ಕರ್ನಾಟಕ

ಹುಲಿಯಿಂದ ‘ಮಹಿಳೆ ಸಾವಿಗೆ ವನ್ಯಜೀವಿ ತಜ್ಞರೇ ಕಾರಣ’

Pinterest LinkedIn Tumblr

tiger

ಚಿಕ್ಕಮಗಳೂರು: ‘ಚಿಕ್ಕಮಗಳೂರಿನ ಮುಳ್ಳಯ್ಯನ­ಗಿರಿ ಪ್ರದೇಶದ ಪಂಡರವಳ್ಳಿಯಲ್ಲಿ ಹುಲಿ ಹಿಡಿದು ಬೆಳಗಾವಿಯ ಕಾಡಿನಲ್ಲಿ ಬಿಟ್ಟು ಮತ್ತೆ ಅಲ್ಲಿ ಸಮಸ್ಯೆ ಉದ್ಭವಿಸುವಂತೆ ಮಾಡಿದ ರಾಜ್ಯದ ಅರಣ್ಯ ಅಧಿಕಾರಿ­ಗಳು ಮತ್ತು ವನ್ಯಜೀವಿ ತಜ್ಞರೆಂದು ಹೇಳಿಕೊಂಡಿರುವವರೇ ಖಾನಾಪುರ ತಾಲ್ಲೂಕಿನ ಮುಡುಗೈ ಗ್ರಾಮದ ಅಮಾಯಕ ಮಹಿಳೆಯ ಸಾವಿಗೆ ಮೂಲ ಕಾರಣಕರ್ತರು’ ಎಂದು ವನ್ಯಜೀವಿ ಕಾರ್ಯಕರ್ತ ಜಿ.ವೀರೇಶ್‌ ದೂರಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸೆರೆಸಿಕ್ಕ ಹುಲಿಯನ್ನು ಅಣಶಿ–ದಾಂಡೇಲಿ ಅಥವಾ  ಬೆಳಗಾವಿ ಭಾಗದ ಅರಣ್ಯ­ದಲ್ಲಿ ಬಿಡಲಾಗುತ್ತಿದೆ ಎಂಬ ವಿಚಾರ ತಿಳಿದಾಗ ಇಲ್ಲಿನ ವನ್ಯಜೀವಿ ಕಾರ್ಯಕರ್ತರು ಬಲವಾಗಿ ಖಂಡಿಸಿ ಹುಲಿಯನ್ನು ಮತ್ತೆ ಕಾಡಿಗೆ ಬಿಡುವುದು ಅಪಾಯಕಾರಿ ಎಂಬ ಎಚ್ಚರಿಕೆ ನೀಡಿದ್ದರು. ಆದರೆ, ಇದನ್ನು ಗಂಭೀರ­ವಾಗಿ ಪರಿಗಣಿಸದೆ ಸಮಸ್ಯೆಯನ್ನು ಉಲ್ಬಣಗೊಳಿಸಿ­ದ್ದಾರೆ ಎಂದು ದೂರಿದ್ದಾರೆ.

ಹುಲಿಯ ಜಾಡನ್ನು ಬೆನ್ನಟ್ಟಬೇ­ಕಾಗಿದ್ದ ತಜ್ಞರು ಸರಿಯಾದ ಕೆಲಸ ನಿರ್ವಹಿಸದ ಕಾರಣ ಹುಲಿಯು ಮತ್ತೆ ಗ್ರಾಮೀಣ ಪ್ರದೇಶದಲ್ಲಿ ದಾಳಿ ಮಾಡಲು ಪ್ರಾರಂಭಿಸಿತ್ತು. ಈ ವಿಚಾರವನ್ನು ಅರಣ್ಯ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳ­ಬೇಕಿತ್ತು. ೭೦-–೮೦ ಹಳ್ಳಿಗಳಿರುವ ಇಂತಹ ಅರಣ್ಯ ಪ್ರದೇಶಗಳಲ್ಲಿ ಹುಲಿಬಿಟ್ಟು ಅವೈಜ್ಞಾನಿಕ ಸಂಶೋಧನೆಗೆ ಅವಕಾಶ ಮಾಡಿಕೊಟ್ಟಿರುವುದು ದೊಡ್ಡ ತಪ್ಪು. ಹುಲಿಬಿಟ್ಟ ತಜ್ಞರು ಯಾವ ಪರಿಣತಿ ಹೊಂದಿದ್ದಾರೆ? ಈ ಮೊದಲು ಯಾವ ಹುಲಿಗಳನ್ನು ಬಿಟ್ಟು ಸಂಶೋಧಿಸಿದ್ದಾರೆ?

