ಮಹಾಲಕ್ಷ್ಮಿ ಬಡಾವಣೆಯ ನಾಗಪುರ ವಾರ್ಡ್‌ನ ಉದ್ಯಾನದಲ್ಲಿ ವಾಯುವಿಹಾರ ಮಾಡುತ್ತಿದ್ದವರಿಗೆ ಈಗ ಕಸರತ್ತು ಮಾಡಲು ಪರಿಕರಗಳು ಒದಗಿಬಂದಿವೆ. ಚಿಕ್ಕಾಸನ್ನೂ ಭರಿಸದೆ ವಾಕಿಂಗ್ ನಂತರ ವ್ಯಾಯಾಮವನ್ನೂ ಮಾಡುವ ಅವಕಾಶ ಇಲ್ಲಿನ ಜನತೆಗೆ ದೊರಕಿದೆ. ಈ ಬಯಲು ಜಿಮ್‌ಗೆ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಇನ್ನಷ್ಟು ವಾರ್ಡ್‌ಗಳಲ್ಲಿಯೂ ಇಂಥ ಜಿಮ್‌ಗಳನ್ನು ನಿರ್ಮಿಸುವ ಯೋಜನೆಗೆ ರೆಕ್ಕೆಪುಕ್ಕ ಮೂಡಲಿದೆ.
ಸೂರ್ಯೋದಯಕ್ಕೂ ಮುನ್ನವೇ ಉದ್ಯಾನಕ್ಕೆ ಬಂದಿದ್ದ ಗೃಹಿಣಿ ಅಲ್ಲಿದ್ದ ಜಿಮ್ ಉಪಕರಣದ ಸಹಾಯದಿಂದ ವ್ಯಾಯಾಮ ಮಾಡತೊಡಗಿದರು. ಆ ಗೃಹಿಣಿಯಷ್ಟೇ ಅಲ್ಲದೇ 60 ದಾಟಿದವರು, ವಾಕಿಂಗ್ ಮಾಡುತ್ತಿದ್ದ ಯುವಕರು ಕೂಡ ಒಮ್ಮೆ ಬಂದು ಬಯಲು ಜಿಮ್‌ನಲ್ಲಿ ಕಸರತ್ತು ಮಾಡುತ್ತಿದ್ದುದು ಸಾಮಾನ್ಯವಾಗಿತ್ತು. ಕೊರೆಯುವ ಚಳಿಯಲ್ಲಿಯೂ ಅವರದ್ದು ಬತ್ತದ ಉತ್ಸಾಹ.
ಮಹಾಲಕ್ಷ್ಮೀ ಬಡಾವಣೆ, ನಾಗಪುರ ವಾರ್ಡ್‌ನಲ್ಲಿರುವ ಸ್ವಾಮಿ ವಿವೇಕಾನಂದ ಉದ್ಯಾನದಲ್ಲಿ ಸಾರ್ವಜನಿಕರಿಗಾಗಿ ಇತ್ತೀಚೆಗೆ ಉದ್ಘಾಟನೆಯಾದ ‘ಬಯಲು ಜಿಮ್’ನಲ್ಲಿ ಕಂಡ ದೃಶ್ಯಗಳಿವು. ಯುವಕರಿಗಷ್ಟೇ ಅಲ್ಲದೇ ಇಳಿವಯಸ್ಸಿನವರಿಗೂ ಅನುಕೂಲವಾಗಲೆಂದು ಈ ಬಯಲು ಜಿಮ್ ಆರಂಭಿಸಲಾಗಿದೆ.
ಜಿಮ್ ಜೊತೆಗೆ ಧ್ಯಾನ ಮತ್ತು ಯೋಗ ಮಾಡುವವರಿಗೆ ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡಲಾಗಿದೆ. ಜಿಮ್ ಪಕ್ಕದಲ್ಲಿಯೇ ನಗೆ ಚಾವಣಿ ನಿರ್ಮಾಣವಾಗುತ್ತಿದೆ. ಬಯಲು ಜಿಮ್ ಹಾಗೂ ನಗೆ ಚಾವಣಿ ನಿರ್ಮಾಣಕ್ಕೆ ₨50 ಲಕ್ಷ ವೆಚ್ಚ ಮಾಡಲಾಗುತ್ತಿದೆ.
