ಅಂತರಾಷ್ಟ್ರೀಯ

ಚಾರ್ಲಿ ಹೆಬ್ಡೊ ದಾಳಿ: ಉಗ್ರ ಸಹೋದರರು ಖತಂ: ಮುದ್ರಣ ಘಟಕದಲ್ಲಿ ಅಡಗಿದ್ದ ಪಾತಕಿಗಳು ಪೊಲೀಸ್ ಗುಂಡಿಗೆ ಬಲಿ/ ಮಾರ್ಕೆಟ್ ಒತ್ತೆಸೆರೆಯೂ ತೆರವು

Pinterest LinkedIn Tumblr

paris

ಪ್ಯಾರಿಸ್ : ಚಾರ್ಲಿ ಹೆಬ್ಡೊ ನಿಯತಕಾಲಿಕದ ಕಚೇರಿ ಮೇಲೆ ದಾಳಿ ಮಾಡಿ 12 ಜನರನ್ನು ಕೊಂದ ಉಗ ್ರಸಹೋದರರ ಸವಾಲು ಅಂತ್ಯವಾಗಿದೆ.

ಡಮ್ಮರ್‌ಟಿನ್ ಗೊಲೆ ಪಟ್ಟಣದ ಮುದ್ರಣ ಘಟಕವನ್ನು ಒತ್ತೆಸೆರೆ ಇರಿಸಿಕೊಂಡಿದ್ದ ಉಗ್ರ ಸಹೋದರರಾದ ಶರೀಫ್ ಕೌಚಿ ಹಾಗೂ ಸಯೀದ್ ಅವರನ್ನು ಹೊಡೆದುರುಳಿಸುವಲ್ಲಿ ಯೋಧರು ಸಫಲರಾಗಿದ್ದಾರೆ.

ಇಷ್ಟಕ್ಕೆ ಪೊಲೀಸರ ಮುಂದಿರುವ ಸವಾಲು ಅಂತ್ಯಗೊಂಡಿರಲಿಲ್ಲ. ಗುರುವಾರ ಮಹಿಳಾ ಪೊಲೀಸ್ ಅಧಿಕಾರಿಯನ್ನು ಕೊಂದಿದ್ದ ಇನ್ನೊಬ್ಬ ಉಗ್ರ ಸೂಪರ್ ಮಾರ್ಕೆಟ್‌ಗೆ ನುಗ್ಗಿ ಅಲ್ಲದ್ದವರನ್ನು ಒತ್ತೆಯಿರಿಸಿಕೊಂಡಿದ್ದ. ಆತನನ್ನೂ ಕಮಾಂಡೊಗಳು ಕೊಂದು ಹಾಕಿ, ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ್ದಾರೆ.

ಬೆಳಗ್ಗೆಯಿಂದ ಪ್ಯಾರಿಸ್‌ನಲ್ಲಿ ರುದ್ರನಾಟಕವೇ ನಡೆದಿತ್ತು. ಬೆಳಗ್ಗೆ ಪೆಟ್ರೋಲ್ ಬಂಕ್‌ಗೆ ನುಗಿದ್ದ ಉಗ್ರ ಸಹೋದರರು ಅಲ್ಲಿದ್ದ ಸಮಸ್ತವನ್ನೂ ದೋಚಿದ್ದರು. ವಿಷಯ ತಿಳಿಯುತ್ತಿದ್ದಂತೆ ಅವರನ್ನು ಸೇನಾ ಯೋಧರು ಬೆನ್ನಟ್ಟಿದರು. ಆದರೆ, ಅವರಿಂದ ತಪ್ಪಿಸಿಕೊಂಡು ಪಲಾಯನ ಮಾಡಿದ ಉಗ್ರರು ಮುದ್ರಣ ಘಟಕಕ್ಕೆ ನುಗ್ಗಿ ಅಲ್ಲಿದ್ದವರನ್ನು ಒತ್ತೆಯಿರಿಸಿಕೊಂಡ್ಡಿದ್ದರು. ಹಲವು ಗಂಟೆಗಳ ಕಾರ‌್ಯಾಚರಣೆ ಬಳಿಕ ಉಗ್ರರಿಬ್ಬರನ್ನೂ ಹೊಡೆದುರುಳಿಸುವಲ್ಲಿ ಸೇನಾ ಕಮಾಂಡೊಗಳು ಸಫಲರಾದರು.

