ಕರ್ನಾಟಕ

ವಿಜಯಪುರದಲ್ಲಿ ಶತಮಾನದ ಗರಿಷ್ಠ ಚಳಿ; ಚಳಿಗೆ ರಾಜ್ಯವೇ ಗಡಗಡ: ಇನ್ನೂ ಮೂರ್ನಾಲ್ಕು ದಿನ ಥಂಡಾ, ಥಂಡಾ

Pinterest LinkedIn Tumblr

48ir8prq

ವಿಜಯಪುರ: ‘ಬಿಸಿಲ ನಾಡು’ ಎಂಬ ಹಣೆ­ಪಟ್ಟಿ ಹೊತ್ತಿರುವ ವಿಜಯಪುರ ಜಿಲ್ಲೆಯಲ್ಲಿ ಶತಮಾನದ ಇತಿಹಾಸ­ದಲ್ಲಿ ಮೊತ್ತ ಮೊದಲ ಬಾರಿಗೆ ಮಂಗಳ­ವಾರ ಕನಿಷ್ಠ ತಾಪಮಾನ (6.4 ಡಿಗ್ರಿ ಸೆಲ್ಸಿಯಸ್‌) ದಾಖಲಾಗಿದೆ.

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಚಳಿ ಹಾಗೂ ಶೀತಗಾಳಿಗೆ ಜನತೆ ತತ್ತ­ರಿಸಿದ್ದು, ಉತ್ತರ ಭಾರತದ ಚಳಿಯ ಅನು­ಭವ ಬಿಸಿಲ ನಾಡಿನಲ್ಲಿ ಆಗು­ತ್ತಿದೆ.  ರಾತ್ರಿ, ಮುಂಜಾನೆ–ಮುಸ್ಸಂಜೆ ಗುಂಪು­ಗೂಡಿ ಬೆಂಕಿ ಹಾಕಿ, ಮೈ ಕಾಯಿಸಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ನಗರದ ಹೊರವಲಯದಲ್ಲಿರುವ ಹಿಟ್ನಳ್ಳಿ ಕೃಷಿ ಮಹಾ­ವಿದ್ಯಾಲಯದಲ್ಲಿ ಹವಾಮಾನ ಮುನ್ಸೂಚನಾ ಘಟಕ 15 ವರ್ಷಗಳಿಂದ ಕಾರ್ಯ ನಿರ್ವ­ಹಿ­ಸು­ತ್ತಿದೆ. ‘ಜನವರಿಯಲ್ಲಿ ದಾಖಲಾ­ಗಿ­ರುವ ಕನಿಷ್ಠ ತಾಪಮಾನದಲ್ಲಿ ಮಂಗಳ­­­ವಾರ ದಾಖ­ಲಾದ 6.4 ಡಿಗ್ರಿ ಸೆಲ್ಸಿಯಸ್‌ ತಾಪಮಾನವೇ ಅತಿ ಕಡಿಮೆ’ ಎಂದು ಕೇಂದ್ರದ ಮುಖ್ಯಸ್ಥ, ಕೃಷಿ ಹವಾಮಾನ ತಜ್ಞ ಎಚ್‌.­ವೆಂಕ­ಟೇಶ್‌  ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ ಶನಿವಾರದಿಂದಲೇ ಕನಿಷ್ಠ ತಾಪಮಾನ ದಾಖಲಾಗು­ತ್ತಿದ್ದು, ಇನ್ನೂ 2–3 ದಿನ ಮುಂದು­ವ­ರಿ­ಯುವ ಸಾಧ್ಯತೆ ಇದೆ. ಇದು 3–4 ದಿನ ಹೀಗೆಯೇ ಮುಂದುವರಿದರೆ ಹಿಂಗಾರಿ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ’ ಎಂದು ತಿಳಿಸಿದ್ದಾರೆ.

‘ಜ.10ರಂದು ಶನಿವಾರ ಏಕಾಏಕಿ 6.7 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪ­ಮಾನ ದಾಖಲಾಗುವ ಮೂಲಕ ಶತ­ಮಾನದ ಇತಿಹಾಸದಲ್ಲಿ ಕನಿಷ್ಠ ತಾಪ­ಮಾನ ದಾಖಲಾಗಿತ್ತು. ಭಾನು­ವಾರ 7.1, ಸೋಮವಾರ 7.5 ಡಿಗ್ರಿ ಸೆಲ್ಸಿ­ಯಸ್‌ ಕನಿಷ್ಠ ತಾಪಮಾನ ದಾಖಲಾ­ಗಿತ್ತು.