‘ಉದ್ಯಾನಗಳಿಗೆ ವಾಕ್ ಬರುವವರು ಬಯಲಿನಲ್ಲೇ ವ್ಯಾಯಾಮ ಮಾಡುತ್ತಿದ್ದರು. ಅವರಲ್ಲಿ ಬಹಳಷ್ಟು ಮಂದಿ ವೃದ್ಧರು ಇದ್ದರು, ಇಂಥವರ ಅನುಕೂಲಕ್ಕಾಗಿ ಈ ಬಯಲು ಜಿಮ್ ಆರಂಭಿಸಿದ್ದೇವೆ. ನಮ್ಮ ವಾರ್ಡ್ ವ್ಯಾಪ್ತಿಯಲ್ಲಿ 21 ಉದ್ಯಾನಗಳಿವೆ. ಈ ಜಿಮ್‌ಗೆ ಸಿಗುವ ಪ್ರತಿಕ್ರಿಯೆಯನ್ನು ನೋಡಿ ಉಳಿದ ಉದ್ಯಾನಗಳಲ್ಲೂ ಇದೇ ಮಾದರಿಯ ಬಯಲು ಜಿಮ್‌ಗಳನ್ನು ಆರಂಭಿಸುವ ಯೋಜನೆ ರೂಪಿಸಲಿದ್ದೇವೆ. ಬೆಂಗಳೂರು ಸಕ್ಕರೆ ಕಾಯಿಲೆ ಪೀಡಿತರ ನಗರವಾಗುತ್ತಿದೆ. ಕಾಯಿಲೆಗೆ ತುತ್ತಾದವರು ವಾಕ್ ಮಾಡಲೇಬೇಕು, ಅದಕ್ಕಾಗಿಯಾದರೂ ಉದ್ಯಾನಗಳಿಗೆ ಬರುತ್ತಾರೆ. ಅಲ್ಲದೇ ಇಂದು ಆರೋಗ್ಯದ ಮೇಲಿನ ಕಾಳಜಿ ಹೆಚ್ಚಾಗುತ್ತಿದೆ.
ಯುವಕರೂ ಹೆಚ್ಚು ಹಣ ಕೊಟ್ಟು ಮಲ್ಟಿಜಿಮ್‌ಗಳಿಗೆ ಹೋಗುತ್ತಿದ್ದಾರೆ. ದುಬಾರಿ ಶುಲ್ಕ ಕಟ್ಟಲಾಗದವರು ಅಂಥ ಜಿಮ್‌ಗಳಿಗೆ ಹೋಗಲಾರರು. ಆದ್ದರಿಂದ ಎಲ್ಲರಿಗೂ ಅನುಕೂಲವಾಗಲೆಂದು ಈ ಬಯಲು ಜಿಮ್ ಮಾಡಿದ್ದೇವೆ.’ ಎನ್ನುತ್ತಾರೆ ನಾಗಪುರ ವಾರ್ಡ್‌ನ ಪಾಲಿಕೆ ಸದಸ್ಯ ಎಸ್.ಹರೀಶ್
‘ಒಮ್ಮೆ ಸಿಂಗಪುರಕ್ಕೆ ಹೋಗಿದ್ದಾಗ ಅಲ್ಲಿನ ಉದ್ಯಾನವೊಂದರಲ್ಲಿ ಬಯಲು ಜಿಮ್ ನೋಡಿದೆ. ಬಹಳಷ್ಟು ಉದ್ಯಾನಗಳಲ್ಲಿ ಇಂಥ ಜಿಮ್‌ಗಳನ್ನು ಮಾಡಿದ್ದಾರೆ. ಹಾಗಾಗಿ ನಮ್ಮಲ್ಲೂ ಈ ಜಿಮ್‌ಗಳನ್ನು ಮಾಡಬೇಕೆಂಬ ಬಯಕೆಯಿಂದ ಆರಂಭಿಸಿದ್ದೇವೆ. ಕಬ್ಬನ್ ಉದ್ಯಾನದಲ್ಲಿರುವ ಬ್ರಿಟಿಷರ ಕಾಲದ ಪೊಲೀಸ್ ಬ್ಯಾಂಡ್ ಸ್ಟಾಂಡ್ ಮಾದರಿಯಲ್ಲಿ ನಗೆ ಚಾವಣಿಯನ್ನು ನಿರ್ಮಾಣ ಮಾಡುತ್ತಿದ್ದೇವೆ, ನೆಲಕ್ಕೆ ಆಕ್ಯುಪ್ರೆಶರ್ ಟೈಲ್ಸ್ ಅಳವಡಿಸಲಾಗುತ್ತದೆ. ಬಯಲು ಜಿಮ್ ಹಾಗೂ ನಗೆ ಚಾವಣಿಯಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಬಯಲು ಜಿಮ್ ಬಳಸಲು ಜನ ಯಾವುದೇ ಶುಲ್ಕ ತೆರಬೇಕಿಲ್ಲ’ ಎನ್ನುವುದು ಹರೀಶ್ ವಿವರಣೆ.
