ಕರ್ನಾಟಕ

ಹಾಸ್ಯೋತ್ಸವ’ದಲ್ಲಿ ಭಾರಿ ಜನಸ್ತೋಮ, ನಕ್ಕು ನಲಿಸಿದ ಕಲಾವಿದರು: ಹರಿದ ಹಾಸ್ಯದ ಹೊನಲು, ದಿನವಿಡೀ ಕಚಗುಳಿ

Pinterest LinkedIn Tumblr

shivaram

ಬೆಂಗಳೂರು: ಟಿ.ಪಿ.ಕೈಲಾಸಂ ಅವರ ಕೊಠಡಿ ಸದಾ ಪುಸ್ತಕಗಳಿಂದ ಹರಡಿಕೊಂಡಿರುತ್ತಿತ್ತು. ಕೊಠಡಿಗೆ ಭೇಟಿ ನೀಡಿದ ವ್ಯಕ್ತಿ ‘ಏನ್‌ ಸಾರ್‌ ಇಷ್ಟೊಂದು ಕಸ’ ಎಂದ. ಅದಕ್ಕೆ ಕೈಲಾಸಂ ಅವರು, ‘ಕಸಕ್ಕೂ ಒಂದು ಅರ್ಥವಿದೆಯಪ್ಪಾ. ಯಾವ ವಸ್ತು ಎಲ್ಲಿ ಇರ­ಬಾರದೊ ಅದು ಕಸ. ಉದಾಹರಣೆಗೆ ಈಗ ನೀನು ನನ್ನ ಕೊಠಡಿಯಲ್ಲಿದ್ದೀಯಾ’ ಎಂದು ಹೇಳಿದರಂತೆ.
***
ಅನಾರೋಗ್ಯದಿಂದ ವ್ಯಕ್ತಿಯೊಬ್ಬರು ವೈದ್ಯರ ಬಳಿ ಹೋಗುತ್ತಾರೆ. ಆಗ ವೈದ್ಯ, ‘ನೀನು ಬಂದಿದ್ದರಿಂದ ತುಂಬಾ ಸಂತೋಷವಾಯಿತು. ನಿನಗೆ ಚಿಕಿತ್ಸೆ ನೀಡುವುದರಿಂದ ನಾನು ಬದುಕಬಹುದು.  ಈ ಚೀಟಿ ತೆಗೆದುಕೊಂಡು ಹೋಗಿ ಔಷಧ ಖರೀದಿಸು. ಇದರಿಂದ ಔಷಧ ಅಂಗಡಿಯವನು ಬದುಕುತ್ತಾನೆ. ಮನೆಗೆ ಹೋಗುವ ಮುನ್ನ ಔಷಧಗಳನ್ನು ಚರಂಡಿ­ಯಲ್ಲಿ ಎಸೆದು ಹೋಗು. ಏಕೆಂದರೆ ನೀನು ಬದುಕಬೇಕು’ ಎಂದರಂತೆ!
***
ಹಾಸ್ಯ ನಟ ದಿನೇಶ್‌ ತೀರಿ ಹೋಗಿದ್ದರು. ಅವರ ಅಂತ್ಯಸಂಸ್ಕಾರಕ್ಕೆ ಹೋಗಿದ್ದೆ. ಅಲ್ಲಿದ್ದವರೊಬ್ಬರು ‘ದಿನೇಶ್‌ ಅಣ್ಣ ಹೋಗ್ಬಿಟ್ರು, ದಿನೇಶ್‌ ಅಣ್ಣ ಹೋಗ್ಬಿಟ್ರು. ನೆಕ್ಸ್ಟ್‌ ನೀವೇ ಸಾರ್‌’ ಎಂದರು. ಅಲ್ಲಿದ್ದವರೆಲ್ಲಾ ಕಕ್ಕಾಬಿಕ್ಕಿಯಾಗಿಬಿಟ್ರು. ಆ ವ್ಯಕ್ತಿಯ ಮಾತಿನ ಅರ್ಥವೆಂದರೆ ‘ಮುಂದಿನ ಹಾಸ್ಯ ಕಲಾವಿದ ನೀವು’ ಎಂಬುದು ಅಷ್ಟೆ!
