ಕನ್ನಡ ವಾರ್ತೆಗಳು

ಪ್ರಧಾನಿ ಬಾವ ಚಿತ್ರ ಚಪ್ಪಲಿಗೆ ಅಂಟಿಸಿ ನೇತು ಹಾಕಿದ ದುಷ್ಕರ್ಮಿಗಳು:ಗಲಭೆಗೆ ಕುಮ್ಮಕ್ಕು ನೀಡುವ ಯತ್ನ ವಿಫಲಗೊಳಿಸಿದ ಪೊಲೀಸರು

Pinterest LinkedIn Tumblr

Modi_Photo_Chappal_1

ತೊಕ್ಕೊಟ್ಟು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಶುಭ ಕೋರಿ ಹಾಕಿದ್ದ ಬ್ಯಾನರೊಂದನ್ನು ಹರಿದು ಅದರಲ್ಲಿದ್ದ ಮೋದಿ ಅವರ ಬಾವಚಿತ್ರವನ್ನು ಚಪ್ಪಲಿಗೆ ಅಂಟಿಸಿ ಅದನ್ನು ಮನೆಯೊಂದರ ಗೇಟಿಗೆ ನೇತು ಹಾಕುವ ಮೂಲಕ ಗಲಭೆಗೆ ಕುಮ್ಮಕ್ಕು ನೀಡುವ ದುಷ್ಕರ್ಮಿಗಳ ಪ್ರಯತ್ನವನ್ನು ಸೋಮವಾರ ಉಳ್ಳಾಲ ಪೊಲೀಸರು ವಿಫಲಗೊಳಿಸಿದ್ದಾರೆ.

ಉಳ್ಳಾಲ ಠಾಣೆ ವ್ಯಾಪ್ತಿಯ ಕಲ್ಲಾಪು ಪಟ್ಲ ಬಳಿ ಕೊಳಚೆ ನೀರು ಹರಿಯ ಬಿಡುವ ವಿಚಾರದಲ್ಲಿ ಎರಡು ಮನೆಗಳ ನಡುವೆ ವಿವಾದ ಸೃಷ್ಟ್ಟಿಯಾಗಿ ಮಾತಿನ ಚಕಮಕಿ ನಡೆದಿತ್ತು. ಪರಿಸ್ಥಿತಿ ಗಂಭೀರವಾದಾಗ ಉಳ್ಳಾಲ ಪೊಲೀಸರು ಸ್ಥಳಕ್ಕೆ ಆಗಮಿಸಿ ತಿಳಿಗೊಳಿಸಿದ್ದರು.

Modi_Photo_Chappal_2 Modi_Photo_Chappal_3

ಕಲ್ಲಾಪು ಪಟ್ಲದಲ್ಲಿ ಮಳೆ ನೀರು ಹರಿಯಲೆಂದು 6 ವರ್ಷಗಳ ಹಿಂದೆ ಸಣ್ಣ ತೋಡನ್ನು ರಚಿಸಲಾಗಿತ್ತು. ಆ ತೋಡಿನಲ್ಲಿ ಸಮೀಪದಲ್ಲಿಯೇ ಐದಾರು ಮನೆಗಳಿದ್ದು ಅಲ್ಲಿಂದ ಹರಿಯ ಬಿಟ್ಟ ಕೊಳಚೆ ನೀರು ಹರಿದು ಆ ತೋಡಿನ ಮೂಲಕ ಹರಿದು ಹೋಗುತ್ತಾ ಪಟ್ಲ ಪ್ರದೇಶದಲ್ಲಿ ವಾಸವಾಗಿರುವ ಎರಡು ಮನೆಗಳ ಅಂಗಳಕ್ಕೆ ಸೇರುತ್ತಿತ್ತು. ಕೊಳಚೆ ನೀರಿನಿಂದ ಮನೆಯ ಅಂಗಳ ಮತ್ತು ಕುಡಿಯುವ ನೀರು ಕಲ್ಮಶವಾಗುತ್ತದೆ ಎಂಬ ಕಾರಣದಿಂದ ಪಟ್ಲದ ಮನೆ ಮಂದಿ ಹಾಗೂ ಕೊಳಚೆ ನೀರು ಬಿಡುತ್ತಿದ್ದ ಮನೆಯವರ ನಡುವೆ ಆಗಾಗ ಮಾತಿನ ಸಂಘರ್ಷ ನಡೆಯುತ್ತಿತ್ತು.ಹಾಗಾಗಿ ಉಳ್ಳಾಲ ಪೊಲೀಸರು ಮತ್ತು ಪುರಸಭೆಯ ಮುಖ್ಯಾಧಿಕಾರಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಲ್ಲದೆ ಕೊಳಚೆ ನೀರು ಹರಿಯದಂತೆ ತೋಡಿಗೆ ಸಂಪರ್ಕ ಕಡಿತಗೊಳಿಸಿದ್ದರು. ಅಲ್ಲದೆ ಆ ತೋಡಿಗೆ ಕಾಂಕ್ರಿಟೀಕರಣ ಮಾಡಿ ಸಮಸ್ಯೆ ಇತ್ಯರ್ಥ ಗೊಳಿಸುವುದಾಗಿ ಅಲ್ಲಿನ ನಿವಾಸಿಗಳಿಗೆ ಭರವಸೆ ನೀಡಿದ್ದರು.

Modi_Photo_Chappal_4 Modi_Photo_Chappal_5

ಕೊಳಚೆ ನೀರು ಹರಿಯುವ ವಿಚಾರದಲ್ಲಿ ಸೋಮವಾರ ಮತ್ತೆ ಮಾತಿನ ಚಕಮಕಿ ನಡೆದಿದೆ. ಅದೇ ವೇಳೆ ಪೊಲೀಸರು ಅಲ್ಲಿಗೆ ತೆರಳಿ ವಿವಾದವನ್ನು ತಿಳಿಗೊಳಿಸಿದರು. ಆದರೆ ಪ್ರಕರಣದ ಲಾಭ ಪಡೆಯಲು ಉದ್ದೇಶಿಸಿದ ದುಷ್ಕರ್ಮಿಗಳು ಅಲ್ಲಿಯೇ ಇದ್ದ ನರೇಂದ್ರ ಮೋದಿಯವರ ಭಾವಚಿತ್ರವಿದ್ದ ಬ್ಯಾನರ್ ಹರಿದು ಮೋದಿ ಅವರ ಬಾವ ಚಿತ್ರವನ್ನು ಚಪ್ಪಲಿಗೆ ಅಂಟಿಸಿ ಸಮೀಪದ ಮಹಾಬಲ ಶೆಟ್ಟಿ ಅವರ ಮನೆಯ ಗೇಟಿಗೆ ಸಿಕ್ಕಿಸಿ ನೇತಾಡಿಸುವ ಮೂಲಕ ಸಂಘರ್ಷಕ್ಕೆ ಆಸ್ಪದ ನೀಡಿದರು.

ಆದರೆ ದುಷ್ಕರ್ಮಿಗಳ ಪ್ರಯತ್ನಕ್ಕೆ ಉಳ್ಳಾಲ ಪೊಲೀಸರು ತಕ್ಷಣ ಧಾವಿಸಿ ಸಮಸ್ಯೆ ಉಲ್ಬಣವಾಗದಂತೆ ನೋಡಿಕೊಂಡರು. ಮೋದಿ ಅವರ ಬ್ಯಾನರ್ ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಖಿತ ದೂರು ನೀಡದ ಕಾರಣ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

Write A Comment