ಕರ್ನಾಟಕ

ಅಧಿಕಾರ ಕಿತ್ತುಕೊಳ್ಳುವ “ಶಾಪಗ್ರಸ್ತ ಜಿಲ್ಲೆ’ ಚಾಮರಾಜನಗರಕ್ಕೆ ಆರನೇ ಬಾರಿ ಮುಖ್ಯಮಂತ್ರಿ ಭೇಟಿ: ಹೊಸ ದಾಖಲೆ ಬರೆದ ಸಿದ್ದರಾಮಯ್ಯ

Pinterest LinkedIn Tumblr

ಸಿದದು

ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಜಿಲ್ಲೆಗೆ 6ನೇ ಬಾರಿಗೆ ಭೇಟಿ ನೀಡುವ ಮೂಲಕ ಹೊಸ ದಾಖಲೆ ಬರೆದರು.

ಕುಡಿಯುವ ನೀರು ಪೂರೈಕೆ ಯೋಜನೆಯ ಉದ್ಘಾಟನೆಗೆ ಸಿದ್ದ­ರಾಮಯ್ಯ ಅವರು ಚಾಮರಾಜನಗರ ತಾಲ್ಲೂಕಿನ ಕೆರೆಹಳ್ಳಿಗೆ ಭೇಟಿ ನೀಡಿದ್ದರು. ಇದು ಅವರ 18 ತಿಂಗಳ ಅಧಿಕಾರಾ­ವಧಿಯಲ್ಲಿ ಜಿಲ್ಲೆಗೆ 6ನೇ ಭೇಟಿಯಾ­ಗಿದೆ. ಯಾವುದೇ, ಮುಖ್ಯಮಂತ್ರಿ ಇಷ್ಟು ಬಾರಿ ಜಿಲ್ಲೆಗೆ ಭೇಟಿ ನೀಡಿಲ್ಲ.

1997ರ ಆಗಸ್ಟ್‌ 15ರಂದು ಚಾಮರಾಜನಗರ ಹೊಸ ಜಿಲ್ಲೆ­ಯಾಗಿ ಅಸ್ತಿತ್ವಕ್ಕೆ ಬಂತು. ಎಸ್‌. ನಿಜಲಿಂಗಪ್ಪ, ಡಿ. ದೇವರಾಜ ಅರಸು, ಗುಂಡೂರಾವ್‌, ರಾಮಕೃಷ್ಣ ಹೆಗಡೆ ಅವರು ಜಿಲ್ಲೆಯಾ­ಗುವುದಕ್ಕೂ ಮೊದಲು ಚಾಮರಾಜನಗರಕ್ಕೆ ಭೇಟಿ ನೀಡಿದ್ದರು.

ಆದರೆ, 1992ರಲ್ಲಿ ವೀರೇಂದ್ರ ಪಾಟೀಲ ಅವರು ಕಾವೇರಿ ಕುಡಿಯುವ ನೀರು ಪೂರೈಕೆ ಯೋಜನೆಗೆ ಜಿಲ್ಲಾ ಕೇಂದ್ರಕ್ಕೆ ಬಂದು ಹೋದರು. ಬಳಿಕ ಕಾಕತಾಳೀಯ ಎಂಬಂತೆ ಅಧಿಕಾರದಿಂದ ಕೆಳಗಿಳಿ­ದರು. ಅಂದಿನಿಂದ ಚಾಮ­ರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎಂಬ ಕಳಂಕ ಜಿಲ್ಲೆಗೆ ಅಂಟಿಕೊಂಡಿತು.

1997ರಲ್ಲಿ ಮುಖ್ಯಮಂತ್ರಿಯಾಗಿದ್ದ ಜೆ.ಎಚ್‌. ­ಪಟೇಲ್‌ ಅವರು ಮಲೆಮಹದೇಶ್ವರ ಬೆಟ್ಟದಲ್ಲಿ ಚಾಮರಾಜನಗರ ಹೊಸ ಜಿಲ್ಲೆ­ಯನ್ನು ಉದ್ಘಾಟಿಸಿದ್ದರು. ಅಪ್ಪಿತಪ್ಪಿಯೂ ಜಿಲ್ಲಾ ಕೇಂದ್ರಕ್ಕೆ ಬಂದಿರಲಿಲ್ಲ.