ಹವಾಮಾನ ಇಲಾಖೆಯ ದಾಖ­­ಲೆ­ಗಳಲ್ಲಿ ಕನಿಷ್ಠ ತಾಪಮಾನ ಸುಮಾರು 125 ವರ್ಷಗಳ ಹಿಂದೆ ದಾಖಲಾಗಿತ್ತು. ಆದರೆ, ಹಿಟ್ನಳ್ಳಿಯಲ್ಲಿ ಹವಾಮಾನ ಘಟಕ ಆರಂಭಗೊಳ್ಳುವ ಮುನ್ನ ನಗರ­ದಲ್ಲಿಯೇ ಹವಾಮಾನ ದಾಖಲಿಸ­ಲಾಗುತ್ತಿತ್ತು. ನಗರದ ಒಳ­ಭಾಗದ ಕನಿಷ್ಠ ತಾಪಮಾನ ಹೊರ­ವ­ಲ­ಯ­ದ ಪ್ರಮಾ­ಣ­ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದಾಖ­ಲಾ­ಗುತ್ತದೆ’ ಎಂದು ವೆಂಕಟೇಶ್‌ ಸ್ಪಷ್ಟಪಡಿ­ಸಿದರು.

ಚಳಿಗೆ ರಾಜ್ಯವೇ ಗಡಗಡ: ಇನ್ನೂ ಮೂರ್ನಾಲ್ಕು ದಿನ ಥಂಡಾ, ಥಂಡಾ
ಬೆಂಗಳೂರು/ವಿಜಯಪುರ: ಸಂಕ್ರಾಂತಿ ಮುನ್ನ ರಾಜ್ಯದಲ್ಲಿ ತೀವ್ರ ಶೀತಗಾಳಿ ಬೀಸುತ್ತಿದ್ದು, ಥರಗುಡುವ ಚಳಿಗೆ ಜನ ತತ್ತರಿಸುತ್ತಿದ್ದಾರೆ. ಅದರಲ್ಲೂ ಬಿಸಿಲನಾಡು ಎನಿಸಿರುವ ವಿಜಯಪುರದಲ್ಲಿ ಶತಮಾನದಲ್ಲೇ ಕಂಡರಿಯದ ದಾಖಲೆ ಪ್ರಮಾಣದ ಮೈಕೊರೆಯುವ ಚಳಿ ಕಂಡುಬಂದಿದೆ. ಹಾವೇರಿ, ಧಾರವಾಡ ಸೇರಿದಂತೆ ಇತರೆ ಜಿಲ್ಲೆಗಳಲ್ಲಿಯೂ ಉಷ್ಣಾಂಶ ಕುಸಿದಿದೆ.

ದಿಲ್ಲಿ ಸೇರಿದಂತೆ ಉತ್ತರ ಭಾರತದಲ್ಲಿ ಕಾಣುವಂತೆ ವಿಜಯಪುರದಲ್ಲಿ 6.4 ಡಿಗ್ರಿ ಸೆಲ್ಷಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಇದು 123 ವರ್ಷಗಳ ದಾಖಲೆ ಎಂದು ಹೇಳಲಾಗಿದೆ. ಬೆಳಗಾವಿ, ಹಾವೇರಿ, ಧಾರವಾಡ, ಚಾಮರಾಜನಗರ ಹಾಗೂ ಬೆಂಗಳೂರಿನಲ್ಲಿಯೂ ಚಳಿಯ ಪ್ರಮಾಣ ಜೋರಾಗಿದೆ.

ಒಂದು ವಾರದಿಂದ ರಾಜ್ಯದಲ್ಲೆಡೆ ಉಷ್ಣಾಂಶ ತೀವ್ರ ಕುಸಿದು ಶೀತಗಾಳಿ ಬೀಸುತ್ತಿದೆ. ತೀವ್ರ ಚಳಿಗೆ ಸದಾ ಬೆಂಕಿ ಮುಂದೆ ಕುಳಿತು ಮೈ ಕಾಯಿಸಿಕೊಳ್ಳುವಂತಾಗಿದೆ. ಮನೆಯಿಂದ ಹೊರಬಂದರೆ ಬೆಚ್ಚನೆಯ ಉಡುಪುಗಳು ಅನಿವಾರ್ಯ ಎನ್ನುವಂತಾಗಿದೆ. ದಕ್ಷಿಣ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ತೀವ್ರವಾದ ಶೀತಗಾಳಿ ಇದ್ದರೆ, ಕರಾವಳಿಯಲ್ಲಿ ಸಾಮಾನ್ಯ ಉಷ್ಣಾಂಶ ಇದೆ. ಮಧ್ಯಾಹ್ನದ ವೇಳೆ ಬಿಸಿಲು ಇದ್ದರೂ ಸಹ ಸಂಜೆಯಾಗುತ್ತಿದ್ದಂತೆ ತಂಡಿ ಗಾಳಿ ಬೀಸಲು ಆರಂಭಿಸುತ್ತದೆ.

