ರಾಷ್ಟ್ರೀಯ

ವೈಕುಂಠ ಏಕಾದಶಿ -ಇಂಗ್ಲಿಷ್‌ ಹೊಸ ಕ್ಯಾಲೆಂಡರ್‌ ವರ್ಷ: ತಿಮ್ಮಪ್ಪನ ದರ್ಶನಕ್ಕೆ ಜನ ಜಾತ್ರೆ

Pinterest LinkedIn Tumblr

timma

ಹೈದರಾಬಾದ್‌: ವೈಕುಂಠ ಏಕಾದಶಿ  ಹಾಗೂ ಇಂಗ್ಲಿಷ್‌ ಹೊಸ ಕ್ಯಾಲೆಂಡರ್‌ ವರ್ಷ ಒಂದೇ ದಿನ ಬಂದಿರುವುದರಿಂದ  ತಿಮ್ಮಪ್ಪನ ದರ್ಶನಕ್ಕೆ ತಿರುಮಲದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಭಕ್ತರು ಸೇರಿದ್ದಾರೆ.

ಈ ಪೈಕಿ ಹೆಚ್ಚೆಂದರೆ ೭೫ ಸಾವಿರ ಭಕ್ತರು ಹಾಗೂ ೩ ಸಾವಿರ ಗಣ್ಯರಿಗೆ ಮಾತ್ರ ಗುರುವಾರ ಉತ್ತರ ದ್ವಾರದಲ್ಲಿ ದರ್ಶನ ದೊರೆಯಲಿದೆ. ಉಳಿದವರು ಜನವರಿ ೨ರಂದು ದ್ವಾದಶಿಯ ದಿನ ದರ್ಶನ ಪಡೆಯ­ಲಿದ್ದಾರೆ. ಸರದಿಯಲ್ಲಿ ಕಾಯುತ್ತಿರುವ ಸಹಸ್ರಾರು ಜನರಿಗೆ ಉಚಿತ ಉಪಾಹಾರದ ವ್ಯವಸ್ಥೆ ಮಾಡ­ಲಾಗಿದೆ.
‘ದಿನವೊಂದಕ್ಕೆ ಗರಿಷ್ಠ ೭೦ ಸಾವಿರ ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸ­ಬಹುದು.

ಆದರೆ ನೂಕುನುಗ್ಗಲು ಕಡಿಮೆ ಮಾಡುವುದಕ್ಕಾಗಿ  ಪ್ರತಿದಿನ ೭೫ ಸಾವಿರ ಜನರಿಗೆ ದರ್ಶನದ ಅವಕಾಶ ನೀಡುತ್ತಿದ್ದೇವೆ’ ಎಂದು ಟಿಟಿಡಿ ಕಾರ್ಯಕಾರಿ ಅಧಿಕಾರಿ ಡಿ.ಸಾಂಬ­ಶಿವ ರಾವ್‌ ತಿಳಿಸಿದರು.

‘ಬುಧವಾರ ಮಧ್ಯಾಹ್ನದ ಊಟದ ನಂತರ ಜನದಟ್ಟಣೆ ಹೆಚ್ಚಾಯಿತು. ಸಾಮಾನ್ಯ ಭಕ್ತರಿಗೆ ತೊಂದರೆ ಆಗಬಾರ­ದೆಂದು ಅತಿ ಗಣ್ಯರ ದರ್ಶನ ಸಂಖ್ಯೆಯನ್ನು ೩ ಸಾವಿರಕ್ಕೆ ಸೀಮಿತ­ಗೊಳಿಸ­ಲಾಗಿದೆ. ದ್ವಾದಶಿಯ ದಿನ ಜನಸಾಮಾನ್ಯರಿಗೆ ದರ್ಶನದ ಅವಕಾಶ ಸಾಕಷ್ಟಿರುತ್ತದೆ’ ಎಂದು ಟಿಟಿಡಿ ಜಂಟಿ ಕಾರ್ಯಕಾರಿ ಅಧಿಕಾರಿ ಕೆ.ಎಸ್‌.ಶ್ರೀನಿ­ವಾಸ ರಾಜು ಹೇಳಿದ್ದಾರೆ.

ದರ್ಶನ ಹಾಗೂ ವಸತಿ ವ್ಯವಸ್ಥೆಯನ್ನು ನೋಡಿಕೊಳ್ಳು­ವುದಕ್ಕಾಗಿ ಟಿಟಿಡಿ ಈಗಾಗಲೇ ಪ್ರತ್ಯೇಕ ಸಮಿತಿಗಳನ್ನು ರಚಿಸಿದೆ. ಎಲ್ಲ 7 ಸಾವಿರ ಕೊಠಡಿಗ­ಳನ್ನು ವಸತಿಗೆ ಸಿದ್ಧಪಡಿಸಲಾಗಿದೆ. ೨೪ ಗಂಟೆ ಮಾತ್ರ ಇಲ್ಲಿ ತಂಗುವುದಕ್ಕೆ ಅವಕಾಶ ಇದೆ. ಆರು ಲಕ್ಷ ಲಾಡುಗಳನ್ನು ತಯಾರಿಸಲಾಗಿದೆ.

ಸಿ.ಎಂ ಸೂಚನೆ:ವೈಕುಂಠ ಏಕಾದಶಿ ದರ್ಶನದ ವೇಳೆ ಸಾಮಾನ್ಯ ಭಕ್ತರಿಗೆ ತೊಂದರೆಯಾಗದಂತೆ  ನೋಡಿ­ಕೊಳ್ಳ­ಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರ­ಬಾಬು ನಾಯ್ಡು ಅವರು ಟಿಟಿಡಿ ಆಡಳಿತಕ್ಕೆ ನಿರ್ದೇಶನ ನೀಡಿದ್ದಾರೆ

Write A Comment