ಕರ್ನಾಟಕ

600 ಎಕರೆ ಡಿನೋಟಿಫೈ: ನ್ಯಾ.ಕೆಂಪಣ್ಣ ಆಯೋಗಕ್ಕೆ ವಾರದಲ್ಲಿ ದಾಖಲೆ ಸಲ್ಲಿಕೆ: ಎಚ್‌ಡಿಕೆ

Pinterest LinkedIn Tumblr

hdk20

ಬೆಂಗಳೂರು: ‘ಅರ್ಕಾವತಿ ಬಡಾವಣೆ­ಗಾಗಿ ಸ್ವಾಧೀನ­­ಪಡಿಸಿಕೊಂಡಿದ್ದ ಜಮೀನಿ­ನಲ್ಲಿ 500ರಿಂದ 600 ಎಕರೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಡಿನೋಟಿಫೈ ಮಾಡಿದ್ದಾರೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.­ಡಿ.ಕುಮಾರಸ್ವಾಮಿ ಆರೋಪಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ‘ರೀ ಡು’ ಹೆಸರಿನಲ್ಲಿ ಡಿನೋಟಿ­ಫಿಕೇಷನ್‌ ಮಾಡಿದ್ದಾರೆ. ಅವರು ಅಕ್ರಮ­ದಲ್ಲಿ ಭಾಗಿಯಾಗಿರುವ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ನಾನು ಖುದ್ದಾಗಿ ಹೋಗಿ ನ್ಯಾಯಮೂರ್ತಿ ಕೆಂಪಣ್ಣ ಆಯೋಗಕ್ಕೆ ಸಲ್ಲಿಸುತ್ತೇನೆ’ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾ­ರದಿಂದ (ಬಿಡಿಎ) ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ 3,339 ಎಕರೆ 12 ಗುಂಟೆ ಜಮೀನು ಸ್ವಾಧೀನಪಡಿಸಿಕೊಳ್ಳಲು 2003­ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. 2,750 ಎಕರೆ ಸ್ವಾಧೀನಕ್ಕೆ 2004ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಅದರಲ್ಲಿ ‘ರೀ ಡು’ ಹೆಸರಿನಲ್ಲಿ 984 ಎಕರೆ ಜಮೀನನ್ನು ಡಿನೋಟಿಫೈ ಮಾಡ­ಲಾಗಿದೆ. ಬಿ.ಎಸ್‌. ಯಡಿ­ಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಈ ಅಕ್ರಮಕ್ಕೆ ನಾಂದಿ ಹಾಡಲಾಯಿತು. ಸಿದ್ದರಾಮಯ್ಯ ಅವರು ಅಂತಿಮ ಆದೇಶ ಹೊರಡಿಸಿದ್ದಾರೆ ಎಂದು ಆರೋಪ ಮಾಡಿದರು.

ಯಡಿಯೂರಪ್ಪ ಕಾಲದಲ್ಲೇ ಡಿನೋಟಿ­ಫಿಕೇಷನ್‌ ಕಡತ ಸೃಷ್ಟಿಯಾ­ಯಿತು. ನಂತರ ಮುಖ್ಯಮಂತ್ರಿಯಾದ ಡಿ.ವಿ.ಸದಾನಂದ ಗೌಡ ಅವರು ಅಡ್ವೊಕೇಟ್‌ ಜನರಲ್‌ ಅಭಿಪ್ರಾಯ ಕೇಳಿ ಕಡತ ಕಳುಹಿಸಿದ್ದರು. ಆ ಬಳಿಕ ಮುಖ್ಯಮಂತ್ರಿ ಆದ ಜಗದೀಶ ಶೆಟ್ಟರ್‌ ಡಿನೋಟಿಫಿಕೇಷನ್‌ ಆದೇಶ ಹೊರ­ಡಿಸಲು ಪ್ರಯತ್ನಿಸಿದ್ದರು. ಯಡಿ­ಯೂರಪ್ಪ ಪರ ಅಧಿಕಾರಿಗಳು ಸಹಿ ಹಾಕಲು ನಿರಾಕರಿಸಿದ್ದರಿಂದ ಪ್ರಕ್ರಿಯೆ ಅರ್ಧಕ್ಕೆ ನಿಂತಿತ್ತು. ಸಿದ್ದರಾಮಯ್ಯ ಈ ಕಡತಕ್ಕೆ ಸಹಿಮಾಡಿ, ಡಿನೋಟಿಫಿಕೇಷನ್‌ ಆದೇಶ ಹೊರಡಿಸಿದರು ಎಂದರು.

