ಕರ್ನಾಟಕ

ಜಮೀನಿಗಾಗಿ ಕಿಡ್ನಿ ಮಾರಿದ ಮಹಿಳೆ: ಬಂದ ಹಣ ಲಂಚಕ್ಕೆ, ಕೋರ್ಟ್ ಫೀಸ್‌ಗೆ ಖರ್ಚಾಯ್ತು; ಭೂಮಿ ಮಾತ್ರ ದಕ್ಕಲಿಲ್ಲ

Pinterest LinkedIn Tumblr

l

ಮೈಸೂರು: ಅಪ್ಪ ಮಾಡಿಟ್ಟ ಭೂಮಿ ಯಾರದ್ದೋ ಪಾಲಾಗಿದೆ. ಅದನ್ನು ಉಳಿಸಿಕೊಳ್ಳಲು ಶತಪ್ರಯತ್ನ ನಡೆಸಿ, ಖರ್ಚಿನ ಬಾಬ್ತಿಗಾಗಿ ಕಿಡ್ನಿಯನ್ನೇ ಮಾರಿದ್ದಾಗಿದೆ. ಕೋರ್ಟ್ ಫೀಸು, ಲಂಚ ರುಷುವತ್ತಿಗಾಗಿ ಆ ಹಣವೂ ಕರಗಿದೆ. ಈಗ, ಕಿಡ್ನಿ ಇಲ್ಲದ ದೇಹ ಸೊರಗಿದೆ. ಹಣವೂ ಉಳಿದಿಲ್ಲ, ಭೂಮಿಯೂ ದಕ್ಕಿಲ್ಲ !

-ಇದು, ಜಮೀನನ್ನು ಉಳಿಸಿಕೊಳ್ಳಲೆಂದು ಮೂರು ವರ್ಷದ ಹಿಂದೆ ಸ್ವಂತ ಕಿಡ್ನಿಯನ್ನೇ ಮಾರಿ, ಹೋರಾಡಿದ ಮೈಸೂರು ತಾಲೂಕು ಕಾಳಸಿದ್ದನ ಹುಂಡಿಯ ಅರವತ್ತರ ಪ್ರಾಯದ ಚಿಕ್ಕತಾಯಮ್ಮ ಎಂಬ ಹಿಂದುಳಿದ ವರ್ಗದ ಮಹಿಳೆಯ ಕತೆ. ಭೂಮಿಗಾಗಿ ದೇಹದ ಅಂಗವನ್ನೇ ಮಾರಿ ಹೋರಾಡಿದರೂ ಪಿತ್ರಾರ್ಜಿತ ಆಸ್ತಿಯ ಗೊಂದಲ ಬಗೆಹರಿದಿಲ್ಲ. ವಯಸ್ಸಾದ ತಾಯಿ, ಅಕ್ಕ, ತಂಗಿಯರನ್ನೊಳಗೊಂಡ ಕಡುಕಷ್ಟದ ಬದುಕು. ಆದರೂ, ಈಕೆಯದ್ದು ”ಕೇಸು ಬಗೆಹರಿದು ಜಮೀನು ನಮ್ಮಂತೆ ಆಗಬಹುದು” ಎನ್ನುವ ನಿರೀಕ್ಷೆ.