ಸೂಪರ್ ಮಾರ್ಕೆಟ್ ಒತ್ತೆಸೆರೆ ಸುಖಾಂತ್ಯ
ಇನ್ನೊಂದತ್ತ ನಗರದ ಕೊಶೆರ್ ಸೂಪರ್ ಮಾರ್ಕೆಟ್‌ನೊಳಕ್ಕೆ ನುಗ್ಗಿದ್ದ ಪೊಲೀಸ್ ಅಧಿಕಾರಿ ಹಂತಕ ಅಲ್ಲಿದ್ದವರನ್ನು ಒತ್ತೆಯಿರಿಸಿಕೊಂಡಿದ್ದ. ಪತ್ರಕರ್ತರ ಹಂತಕರನ್ನು ಸದೆಬಡಿದ ತಕ್ಷಣ ಇತ್ತ ಗಮನ ಹರಿಸಿದ ಕಮಾಂಡೊಗಳು, ಆತನನ್ನೂ ಸದೆಬಡಿದರು. ಮಾರುಕಟ್ಟೆಯಲ್ಲಿ ಗ್ರಾಹಕರು ಕಿಕ್ಕಿರಿದು ತುಂಬಿರುವಾಗಲೇ ಈ ಘಟನೆ ನಡೆದಿದೆ. ”ಬಂಧೂಕುಧಾರಿ ಮೊದಲು ಗುಂಡು ಹಾರಿಸಿದ. ನಂತರ ನಾನು ಯಾರು ಗೊತ್ತೆ? ಎಂದು ಅಬ್ಬರಿಸಿದ,” ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿ ಹತ್ಯೆಯಲ್ಲಿ ಒಟ್ಟು ಇಬ್ಬರು ಶಂಕಿತರಿದ್ದು ಒಬ್ಬ ಮಹಿಳೆಯೂ ಇದರಲ್ಲಿ ಶಾಮೀಲಾಗಿದ್ದಾಳೆ ಆಕೆಯನ್ನು ಅಮದಿ ಕೌಲಿಬಾಲಿ ಎಂದು ಗುರುತಿಸಲಾಗಿದೆ. ಸೂಪರ್ ಮಾರ್ಕೆಟ್ ಕಾರ‌್ಯಾಚರಣೆಯಲ್ಲಿ ಆಕೆಯೂ ಹತಳಾಗಿದ್ದಾಳೆಯೇ ಎಂಬುದು ಖಚಿತಪಟ್ಟಿಲ್ಲ.

ಉಗ್ರರ ಕಾರ‌್ಯಾಚರಣೆ ಹೀಗಿತ್ತು…
ಸಹೋದರರು ಮುದ್ರಣ ಘಟಕಕ್ಕೆ ನುಗ್ಗಿದರು. ಘಟಕದ ಮಾಲೀಕ ಡಿಡಿಯರ್‌ಗೆ ತಕ್ಷಣ ಇವರು ಯಾರು ಎಂಬುದು ಗೊತ್ತಾಗಲಿಲ್ಲ. ಏಕೆಂದರೆ ಸಹೋದರರಿಬ್ಬರು ಧರಿಸಿದ್ದ ಉಡುಪು ಫ್ರೆಂಚ್ ವಿಶೇಷ ಪಡೆಯ ಉಡುಪನ್ನು ಹೋಲುತ್ತಿತ್ತು. ಇವರಲ್ಲಿ ಒಬ್ಬಾತ ತನ್ನನ್ನು ಪೊಲೀಸ್ ಎಂದು ಪರಿಚಯಿಸಿಕೊಂಡ. ” ನೀನು ಇಲ್ಲಿಂದ ಹೊರಡು, ನಾಗರಿಕರನ್ನು ನಾವು ಕೊಲ್ಲುವುದಿಲ್ಲ ,” ಎಂದು ಹೇಳಿದ.ಡಿಡಿಯರ್ ಅಲ್ಲಿಂದ ಹೊರಬಿದ್ದ ಪೊಲೀಸರಿಗೆ ಸುದ್ದಿಮುಟ್ಟಿಸಿದ ಎನ್ನಲಾಗಿದೆ.

ಗುರುವಾರ ಈ ಪಟ್ಟಣದ ಪೆಟ್ರೋಲ್ ಸ್ಟೇಷನ್‌ವೊಂದರಲ್ಲಿ ಈ ಜೋಡಿ, ಬಂದೂಕು ತೋರಿಸಿ, ಬೆದರಿಸಿ ಇದ್ದಬದ್ದ ದುಡ್ಡನ್ನೆಲ್ಲ ದೋಚಿ ಪರಾರಿಯಾಗಿದ್ದರು. ನಾವು ಆತ್ಮಾಹುತಿ ಮಾಡಿಕೊಳ್ಳುವುದರ ಮೂಲಕ ಹುತಾತ್ಮರಾಗುತ್ತೇವೆ ಎಂದು ಅವರು ಸಂಧಾನಕಾರರಿಗೆ ಹೇಳಿದ್ದರು.

