ಕರ್ನಾಟಕ

ಸ್ಮಾರಕವಾಗದ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಮನೆ

Pinterest LinkedIn Tumblr

sn

ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ಇಲ್ಲಿ ವಾಸ­ವಿದ್ದ ಮನೆಯನ್ನು ಸ್ಮಾರಕ ಮಾಡಲು ಎದುರಾಗಿದ್ದ ಆರ್ಥಿಕ ತೊಡಕು ಬಗೆಹರಿದಿದ್ದರೂ, ಸ್ಮಾರಕ ವಾಗಿ­ಸುವ ಪ್ರಕ್ರಿಯೆಗೆ ಸರ್ಕಾರ ಆಸಕ್ತಿ ವಹಿಸುತ್ತಿಲ್ಲ.

ಇಂತಹದ್ದೊಂದು ಬೇಸರದ ಮಾತು­ಗಳು ನಿಜಲಿಂಗಪ್ಪ ಅಭಿಮಾನಿಗಳಲ್ಲಿ ಮನೆಮಾಡಿವೆ. ಮಾರುಕಟ್ಟೆ ದರ ನೀಡಿ ನಿವಾಸ ಖರೀದಿಗೆ ಸರ್ಕಾರ ಒಪ್ಪಿಗೆ ಸೂಚಿಸಿ ವರ್ಷ ಕಳೆದರೂ, ಮನೆಯನ್ನು ಸ್ಮಾರಕವಾಗಿಸುವ ಕೆಲಸ ನನೆಗುದಿಗೆ ಬಿದ್ದಿದೆ.

ಬಗೆಹರಿದ ವ್ಯವಹಾರ: ಈ ಹಿಂದೆ ನಿಜಲಿಂಗಪ್ಪ ನಿವಾಸವನ್ನು ಸರ್ಕಾರಕ್ಕೆ ಉಚಿತವಾಗಿ ನೀಡಲು ಅವರ ಪುತ್ರ ಎಸ್.ಎನ್.ಕಿರಣಶಂಕರ್ ತಕರಾರು ಎತ್ತಿದ್ದು, ಮಾರುಕಟ್ಟೆ ದರದಂತೆ ₨ 2 ಕೋಟಿ ನೀಡಿ ಖರೀದಿಸುವಂತೆ ಸರ್ಕಾ­ರಕ್ಕೂ ತಿಳಿಸಿದ್ದರು. ಸರ್ಕಾರ ಮತ್ತು ಕಿರಣ್ ನಡುವೆ ಪತ್ರ ವ್ಯವಹಾರದ ಹಗ್ಗ­ಜಗ್ಗಾಟ ನಡೆದು, 2013ರ ಡಿಸೆಂಬರ್‌­ನಲ್ಲಿ ಎಸ್.ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್ ಗೌರವಾಧ್ಯಕ್ಷ ಎಚ್. ಹನುಮಂತಪ್ಪ ಅವರ ಮಧ್ಯಸ್ಥಿಕೆಯಲ್ಲಿ ಮಾರುಕಟ್ಟೆ ದರದಂತೆ ನಿವಾಸ ಖರೀದಿ­ಸಲು ಸರ್ಕಾರ ಒಪ್ಪಿಗೆ ನೀಡಿತು. ಆದರೆ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ­ಯಿಂದ ಇದುವರೆಗೂ ನಿವಾಸ ಖರೀದಿ ಪ್ರಕ್ರಿಯೆ ಒಂದು ಹೆಜ್ಜೆಯೂ ಮುಂದೆ ಹೋಗಿಲ್ಲ.

ವರ್ಷಕ್ಕೆರಡು ಬಾರಿ ನೆನಪು: ನಿಜಲಿಂಗಪ್ಪನವರ ನಿವಾಸವನ್ನು ಸ್ಮಾರಕ ಮಾಡಲಾಗುತ್ತದೆ ಎಂದು ಸರ್ಕಾರ ಎಸ್.ಎನ್. ಜನ್ಮದಿನ- ಡಿಸೆಂಬರ್ 10 ಮತ್ತು ಪುಣ್ಯತಿಥಿ – ಆಗಸ್ಟ್ 8 ರಂದು ಎರಡು ಬಾರಿ ಘೋಷಣೆ ಮಾಡುತ್ತದೆ. ಇಷ್ಟು ಬಿಟ್ಟರೆ ಸ್ಮಾರಕವಾಗಿಸುವ ಪ್ರಕ್ರಿಯೆ ಬಗ್ಗೆ ಚಕಾರವೆತ್ತುವುದಿಲ್ಲ ಎಂದು ಟ್ರಸ್ಟ್ ಗೌರವಾಧ್ಯಕ್ಷ ಹಾಗೂ ರಾಜ್ಯ­ಸಭೆಯ ಮಾಜಿ ಸದಸ್ಯ ಎಚ್. ಹನುಮಂತಪ್ಪ ಬೇಸರ ವ್ಯಕ್ತಪಡಿಸುತ್ತಾರೆ.