ಅಸಲಿಗೆ ಇವರು ವನ್ಯಜೀವಿ ತಜ್ಞರೇ ಅಥವಾ ವಿಜ್ಞಾನಿಗಳೇ ಎಂಬ ನಿಖರ ಮಾಹಿತಿಯನ್ನು ಖಾತ್ರಿ ಮಾಡಿಕೊಳ್ಳದ ಅರಣ್ಯ ಇಲಾಖೆ ಅವರ ಅಣತಿಯಂತೆ ತಲೆ ಅಲ್ಲಾಡಿಸಿದೆ. ಹುಲಿ ಬಿಟ್ಟ ನಂತರ ಅನುಸರಿಸಬೇಕಾದ ವೈಜ್ಞಾನಿಕ ಮಾರ್ಗ­ಗಳನ್ನು ಇಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಿದ ಪರಿಣಾಮ ಅಲ್ಲಿ ಹುಲಿ ಮತ್ತೆ ಮನುಷ್ಯರ ಮೇಲೆ ದಾಳಿ ಮಾಡಲು ಕಾರಣವಾಗಿದೆ ಎಂದು ದೂರಿದ್ದಾರೆ.

ಪಂಡರವಳ್ಳಿಯಲ್ಲಿ ಸೆರೆಯಾದ ಹುಲಿಯನ್ನು ತರಾತುರಿಯಲ್ಲಿ ಮತ್ತು ದಿಢೀರ್‌ ನಿರ್ಧಾರ­ಗಳನ್ನು ತೆಗೆದು­ಕೊಂಡು ಬೆಳಗಾವಿ ಭಾಗದಲ್ಲಿ ಸ್ಥಳೀಯರ ವಿರೋಧ ಲೆಕ್ಕಿಸದೇ ಬಿಟ್ಟಿರುವುದು ಮತ್ತು ಅಲ್ಲಿ ಒಂದು ಜೀವ ಬಲಿ ಪಡೆ­ದಿರು­ವುದಕ್ಕೆ ಅರಣ್ಯ ಇಲಾಖೆಯೇ ನೇರ ಹೊಣೆ. ತಮ್ಮ ಸಂಶೋಧನೆ ಹೆಸರಿನಲ್ಲಿ ಸರಿಯಾದ  ಕ್ರಮಗಳನ್ನು ವಹಿಸದೇ ಹುಲಿ ಬಿಟ್ಟಂತಹ ತಜ್ಞರ ತಂಡವೂ ಹೊಣೆ. ಇವರ ವಿರುದ್ಧ ಸರ್ಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸ­ಬೇಕು. ಸಂಬಂಧ­ಪಟ್ಟ ಹಿರಿಯ ಅರಣ್ಯಾಧಿಕಾರಿಗಳನ್ನು ಅಮಾನತು­­ಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಿಐಡಿ ತನಿಖೆಗೆ ಶೆಟ್ಟರ್ ಒತ್ತಾಯ (ಬೆಂಗಳೂರು ವರದಿ): ಖಾನಾಪುರ ತಾಲ್ಲೂಕಿನ ಮುಡುಗೈ ಗ್ರಾಮದ ಅಂಜನಾ ಅಪ್ಪಣ್ಣ ಹಣಬರ ಅವರು ನರಭಕ್ಷಕ ಹುಲಿಗೆ ಬಲಿ­ಯಾಗಲು ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಈ ಕುರಿತು ಸಿಐಡಿ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಒತ್ತಾಯಿಸಿದ್ದಾರೆ.