ಡಿಸೆಂಬರ್‌ನ ಕೊನೆಯ ವಾರದಲ್ಲಿ ಉತ್ತರ ಒಳನಾಡಿನ ಒಂದೆರಡು ಜಿಲ್ಲೆಗಳಲ್ಲಿ ಶೀತಗಾಳಿ ಬೀಸಿತ್ತು. ತದನಂತರ ಕೆಲವೆಡೆ ತುಂತುರು ಮಳೆಯಾದ್ದರಿಂದ ಉಷ್ಣಾಂಶದಲ್ಲಿ ಏರಿಕೆ ಆಗಿತ್ತು. ಆದರೀಗ ಮೋಡಗಳು ಇಲ್ಲದಿರುವುದು ಮತ್ತು ಉತ್ತರದಿಂದ ಗಾಳಿ ಬೀಸುತ್ತಿರುವುದರಿಂದ ಥಂಡಿ ಗಾಳಿ ತೀವ್ರವಾಗುತ್ತಿದೆ. ಈ ಮಧ್ಯೆ ಗುಜರಾತ್‌ನಲ್ಲಿ ವಾಯು ಒತ್ತಡ ಹೆಚ್ಚಾಗಿರುವುದರಿಂದಲೂ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಥಂಡಿ ಗಾಳಿ ಹೆಚ್ಚಾಗಿರುವುದಕ್ಕೆ ಕಾರಣವಾಗಿದೆ.

ಶತಮಾನದ ಚಳಿ
ಉತ್ತರ ಒಳನಾಡಿನ ವಿಜಯಪಯರದಲ್ಲಿ ಶತಮಾನದ ಚಳಿ ದಾಖಲಾಗುತ್ತಿದೆ. ಮಂಗಳವಾರ 6.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ಇದು 123 ವರ್ಷಗಳ ದಾಖಲೆ ನಿರ್ಮಿಸಿದೆ. ಜ.10ರಂದು ಇದೇ ವಿಜಯಪುರದಲ್ಲಿ 6.7 ಡಿಗ್ರಿ ಸೆಲ್ಷಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿ 123 ವರ್ಷಗಳ ದಾಖಲೆ ನಿರ್ಮಿಸಿತ್ತು. ಮೂರು ದಿನದಲ್ಲಿ ಮತ್ತೊಮ್ಮೆ ಉಷ್ಣಾಂಶ ಕುಸಿಯುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದೆ.

ದಿಲ್ಲಿ ಸೇರಿದಂತೆ ಉತ್ತರ ಭಾರತದಲ್ಲಿ ವಿಪರೀತ ಚಳಿಯಿರುತ್ತದೆ. ಆದರೆ ಪ್ರತಿವರ್ಷ ಚಳಿ ಸಾಮಾನ್ಯವಾಗಿದ್ದರಿಂದ ಅಲ್ಲಿನ ಜನತೆ ಬೆಚ್ಚನೆಯ ಉಡುಪು, ಆಹಾರ ಪದ್ಧತಿಯನ್ನು ಅನುಸರಿಸಿ ರಕ್ಷಣೆ ಪಡೆಯುತ್ತಾರೆ. ಆದರೆ, ವಿಜಯಪುರ ಜಿಲ್ಲೆಯಲ್ಲಿ ಏಕಾಏಕಿ ಮೈಕೊರೆವ ಚಳಿ ಕಾಣಿಸಿಕೊಂಡಿದ್ದರಿಂದ ರಕ್ಷಣೆಗೆ ಜನ ಪರದಾಡುತ್ತಿದ್ದಾರೆ. ಮೂಲೆ ಸೇರಿದ್ದ ಕಂಬಳಿ, ರಗ್ಗು, ಕೌದಿಗಳನ್ನು ಹೊರ ತೆಗೆದು ಬಳುಸುತ್ತಿದ್ದಾರೆ. ನಸುಕಿನ 5ಕ್ಕೆ ವಾಯುವಿಹಾರಕ್ಕೆ ತೆರಳುತ್ತಿದ್ದ ಜನತೆ ದಾಖಲೆ ಪ್ರಮಾಣದ ಚಳಿಯಿಂದಾಗಿ ಹೊರಬರುತ್ತಿಲ್ಲ.

ಇದಲ್ಲದೆ, ಮಂಗಳವಾರ ಹಾವೇರಿಯಲ್ಲಿ 7.4 ಡಿಗ್ರಿ ಸೆಲ್ಷಿಯಸ್ ಕನಿಷ್ಠ ಉಷ್ಣಾಂಶ ಇದ್ದು, 11 ವರ್ಷಗಳಲ್ಲೇ ಅತ್ಯಂತ ಕಡಿಮೆ ಉಷ್ಣಾಂಶ ದಾಖಲಾಗಿದೆ. ಧಾರವಾಡದಲ್ಲಿಯೂ ಸಹ 8.5 ಡಿಗ್ರಿ ಸೆಲ್ಷಿಯಸ್‌ಗೆ ಕನಿಷ್ಠ ಉಷ್ಣಾಂಶ ಇಳಿಕೆಯಾಗಿದ್ದು ಇಲ್ಲೂ ಸಹ 11 ವರ್ಷಗಳ ದಾಖಲೆ ನಿರ್ಮಿಸಿದೆ.

