ಕರ್ನಾಟಕ

ಬೆಂಗಳೂರು: ನಗರದಲ್ಲಿ ಮತ್ತೆ 10 ಕಡೆ ಸರಗಳವು

Pinterest LinkedIn Tumblr

sara

ಬೆಂಗಳೂರು: ನಗರದಲ್ಲಿ ಬುಧವಾರ ಸಂಜೆಯಿಂದ ಮತ್ತೆ ಹತ್ತು ಕಡೆ ಸರಣಿ ಸರಗಳವು ಪ್ರಕರಣಗಳು ನಡೆದಿವೆ.

ಬುಧವಾರ ಸಂಜೆ ಆರು ಗಂಟೆಗೆ ನಾಗರಬಾವಿಯಲ್ಲಿ ವಿದ್ಯಾ ಎಂಬುವ­ರಿಂದ 20 ಗ್ರಾಂ ಸರ ದೋಚಿ ಬೈಕ್‌­ನಲ್ಲಿ ಪರಾರಿಯಾದ ದುಷ್ಕರ್ಮಿಗಳು, ನಂತರ ಸಮೀಪದ ನಮ್ಮೂರು ತಿಂಡಿ ಹೋಟೆಲ್ ಬಳಿ ಮಂಜುಳಾ ಎಂಬು­ವ­ರಿಂದ, ಕೋಕನಟ್ ಗಾರ್ಡನ್‌ನಲ್ಲಿ ಸುವರ್ಣಲತಾ ಎಂಬುವರಿಂದ ಹಾಗೂ ಮಾಳಗಾಳದ ರಾಮಕೃಷ್ಣ ಬಡಾವಣೆ­ಯಲ್ಲಿ ಸುನಂದಾ ಎಂಬುವರಿಂದ ಸರಗಳನ್ನು ದೋಚಿದ್ದಾರೆ. ಜ್ಞಾನ­ಭಾರತಿ ಠಾಣೆಯಲ್ಲಿ ಈ ನಾಲ್ಕೂ ಪ್ರಕರಣಗಳು ದಾಖಲಾಗಿವೆ.

ಅದೇ ರೀತಿ ದುಷ್ಕರ್ಮಿಗಳು ಚಂದ್ರಲೇಔಟ್‌ನಲ್ಲಿ ಲಲಿತಾ ಬಾಯಿ ಎಂಬುವರಿಂದ 35 ಗ್ರಾಂನ ಚಿನ್ನದ ಸರ ದೋಚಿದ್ದಾರೆ. ಚನ್ನಮ್ಮನಕೆರೆ ಅಚ್ಚು­ಕಟ್ಟು ಸಮೀಪದ ಪಿಇಎಸ್ ಕಾಲೇಜು ವಸತಿ ನಿಲಯದ ಬಳಿ ಯಶೋಧಮ್ಮ ಅವರ 30 ಗ್ರಾಂ ಸರ ಹಾಗೂ ಗಿರಿನಗರದಲ್ಲಿ ಗಾಯಿತ್ರಿ ಎಂಬುವರ ಸರ ಕಿತ್ತುಕೊಂಡು ಹೋಗಿದ್ದಾರೆ. ರಾತ್ರಿ 9 ಗಂಟೆಗೆ ಗಿರಿನಗರದಲ್ಲಿ ಉದ್ಯಮಿ­ಯೊಬ್ಬರ ಪತ್ನಿಯಿಂದ 60 ಗ್ರಾಂನ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಕಾಮಾಕ್ಷಿಪಾಳ್ಯ: ಮಾಗಡಿ ರಸ್ತೆಯ ಕೊಟ್ಟಿ­ಗೇಪಾಳ್ಯದಲ್ಲಿ ಖಾಸಗಿ ಕಂಪೆ­ನಿಯ ಮಹಿಳಾ ಉದ್ಯೋಗಿ­ಯಿಂದ ಕಿಡಿ­ಗೇಡಿಗಳು 40 ಗ್ರಾಂನ ಸರ ದೋಚಿ­ದ್ದಾರೆ.  ಎಚ್‌ಎಸ್‌್ಆರ್‌ ಲೇಔಟ್ ಬಳಿ ಬೈಕ್‌­ನಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯೊಬ್ಬರಿಂದ 25 ಗ್ರಾಂ ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ.

