ಕರ್ನಾಟಕ

ಹೊಸ ವರ್ಷಾಚರಣೆಗೆ ಬೆಂಗಳೂರು ನಗರದಾದ್ಯಂತ ಬಿಗಿ ಬಂದೋಬಸ್ತ್‌

Pinterest LinkedIn Tumblr

Drone-1

ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸ­ಲಾಗಿದೆ.

ಅಲ್ಲದೆ, ಸಂಭ್ರಮಾಚರಣೆಯ ಕೇಂದ್ರ ಬಿಂದು ಆಗಿರುವ ಬ್ರಿಗೇಡ್ ಜಂಕ್ಷನ್‌ ಹಾಗೂ ಸುತ್ತಮುತ್ತಲ ರಸ್ತೆ­ಗಳಲ್ಲಿ ಬುಧ­ವಾರ ಸಂಜೆ ನಂತರ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ ನಗರ ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ ಆದೇಶ ಹೊರಡಿಸಿದ್ದಾರೆ.

‘ಏಳು ಡಿಸಿಪಿ, 20 ಎಸಿಪಿ, 91 ಇನ್‌ಸ್ಪೆಕ್ಟರ್‌, 220 ಎಸ್‌ಐ, 333 ಎಎಸ್‌ಐ, 992 ಹೆಡ್‌ ಕಾನ್‌ಸ್ಟೆಬಲ್, 2,092 ಕಾನ್‌ಸ್ಟೆಬಲ್, ಗೃಹರಕ್ಷಕ ದಳದ 1,300 ಸಿಬ್ಬಂದಿ, ರಾಜ್ಯ ಮೀಸಲು ಪೊಲೀಸ್‌ ಪಡೆಯ (ಕೆಎಸ್‌ಆರ್‌ಪಿ) 47 ತುಕಡಿಗಳನ್ನು ನಗರದ ಭದ್ರತೆಗೆ ನಿಯೋಜಿಸಲಾಗಿದೆ. ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸರು ಮಫ್ತಿಯಲ್ಲಿ ಕರ್ತವ್ಯ ನಿರ್ವಹಿಸಲಿ­ದ್ದಾರೆ’ ಎಂದು ಎಂ.ಎನ್‌.ರೆಡ್ಡಿ ತಿಳಿಸಿದ್ದಾರೆ.

‘ಹೆಚ್ಚಿನ ಜನ ಸೇರುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ. ಸುಮಾರು 12 ಅಡಿ ಎತ್ತರದ 15 ವೀಕ್ಷಣಾ ಗೋಪುರಗಳನ್ನು (ವಾಚ್ ಟವರ್‌) ನಿರ್ಮಿಸ­ಲಾಗಿದ್ದು, ಸಿಬ್ಬಂದಿ ಅದರ ಮೇಲೆ ನಿಂತು ಜನರ ಚಲನವಲನ­ಗಳನ್ನು ಸೆರೆ ಹಿಡಿಯುತ್ತಾರೆ. ಈ ಪ್ರದೇಶಗಳಲ್ಲಿ 15 ಅತ್ಯಾಧುನಿಕ ಎಚ್‌.ಡಿ ಕ್ಯಾಮೆರಾಗಳು ಹಾಗೂ ಇತರೆ 83 ಸಿ.ಸಿ.ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 700 ಕಾನ್‌­ಸ್ಟೆಬಲ್‌ಗಳು, ಕೆಎಸ್‌­ಆರ್‌ಪಿ, ಸಿಎಆರ್‌ ತುಕಡಿಗಳು, ಎಸಿಪಿ, ಡಿಸಿಪಿ ಸೇರಿ­ದಂತೆ ಹಿರಿಯ ಅಧಿಕಾರಿ­ಗಳು ಈ ರಸ್ತೆಗಳಲ್ಲಿ ಭದ್ರತೆ ಒದಗಿಸಲಿಸದ್ದಾರೆ’ ಎಂದು ಹೇಳಿದ್ದಾರೆ.