ನರಭಕ್ಷಕ ಹುಲಿಗೆ ಗುಂಡಿಕ್ಕಿ: ಉಲ್ಲಾಸ್‌ ಕಾರಂತ್‌
ಚಿಕ್ಕಮಗಳೂರು: ‘ಬೆಳಗಾವಿಯ ಖಾನಾಪುರ ತಾಲ್ಲೂಕಿನ ಮುಡುಗೈ ಗ್ರಾಮದಲ್ಲಿ ­ ಕೊಂದಿ­ರುವ ನರಹಂತಕ ಹುಲಿಯನ್ನು ಗುಂಡಿಟ್ಟು ಕೊಲ್ಲುವುದೇ ಅಂತಿಮ ಪರಿಹಾರ’ ಎಂದು ಹುಲಿ ಮತ್ತು ವನ್ಯಜೀವಿ ವಿಜ್ಞಾನಿ ಡಾ.ಕೆ. ಉಲ್ಲಾಸ್‌ ಕಾರಂತ್‌ ಸಲಹೆ ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸೆರೆ ಹಿಡಿದಿದ್ದ ಹುಲಿಯನ್ನು ಬೆಳಗಾವಿಯ ಖಾನಾಪುರದ ಅರಣ್ಯಕ್ಕೆ ಬಿಡುವುದು ಸೂಕ್ತವಲ್ಲ ಎನ್ನುವ ಸಲಹೆ ನೀಡಿದ್ದೆವು, ಅದನ್ನು ಅರಣ್ಯ ಇಲಾಖೆ ಪರಿಗಣಿಸಲಿಲ್ಲ. ಹುಲಿ ವಿಚಾರದಲ್ಲಿ ತಜ್ಞರು, ಪರಿಣತರಲ್ಲದವರ ಸಲಹೆ ಪಡೆದು ಹುಲಿ ಬಿಟ್ಟಿದ್ದರಿಂದ ಈಗ ಖಾನಾಪುರದಲ್ಲಿ ಸಮಸ್ಯೆ ಉಲ್ಬಣಿಸಿದೆ. ಈ ಪ್ರಕರಣದಲ್ಲಿ ಸಲಹೆ ನೀಡಿ-­ದವರು ಅರಣ್ಯ ಇಲಾಖೆಯ ಹಾದಿ ತಪ್ಪಿಸಿ­ದ್ದಾರೆ ಎಂದು ಅವರು ‘ಪ್ರಜಾವಾಣಿ’ ಜತೆ ಮಾತನಾಡುತ್ತ ಅಸಮಾಧಾನ ವ್ಯಕ್ತಪಡಿಸಿದರು.

ಈ ಪ್ರಕರಣದಲ್ಲಿ ಅರಣ್ಯ ಇಲಾಖೆಯನ್ನು ದೂರಿದರೆ ಪ್ರಯೋಜನ­ವಿಲ್ಲ. ಸಲಹೆ ನೀಡಿದ­ವರನ್ನೂ ಅಷ್ಟೇ ಹೊಣೆಗಾರರನ್ನಾಗಿ ಮಾಡ­ಬೇಕು. ಹುಲಿ ದನ ತಿನ್ನುತ್ತಿರುವುದು ಕ್ಯಾಮೆರಾ ಟ್ರಾಪಿಂಗ್‌ನಲ್ಲಿ ಸೆರೆಯಾಗಿದೆ. ಆದರೆ, ಕಾಲರ್‌ ಐಡಿ ಇದ್ದರೂ ರೇಡಿಯೊ ಟ್ರ್ಯಾಕಿಂಗ್‌ ಆಗುತ್ತಿಲ್ಲ­ವೆಂದರೆ ಏನರ್ಥ? ಕಳೆದ ಒಂದು ತಿಂಗಳಿನಿಂದ ಹುಲಿಯ ಕೊರಳ­ಲ್ಲಿರುವ ರೇಡಿಯೊ ಕಾಲರ್‌­ನಿಂದ ತರಂಗಾಂತರ ಆಂಟೆನಾಕ್ಕೆ ಸಿಗುತ್ತಿ­ಲ್ಲವೆಂದರೆ ಇವರ ರೇಡಿಯೊ ಟ್ರ್ಯಾಕಿಂಗ್‌ ಜ್ಞಾನ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ಊಹಿಸಬಹುದು, ಜನರ ಜೀವ­ದೊಂದಿಗೆ ಚೆಲ್ಲಾಟ ಆಡುವುದು ಸರಿಯಲ್ಲ ಎಂದು ಪರೋಕ್ಷವಾಗಿ ಸಂಜಯ್‌ ಗುಬ್ಬಿ ವಿರುದ್ಧ ವಾಗ್ದಾಳಿ ನಡೆಸಿದರು.