ಜಮೀನು,ವ್ಯಾಜ್ಯ:
ಚಿಕ್ಕತಾಯಮ್ಮಗೆ ಶ್ರೀರಂಗಪಟ್ಟಣ ತಾಲೂಕಿನ ಬೆಳವಾಡಿಯಲ್ಲಿ ಪಿತ್ರಾರ್ಜಿತವಾಗಿ ಮೂರು ಬೇರೆ ಬೇರೆ ಸರ್ವೇ ನಂಬರ್‌ಗಳಲ್ಲಿ ಜಮೀನಿದೆ. ಆಕೆಯ ಪ್ರಕಾರ 18 ಎಕರೆ. ಇದರಲ್ಲಿ 38 ಗುಂಟೆ ರಸ್ತೆಗೆ ಸ್ವಾಧೀನವಾಗಿದೆ. ತಂದೆ ತೀರಿ ಹೋದ ಕೆಲ ವರ್ಷದ ನಂತರ ತಾಯಿ, ಸಹೋದರಿಯರ ಹೆಸರಿಗೆ ಖಾತೆ ಬದಲು ಮಾಡಿಕೊಡುವಂತೆ ತಾಲೂಕು ಕಚೇರಿಗೆ ಅರ್ಜಿ ನೀಡಿದಾಗ, ಅದು ಬೇರೆಯವರ ಹೆಸರಿಗೆ ಖಾತೆಯಾಗಿರುವುದು ಬಯಲಾಗಿದೆ. ಗ್ರಾಮದ ಜವರೇಗೌಡ ಎನ್ನುವವರ ಹೆಸರಿನಲ್ಲಿ 3.39 ಎಕರೆ ಜಮೀನು ಇದ್ದರೆ, ಇನ್ನಷ್ಟು ಜಮೀನಿನ ಬಗ್ಗೆ ಸಮರ್ಪಕ ಮಾಹಿತಿ ಸಿಕ್ಕಿಲ್ಲ. ಪಂಚಾಯಿತಿ ಕಚೇರಿ, ತಾಲೂಕು ಕಚೇರಿ, ಡಿಸಿ ಕಚೇರಿ ಅಲೆದರೂ ಚಿಕ್ಕತಾಯಮ್ಮಗೆ ಸಿಕ್ಕಿದ್ದು ಬರೀ ಹಾರಿಕೆ ಉತ್ತರ. ಹತ್ತಕ್ಕೂ ಹೆಚ್ಚು ವರ್ಷದಿಂದ ಇವರು ಕಚೇರಿಗಳಿಗೆ,ಅಧಿಕಾರಸ್ಥರ ಮನೆ ಬಾಗಿಲಿಗೆ ಪಾದ ಸವೆಸಿ ಸಾಕಷ್ಟು ಹಣ ಕಳೆದುಕೊಂಡಿದ್ದಾರೆ.

ಬೆಂಗ್ಳೂರಲ್ಲಿ ಕಿಡ್ನಿ ಮಾರಿದೆ:
”ಬೆಂಗ್ಳೂರಲ್ಲಿ ಕೃಷ್ಣಮೂರ್ತಿ ಅನ್ನೋರ ಮನೆಯಲ್ಲಿ ಕೆಲಸ ಮಾಡ್ತಿದ್ದೆ. ಕಿಡ್ನಿ ಬೇಕು ಅಂತ ಪೇಪರ್‌ನಲ್ಲಿ ಹಾಕಿದ್ರು. ಅದನ್ನು ನೋಡ್ಕೊಂಡು ಹೋಗಿ, ರಾಜಾಜಿನಗರದ ಆಸ್ಪತ್ರೆಯೊಂದರಲ್ಲಿ ಕಿಡ್ನಿ ಕೊಟ್ಟೆ. 80 ಸಾವಿರ ರೂ. ಕೈಗೆ ಸಿಕ್ತು. ಕೆಲಸ ಮಾಡ್ತಿದ್ದ ಮನೆಯವರು,’ಕಿಡ್ನಿ ಕೊಡ್ಬೇಡ. ಮುಂದೆ ತೊಂದ್ರೆ ಆಯ್ತದೆ’ ಅಂತ ಹೇಳಿದ್ರು. ಆದ್ರೆ, ನನ್ನ ಜಮೀನು ಉಳಿಸಿಕೊಳ್ಳೋಕೆ ಬ್ಯಾರೆ ದಾರೀನೆ ಇರ‌್ನಿಲ್ಲ. ಈಗ್ಲೂ ತೊಂದ್ರೆ ಅನುಭವಿಸ್ತಿವ್ನಿ. ಜಮೀನು ಸರ್ವೇ ಮಾಡಿಸ್ಕಳಕ್ಕೆ ಲಂಚ ಕೊಟ್ಟೆ, ಕೋರ್ಟ್‌ಗೆ 20 ಸಾವಿರ, 15 ಸಾವಿರ ರೂ ಕಟ್ದೆ. ಆದ್ರೆ, ಹಣ ಹೊಯ್ತಷ್ಟೆ. ಕೆಲ್ಸ ಏನೂ ಆಗ್ನಿಲ್ಲ. ಮೊದಲು ನೇಮಿಸಿಕೊಂಡ ವಕೀಲನೂ ಸರಿಯಾಗಿ ಕೆಲಸ ಮಾಡಿಕೊಡಲಿಲ್ಲ. ಈಗ ತಹಸಿಲ್ದಾರ್ ದೇವ್ರ ರೀತಿ ಬಂದು ಒಳ್ಳೆ ತರ ಮಾತನಾಡ್ತವ್ರೇ. ಅವ್ರಿಂದ್ಲೇ ಒಳ್ಳೇದಾಯ್ತದೇ ಎಂದು ಕಾಯ್ತವ್ನಿ” ಎಂದು ನಿಟ್ಟುಸಿರು ಬಿಟ್ಟರು ಚಿಕ್ಕತಾಯಮ್ಮ.