‘ಲೆಗ್ ಪ್ರೆಸ್’, ‘ಫನ್ ವಾಕರ್’, ‘ಸೈಕ್ಲಿಂಗ್’, ‘ಶೋಲ್ಡರ್ ಪ್ರೆಸ್’, ‘ಸ್ಟೆಪ್ ಟ್ರೈನರ್’, ‘ಚೆಸ್ಟ್ ಪ್ರೆಸ್’ ಸೇರಿದಂತೆ ಒಟ್ಟು 11 ಜಿಮ್ ಪರಿಕರಗಳಿವೆ. ಬೆಳಿಗ್ಗೆ 5.50ರಿಂದ 11 ಹಾಗೂ ಸಂಜೆ 4ರಿಂದ 9ರವರೆಗೆ ಬಯಲು ಜಿಮ್‌ನಲ್ಲಿ ಕಸರತ್ತು ಮಾಡಬಹುದು.
ವಿವೇಕಾನಂದ ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯರು ಈ ಜಿಮ್‌ಗೆ ಬರುವವರಿಗೆ ಸಹಾಯ ಮಾಡುತ್ತಾರೆ. ಜಿಮ್ ಸಾಧನಗಳ ಕಂಪೆನಿಯವರೇ ಮೂರು ವರ್ಷ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ನಂತರ ಖಾಸಗಿಯವರಿಗೆ ನಿರ್ವಹಣೆಯ ಹೊಣೆ ವಹಿಸಿಕೊಡುವುದಾಗಿ ಹೇಳುತ್ತಾರೆ ಹರೀಶ್.
ದಿನಕ್ಕೆ 750ರಿಂದ ಒಂದು ಸಾವಿರ ಮಂದಿ ಬರುವ ಈ ಉದ್ಯಾನಕ್ಕೆ ಬಯಲು ಜಿಮ್‌ನಿಂದ ನೂತನ ಮೆರುಗು ಬಂದಿದೆ.
ಜನ ಹೀಗಂತಾರೆ
‘ಈ ಉದ್ಯಾನಕ್ಕೆ 20 ವರ್ಷದಿಂದ ಬರುತ್ತಿದ್ದೇನೆ. ನನಗೀಗ 68 ವರ್ಷ. ಹೃದಯ ಶಸ್ತ್ರ ಚಿಕಿತ್ಸೆಯಾಗಿದೆ. ಸಣ್ಣಪುಟ್ಟ ವ್ಯಾಯಾಮಗಳನ್ನಷ್ಟೇ ಮಾಡಬಹುದು. ವಾಕಿಂಗ್ ಜೊತೆಗೆ ಇಲ್ಲಿನ ಜಿಮ್‌ನಲ್ಲೂ ಲಘು ವ್ಯಾಯಾಮ ಮಾಡಲು ಅನುಕೂ ಲವಾಗಿದೆ’ ಎನ್ನುತ್ತಾರೆ ನಾಗಪುರದ ಅಣ್ಣಯ್ಯಪ್ಪ. ‘ನಮ್ಮ ಮನೆ ಶಂಕರಮಠದಲ್ಲಿದೆ. ಇಲ್ಲಿಗೆ ವಾಕಿಂಗ್‌ಗೆ ಬರುತ್ತೇನೆ. ಉದ್ಯಾನದಲ್ಲೇ ಬಯಲು ಜಿಮ್ ಸಾಧನಗಳನ್ನು ಅಳವಡಿಸಿರುವುದರಿಂದ ಇನ್ನಷ್ಟು ಸಮಯ ಜಿಮ್‌ಗಾಗಿ ಮೀಸಲಿಡುತ್ತೇನೆ. ಸೈಕ್ಲಿಂಗ್ ಸಾಧನದಲ್ಲಿ ವ್ಯಾಯಾಮ ಮಾಡಲು ಮುಂದಾದರು’ ಗೃಹಿಣಿ ಸಂಗೀತಾ.