***
‘ನನಗೊಬ್ಬ ಒಳ್ಳೆಯ ಪುತ್ರನಿದ್ದಾನೆ’ ಎಂದು ವ್ಯಕ್ತಿಯೊಬ್ಬರು ಹೆಮ್ಮೆಯಿಂದ ಹೇಳಿದರು. ಅಲ್ಲಿದ್ದವರೊಬ್ಬರು, ‘ನಿಮ್ಮ ಮಗ ಸಿಗರೇಟು ಸೇದುತ್ತಾನಾ? ಅದಕ್ಕೆ ತಂದೆಯ ಉತ್ತರ ‘ಖಂಡಿತಾ ಇಲ್ಲ’.  ‘ನಿಮ್ಮ ಮಗ ಕುಡಿಯುತ್ತಾನಾ? ಇದಕ್ಕೂ ಇಲ್ಲ ಎಂಬ ಉತ್ತರ ಬಂತು. ‘ನಿಮ್ಮ ಮಗ ತಡವಾಗಿ ಮನೆಗೆ ಬರುತ್ತಾನಾ? ಈ ಪ್ರಶ್ನೆಗೂ ಅದೇ ಉತ್ತರ. ‘ಹಾಗಾದರೆ ನೀವು ಇಂಥ ಪುತ್ರನನ್ನು ಪಡೆಯಲು ಪುಣ್ಯ ಮಾಡಿದ್ದೀರಿ. ಅದ್ಸರಿ ಈಗ ಅವನ ವಯಸ್ಸೆಷ್ಟು’ ಎಂದು ಕೇಳಿದರು. ಆಗ ತಂದೆ, ‘ಮುಂದಿನ ಭಾನುವಾರ ಆತನಿಗೆ ಆರು ತಿಂಗಳು ತುಂಬಲಿದೆ’ ಎಂದರು!
***
ಲವ್‌ ದ ಬಾಡಿ. ಬಟ್‌ ಡೋಂಟ್‌ ಟಚ್‌ ದ ಬಾಡಿ. ಇಫ್‌ ಯು ಟಚ್‌ ದ ಬಾಡಿ, ಡ್ರೈವರ್‌ ವಿಲ್‌ ಮೇಕ್‌ ದ ಸಿ.ಡಿ…!
***
ಹೀಗೆ ಒಂದೊಂದಾಗಿ ಹಾಸ್ಯ ಚಟಾಕಿಗಳ ಹೊನಲು ಹರಿಯುತ್ತಿದ್ದರೆ ಅವುಗಳನ್ನು ಆಲಿಸು­ತ್ತಿದ್ದ­ವರು ನಕ್ಕು ನಲಿದರು. ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ  ಈ ರೀತಿ ಕಚಗುಳಿ ಇಟ್ಟು ನಗಿಸಿದ್ದು ‘ಅಕಾಡೆಮಿ ಆಫ್‌ ಹ್ಯೂಮರ್‌’ ಆಯೋಜಿಸಿದ್ದ ‘ಹಾಸ್ಯೋತ್ಸವ’ ಕಾರ್ಯಕ್ರಮ.