ಆರು ಮಾರ್ಗಸೂಚಿಗಳನ್ನು ಆಧರಿಸಿ 2004ರ ಅಂತಿಮ ಅಧಿಸೂಚನೆಗೂ ಮುನ್ನ ಜಮೀನುಗಳ ಸ್ಥಿತಿಗತಿ ಕುರಿತ ವರದಿ ಸಿದ್ಧಪಡಿಸಿ ‘ರೀ ಡು’ ಮಾಡು­ವಂತೆ ಹೈಕೋರ್ಟ್‌ ವಿಭಾಗೀಯ ಪೀಠ ಆದೇಶಿಸಿತ್ತು. ಸುಪ್ರೀಂಕೋರ್ಟ್‌ ಕೂಡ ಅದನ್ನು ಎತ್ತಿಹಿಡಿದಿತ್ತು. ನ್ಯಾಯಾ­ಲಯದ ಆದೇಶದ ಪ್ರಕಾರ 140 ಎಕರೆಯನ್ನು ಮಾತ್ರ ಅಧಿಸೂಚನೆ­ಯಿಂದ ಕೈಬಿಡಲು ಸಾಧ್ಯ ಇತ್ತು. 2006ರ ಮೇ ತಿಂಗಳಿನಲ್ಲಿ ಬಿಡಿಎ ಆಡಳಿತ ಮಂಡಳಿಯೇ ಈ ಬಗ್ಗೆ ನಿರ್ಣಯ ಕೈಗೊಂಡಿತ್ತು ಎಂದು ಕಡತ ಪ್ರದರ್ಶಿಸಿದರು.

‘ಯಡಿಯೂರಪ್ಪ ಅಧಿಕಾರಕ್ಕೆ ಬಂದ ಬಳಿಕ ಹೈಕೋರ್ಟ್‌ ಮತ್ತು ಸುಪ್ರೀಂ­ಕೋರ್ಟ್‌ಗಳ ಆದೇಶಗಳನ್ನು ದುರ್ಬಳಕೆ ಮಾಡಿಕೊಳ್ಳುವ ಕೆಲಸ ಆರಂಭ­ವಾಯಿತು. ನ್ಯಾಯಾಲಯ ನಿಗದಿಪ­ಡಿಸಿದ ಮಾರ್ಗಸೂಚಿಗಳ ವ್ಯಾಪ್ತಿಗೆ ಬಾರದಿರುವ ಜಮೀನುಗಳನ್ನೂ ಅಧಿಸೂ­ಚನೆಯಿಂದ ಕೈಬಿಡುವ ಕಡತಗಳು ಸಿದ್ಧವಾದವು. ಅಂತಿಮವಾಗಿ 984 ಎಕರೆಯನ್ನು ಡಿನೋಟಿಫೈ ಮಾಡಿ 2014ರ ಜೂನ್‌ 18ರಂದು ಅಧಿ­ಸೂಚನೆ ಹೊರಡಿಸ­ಲಾಗಿದೆ. ಬಿಡಿಎ ಖದೀಮ ಅಧಿಕಾರಿಗಳು ಸೇರಿಕೊಂಡು ಈ ಅಕ್ರಮ ಎಸಗಿದ್ದಾರೆ’ ಎಂದು ದೂರಿದರು.