ಹುಲಿ ಹಿಡಿದು ಅದರ ಜತೆ ಛಾಯಾಚಿತ್ರ ತೆಗೆಸಿ­ಕೊಳ್ಳುವ ಚಾಳಿ ಬೆಳೆಯುತ್ತಿದೆ. ಅದೊಂದು ಶ್ರದ್ಧೆಯಿಂದ ಮಾಡುವ ವೈಜ್ಞಾನಿಕ ಕೆಲಸ ಎನ್ನುವ ಅರಿವು ಕಾಣಿಸುತ್ತಿಲ್ಲ ಎಂದು ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ಸೆರೆಹಿಡಿದ ನರಹಂತಕ ಹುಲಿ ಮುಂದೆ ಕುಳಿತು ಛಾಯಾಚಿತ್ರ ತೆಗೆಸಿಕೊಂಡಿರುವ ವನ್ಯಜೀವಿ ಮಂಡಳಿ ಸದಸ್ಯ ರಾಣಾ ಜಾರ್ಜ್‌ ಮತ್ತು ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ ಅವರ ಹೆಸರು ಉಲ್ಲೇಖಿಸದೆ ಪರೋಕ್ಷವಾಗಿ ಟೀಕಿಸಿದರು.

ಹುಲಿ ಸೆರೆಗೆ ಕಾರ್ಯಾಚರಣೆ
ಖಾನಾಪುರ (ಬೆಳಗಾವಿ): ‘ನರಭಕ್ಷಕ ಹುಲಿಯನ್ನು ಗುಂಡಿಕ್ಕಿ ಕೊಲ್ಲಲು ಸರ್ಕಾರ­ದಿಂದ ಅಧಿಕೃತ ಆದೇಶ ಬಂದಿದ್ದರೂ  ಅದನ್ನು ಸೆರೆಹಿಡಿಯಲು ಪ್ರಯತ್ನಿಸಲಾಗುವುದು’ ಎಂದು ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ ಮೋಹನರಾಜ್‌ ಹೇಳಿದರು.

ತಾಲ್ಲೂಕಿನ ಜಾಂಬೋಟಿ ಗ್ರಾಮದ ಅರಣ್ಯ ಇಲಾಖೆಯ ವಿಶ್ರಾಂತಿ ಗೃಹದಲ್ಲಿ ಶುಕ್ರವಾರ ಪತ್ರಕರ್ತರಿಗೆ ಈ ವಿಷಯ ತಿಳಿಸಿದ ಅವರು, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾನದಂಡ­ಗಳ ಪ್ರಕಾರ ಕಾರ್ಯಾಚರಣೆ ನಡೆಸಲಾ­ಗು­ವುದು. ಸೆರೆ ಸಿಗದಿದ್ದರೆ ಗುಂಡಿಕ್ಕಿ ಕೊಲ್ಲಲಾಗುವುದು ಎಂದರು.