ಲೋಕಾಯುಕ್ತಕ್ಕೂ ದೂರು ನೀಡಿರುವ ಈಕೆ, ಈಚೆಗೆ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿ ಬಿದ್ದ ಗ್ರಾಮಲೆಕ್ಕಿಗ ‘ಕೋಟಿ ದೊಡ್ಡಯ್ಯ’ನ ಮೇಲೆ ಸಿಡಿದು ಬೀಳುತ್ತಾರೆ. ”ಅವ್ನಿಂದ್ಲೇ ಇಷ್ಟೆಲ್ಲ ಆಗಿದ್ದು” ಎಂದು ದೂರುತ್ತಾರೆ. ಅವರ ಹೊಟ್ಟೆಯ ಎಡ ಭಾಗದಲ್ಲಿ ಕೊಯ್ದ ಗುರುತಿದೆ. ಅದನ್ನವರು ಕಿಡ್ನಿ ತೆಗೆದ ಜಾಗ ಎಂದು ತೋರಿಸುತ್ತಾರೆ. ಆದರೆ, ಮನೆಯರಿಗೆ ತಿಳಿದ್ರೆ ನೊಂದುಕೊಂಡಾರು ಎನ್ನುವ ಭಯ, ಊರವರಿಗೆ ಗೊತ್ತಾದ್ರೆ ಇನ್ನಷ್ಟು ಕಷ್ಟ ಆದೀತು ಎಂದು ಆಗಲೇ ಆಸ್ಪತ್ರೆ ದಾಖಲೆಗಳನ್ನೆಲ್ಲ ಹರಿದು ಹಾಕಿದ್ದಾರಂತೆ.

ಹೆಣ್ಣು ಮಕ್ಕಳ ಕುಟುಂಬ:
ಮೈಸೂರಿನಿಂದ ಹತ್ತು ಕಿ.ಮೀ. ದೂರದಲ್ಲಿರುವ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಕ್ಕದ ಊರು ಕಾಳಸಿದ್ದನಹುಂಡಿ ಗ್ರಾಮದ ಕುಳ್ಳಚಿಕ್ಕನ ಮಾದೇಗೌಡರಿಗೆ ಚಿಕ್ಕತಾಯಮ್ಮ ಸೇರಿ ನಾಲ್ಕು ಹೆಣ್ಣು ಮಕ್ಕಳು. ಯಾರೂ ಶಾಲೆ ಮುಖ ನೋಡಿಲ್ಲ. ತಕ್ಕ ಮಟ್ಟಿಗೆ ಬದುಕು ಕಟ್ಟಿಕೊಳ್ಳುವುದೂ ಸಾಧ್ಯವಾಗಿಲ್ಲ. ಒಬ್ಬೊಬ್ಬರದ್ದು ಒಂದೊಂದು ದುಃಖದ ಕತೆ. ಇದ್ದುರಲ್ಲೇ ಸ್ವಲ್ಪ ತಿಳಿವಳಿಕಸ್ಥೆ ಚಿಕ್ಕತಾಯಮ್ಮ. ಈ ಕಾರಣಕ್ಕೇ, ಊರ ಜಮೀನಿನ ವಿಚಾರದಲ್ಲಿ ವೃದ್ಧ ತಾಯಿ, ಸಹೋದರಿಯರನ್ನು ಕಟ್ಟಿಕೊಂಡು ಹೋರಾಟ ಮುಂದುವರಿಸಿದ್ದಾರೆ.