ಸಂಚಾರ ನಿಷೇಧ ಎಲ್ಲೆಲ್ಲಿ: ‘ಅನಿಲ್ ಕುಂಬ್ಳೆ ವೃತ್ತ­ದಿಂದ ಮೆಯೋಹಾಲ್, ಬ್ರಿಗೇಡ್ ರಸ್ತೆಯಿಂದ ಒಪೆರಾ ಜಂಕ್ಷನ್, ಚರ್ಚ್‌ಸ್ಟ್ರೀಟ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್, ಎಂ.ಜಿ.ರಸ್ತೆಯಿಂದ ಹಳೆ ಮದ್ರಾಸ್ ರಸ್ತೆ, ರೆಸ್ಟ್ ಹೌಸ್ ಜಂಕ್ಷನ್‌­ನಿಂದ ಮ್ಯೂಸಿಯಂ ಜಂಕ್ಷನ್, ಕಾಮ­ರಾಜ ರಸ್ತೆಯಿಂದ ಕಬ್ಬನ್ ರಸ್ತೆ, ರೆಸಿಡೆನ್ಸಿ ರಸ್ತೆಯಿಂದ ಎಂ.ಜಿ.ರಸ್ತೆ­ವರೆಗೆ ವಾಹನಗಳ ಓಡಾಟವನ್ನು ರಾತ್ರಿ 8 ಗಂಟೆ­ಯಿಂದ ಮಧ್ಯರಾತ್ರಿ ಒಂದು ಗಂಟೆವರೆಗೆ ನಿಷೇಧಿಸ­ಲಾಗಿದೆ’ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಬಿ.ದಯಾನಂದ ತಿಳಿಸಿದರು.

‘ಈ ಅವಧಿಯಲ್ಲಿ ಪೊಲೀಸ್ ವಾಹನ­ಗಳು, ಮಾಧ್ಯಮ, ತುರ್ತು ವಾಹನ ಹೊರತುಪಡಿಸಿ ಯಾವುದೇ ವಾಹನ­ಸಂಚಾರ ಮಾಡುವಂತಿಲ್ಲ. ನಿಯಮ ಉಲ್ಲಂಘಿಸಿದಲ್ಲಿ ವಾಹನ­ ವಶಕ್ಕೆ ಪಡೆದು ದಂಡ ವಿಧಿಸಲಾಗುವುದು’ ಎಂದು ಹೇಳಿದರು.

ಮಾರ್ಗ ಬದಲಾವಣೆ:  ರಾತ್ರಿ 8 ಗಂಟೆ ನಂತರ  ಕ್ವೀನ್ಸ್ ಪ್ರತಿಮೆ ಜಂಕ್ಷನ್ ಮೂಲಕ ಎಂ.ಜಿ.ರಸ್ತೆ ಹಾಗೂ ಹಲ­ಸೂರು ಕಡೆ ಸಾಗುವ ವಾಹನಗಳು, ಅನಿಲ್ ಕುಂಬ್ಳೆ ವೃತ್ತದ ಬಿಆರ್‌ವಿ ಜಂಕ್ಷನ್‌­ನಲ್ಲಿ ಎಡ ತಿರುವು ಪಡೆದು, ಬಳಿಕ ಕಬ್ಬನ್ ರಸ್ತೆಯಲ್ಲಿ ಬಲತಿರುವು ಪಡೆದುಕೊಳ್ಳುವ ಮೂಲಕ ಎಂ.ಜಿ.­ರಸ್ತೆ ಸೇರಬಹುದು.
ಹಲಸೂರು ಕಡೆಯಿಂದ ದಂಡು ರೈಲು ನಿಲ್ದಾ­ಣದ ಕಡೆ ಹೋಗುವ ವಾಹನಗಳು ಟ್ರಿನಿಟಿ ವೃತ್ತ­ದಲ್ಲಿ ಬಲ ತಿರುವು ಪಡೆದು ಹಲಸೂರು ರಸ್ತೆ ಸೇರಬೇಕು. ಬಳಿಕ, ಎಡತಿರುವು ಪಡೆದು ಡಿಕನ್ಸನ್ ರಸ್ತೆ ಮೂಲಕ ಕಬ್ಬನ್ ರಸ್ತೆಗೆ ಹೋಗ­ಬಹುದು.