ಪ್ರಸಿದ್ಧ ಹಾಸ್ಯ ಕಲಾವಿದರ ಮಾತುಗಳಿಗೆ ನಕ್ಕು ನಲಿದ ಪ್ರೇಕ್ಷಕರು ತುಂಬಾ ಹೊತ್ತು ತಮ್ಮ  ಕುರ್ಚಿ ಬಿಟ್ಟು ಕದಲಲಿಲ್ಲ. ಹೆಚ್ಚು ಮಂದಿ ಪಾಲ್ಗೊಂಡಿದ್ದ ಕಾರಣ ಕಲಾಕ್ಷೇತ್ರದ ಹೊರ ಆವರಣದಲ್ಲಿ  ಪರದೆ ಅಳವಡಿಸಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು.

ಜಯನಗರದ ನ್ಯಾಷನಲ್‌ ಕಾಲೇಜಿನ ಎಚ್‌.ಎನ್‌.ಕಲಾಕ್ಷೇತ್ರದಲ್ಲಿ ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತಿತರ ಸಂಸ್ಥೆಗಳ ಪ್ರಾಯೋಜಕತ್ವ­ದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಹಿರಿಯ ನಟ ಎಸ್‌.ಶಿವರಾಂ.

‘ಕೆಲವರು ಹಾಸ್ಯ ಭಾಷಣವನ್ನೇ ವೃತ್ತಿಯಾಗಿಸಿ­ಕೊಂಡು ಬದುಕುತ್ತಿದ್ದಾರೆ. ಕೆಲವರು ಏನೆಲ್ಲಾ ಹಾಸ್ಯ ಪ್ರಸಂಗ ಹೇಳಿ ಇದು ಟಿ.ಪಿ.ಕೈಲಾಸಂ ಅವರದ್ದು ಎನ್ನುತ್ತಾರೆ. ಕೈಲಾಸಂ ಬದುಕಿದ್ದಿದ್ದರೆ ಈಗ ಸಾಯುತ್ತಿದ್ದರು. ಅದೇನೇ ಇರಲಿ, ಹೆಚ್ಚಿನ ಅವಧಿಯಲ್ಲಿ ಹಳೆಯ ಹಾಸ್ಯ ಪ್ರಸಂಗಗಳೇ ಪುನರಾವರ್ತನೆ ಆಗುತ್ತಿರುತ್ತವೆ’ ಎಂದರು.

ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ಅಧ್ಯಕ್ಷ ಡಾ.ಎ.ಎಚ್‌.ರಾಮರಾವ್‌, ‘ಕಾರ್ಯಕ್ರಮಕ್ಕೆ ಇಷ್ಟೊಂದು ಜನ ಸೇರಿರುವುದು ಖುಷಿ ಉಂಟು ಮಾಡಿದೆ. ಮುಂದಿನ ವರ್ಷ ಇದಕ್ಕಿಂತ ಹೆಚ್ಚು ಜನ ಸೇರಬೇಕು. ಇಲ್ಲಿ ಬಂದಿರುವವರು ತಮ್ಮೊಂದಿಗೆ ಮತ್ತೊಬ್ಬರನ್ನು ಕರೆದುಕೊಂಡು ಬನ್ನಿ’ ಎಂದು ಹೇಳಿದರು.

ಲೇಖಕ ಬೇಲೂರು ರಾಮಮೂರ್ತಿ ನೇತೃತ್ವ­ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಂಗಾವತಿ ಪ್ರಾಣೇಶ್‌, ಮಾಸ್ಟರ್‌ ಆನಂದ್‌, ಡಾ.ಬಿ.ಟಿ. ರುದ್ರೇಶ್‌, ಡಾ.ಕೆ.ಪಿ.ಪುತ್ತೂರಾಯರು, ಯಮುನಾ ಮೂರ್ತಿ, ಬಾಬು ಹಿರಣ್ಣಯ್ಯ, ಅಶ್ವಥ್‌ನಾರಾಯಣ್‌, ಮಿಮಿಕ್ರಿ ಗೋಪಿ ಮತ್ತಿತರರು ತಮ್ಮ ಜೀವನದ ಸ್ವಾರಸ್ಯಕರ ಘಟನೆ­ಗಳನ್ನು ಹೇಳುವ ಮೂಲಕ ಎಲ್ಲರನ್ನೂ ನಕ್ಕು ನಲಿಸಿದರು.

Write A Comment