ಕಳ್ಳರ ಪತ್ತೆಗೆ ಏಳು ವಿಶೇಷ ತಂಡ ರಚನೆ
ಬೆಂಗಳೂರು: ನಗರದಲ್ಲಿ ಸರಗಳವು ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮಹಿಳೆಯರು ಮತ್ತು ಸಾರ್ವಜನಿ­ಕರು ಆತಂಕಗೊಂಡಿದ್ದಾರೆ. ಹೀಗಾಗಿ ಸರ­­ಗಳವು ಪ್ರಕರಣಗಳನ್ನು ನಿಯಂತ್ರಿ­ಸಲು ನಗರ ಪೊಲೀಸರು ಕಮಿಷನ­ರೇಟ್‌ ವ್ಯಾಪ್ತಿಯಲ್ಲಿ ಏಳು ಪ್ರತ್ಯೇಕ ವಿಶೇಷ ತಂಡಗಳನ್ನು ರಚಿಸಿದ್ದಾರೆ.

ಸರಗಳವು ತಡೆಗೆ ನವೆಂಬರ್‌ನಲ್ಲಿ ವಿಶೇಷ ಮಾರ್ಗಸೂಚಿಗಳನ್ನು ಸಿದ್ಧ­ಪಡಿ­ಸಿದ್ದ ಹಿರಿಯ ಅಧಿಕಾರಿಗಳು, ಅವು­ಗಳನ್ನು ಕಟ್ಟುನಿಟ್ಟಾಗಿ ಪಾಲಿಸು­ವಂತೆ ಎಲ್ಲ  ಸಿಬ್ಬಂದಿಗೆ ಆದೇಶಿಸಿದ್ದರು. ಆದರೆ ಮಂಗಳವಾರ, ಬುಧವಾರ ಹಾಗೂ ಗುರುವಾರ ನಗರದಲ್ಲಿ ಒಟ್ಟು 17 ಸರ­ಗಳವು ಪ್ರಕರಣ ನಡೆದಿರುವು­ದ­ರಿಂದ ಮಹಿಳೆಯರು ಆತಂಕಗೊಂಡಿದ್ದಾರೆ.

ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಪಿ.ಹರಿ­ಶೇಖರನ್‌ ಅವರು ಗುರುವಾರ ಡಿಸಿಪಿ­ಗಳ ಸಭೆ ನಡೆಸಿ,  ಸರಗಳವು ಪ್ರಕರಣ­ಗಳನ್ನು ನಿಯಂತ್ರಿ­ಸಲು ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

‘ಹೊರ ರಾಜ್ಯಗಳಿಂದ ಬಂದು ನಗರ­ದಲ್ಲಿ ಸರಗಳವು ಮಾಡುತ್ತಿರು­ವುದು ಪ್ರಾಥಮಿಕ ತನಿಖೆಯಿಂದ ಗೊತ್ತಾ­­ಗಿದೆ. ಜಂಕ್ಷನ್‌ಗಳಲ್ಲಿನ ಸಿ.ಸಿ ಟಿ.ವಿ ಕ್ಯಾಮೆ­ರಾ­­ಗಳಲ್ಲಿ ದಾಖ­ಲಾ­­ಗಿರುವ ದೃಶ್ಯಾವಳಿ­ಗಳನ್ನು ಪರಿಶೀ­ಲಿಸ­ಲಾಗು­ತ್ತಿದೆ. ಅಲ್ಲದೆ, ಕಳ್ಳತನದ ಶೈಲಿ, ಬೈಕ್‌ನ ನೋಂದಣಿ ಸಂಖ್ಯೆ ಮತ್ತು ಆರೋಪಿಗಳ ಚಹರೆ ಆಧರಿಸಿ ಪತ್ತೆ ಕಾರ್ಯ ಆರಂಭಿ­ಸ­ಲಾಗಿದೆ’ ಎಂದು ಹರಿಶೇಖರನ್‌ ‘ಪ್ರಜಾವಾಣಿ’ಗೆ ತಿಳಿಸಿದರು.
ಆಂಧ್ರಪ್ರದೇಶ, ತಮಿಳುನಾ­ಡಿ­ನಿಂದ ಬಂದವರು ಹೆಚ್ಚು ಸರಗಳವು ಪ್ರಕರ­ಣ­ಗಳಲ್ಲಿ ತೊಡಗುತ್ತಿದ್ದಾರೆ ಎನ್ನಲಾಗಿದೆ.

Write A Comment