9 ಮಂದಿ ವಶಕ್ಕೆ
ಎರಡು ಪ್ರತ್ಯೇಕ ಸ್ಥಳಗಳಲ್ಲಿ ಉಗ್ರರು ಅಡಗಿಕೊಂಡು ಕೆಲವರನ್ನು ಒತ್ತೆ ಇರಿಸಿಕೊಂಡಿರುವ ಮಧ್ಯೆ ಶುಕ್ರವಾರ ಪೊಲೀಸರು ಕೌಚಿ ಸಹೋದರರ ಜತೆ ನಂಟಿದೆ ಎಂದು ನಂಬಲಾದ 9 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಉಗ್ರರು ಉಪಟಳವನ್ನು ತಡೆಯಲು ಭಾರಿ ಬಂದೋಬಸ್ತ್ ಮಾಡಲಾಗಿದೆ. ಆಯಕಟ್ಟಿನ ಜಾಗಗಳಲ್ಲಿ ವಿಶೇಷ ಪಡೆಗಳನ್ನು ನಿಯೋಜಿಸಲಾಗಿದೆ.
**

ಉಗ್ರ ಸೋದರರಿಗೆ ಅಮೆರಿಕದಲ್ಲಿ ನಿಷೇಧ ಉಗ್ರ ಸೋದರರಲ್ಲಿ ಕಿರಿಯವನಾದ ಶರೀಫ್‌ಗೆೆ ಹೆಣ್ಣು ಮಕ್ಕಳು ಮತ್ತು ರ‌್ಯಾಪ್ ಮ್ಯೂಸಿಕ್ ಎಂದರೆ ಹುಚ್ಚು. ಹಿರಿಯ ಸೋದರ ಸಯೀದ್ ಕುರಿತು ಹೆಚ್ಚಿನ ವಿವರಗಳಿಲ್ಲದಿದ್ದರೂ, ಅಮೆರಿಕದ ವಿಮಾನ ಹಾರಾಟ ನಿಷೇಧದ ಪಟ್ಟಿಯಲ್ಲಿ ಇವರಿಬ್ಬರ ಹೆಸರಿತ್ತು. ಹಿರಿಯಾತ ಯೆಮನ್ ಪ್ರವಾಸ ಮಾಡಿದ್ದು, ಅಲ್ ಖಾಯಿದಾದಂಥ ಉಗ್ರ ಸಂಘಟನೆಗಳಿಗೆ ಸೇರಲು ಪ್ರಯಾಣ ಬೆಳೆಸಿದ್ದನೇ ಎಂಬುದು ಸ್ಪಷ್ಟವಾಗಿಲ್ಲ. ಇವ ಬಗೆಗಿನ ವಿವರಗಳು ಈಗಾಗಲೇ ಅಮೆರಿಕ ಮತ್ತು ಫ್ರಾನ್ಸ್‌ನ ಉಗ್ರ ನಿಗ್ರಹ ದಳದ ಅಧಿಕಾರಿಗಳ ಬಳಿಯಿತ್ತು ಎನ್ನಲಾಗಿದೆ.

ಸೋದರರನ್ನು ಹೊಗಳಿದ ಐಸಿಸ್ ಬೈರುತ್: ಚಾರ್ಲಿ ಹೆಬ್ಡೊ ದಾಳಿಕೋರರನ್ನು ಹೀರೋಗಳೆಂದು ಐಸಿಸ್ ರೇಡಿಯೊ ಶ್ಲಾಘಿಸಿದೆ. ”ದಾಳಿಯಲ್ಲಿ ಇಸ್ಲಾಂ ಮತ್ತು ಅದರ ಪ್ರವಾದಿಗಳನ್ನು ಅಣಕ ಮಾಡುತ್ತಿದ್ದ ವ್ಯಂಗ್ಯ ಚಿತ್ರಕಾರರು ಹತರಾಗಿದ್ದಾರೆ. ಅವರನ್ನು ಕೊಂದ ಇವರು ನಿಜಕ್ಕೂ ಹೀರೊಗಳು,” ಎಂದು ಅಲ್ಬಯಾನ್ ರೇಡಿಯೊ ಹೇಳಿದೆ.

