ಕರ್ನಾಟಕ

ಬೆಂಗಳೂರು ಬಾಂಬ್ ಸ್ಫೋಟ; ಆರೋಪಿಗಳ ಸುಳಿವು ನೀಡಿದವರಿಗೆ 10 ಲಕ್ಷ ಇನಾಮು; ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಹೇಳಿಕೆ

Pinterest LinkedIn Tumblr

MN_Reddy

ಬೆಂಗಳೂರು: ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಆರೋಪಿಗಳ ಸುಳಿವು ನೀಡಿದವರಿಗೆ 10 ಲಕ್ಷ ರು. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಬೆಂಗಳೂರು ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಅವರು, ಆರೋಪಿಗಳ ಬಗ್ಗೆ ತಿಳಿದಿದ್ದರೆ, ಅಥವಾ ಅವರ ಬಗ್ಗೆ ಸುಳಿವಿದ್ದರೆ ಯಾವುದೇ ರೀತಿಯ ಅಂಜಿಕೆ ಇಲ್ಲದೆ ನಮಗೆ ಮಾಹಿತಿ ನೀಡಿ. ಸುಳಿವು ನೀಡುವವರ ಕುರಿತು ಯಾವುದೇ ಕಾರಣಕ್ಕೂ ಮಾಹಿತಿ ಬಹಿರಂಗವಾಗದಂತೆ ನಾವು ನೋಡಿಕೊಳ್ಳುತ್ತೇವೆ. ಮಾಹಿತಿ ನೀಡಬಯಸುವವರು ಕೇಂದ್ರ ವಿಭಾಗದ ಡಿಸಿಪಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಬಹುದು. ಮೊಬೈಲ್ ಸಂಖ್ಯೆ 9480801101ಗೆ ಕರೆ ಮಾಡಬಹುದು ಎಂದು ಅವರು ಹೇಳಿದರು.

ಇನ್ನು ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಮುಖವಾಗಿ ಮೂರು ಉಗ್ರಗಾಮಿ ಸಂಘಟನೆಗಳ ಮೇಲೆ ಶಂಕೆ ಮೂಡಿದ್ದು, ಸಿಮಿ, ಇಂಡಿಯನ್ ಮುಜಾಹಿದ್ದೀನ್ ಮತ್ತು ಅಲ್ ಉಮ್ಮಾ ಉಗ್ರಗಾಮಿ ಸಂಘಟನೆಯ ಉಗ್ರರು ಬಾಂಬ್ ಸ್ಫೋಟ ನಡೆಸಿರಬಹುದು ಎಂದು ಬೆಂಗಳೂರು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಚರ್ಚ್ ಸ್ಟ್ರೀಟ್‌ನ 11 ಸಿಸಿಟಿವಿ ಕ್ಯಾಮೆರಾಗಳ ದೃಶಗಳ ಸಂಗ್ರಹ
ಇದೇ ವೇಳೆ ಬಾಂಬ್ ಸ್ಫೋಟಗೊಂಡ ಚರ್ಚ್ ಸ್ಟ್ರೀಟ್‌ನಲ್ಲಿರುವ 11 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಕೆಲಹಾಕಿರುವ ಪೊಲೀಸರು, ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಇದಲ್ಲದೆ ಮೂರು ಜಿಲ್ಲೆಗಳಿಗೆ ವಿವಿಧ ತನಿಖಾ ತಂಡಗಳನ್ನು ರವಾನೆ ಮಾಡಲಾಗಿದ್ದು, ರಾಮನಗರ, ಚೆನ್ನೈ ಮತ್ತು ಪುಣೆ ನಗರದಲ್ಲಿ ಬೆಂಗಳೂರು ಪೊಲೀಸರ ತಂಡ ತನಿಖೆ ನಡೆಸುತ್ತಿದೆ.

ಇನ್ನು ತನಿಖೆಯಲ್ಲಿ ಪಾಲ್ಗೊಂಡಿರುವ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಘಟನಾ ಸ್ಥಳದಿಂದ ಸ್ಫೋಟಗೊಂಡ ಬಾಂಬ್‌ನ ಅವಶೇಷಗಳನ್ನು ಕಲೆಹಾಕಿದ್ದಾರೆ. ಸ್ಫೋಟಕ್ಕೆ ಸುಧಾರಿತ ಸ್ಫೋಟ ಸಾಮಗ್ರಿಗಳನ್ನು ಬಳಸಲಾಗಿದ್ದು, ಸಂಜೆ 4.30ರ ಸುಮಾರಿನಲ್ಲಿ ಬಾಂಬ್‌ಗೆ ಟೈಮರ್ ಅಳವಡಿಸಿರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಹೊಸ ವರ್ಷಾಚರಣೆಗೆ ಪೊಲೀಸ್ ಸರ್ಪಗಾವಲು
ಇನ್ನು ಬಾಂಬ್ ಸ್ಫೋಟದ ಕರಿನೆರಳಿನ ಹಿನ್ನಲೆಯಲ್ಲಿಯೇ ಹೊಸ ವರ್ಷಾಚರಣೆಗೆ ಸಿದ್ಧತೆ ನಡೆಸಿಕೊಂಡಿರುವ ಪೊಲೀಸರು, ಹೊಸ ವರ್ಷಾಚರಣೆ ನಡೆಯುವ ಚರ್ಚ್ ಸ್ಟ್ರೀಟ್, ಶಿವಾಜಿ ನಗರ, ಬ್ರಿಗೇಡ್ ರಸ್ತೆ, ಎಂಜಿ ರಸ್ತೆ ಮತ್ತು ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಪ್ರತೀ 100 ಮೀಟರ್‌ಗೆ ಒಬ್ಬರಂತೆ ಪೊಲೀಸ್ ಪೇದೆಗಳನ್ನು ನಿಯೋಜನೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.

ವೈಕುಂಠ ಏಕಾದಶಿ ಮೇಲೂ ಕರಿನೆರಳು
ಬೆಂಗಳೂರು ಬಾಂಬ್ ಸ್ಫೋಟ ಹಿನ್ನಲೆಯಲ್ಲಿ ಇದೇ ಜನವರಿ 1ರಂದು ತಿರುಮಲದಲ್ಲಿ ನಡೆಯಲಿರುವ ವೈಕುಂಠ ಏಕಾದಶಿ ಕಾರ್ಯಕ್ರಮಕ್ಕೆ ತೀವ್ರ ಕಟ್ಟೆಚ್ಚರವಹಿಸಲಾಗಿದೆ. ತಿರುಪತಿ ಮತ್ತು ತಿರುಮಲಕ್ಕೆ ಆಗಮಿಸುವ ಪ್ರತಿಯೊಂದು ವಾಹನ ಮತ್ತು ಪ್ರವಾಸಿಗರನ್ನು ತೀವ್ರವಾಗಿ ಶೋಧಿಸಲಾಗುತ್ತಿದೆ. ಮೆಟಲ್ ಡಿಟೆಕ್ಟರ್, ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ಸಲಕರಣೆಗಳ ಮುಖಾಂತರ ಶೋಧ ಕಾರ್ಯ ನಡೆಸಲಾಗುತ್ತಿದೆ. ಅಂತೆಯೇ ತಿರುಮಲದಾದ್ಯಂತ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಟಿಟಿಡಿ ಪೊಲೀಸರು ತಿರುಮಲದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

Write A Comment