ಯಲಹಂಕ: ‘ಇತರೆ ಪೊಲೀಸರಂತೆ ಅಬಕಾರಿ ಇಲಾಖೆಯ ಪೊಲೀಸರಿಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸಿ, ಅಗತ್ಯ ತರಬೇತಿ ನೀಡಿದರೆ ಅವರೂ ಸಹ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ’ ಎಂದು ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಇಲ್ಲಿನ ಸಶಸ್ತ್ರ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪೂರೈಸಿದ ಮೊದಲನೇ ತಂಡದ ಅಬಕಾರಿ ರಕ್ಷಕರ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಅಬಕಾರಿ ಇಲಾಖೆಯು ರಾಜ್ಯದ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದು, ಅಧಿಕಾರಿಗಳು ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು’ ಎಂದರು.
‘ಸದ್ಯದ ಪರಿಸ್ಥಿತಿಯಲ್ಲಿ ಹೊಸ ಬಾರ್‌ಗಳಿಗೆ ಪರವಾನಗಿ ನೀಡಲಾಗುವುದಿಲ್ಲ. ಶಾಲಾ–ಕಾಲೇಜು, ಸಾರ್ವಜನಿಕ ಹಾಗೂ ವಸತಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾರ್‌ಗಳಿಗೆ ಈಗಾಗಲೇ ನೋಟಿಸ್ ಜಾರಿ ಗೊಳಿಸಲಾಗಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.
ತರಬೇತಿ ಪೂರೈಸಿದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ 133 ಪ್ರೊಬೆಷನರಿ ಪಿಎಸ್‌ಐಗಳನ್ನು ವಿವಿಧ ಸ್ಥಳಗಳಿಗೆ ನಿಯೋಜನೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ತರಬೇತಿ ಅವಧಿಯಲ್ಲಿ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.