ಮೆಮೋರಿಯಲ್ ಟ್ರಸ್ಟ್ ಆಸಕ್ತಿ: ನಿಜಲಿಂಗಪ್ಪ ಕುಟುಂಬ ಸದಸ್ಯರು ಮತ್ತು ಕೆಲ ಅಭಿಮಾನಿಗಳು ಸೇರಿ ನಡೆಸುತ್ತಿ­ರುವ ಎಸ್.ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್ ಕ್ರಿಯಾಶೀಲವಾಗಿದೆ. ಚಿತ್ರದುರ್ಗ ಹೊರ­ವಲಯದ ಸೀಬಾರದಲ್ಲಿ 2011ರಲ್ಲಿ ಸ್ಥಾಪನೆಯಾದ ಎಸ್ಎನ್ ಸ್ಮಾರಕ ಭವನದಲ್ಲಿ ವರ್ಷಪೂರ್ತಿ ವೈವಿಧ್ಯ­ಮಯ ಚಟುವಟಿಕೆಗಳನ್ನು ನಡೆಸಲಾಗು­ತ್ತಿದೆ. ಜನಪ್ರತಿನಿಧಿಗಳಿಗೆ ಪ್ರಜಾಪ್ರಭುತ್ವ, ರಾಜಕಾರಣದ ಪಾಠ, ಮಕ್ಕಳಿಗೆ ಗಾಂಧಿ ಮತ್ತು ನಿಜಲಿಂಗಪ್ಪನವರ ತತ್ವ ಸಿದ್ಧಾಂತ ಬೋಧನೆ, ಗಾಂಧಿತತ್ವ ಅಧ್ಯಯನಕ್ಕೆ ಫೆಲೋಷಿಪ್ ನೀಡುವುದು ಸೇರಿದಂತೆ ಅನೇಕ ಅಧ್ಯಯನ ಚಟುವಟಿಕೆಗಳನ್ನು ನಡೆಸುತ್ತಿದೆ. ಟ್ರಸ್ಟ್‌ ಸದಸ್ಯರು, ನಾವೇ ನಿವಾಸವನ್ನು ಖರೀದಿಸಿ, ಸ್ಮಾರಕ­ವನ್ನಾಗಿ ಪರಿವರ್ತಿಸುತ್ತೇವೆ. ಆದರೆ, ಸರ್ಕಾರ ಸ್ಮಾರಕ ನಿರ್ವಹಣೆಯ ಜವಾ­ಬ್ದಾರಿ ಹೊರಬೇಕು ಎಂದು ನಿಬಂಧನೆ ಹಾಕುತ್ತಿದ್ದಾರೆ. ಈ ನಿಬಂಧನೆಗಳನ್ನು ಸರ್ಕಾರ ಒಪ್ಪುತ್ತಿಲ್ಲ. ಹೀಗಾಗಿ ನಿಜಲಿಂಗಪ್ಪ ಅವರ ನಿವಾಸವನ್ನು ಸ್ಮಾರಕ­ವಾಗಿಸುವ ಅಭಿಮಾನಿಗಳ ಕನಸು ಕನಸಾಗಿಯೇ ಉಳಿದಿದೆ.

12ರಂದು ಪ್ರತಿಮೆಗಳ ಲೋಕಾರ್ಪಣೆ
ಸೀಬಾರದ ಎಸ್ಎನ್ ಸ್ಮಾರಕ ಭವನದ ಅಂಗಳವನ್ನು ಮತ್ತಷ್ಟು ಪ್ರವಾಸಿ ಸ್ನೇಹಿಯಾಗಿಸುವ ಸಲುವಾಗಿ ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್, ಗಾಂಧಿ ಮತ್ತು ನಿಜಲಿಂಗಪ್ಪನವರ ಒಂಬತ್ತು ವಿವಿಧ ಭಂಗಿಯ ಪುತ್ಥಳಿಗಳನ್ನು ನಿರ್ಮಿಸಿದೆ. ಇದೇ 12ರಂದು ಪ್ರತಿಮೆಗಳು ಲೋಕಾರ್ಪಣೆಗೊಳ್ಳಲಿವೆ. ಕರ್ನಾಟಕ ಶಿಲ್ಪ ಕಲಾ ಅಕಾಡೆಮಿ ವತಿಯಿಂದ ಶಿಲ್ಪಗಳು ನಿರ್ಮಾಣಗೊಂಡಿದ್ದು, 32 ಶಿಲ್ಪಿಗಳು ಪುತ್ಥಳಿಗಳನ್ನು ನಿರ್ಮಿಸಿದ್ದಾರೆ.

Write A Comment