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಅರಣ್ಯದಿಂದ ಕಳೆದ ತಿಂಗಳ 19 ರಂದು ಇಲ್ಲಿಗೆ ತಂದಿದ್ದ ಹುಲಿಗೆ ರೇಡಿಯೊ ಕಾಲರ್‌ ಅಳವಡಿಸಿ ಭೀಮಗಡ ಅರಣ್ಯದಲ್ಲಿ ಬಿಡಲಾಗಿತ್ತು. ಕಳೆದ ತಿಂಗಳ 29ರ ನಂತರ ಅದು ಭೀಮಗಡ ವನ್ಯಧಾಮ­ದಿಂದ ಖಾನಾಪುರ ಅರಣ್ಯ ಪ್ರವೇಶಿಸಿದೆ. ಆದ್ದರಿಂದ ಇಲಾಖೆಯ ಟ್ರ್ಯಾಪ್ ಕ್ಯಾಮೆರಾಗಳಲ್ಲಿ ಅದರ ಚಲನವಲನದ ಮಾಹಿತಿ ದಾಖಲಾಗಿಲ್ಲ. ಆ ಹುಲಿಯನ್ನು ಕಂಡುಹಿಡಿ­ಯುವುದು ಹಾಗೂ ಸೆರೆಹಿಡಿಯುವುದು ಒಂದು ಸವಾಲಾಗಿದೆ ಎಂದು ಹೇಳಿದರು.

ಭೀಮಗಡ ಅರಣ್ಯ ಪ್ರದೇಶದಲ್ಲಿ 11 ದಿನ ಈ ಹುಲಿ ಜೊತೆಗೆ ಈ ಕಾಡಿನಲ್ಲಿದ್ದ ಹುಲಿಗಳು ಕಾದಾಟ  ನಡೆಸಿರುವ ಸಾಧ್ಯತೆ ಇದೆ. ಆದ್ದರಿಂದಲೇ ಇದು ಕೆರಳಿರಬಹುದು ಎಂದರು. ಮನುಷ್ಯರ ರಕ್ತದ ರುಚಿ ಕಂಡಿರುವ ಹುಲಿಯಿಂದ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ವಾಸಿಸುವ ಇತರೆ ಜೀವಿಗಳ ರಕ್ಷಣೆಗೆ ಇಲಾಖೆ ಮೊದಲ ಆದ್ಯತೆ ನೀಡಲಿದೆ. ಕಾರ್ಯಾ­ಚರಣೆಗೆ ಸ್ಥಳೀಯರು ಸಹಕಾರ ನೀಡಬೇಕು ಎಂದರು.

ಹುಲಿ ಪ್ರತ್ಯಕ್ಷ: ಭಯದಿಂದ ಗಾಯ
ಖಾನಾಪುರ: ಶುಕ್ರವಾರ ಮುಂಜಾನೆ ತಾಲ್ಲೂಕಿನ ಮುಗುಡಾ ಗ್ರಾಮದ ಬಳಿ ಹುಲಿಯೊಂದು ರಸ್ತೆ ದಾಟುತ್ತಿದ್ದುದನ್ನು ಕಂಡ ಗ್ರಾಮದ ಸುಭದ್ರಾ ದಳವಿ ಎಂಬುವವರು ಭಯದಿಂದ ಓಡುವಾಗ ಬಿದ್ದು ಗಾಯಗೊಂಡಿದ್ದಾರೆ.

ದನದ ಕೊಟ್ಟಿಗೆಗೆ ಹೋಗಿ ಹಿಂತಿರುಗುವಾಗ 50 ಅಡಿ ದೂರದಲ್ಲಿ ರಸ್ತೆ ದಾಟುತ್ತಿದ್ದ ಹುಲಿಯನ್ನು ಕಂಡು ಅವರು ಗಾಬರಿಗೊಂಡಿದ್ದಾರೆ. ಭಯದಿಂದ ಓಡುವಾಗ ಬಿದ್ದ ಅವರ ಕಾಲಿಗೆ ಗಾಯವಾಗಿದೆ. ಅವರನ್ನು ಖಾನಾಪುರದ ತಾಲ್ಲೂಕು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ.

Write A Comment