವಿಯವರು ಭೌತವಿಜ್ಞಾನ (ಹಾನರ್ಸ್) ಪದವಿಯನ್ನು ಪುನರಾರಂಭಿಸುವ ವಿಷಯ ಗೊತ್ತಾಯಿತು.
ಬೆಂಗಳೂರಿನ ನ್ಯಾಷನಲ್ ಕಾಲೇಜು ಸೇರಿದಂತೆ ಹಲವು ಕಾಲೇಜುಗಳಲ್ಲಿ ಈ ಪದವಿ ಇರುವುದನ್ನು ತಿಳಿದುಕೊಂಡೆ. ಕೂಡಲೇ ನ್ಯಾಷನಲ್ ಕಾಲೇಜಿಗೆ ಸೇರಿದೆ’ ಎಂದು ಅವರು ತಿಳಿಸಿದರು. ‘ಆ ಸಮಯದಲ್ಲಿ ಎಚ್. ನರಸಿಂಹಯ್ಯ ಅವರು ಉತ್ತುಂಗದ ಸ್ಥಿತಿಯಲ್ಲಿದ್ದರು. ಅವರ ಜೀವನಶೈಲಿ ಯಿಂದ ಪ್ರಭಾವಿತನಾದೆ. ಹಾಸ್ಟೆಲ್‌ನಲ್ಲಿ ಇದ್ದ ಕಾರಣ ಅವರ ಜತೆಗಿನ ಒಡನಾಟ ಹೆಚ್ಚಿತು. ಅವರ ಜತೆಗೆ ಟೆನಿಸ್ ಆಡುತ್ತಿದ್ದೆ. ನನ್ನನ್ನು ತಿದ್ದಿ ತೀಡಿದ್ದು ಅವರ ಜೀವನಶೈಲಿ. ನನ್ನ ಜೀವನದ ದಿಕ್ಕನ್ನು ಬದಲಿಸಿದ ದಿನಗಳವು’ ಎಂದು ಅವರು ವಿನಮ್ರರಾಗಿ ನುಡಿದರು.
‘ರಸಾಯನವಿಜ್ಞಾನದ ಬಗೆಗಿನ ಕುತೂಹಲ ಹೆಚ್ಚಿತು. ಅದೇ ವೇಳೆಯಲ್ಲಿ ಬಾಹ್ಯಾಕಾಶ ವಿಜ್ಞಾನಿ ನೀಲ್ ಆರ್ಮ್‌ಸ್ಟ್ರಾಂಗ್ ಅವರು ಚಂದ್ರನ ಮೇಲೆ ಕಾಲಿರಿಸಿದ ಸುದ್ದಿ ಬಂತು. ಈ ಕ್ಷೇತ್ರದಲ್ಲೇ ಮುಂದುವರಿಯಬೇಕು ಎಂಬ ತೀರ್ಮಾನಕ್ಕೆ ಬಂದೆ’ ಎಂದರು. ‘1969ರಿಂದ 1971 ವರೆಗೆ ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದೆ. ವಿದ್ಯಾರ್ಥಿಗಳ ನಡುವೆ ಸಮನ್ವಯ, ಹೊಂದಾಣಿಕೆ, ಸರ್ವಾಂಗೀಣ ಅಭಿವೃದ್ಧಿಗೆ ವಾತಾವರಣ ಸೃಷ್ಟಿಸಿದ ನರಸಿಂಹಯ್ಯ ಅವರಿಗೆ ನಾನು ಚಿರಋಣಿ’ ಎಂದು ಅವರು ಸ್ಮರಿಸಿದರು.
‘ಸೆಂಟ್ರಲ್ ಕಾಲೇಜಿನಲ್ಲಿ ಎಂಎಸ್ಸಿ ಪೂರೈಸಿದೆ. ಬಳಿಕ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಎಂ.ಟೆಕ್ ಮಾಡಿದೆ. ಎಂಟೆಕ್ ಪೂರ್ಣಗೊಳ್ಳುವ ಮುನ್ನವೇ ಅಹಮದಾಬಾದ್‌ನಲ್ಲಿ ಸಂದರ್ಶನಕ್ಕೆ ಕರೆ ಬಂತು. ಸಂದರ್ಶನದಲ್ಲಿ ಪಾಸಾದೆ. ಪದವಿ ಪೂರ್ಣಗೊಂಡ ಬಳಿಕ 1975ರಲ್ಲಿ ಉದ್ಯೋಗಕ್ಕೆ ಸೇರಿದೆ’ ಎಂದರು. ದಿ ನ್ಯಾಷನಲ್ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಡಾ.ಪಿ. ಸದಾನಂದ ಮಯ್ಯ ಉಪಸ್ಥಿತರಿದ್ದರು.
‘ನನ್ನೊಳಗೆ ಶೋಧ’
‘ಇಸ್ರೊ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಕೆಲವೇ ದಿನಗಳು ಕಳೆದಿವೆ. ಸಂಸ್ಥೆಯಲ್ಲಿ ಮುಂದೇನು ಮಾಡಬೇಕು ಎಂಬ ಬಗ್ಗೆ ನನ್ನೊಳಗೆ ಶೋಧ ಮಾಡುತ್ತಿದ್ದೇನೆ’ ಎಂದು ಡಾ.ಎ. ಎಸ್.ಕಿರಣ್ ಕುಮಾರ್ ತಿಳಿಸಿದರು. ‘ಪ್ರೊ. ಸತೀಶ್ ಧವನ್ ಅವರಂತಹ ದಂತಕತೆಗಳು ಇಸ್ರೊ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಹೀಗಾಗಿ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುವುದು ನನ್ನ ಪಾಲಿನ ಭಾಗ್ಯ. ಇದೊಂದು ದೊಡ್ಡ ಜವಾಬ್ದಾರಿ’ ಎಂದು ಅವರು ತಿಳಿಸಿದರು. ‘ಚಂದ್ರಯಾನ–2ಕ್ಕೆ ಇಸ್ರೊ ಸಿದ್ಧತೆ ನಡೆಸುತ್ತಿದೆ. 2016ರ ಅಂತ್ಯ ಅಥವಾ 2017ರ ಆರಂಭದಲ್ಲಿ ಕಕ್ಷೆಗೆ ಸೇರಲಿದೆ’ ಎಂದು ಅವರು ಮಾಹಿತಿ ನೀಡಿದರು.