‘ಸಿದ್ದರಾಮಯ್ಯ ಅವರು ಮಾತೆ­ತ್ತಿದರೆ ‘ರೀ ಡು’ ಎಂಬ ಸಮಜಾಯಿಷಿ ನೀಡುತ್ತಾರೆ. ಆದರೆ, ಅವರು ಮಾಡಿದ್ದು ‘ರೀ ಡು’ ಅಲ್ಲ; ಡಿನೋಟಿಫಿಕೇಷನ್‌. ಭೂಸ್ವಾಧೀನ ಕಾಯ್ದೆಯ ಸೆಕ್ಷನ್‌ 48(1)ರಲ್ಲಿ 984 ಎಕರೆ ಡಿನೋಟಿಫೈ ಮಾಡ­ಲಾಗಿದೆ ಎಂಬ ಉಲ್ಲೇಖವೇ ಅಧಿಸೂಚನೆಯಲ್ಲಿದೆ. ‘ರೀ ಡು’ ಎಲ್ಲಿದೆ? ಯಾವ ಕಾನೂನಿನ ಅಡಿ ಅದು ನಡೆದಿದೆ ಎಂಬು­ದನ್ನು ಮುಖ್ಯಮಂತ್ರಿ ಅಥವಾ ಕಾನೂನು ಸಚಿವ ಟಿ.ಬಿ. ಜಯ­ಚಂದ್ರ ತಿಳಿಸಬೇಕು’ ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ರಾಜೀನಾಮೆಗೆ ಆಗ್ರಹ: ‘ತಾನು ಒಂದು ಇಂಚು ಜಮೀನನ್ನೂ ಡಿನೋಟಿಫೈ ಮಾಡಿಲ್ಲ ಎಂದು ಮುಖ್ಯ­ಮಂತ್ರಿ ಹೇಳುತ್ತಿದ್ದಾರೆ. ಅವರು ಇಂಚು ಜಮೀನನ್ನು ಡಿನೋಟಿಫೈ ಮಾಡಿಲ್ಲ. ನೂರಾರು ಎಕರೆ ಡಿನೋಟಿಫೈ ಮಾಡಿದ್ದಾರೆ. ₨ 600 ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆದಿದೆ. ಸಿದ್ದರಾ­ಮಯ್ಯ ಅವರಿಗೆ ನೈತಿಕತೆ ಇದ್ದರೆ ತಕ್ಷಣವೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

ಬಿಡಿಎ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ದಾಖಲೆ ನೀಡುತ್ತಿಲ್ಲ ಎಂದು ನ್ಯಾ.­ಕೆಂಪಣ್ಣ ಆಯೋಗ ದೂರಿದೆ. ಮುಖ್ಯಮಂತ್ರಿ­ಯವರು ತಪ್ಪು ಮಾಡಿಲ್ಲ ಎಂದಾದರೆ ದಾಖಲೆ ನೀಡಲು ಏಕೆ ಅಡ್ಡಿಪಡಿಸ­ಲಾಗು­ತ್ತಿದೆ? ಯಾವ ಕಾರಣಕ್ಕೆ ಹೆದರು­ತ್ತಿದ್ದಾರೆ? ಮುಖ್ಯ­ಮಂತ್ರಿ ರಕ್ಷಣೆಗಾಗಿ ಅಧಿಕಾರಿಗಳು ಕಡತ ನಾಶ ಮಾಡು­ತ್ತಿ­ದ್ದಾರಾ? ದಾಖಲೆಗಳನ್ನು ತಿದ್ದುತ್ತಿ­ದ್ದಾರಾ? ಎಂದು ಪ್ರಶ್ನಿಸಿದರು.

ಧಮ್ಕಿ ಹಾಕಿ ದಾಖಲೆ ಪಡೆದೆ: ‘ಡಿನೋಟಿಫಿಕೇಷನ್‌ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೇಳಿದರೆ ಅಧಿಕಾರಿಗಳು ಸತಾಯಿ­ಸಿದರು. ದಾಖಲೆ ಕೊಡಲು ಮುಖ್ಯಮಂತ್ರಿಯವರ ಅಪ್ಪಣೆ ಬೇಕು ಎಂದರು. ಕಡೆಗೂ ಧಮ್ಕಿ ಹಾಕಿದಾಗ ದಾಖಲೆಗಳು ನನ್ನ ಕೈಗೆ ಬಂದವು’ ಎಂದು ಹೇಳಿದರು. ಸರ್ಕಾರದ ಕಡೆಯಿಂದ ವಿಚಾರಣಾ ಆಯೋಗಕ್ಕೆ ಸಹಕಾರ ದೊರೆಯುತ್ತಿಲ್ಲ. ಒಬ್ಬ ಪ್ರಜ್ಞಾ­ವಂತ ನಾಗರಿಕನಾಗಿ ತಮ್ಮ ಬಳಿ ಇರುವ ಎಲ್ಲ ದಾಖಲೆ­ಗಳನ್ನೂ ಒಂದು ವಾರದೊಳಗೆ ಆಯೋಗಕ್ಕೆ ಸಲ್ಲಿಸುವುದಾಗಿ ತಿಳಿಸಿದರು.

