ಕರ್ನಾಟಕ

ಕ್ರಿಸ್‌ಮಸ್ ಸಂಭ್ರಮದಲ್ಲಿ ಮಿಂದೆದ್ದ ಬೆಂಗಳೂರು

Pinterest LinkedIn Tumblr

cris

ಬೆಂಗಳೂರು: ಜಗತ್ತಿಗೆ ಪ್ರೀತಿ-, ಶಾಂತಿ ಹಾಗೂ ಸಹ ಬಾಳ್ವೆಯ ಸಂದೇಶ ಸಾರಿದ ಏಸು ಕ್ರಿಸ್ತನ ಜನ್ಮ­ದಿನದ ಸವಿ ನೆನಪಿಗಾಗಿ ನಗರದೆಲ್ಲೆಡೆ ಕ್ರೈಸ್ತರು ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಬುಧವಾರ ಮಧ್ಯರಾತ್ರಿಯಿಂದಲೇ  ನಗರದ ಪ್ರಮುಖ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಏಸುವಿನ ಸಂದೇಶಗಳನ್ನು ನೀಡುವ ಕಾರ್ಯಕ್ರಮ ಜರುಗಿತ್ತು. ಗುರುವಾರ ಬೆಳಿಗ್ಗೆಯೂ ನಗರದ ಎಲ್ಲಾ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಇದಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

ನಗರದ ಪ್ರಾಚೀನ ಚರ್ಚ್‌ಗಳಲ್ಲಿ ಒಂದಾದ ಶಿವಾಜಿನಗರದ ಸೇಂಟ್ ಮೇರಿ ಬೆಸಿಲಿಕಾ ಚರ್ಚ್, ಫ್ರೇಜರ್‌ಟೌನ್‌ನಲ್ಲಿರುವ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಕೆಥೆಡ್ರಲ್ ಚರ್ಚ್, ಬ್ರಿಗೇಡ್ ರಸ್ತೆಯಲ್ಲಿರುವ ಸೇಂಟ್ ಪ್ಯಾಟ್ರಿಕ್ಸ್ ಚರ್ಚ್, ಸೇಂಟ್ ಮಾರ್ಕ್ಸ್ ಕೆಥೆಡ್ರಲ್, ಚಾಮರಾಜ­ಪೇಟೆಯ ಸೇಂಟ್ ಜೋಸೆಫ್ ಚರ್ಚ್, ಎಂ.ಜಿ ರಸ್ತೆಯ ಚರ್ಚ್‌ ಮತ್ತು ಸೇಂಟ್‌ಜಾನ್ಸ್ ಚರ್ಚ್ ಸೇರಿದಂತೆ ನಗರದ ಹಲವು ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಆಚರಣೆಯು ಸಡಗರದಿಂದ  ಆಚರಿಸಿದವು.

ನಗರದ ಪ್ರಮುಖ ಚರ್ಚ್‌ಗಳನ್ನು  ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕ್ರೈಸ್ತರು ಪ್ರಾರ್ಥನೆಯಲ್ಲಿ ಭಾಗವಹಿಸಿ ಪರಸ್ಪರ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.

NEWS

ಚರ್ಚ್‌ ಹಾಗೂ ಮನೆಗಳಲ್ಲಿ ಬಾಲ ಏಸುವಿನ ಜನನವನ್ನು ಪ್ರತಿಬಿಂಬಿಸುವ ಗೋದಲಿಯು ವಿಶೇಷ ಆಕರ್ಷಣೆಯಾಗಿತ್ತು. ಮನೆ ಮುಂದೆ ಹಾಗೂ ಸುತ್ತಲು ನಕ್ಷತ್ರ, ಗೂಡು ದೀಪಗಳನ್ನು ಬೆಳಗಿಸಲಾಗಿತ್ತು.

ಕ್ರೈಸ್ತರ ಮನೆಗಳಲ್ಲಿ ಸಿಂಗರಿಸಿಟ್ಟ ಗೋದಲಿಯಲ್ಲಿ ಏಸು ಜನನದ ಸಂಕೇತವಾಗಿ ಬಾಲಏಸು ಮೂರ್ತಿಯನ್ನು ಇಟ್ಟು ಜೋಗುಳದ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಮೇಣದ ಬತ್ತಿ ಬೆಳಗಿಸಿ, ಪುಷ್ಪವನ್ನು ಅರ್ಪಿಸಿದರು.

ಚರ್ಚ್‌ಗಳಲ್ಲಿ ಸಾಂಟಾಕ್ಲಾಸ್‌ನ ಉಡುಪು ಪ್ರದರ್ಶನಕ್ಕೆ ಇಡಲಾಗಿತ್ತು. ಮಕ್ಕಳು ಇದರ ಮುಂದೆ ನಿಂತು ಛಾಯಾಚಿತ್ರ ತೆಗೆಸಿಕೊಂಡು ಸಂತೋಷ ಪಟ್ಟರು. ಇದಕ್ಕೆ ಪೋಷಕರು ಸಹ  ಸಾಥ್ ನೀಡಿದರು.

ಗರುಡಾ ಮಾಲ್, ಓರಾಯನ್ ಮಾಲ್ ಯುಬಿ ಸಿಟಿ ಹಾಗೂ ನಗರದ ಇನ್ನಿತರ ಮಾಲ್‌ ಮತ್ತು ಮಳಿಗೆಗಳಲ್ಲಿ  ಕ್ರಿಸ್‌ಮಸ್ ಟ್ರೀ ಇಡುವ ಮೂಲಕ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಲಾಯಿತು.

Write A Comment