ಮಗಳನ್ನು ಕೊಲ್ಲುವುದಾಗಿ ಬೆದರಿಸಿದರು ಪ್ಯಾರಿಸ್: ”ನಾನು ಮಗುವನ್ನು ಎತ್ತಿಕೊಂಡು ಕಚೇರಿಯತ್ತ ಹೊರಟಿದ್ದೆ. ಆಗ ಹಠಾತ್ತನೆ ಬಂದ ಬಂದೂಕುಧಾರಿಗಳು ಕಚೇರಿಯೊಳಗೆ ಕರೆದೊಯ್ಯುವಂತೆ ಹೇಳಿದರು. ಇಲ್ಲದಿದ್ದರೆ ಮಗಳನ್ನು ಕೊಲ್ಲುವುದಾಗಿ ಬೆದರಿಸಿದರು,”ಎನ್ನುತ್ತಾ ನರಮೇಧದ ಭಯಾನಕ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾರೆ ನಿಯತಕಾಲಿಕದ ವ್ಯಂಗ್ಯ ಚಿತ್ರಕಾರ್ತಿ ಕಾರ್ನಿ ರೇ.

”ನರ್ಸರಿಯಿಂದ ಮಗಳನ್ನು ಕರೆದುಕೊಂಡು ವಾಪಸ್ ಬರುತ್ತಿದ್ದೆ. ಕಚೇರಿಯ ಮುಂಭಾಗದದಲ್ಲಿದ್ದೆ, ಇನ್ನೇನು ಒಳಗೆ ಬರುತ್ತಿದ್ದಂತೆಯೇ ಬಂದ ದಾಳಿಕೋರರು ಬೆದರಿಸಿದರು. ಅವರಿಗೆ ಮಹಡಿಯ ಮೇಲೆ ಹೋಗಬೇಕಿತ್ತು. ಹಾಗೆ ಹೋಗುವ ಮೊದಲು ಭದ್ರತಾ ಸಿಬ್ಬಂದಿಯನ್ನು ಕೊಂದು ಹಾಕಿದರು. ನಂತರ ಕೇಳಿದ್ದು ಸತತ 5 ನಿಮಿಷ ಗುಂಡಿನ ಮೊರೆತ,”ಎನ್ನುತ್ತಾ ಹನಿಗಣ್ಣಾಗುತ್ತಾರೆ. ಇಷ್ಟೆಲ್ಲಾ ನಡೆಯುವಾಗ ಮಗಳನ್ನು ಎದೆಗವಚಿಕೊಂಡು ಡೆಸ್ಕ್‌ವೊಮದರ ಕೆಳಗೆ ಅವಿತು ಕೂತಿದ್ದೆ ಎನ್ನುತ್ತಾರೆ. —–

ಫ್ರಾನ್ಸ್ ಉಗ್ರರ ವಿರುದ್ಧ ಯುದ್ಧ ಸಾರಿದೆ, ಯಾವುದೇ ಧರ್ಮ ಅಥವಾ ನಾಗರಿಕತೆಯ ವಿರುದ್ಧ ಅಲ್ಲ. ನಮ್ಮಲ್ಲೇ ಒಳಜಗಳ ಹಚ್ಚುವ ಉಗ್ರರ ಯತ್ನ ಸಫಲವಾಗದು. -ಮ್ಯಾನ್ಯುವಲ್ ವಾಲ್ಸ್, ಫ್ರಾನ್ಸ್ ಪ್ರಧಾನಿ

ಭೀಕರ ಉಗ್ರರ ದಾಳಿಯ ಈ ಸಂಕಷ್ಟದ ಹೊತ್ತಿನಲ್ಲಿ ಫ್ರಾನ್ಸ್ ಬೆನ್ನಿಗೆ ಇಡೀ ಅಮೆರಿಕದ ಜನತೆ ನಿಂತಿದೆ. -ಬರಾಕ್ ಒಬಾಮಾ, ಅಮೆರಿಕ ಅಧ್ಯಕ್ಷ

ಪ್ರಧಾನಿ ಮಾತುಕತೆ ಹೊಸದಿಲ್ಲಿ: ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಫ್ರಾನ್ಸ್ ಅಧ್ಯಕ್ಷ ಹೊಲಾಂದೆ ಅವರೊಂದಿಗೆ ದೂರವಾಣಿಯ ಮೂಲಕ ಮಾತನಾಡಿ ಉಗ್ರರ ನಿಗ್ರಹಕ್ಕೆ ಸಕಲ ಸಹಕಾರ ನೀಡುವ ಭರವಸೆ ನೀಡಿದರು.

Write A Comment