ತಪ್ಪು ಮಾಹಿತಿ
‘ನಾನು ಮುಖ್ಯಮಂತ್ರಿ ಆಗಿದ್ದಾಗ 140 ಎಕರೆ ಡಿನೋಟಿಫೈ ಮಾಡಿದ್ದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಕಾರಣಕ್ಕಾಗಿಯೇ ಇಷ್ಟು ದಿನ ಸುಮ್ಮನಿದ್ದ ನಾನು ಈಗ ಪ್ರತಿಕ್ರಿಯೆ ನೀಡಿದ್ದೇನೆ. ನಾನು 140 ಎಕರೆ ಡಿನೋಟಿಫೈ ಮಾಡಿಲ್ಲ. ಆ ತೀರ್ಮಾನ ಬಿಡಿಎ ಆಡಳಿತ ಮಂಡಳಿಯದ್ದು. ಆ ಕಡತದಲ್ಲಿ ಎಲ್ಲಿಯೂ ನನ್ನ ಸಹಿ ಇಲ್ಲ. ನಾನು 3 ಎಕರೆ 17 ಗುಂಟೆ ಜಮೀನನ್ನು ಮಾತ್ರ ಡಿನೋಟಿಫೈ ಮಾಡಿದ್ದೆ’ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ನ್ಯಾಯಾಂಗ ತನಿಖೆಯಿಂದ ಸತ್ಯಾಂಶ ಹೊರಬರುವ ವಿಶ್ವಾಸ ಇಲ್ಲ. ಸಿಐಡಿ ತನಿಖೆಯೂ ಪ್ರಯೋಜನ ಆಗದು. ಈ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಒತ್ತಾ­ಯಿಸಿದರು.

ಅರ್ಕಾವತಿ: ಸಿಬಿಐ ತನಿಖೆ ಇಲ್ಲ–ಸಿ.ಎಂ
ಬೆಂಗಳೂರು: ‘ಅರ್ಕಾವತಿ ಬಡಾ ವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿ ಕೊಂಡ ಜಮೀನಿನ ಡಿನೋಟಿಫಿ­ಕೇಷನ್‌ ಕುರಿತು ನ್ಯಾಯಾಂಗ ವಿಚಾ­ರಣೆ ನಡೆಯು­ತ್ತಿದೆ. ಸಿಬಿಐ ತನಿಖೆಗೆ ವಹಿಸುವ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆರೋಪ ಕುರಿತು ಸೋಮವಾರ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ‘ನ್ಯಾಯಾಂಗ ವಿಚಾರಣೆ ಪ್ರಗತಿಯ­ಲ್ಲಿದೆ. ಈಗ ನಾನು ಹೆಚ್ಚಿನ ಪ್ರತಿ­ಕ್ರಿಯೆ ನೀಡುವು­ದಿಲ್ಲ. ‘ನಾನು ಒಂದು ಗುಂಟೆ ಜಮೀ­ನನ್ನೂ ಡಿನೋಟಿಫೈ ಮಾಡಿಲ್ಲ ಎಂಬ ಹೇಳಿಕೆಗೆ ಬದ್ಧ. ಯಾವ ತಪ್ಪನ್ನೂ ಮಾಡಿಲ್ಲ. ನ್ಯಾಯಾಂಗ ನಿಂದನೆ ಪ್ರಕ­ರಣ ತಪ್ಪಿಸಿ­ಕೊಳ್ಳಲು ‘ರೀಡು’ ಮಾಡ­ಲಾಗಿದೆ. ಯಾವುದೇ ರೀತಿ ಅಕ್ರಮ­ಗಳೂ ನಡೆದಿಲ್ಲ’ ಎಂದು ತಿಳಿಸಿದರು.

Write A Comment