ರಾಜಧಾನಿ ಬೆಂಗಳೂರಿನಲ್ಲಿಯೂ ಮೈಕೊರೆಯುವ ಚಳಿ ಇದೆ. ಸಂಜೆಯಾಗುತ್ತಿದ್ದಂತೆ ತಣ್ಣನೆ ಗಾಳಿಯಿಂದಾಗಿ ಮೈ ನಡುಗುವಂತಾಗುತ್ತದೆ. ನಗರದಲ್ಲಿ ಕನಿಷ್ಠ ಉಷ್ಣಾಂಶ 13.7 ಡಿಗ್ರಿ ಸೆಲ್ಷಿಯಸ್ ದಾಖಲಾಗಿದ್ದು, ಸರಾಸರಿಗಿಂತಲೂ 1 ಡಿಗ್ರಿ ಸೆಲ್ಷಿಯಸ್ ಇಳಿಕೆಯಾಗಿದೆ. ಮುಂದಿನ ಎರಡು ಮೂರು ದಿನ ಇದೇ ರೀತಿ ತೀವ್ರವಾದ ಚಳಿ ಮುಂದುವರಿಯುತ್ತದೆ. ಬೆಳಗಿನ ಜಾವ ಇಬ್ಬನಿ ಇರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಏನಿದು ಶೀತಗಾಳಿ?
ಕನಿಷ್ಠ ಉಷ್ಣಾಂಶ ಪ್ರಮಾಣ 10 ಡಿಗ್ರಿ ಸೆಲ್ಷಿಯಸ್‌ಗಿಂತಲೂ ಕಡಿಮೆ ಮುಂದುವರಿದರೆ ಅಲ್ಲಿ ಶೀತಗಾಳಿ ಬೀಸುತ್ತಿದೆ ಎಂದು ಹೇಳಲಾಗುತ್ತದೆ. ಮಳೆ ಮೋಡಗಳು ಇದ್ದಾಗ ಸಮುದ್ರದಿಂದ ಗಾಳಿ ಬೀಸುತ್ತದೆ. ಆಗ ಉಷ್ಣಾಂಶ ಏರಿಕೆಯಲ್ಲಿಯೇ ಇರುತ್ತದೆ. ಒಣಹವೆ ಮುಂದುವರಿದಾಗ ಉತ್ತರದಿಂದ ಅಂದರೆ ಭೂಮೇಲ್ಮೈ ಭಾಗದಿಂದ ಬೀಸುವುದು ಶೀತಗಾಳಿಗೆ ಕಾರಣವಾಗುತ್ತದೆ. ಇದರಿಂದ ಉಷ್ಣಾಂಶ ತೀವ್ರವಾಗಿ ಕಡಿಮೆಯಾಗುತ್ತದೆ. ಡಿಸೆಂಬರ್, ಜನವರಿಯಲ್ಲಿ ಹೆಚ್ಚಿನ ಶೀತಗಾಳಿ ಕಾಣಿಸಿಕೊಳ್ಳುತ್ತದೆ.

”ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡಿನ ಹೆಚ್ಚಿನ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 10 ಡಿಗ್ರಿ ಸೆಲ್ಷಿಯಸ್‌ಗಿಂತಲೂ ಕಡಿಮೆ ಇದ್ದು, ತೀವ್ರವಾದ ಶೀತಗಾಳಿ ಬೀಸುತ್ತಿದೆ. ಈ ಮಧ್ಯೆ ಗುಜರಾತ್ ಭಾಗದಲ್ಲಿ ವಾಯು ಒತ್ತಡ ಹೆಚ್ಚಾಗಿರುವುದೂ ಶೀತ ಗಾಳಿ ಬೀಸುತ್ತಿರುವುದಕ್ಕೆ ಕಾರಣ. ಇದೇ ರೀತಿ ಮೂರ‌್ನಾಲ್ಕು ದಿನ ಮುಂದುವರಿಯುತ್ತದೆ. ತದನಂತರ ಮಳೆ ಮೋಡಗಳು ಆಗಮಿಸುವ ನಿರೀಕ್ಷೆ ಇದ್ದು ಉಷ್ಣಾಂಶದಲ್ಲಿ ಏರಿಕೆಯಾಗುತ್ತದೆ”.
– ಬಿ.ಪುಟ್ಟಣ್ಣ, ಹವಾಮಾನ ಇಲಾಖೆ ನಿರ್ದೇಶಕ

Write A Comment