ಸಿದ್ರಾಮಣ್ಣನ್ನ ನೋಡ್ಲಿಕ್ಕಾಗ್ಲಿಲ್ಲ…
”ಊರಲ್ಲೂ ಕೆಲವರು ಕಿತಾಪತಿ ಮಾಡಿ ತೊಂದರೆ ಕೊಟ್ಟಿದ್ದಾರೆ. ಹೆಣ್ ಮಕ್ಳು ಏನ್‌ಮಾಡ್ತಾರೆ ಬಿಡಿ ಎಂದು ಹೀಯಾಳಿಸಿದ್ದಾರೆ. ಬ್ಯಾಸ್ರ ಮಾಡಿಕೊಳ್ಳದೆ ಹೋರಾಟ ಮಾಡ್ತಿವ್ನಿ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮೈಸೂರು,ಬೆಂಗಳೂರಿಗೆ ಹೋಗಿ ಅರ್ಜಿ ನೀಡಿದ್ದೆ. ಈಗ ಸಿದ್ದರಾಮಯ್ಯ ಅವರಿಗೂ ನೀಡಿವ್ನಿ. ಆದರೆ ಏನೂ ಆಗ್ನಿಲ್ಲ. ಬೆಂಗಳೂರಿಗೆ ಹೋದ್ರೂ ದೊಡ್ಡವರ‌್ನ ಭೇಟಿ ಮಾಡೋಕೆ ಅವಕಾಶ ಕೊಡದೆ ಹೆಣ್ ಹೆಂಗಸು ಎಂದು ಓಡಿಸ್ತಾರೆ. ನಮ್ಮವರೇ ಆದ ಸಿದ್ರಾಮಣ್ಣನ್ನ ನೋಡಲೂ ಅವಕಾಶ ಸಿಕ್ತಿಲ್ಲ. ಮಂಡ್ಯದ ಎಲ್ಲಾ ಅಧಿಕಾರಿಗಳು, ರಾಜಭವನ, ಲೋಕಾಯುಕ್ತಕ್ಕೂ ದೂರು ನೀಡಿವ್ನಿ. ತಂದೆ ಇದ್ದಾಗ್ಲೂ ಕಿರುಕುಳ ನೀಡಿದ್ರೂ. ಈಗಲೂ ನಮ್ಗೆ ಇದ್ನೇ ಮಾಡ್ತಾವ್ರೇ, ಜೀವ ಹೋಗೋದ್ರೋಳಗೆ ನಮ್ ಜಮೀನು ನಮ್ಗೆ ಬರ‌್ಬೇಕು, ಅದಕ್ಕೆ ಇಷ್ಟೆಲ್ಲಾ ಹೋರಾಟ’ ಎಂದು ಕಣ್ಣೀರಾದರು ಚಿಕ್ಕತಾಯಮ್ಮ.
—–

ಶ್ರೀರಂಪಟ್ಟಣ ತಾಲೂಕಿನ ಬೆಳವಾಡಿ ಗ್ರಾಮದ 3.39 ಎಕರೆ ಭೂಮಿಯ ಕ್ರಯದ ವಿಚಾರವಾಗಿ ಚಿಕ್ಕತಾಯಮ್ಮ ದೂರು ನೀಡಿದ್ದಾಳೆ. ಈ ಜಮೀನನ್ನು ಕ್ರಯದ ಆಧಾರದ ಮೇಲೆ 1994-95ರಲ್ಲಿಯೇ ಅದೇ ಗ್ರಾಮದ ಜವರೇಗೌಡ ಎನ್ನುವವರಿಗೆ ಮ್ಯುಟೇಷನ್ ನಂತರ ಖಾತೆ ಮಾಡಿಕೊಡಲಾಗಿದೆ. ಜಮೀನು ವಿಚಾರವಾಗಿ ಉಪವಿಭಾಗಾಧಿಕಾರಿ ಹಾಗೂ ಸಿವಿಲ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರೆ ಕಾನೂನು ನೆರವು ನೀಡುವುದಾಗಿ ತಿಳಿಸಿದ್ದೇವೆ. ಮ್ಯುಟೇಷನ್ ರದ್ದಿಗೆ ಕಾನೂನಿನಲ್ಲಿ ಅವಕಾಶವಿದೆ. ಕ್ರಮಕ್ಕೆ ಸಂಬಂಧಿಸಿದ ವಸ್ತುಸ್ಥಿತಿ ತಿಳಿಯಬೇಕಾಗುತ್ತದೆ. ಬೇರೆ ಜಮೀನುಗಳ ಬಗ್ಗೆ ಯಾವುದೇ ದೂರು ಬಂದಿಲ್ಲ.
-ಎಂ.ಮಲ್ಲಿಕಾರ್ಜುನ, ತಹಸೀಲ್ದಾರ್, ಶ್ರೀರಂಗಪಟ್ಟಣ.

Write A Comment