ನಿಲುಗಡೆ ನಿಷೇಧ: ‘ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತ, ಬ್ರಿಗೇಡ್ ರಸ್ತೆಯಿಂದ ಒಪೆರಾ ಜಂಕ್ಷನ್, ಬ್ರಿಗೇಡ್ ರಸ್ತೆಯಿಂದ ಸೇಂಟ್ ಮಾರ್ಕ್ಸ್ ರಸ್ತೆ, ರೆಸ್ಟ್ ಹೌಸ್ ರಸ್ತೆ ಜಂಕ್ಷನ್‌ನಿಂದ ಮ್ಯೂಸಿಯಂ ರಸ್ತೆ, ಎಂ.ಜಿ.ರಸ್ತೆಯಿಂದ ಹಳೆ ಮದ್ರಾಸ್ ರಸ್ತೆವರೆಗೆ ಸಂಜೆ 4 ಗಂಟೆಯಿಂದ ಬೆಳಗಿನ ಜಾವ 3 ಗಂಟೆವರೆಗೆ ವಾಹನ ನಿಲುಗಡೆ ನಿಷೇಧಿಸ­ಲಾಗಿದೆ. ಸಂಜೆ ನಾಲ್ಕು ಗಂಟೆ ಒಳಗೆ ವಾಹನಗಳನ್ನು ತೆರವುಗೊಳಿಸದಿದ್ದರೆ ದಂಡ ವಿಧಿಸಲಾಗುವುದು’ ಎಂದು ದಯಾನಂದ ತಿಳಿಸಿದರು.

ನಿಲುಗಡೆ ಎಲ್ಲೆಲ್ಲಿ: ಕಾಮರಾಜ ರಸ್ತೆ ಜಂಕ್ಷನ್‌ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್‌ನವರೆಗೆ ರಸ್ತೆಯ ಎರಡೂ ಬದಿ­ಯಲ್ಲೂ ವಾಹನ ನಿಲುಗಡೆ ಮಾಡ­­ಬಹುದು. ಶಿವಾಜಿನಗರ ಬಸ್ ನಿಲ್ದಾಣ­ದಲ್ಲಿರುವ ಬಿಎಂಟಿಸಿ ಶಾಪಿಂಗ್ ಕಾಂಪ್ಲೆ­ಕ್ಸ್‌ನ ಒಂದನೇ ಮಹಡಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

‘ಕಾರು ಚಾಲನೆ ಮಾಡುವ ವ್ಯಕ್ತಿ ಮದ್ಯಪಾನ ಮಾಡದಂತೆ ನೋಡಿಕೊಳ್ಳ­ಬೇಕು. ಇದರಿಂದ ಚಾಲಕ,  ಪಾನಮತ್ತ ಸ್ನೇಹಿತರನ್ನು ಅವರವರ ಮನೆಗಳಿಗೆ ಸುರಕ್ಷಿತ­ವಾಗಿ ತಲುಪಿಸಬಹುದು. ಜತೆಗೆ, ಇತರೆ ವಾಹನ ಸವಾರರ ಹಾಗೂ ಪಾದಚಾರಿ­ಗಳ ಸುರಕ್ಷತೆ ಕಾಪಾಡುವ ಮೂಲಕ ಹೊಸ ವರ್ಷವನ್ನು ಅಪ­ಘಾತ ಮುಕ್ತವಾಗಿ ಸ್ವಾಗತಿಸಬಹುದು’ ಎಂದರು.

80 ವಿಶೇಷ ತಂಡಗಳು
‘ಸಂಭ್ರಮಾಚರಣೆ ವೇಳೆ ಮೋಜಿನ ಸುತ್ತಾಟಕ್ಕೆ ಹೊರಡುವ ಬೈಕ್‌ ಸವಾ­ರರು, ಡ್ರ್ಯಾಗ್‌ ರೇಸ್‌ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗು­ವುದು. ಅಂಥ ಸವಾರರ ಪತ್ತೆಗಾಗಿಯೇ 80 ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ನಗರದೆಲ್ಲೆಡೆ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ. ಡ್ರ್ಯಾಗ್ ರೇಸ್‌ ಮಾಡುವ ಸವಾರರು ಕಂಡು ಬಂದಲ್ಲಿ ನಾಗರಿಕರು ಪೊಲೀಸ್‌ ನಿಯಂತ್ರಣ ಕೊಠಡಿ 100 ಹಾಗೂ ಸಹಾಯವಾಣಿ 103 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು’
– ಬಿ.ದಯಾನಂದ, ಹೆಚ್ಚುವರಿ ಪೊಲೀಸ್ ಕಮಿಷನರ್

