ಬೆಂಗಳೂರು: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಮುಡುಗೈ ಗ್ರಾಮದಲ್ಲಿ ಡಿ. 17ರಂದು ಮಹಿಳೆಯನ್ನು ಬಲಿ ಪಡೆದ ನರಭಕ್ಷಕ ಹುಲಿ ಸೆರೆಗೆ ಅರಣ್ಯ ಇಲಾಖೆಯು ನಡೆಸಿದ ‘ಆಪರೇಶನ್ ಟೈಗರ್’ ಕಾರ್ಯಾಚರಣೆಯಲ್ಲಿ ಹಲವಾರು ಲೋಪಗಳು ಘಟಿಸಿವೆ ಎನ್ನುವ ಅಂಶ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ನಡೆಸಿದ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
‘ಅರಣ್ಯ ಇಲಾಖೆಯು ಕಾರ್ಯಾಚರಣೆಯ ವಿಸ್ತೃತ ವರದಿಯನ್ನು ನಮಗೆ ಕಳುಹಿಸಬೇಕಿದೆ. ನಾವು ಈಗಾಗಲೇ ಹುಲಿ ಕಾರ್ಯಾಚರಣೆಗೆ ಸಂಬಂಧಪಟ್ಟ ಪ್ರಾಥಮಿಕ ವರದಿಯನ್ನು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಸಲ್ಲಿಸಿದ್ದೇವೆ. ಈ ವರದಿಯಲ್ಲಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎನ್ಜಿಒ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ನಡೆದ ಹುಲಿಗಳನ್ನು ನಿಭಾಯಿಸಬೇಕಾದ ಸ್ವಾಭಾವಿಕ ವಿಧಿವಿಧಾನಗಳ ಉಲ್ಲಂಘನೆ ಸೇರಿದಂತೆ ಅನೇಕ ಪ್ರಮಾದಗಳ ಉಲ್ಲೇಖವಿದೆ. ಇದು ಸಚಿವಾಲಯದ ಹಿರಿಯ ಅಧಿಕಾರಿಗಳ ಹುಬ್ಬೇರಿಸುವಂತೆ ಮಾಡಿದೆ’ ಎಂದು ಮೂಲಗಳು ತಿಳಿಸಿವೆ.
‘ಚಿಕ್ಕಮಗಳೂರಿನಲ್ಲಿದ್ದ ಹುಲಿಯನ್ನು ಸೆರೆಹಿಡಿದು ಅದಕ್ಕೆ ತಕ್ಕ ಬೇಟೆ ಸಾಂದ್ರತೆ ಇರುವ ಅರಣ್ಯಕ್ಕೆ ಅದನ್ನು ಸ್ಥಳಾಂತರಿಸುವಂತೆ ನಾವು ಕರ್ನಾಟಕ ಮುಖ್ಯ ವನ್ಯಜೀವಿ ಸಂರಕ್ಷರಿಗೆ ನಿರ್ದೇಶನ ನೀಡಿದ್ದೆವು. ಆ ಹುಲಿಯನ್ನು ಬೆಳಗಾವಿ ಜಿಲ್ಲೆಯ ಖಾನಾಪುರ ಅರಣ್ಯಕ್ಕೆ ಸ್ಥಳಾಂತರಿಸಿ ಎಂದು ಸಲಹೆ ನೀಡಿರಲಿಲ್ಲ’ ಎಂದು ಎನ್ಟಿಸಿಎ ಅಧಿಕಾರಿಯೊಬ್ಬರು ತಿಳಿಸಿದರು.
‘‘ಆಪರೇಶನ್ ಟೈಗರ್’ನ ಇಡೀ ಘಟನಾವಳಿಯಲ್ಲಿ ರಾಜಕೀಯ ಮತ್ತು ಎನ್ಜಿಒ ಪ್ರಭಾವಗಳನ್ನು ನಾವು ಗಮನಿಸಿದ್ದೇವೆ. ಚಿಕ್ಕಮಗಳೂರು ಮತ್ತು ಖಾನಾಪುರದಲ್ಲಿ ನಡೆದ ಹುಲಿ ಸೆರೆಯ ಕಾರ್ಯಾಚರಣೆಗಳಲ್ಲಿ ಕೇಂದ್ರ ಸಚಿವಾಲಯದ ನಿಯಮಾವಳಿಗಳನ್ನು ಉಲ್ಲಂಘಿಸಿ ಸ್ಥಳೀಯ ಜನರು ಭಾಗವಹಿಸಿರುವ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.
‘ಯಾವುದೇ ಪ್ರಾಣಿಯ ಕೊರಳಿಗೆ ರೇಡಿಯೊ ಕಾಲರ್ ಅಳವಡಿಸುವುದಕ್ಕೂ ಪೂರ್ವದಲ್ಲಿ ಅದಕ್ಕೆ ಕೇಂದ್ರ ದೂರಸಂಪರ್ಕ ಸಚಿವಾಲಯದಿಂದ ಅನುಮತಿ ಪಡೆಯುವುದು ಕಡ್ಡಾಯ. ರೇಡಿಯೊ ತರಂಗಾಂತರಗಳು ಅರಣ್ಯ ಇಲಾಖೆ, ಅರಣ್ಯ ಸಚಿವಾಲಯ ಮತ್ತು ಎನ್ಟಿಸಿಎ ಹಂಚಿಕೊಳ್ಳಬೇಕು. ಆದರೆ, ಈ ಪ್ರಕರಣದಲ್ಲಿ ಇದನ್ನು ಪಾಲಿಸಲಾಗಿಲ್ಲ’ ಎಂದು ಅವರು ತಿಳಿಸಿದರು.
ಮಾಹಿತಿ ಕೋರಿದ ಎನ್ಟಿಸಿಎ
‘ಹುಲಿಯನ್ನು ಸ್ಥಳೀಯ ಗ್ರಾಮಸ್ಥನೊಬ್ಬ ಹತ್ಯೆ ಮಾಡಿದ್ದಾನೆ ಎನ್ನುವ ಅಂಶ ವರದಿಯಲ್ಲಿ ಕಾಣಿಸುತ್ತದೆ. ಆ ವ್ಯಕ್ತಿಯು ವನ ಪಾಲಕನೆಂದು ಅರಣ್ಯ ಇಲಾಖೆ ಹೇಳಿದೆ. ಅಗತ್ಯವಾದ ಅನುಮತಿ ಪಡೆಯದೇ ವನ್ಯಜೀವಿಗೆ ಗುಂಡಿಕ್ಕಬಾರದು ಎಂದು ನಿಯಮವಿದೆ’ ಎನ್ನುತ್ತಾರೆ ಎನ್ಟಿಸಿಎ ಅಧಿಕಾರಿ.
ಈ ಕುರಿತಂತೆ ಹುಲಿಯ ಹತ್ಯೆಯನ್ನು ಯಾರು ಮಾಡಿದರು ಮತ್ತು ಹತ್ಯೆಗೆ ಬಳಸಿದ ಆಯುಧ ಕುರಿತು ವಿವರವಾದ ವರದಿ ನೀಡುವಂತೆ ಎನ್ಟಿಸಿಎ ಅರಣ್ಯ ಇಲಾಖೆಯಿಂದ ಮಾಹಿತಿ ಬಯಸಿದೆ