ಸಮ್ಮಿಶ್ರ ಸರ್ಕಾರದ ವೇಳೆ ಮುಖ್ಯಮಂತ್ರಿ­ಯಾ­ಗಿದ್ದ ಎಚ್‌.ಡಿ. ಕುಮಾರಸ್ವಾಮಿ ತಮ್ಮ ಅಧಿಕಾರಾವಧಿಯ ಕೊನೆಯಲ್ಲಿ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಮುಖ್ಯಮಂತ್ರಿ­ಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಅವರು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ವೇಳೆ ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿಗೆ ಭೇಟಿ ನೀಡಿದ್ದರು. ಆದರೆ, ಜಿಲ್ಲಾ ಕೇಂದ್ರಕ್ಕೆ ಬಂದಿರಲಿಲ್ಲ.

ಬಿಜೆಪಿ ರಾಜ್ಯ ಸರ್ಕಾರದ ಕೊನೆಯ ಅವಧಿಯಲ್ಲಿ ಜಗದೀಶ ಶೆಟ್ಟರ್‌ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ನಂತರ ವಿಧಾನಸಭಾ ಚುನಾವಣೆ ವೇಳೆಯೂ ಜಿಲ್ಲಾ ಕೇಂದ್ರಕ್ಕೆ ಬಂದಿದ್ದರು.

ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುತ್ತಾರೆಯೇ ಎಂಬ ಪ್ರಶ್ನೆ ಜಿಲ್ಲೆಯ ಜನರಿಗೆ ಕಾಡಿತ್ತು. 2013ರ ಅಕ್ಟೋಬರ್‌ 7ರಂದು ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದ ಸಿದ್ದ­ರಾಮಯ್ಯ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದರು. ಬಳಿಕ, ಗುಂಡ್ಲುಪೇಟೆ ಪಟ್ಟಣಕ್ಕೆ ಅವರು ಭೇಟಿ ನೀಡಿದ್ದರು.

ಲೋಕಸಭಾ ಚುನಾವಣೆ ವೇಳೆ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ್ದರು. ಬಳಿಕ ಕುಂತೂರು ಸಕ್ಕರೆ ಕಾರ್ಖಾನೆಗೆ ಚಾಲನೆ ನೀಡಲು ಕೊಳ್ಳೇಗಾಲ ತಾಲ್ಲೂಕಿಗೆ ಭೇಟಿ ನೀಡಿದ್ದರು. ಡಿ. 5ರಂದು ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ, ಶ್ರೀಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿಗೆ ಪ್ರಾಧಿಕಾರವನ್ನು ಲೋಕಾರ್ಪಣೆಗೊಳಿಸಿದರು.

ಬೇರು ಗಟ್ಟಿಯಾಗಿವೆ
ಕೆರೆಹಳ್ಳಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎಂಬ ಮೌಢ್ಯ ಬೇರೂರಿತ್ತು. ಇಲ್ಲಿಗೆ ಬಂದು ಹೋದ ಬಳಿಕ ನನ್ನ ಅಧಿಕಾರದ ಬೇರುಗಳು ಗಟ್ಟಿಯಾಗುತ್ತಿವೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

‘ನಾನು ಮೂಢನಂಬಿಕೆಗೆ ಬೆಲೆ ಕೊಡುವುದಿಲ್ಲ. ಮೌಢ್ಯಕ್ಕೆ ಅಧಿಕಾರ ಕಳೆಯುವ ಶಕ್ತಿಯಿಲ್ಲ. ಮತದಾರರಿಗೆ ಮಾತ್ರವೇ ಆ ಶಕ್ತಿಯಿದೆ’ ಎಂದಾಗ ಜನರು ಚಪ್ಪಾಳೆ ತಟ್ಟಿದರು.

Write A Comment