‘ತಪಾಸಣೆಗೆ ಸಹಕರಿಸಿ’
‘ಚರ್ಚ್‌ಸ್ಟ್ರೀಟ್‌ನಲ್ಲಿ ಇತ್ತೀಚೆಗೆ ಬಾಂಬ್‌ ಸ್ಫೋಟ ಸಂಭವಿಸಿದ್ದರಿಂದ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮುಂಜಾಗ್ರತಾ ಕ್ರಮವಾಗಿ ಲೋಹ ಶೋಧಕ ಸಾಧನ ಮೂಲಕ ಸಾರ್ವಜನಿಕರನ್ನು ತಪಾಸಣೆಗೆ ಒಳಪಡಿಸಲಾಗುವುದು.  ಜತೆಗೆ 12 ಅಶ್ವರೋಹಿ ದಳವನ್ನು ಭದ್ರತೆಗೆ ಒದಗಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಪೊಲೀಸರು ನಡೆಸುವ ತಪಾಸಣೆಗಳಿಗೆ ಜನ ಸ್ಪಂದಿಸಬೇಕು’ ಎಂದು ಎಂ.ಎನ್.ರೆಡ್ಡಿ ಮನವಿ ಮಾಡಿದ್ದಾರೆ.

ಸಂಚಾರ ನಿರ್ಬಂಧ
ಡಿ.31ರ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ನಗರದ ಮೇಲ್ಸೇತುವೆಗಳಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸ ಲಾಗಿದೆ. ಈ ಅವಧಿಯಲ್ಲಿ ವಾಹನಗಳು ಸರ್ವಿಸ್ ರಸ್ತೆಯಲ್ಲೇ ಸಂಚರಿಸಬೇಕು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಎಲ್‌) ಸಂಪರ್ಕ ಕಲ್ಪಿಸುವ ಎತ್ತರಿಸಿದ ಮೇಲ್ಸೇತುವೆಯಲ್ಲಿ ಕಾರುಗಳ ಓಡಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

‘ದ್ರೋನ್’ ಕ್ಯಾಮೆರಾ
ಹೊಸ ವರ್ಷಾಚರಣೆಯನ್ನು ಚಿತ್ರೀಕರಿಸಿ­ಕೊಳ್ಳಲು ನಗರ ಪೊಲೀಸರು ಇದೇ ಮೊದಲ ಬಾರಿಗೆ ‘ಏರಿಯಲ್ ದ್ರೋನ್’ ಕ್ಯಾಮೆರಾವನ್ನು ಬಳಸುತ್ತಿದ್ದಾರೆ. ‘ಉತ್ತಮ ಗುಣಮಟ್ಟದ ಕ್ಯಾಮೆರಾ ಇದಾಗಿದ್ದು, 50 ಅಡಿಯಷ್ಟು ಎತ್ತರಕ್ಕೆ ಹಾರಲಿದೆ. ಒಂದು ದಿನದ ಮಟ್ಟಿಗೆ ಈ ಕ್ಯಾಮೆರಾವನ್ನು ಬಾಡಿಗೆಗೆ ಪಡೆಯಲಾಗಿದೆ. ನಿಯಂತ್ರಣ ಕೊಠಡಿಯಲ್ಲೇ ಕುಳಿತು ರಿಮೋಟ್ ಮೂಲಕ ಈ ಕ್ಯಾಮೆರಾ ನಿರ್ವಹಣೆ ಮಾಡಬಹುದು’ ಎಂದು ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದರು.

ರಾತ್ರಿ 2 ಗಂಟೆವರೆಗೆ ಮೆಟ್ರೊ
ಹೊಸ ವರ್ಷಾಚರಣೆ ಅಂಗವಾಗಿ ಮೆಟ್ರೊ ರೈಲು ಸೇವೆಯನ್ನು ಬುಧವಾರ ರಾತ್ರಿ 2 ಗಂಟೆವರೆಗೆ ವಿಸ್ತರಿಸಲಾಗಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಪ್ರತಿ 30 ನಿಮಿಷಕ್ಕೆ ರೈಲುಗಳು ಸೇವೆ ಒದಗಿಸಲಿವೆ.

Write A Comment