ಕರ್ನಾಟಕ

ಪಶು ಸಂಗೋಪನಾ ಇಲಾಖೆ ಇನ್ನು ಮುಂದೆ ಕುರಿ, ಕೋಳಿ ಖರೀದಿಗೂ ಸಹಾಯಧನ

Pinterest LinkedIn Tumblr

kuri

ಬೆಂಗಳೂರು: ಪಶು ಸಂಗೋಪನಾ ಇಲಾಖೆ ಇನ್ನು ಮುಂದೆ ಕುರಿ, ಮೇಕೆ, ಕೋಳಿ ಖರೀದಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಹಾಯಧನ ನೀಡಲಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡ­ದವರ ಸಲುವಾಗಿಯೇ ಇಲಾಖೆಯಲ್ಲಿ  120 ಕೋಟಿ ಮೀಸಲು ಇಡ­ಲಾಗಿದೆ.  ಹಸು, ಎಮ್ಮೆ ಖರೀದಿಸಲು ಇದನ್ನು ಬಳಸಲಾಗುತ್ತಿತ್ತು. ಆದರೆ ಇಷ್ಟೊಂದು ಹಣದಿಂದ ಹಸುಗಳನ್ನೇ ಖರೀದಿ ಮಾಡಬೇಕು ಎಂದರೆ ಸುಮಾರು  32 ಸಾವಿರ ಹಸುಗಳು ಬೇಕು. ಇಷ್ಟೊಂದು ಹಸುಗಳು ಸಿಗದೇ ಇರುವುದರಿಂದ ಸಹಾಯಧನವನ್ನು ಕುರಿ– ಮೇಕೆ, ಕೋಳಿ ಖರೀದಿಗೆ ಬಳಸ­ಲಾಗುವುದು ಎಂದು ಪಶು­ಸಂಗೋಪನಾ ಸಚಿವ ಟಿ.ಬಿ. ಜಯ­ಚಂದ್ರ ಬುಧವಾರ ಇಲ್ಲಿ ತಿಳಿಸಿದರು.

‘ಫಲಾನುಭವಿ  25 ಸಾವಿರ ಭರಿಸಿ­ದರೆ, ಇಲಾಖೆ  75 ಸಾವಿರ ನೀಡಲಿದೆ. ಪ್ರತಿಯೊಬ್ಬ ಫಲಾನುಭವಿ ಈ ಒಂದು ಲಕ್ಷ ರೂಪಾಯಿಯಲ್ಲಿ ಜಾನುವಾರು ಖರೀದಿ ಜತೆಗೆ ಮೂಲ­ಸೌಲಭ್ಯ ಕಲ್ಪಿಸಿಕೊಳ್ಳ­ಬೇಕಾಗುತ್ತದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಪ್ರತಿ ತಾಲ್ಲೂಕಿನಲ್ಲಿ 100–120 ಫಲಾನುಭವಿ­ಗಳಿಗೆ ಈ ಯೋಜನೆಯಡಿ ಜಾನುವಾರುಗಳನ್ನು ನೀಡ­ಲಾಗು­ವುದು. ಫಲಾನುಭವಿಗಳ ಆಯ್ಕೆ­ಯನ್ನು ಗ್ರಾಮ ಪಂಚಾಯಿತಿ ಮಟ್ಟ­ದಲ್ಲಿ ಲಾಟರಿ ಮೂಲಕ ಮಾಡಲಾಗು­ವುದು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 4 ರಿಂದ 5 ಮಂದಿಗೆ ಜಾನುವಾರುಗಳು ಸಿಗಲಿವೆ’ ಎಂದರು.

‘ಜಾನುವಾರಗಳ ಖರೀದಿ ಸಂದರ್ಭ­ದಲ್ಲಿ ಇಲಾಖೆ ಅಧಿಕಾರಿಗಳ ಜತೆಗೆ ಫಲಾನುಭವಿ ಕೂಡ ಖುದ್ದು ಹಾಜರಿ­ರುತ್ತಾರೆ. ಮೋಸ ಆಗಲು ಬಿಡುವು­ದಿಲ್ಲ’ ಎಂದು ಅವರು ಪ್ರಶ್ನೆ­ಯೊಂದಕ್ಕೆ ಉತ್ತರಿಸಿದರು.

ಕೆಎಂಎಫ್‌ಗೆ ಬೇಕು  279 ಕೋಟಿ
ಮೂಲಸೌಲಭ್ಯ ಕಲ್ಪಿಸಲು ಕರ್ನಾಟಕ ಹಾಲು ಮಹಾಮಂಡಲಕ್ಕೆ (ಕೆಎಂಎಫ್‌) ಕನಿಷ್ಠ 279 ಕೋಟಿ ಬೇಕಾಗಿದೆ ಎಂದು ಜಯಚಂದ್ರ ಹೇಳಿದರು.

ಹೆಚ್ಚುವರಿ ಸಂಗ್ರಹ ಆಗುತ್ತಿರುವ ಹಾಲನ್ನು ಪೌಡರ್‌ ಮಾಡಬೇಕಾಗಿದೆ. ಶಾಲಾ ಮಕ್ಕಳಿಗೆ ಫ್ಲೆಕ್ಸಿ ಪ್ಯಾಕ್‌ನಲ್ಲಿ ಹಾಲು ನೀಡುವ ಉದ್ದೇಶ ಇದ್ದು, ಈ ಘಟಕ ಸ್ಥಾಪನೆಗೆ ಕನಿಷ್ಠ ₨ 160 ಕೋಟಿ  ಬೇಕಾಗುತ್ತದೆ. ಈ ಪ್ಯಾಕ್‌­ನಲ್ಲಿನ ಹಾಲು ಒಂದು ತಿಂಗಳಾದರೂ ಹಾಳಾಗುವುದಿಲ್ಲ ಎಂದು ಅವರು ವಿವರಿಸಿದರು.

ರಾಜ್ಯದಲ್ಲಿ ಪ್ರತಿ ಲೀಟರ್‌ ಹಾಲನ್ನು 29 ಕ್ಕೆ ಮಾರಾಟ ಮಾಡುತ್ತಿದ್ದು, ಇದು ಇತರ ರಾಜ್ಯಗಳಿಗೆ ಹೋಲಿಸಿದರೆ ಅತಿ ಕಡಿಮೆ. ಉಳಿದ ರಾಜ್ಯಗಳಲ್ಲಿ ಪ್ರತಿ ಲೀಟರ್‌ ಹಾಲಿನ ಬೆಲೆ ಸರಾಸರಿ  36ರಿಂದ 38 ಇದೆ’ ಎಂದು ಅವರು ಹೇಳಿದರು.

ಹಾಲಿನ ದರ ಏರಿಕೆ ಸಂಬಂಧ ಇನ್ನೂ ತೀರ್ಮಾನ ಆಗಿಲ್ಲ. ಈ ಕುರಿತ ಪ್ರಸ್ತಾವ ಕೂಡ ಇಲಾಖೆಗೆ ಬಂದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Write A Comment