ಕರ್ನಾಟಕ

ರೂ 36.41 ಕೋಟಿ ಮೌಲ್ಯದ ರಕ್ತ ಚಂದನ ವಶ: ಆರು ಮಂದಿ ಬಂಧನ; ಸಿಸಿಬಿ ಪೊಲೀಸರ ಕಾರ್ಯಾಚರಣೆ

Pinterest LinkedIn Tumblr

sander

ಬೆಂಗಳೂರು: ರಕ್ತ ಚಂದನ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಆರು ಮಂದಿಯನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು, 12,138 ಕೆ.ಜಿ ತೂಕದ ರಕ್ತ ಚಂದನದ ತುಂಡುಗಳನ್ನು ಜಪ್ತಿ ಮಾಡಿದ್ದಾರೆ.

ತುಮಕೂರು ಜಿಲ್ಲೆ ಶಿರಾ ನಿವಾಸಿ ಅಬ್ದುಲ್‌ ರೆಹಮಾನ್‌ (49), ಮೈಸೂರು ಜಿಲ್ಲೆ ಕೋಡಿಗೆಹಳ್ಳಿ ನಿವಾಸಿ ಲೋಕೇಶ್‌ ಕುಮಾರ್‌ (35), ಬಂಟ್ವಾಳದ ಹನೀಫ್‌ (44), ಹರಿಯಾಣ ಮೂಲದ  ಪೋಲ್‌ ಸಿಂಗ್‌ (40), ಹೊಸಕೋಟೆ ತಾಲ್ಲೂಕಿನ ಕಟ್ಟಿಗೇನಹಳ್ಳಿಯ ಸೈಯದ್ ಮುಬಾರಕ್‌ (28) ಮತ್ತು ಶೇಖ್‌ ಖಾದರ್‌ (24) ಬಂಧಿತ ಆರೋಪಿಗಳು.  ಪ್ರಕರಣದ ಉಳಿದ 15 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ರೆಹಮಾನ್‌, ‘ಶಿವರಾಜ್‌’ ಎಂಬ ಬೀಡಿ ತಯಾರಿಕೆ ಕಾರ್ಖಾನೆ ಹೊಂದಿದ್ದಾನೆ. ಆತ, ಲೋಕೇಶ್‌ನ ಜೊತೆಗೆ ಸೇರಿ ಆಂಧ್ರಪ್ರದೇಶದ ಸ್ಥಳೀಯ ವ್ಯಾಪಾರಿಗಳಿಂದ ರಕ್ತ ಚಂದನದ ತುಂಡುಗಳನ್ನು ಖರೀದಿ ಮಾಡುತ್ತಿದ್ದ.  ಬಳಿಕ ಅವುಗಳನ್ನು ಲೋಕೇಶ್‌ನ ತೋಟದಲ್ಲಿದ್ದ ಆಲೆಮನೆಯಲ್ಲಿ ಸಂಗ್ರಹಿಸಿಡುತ್ತಿದ್ದ.

‘ಈ ರೀತಿ ಖರೀದಿಸಿದ ರಕ್ತ ಚಂದನದ ತುಂಡುಗಳನ್ನು ಬೀಡಿ ಕಾರ್ಖಾನೆಯಲ್ಲಿ ಹಾಳಾಗಿರುವ ಬೀಡಿ ಮತ್ತು ತಂಬಾಕಿನ ಜೊತೆಗೆ ಇಟ್ಟು ಟೆಂಪೊ ಟ್ರಾವೆಲರ್‌ನಲ್ಲಿ ಚೆನ್ನೈ ಮತ್ತು ಮುಂಬೈಗೆ ಸಾಗಿಸುತ್ತಿದ್ದರು. ಬಳಿಕ ಅವುಗಳನ್ನು ಚೀನಾ ಮತ್ತು ಜಪಾನ್‌ಗೆ ಮಾರಾಟ ಮಾಡುತ್ತಿದ್ದರು’ ಎಂದು ನಗರ ಪೊಲೀಸ್‌ ಕಮಿಷನರ್‌ ಎಂ.ಎನ್.ರೆಡ್ಡಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೋಡಿಗೆಹಳ್ಳಿಯ ಗೋದಾಮಿನಿಂದ ಚೆನ್ನೈಗೆ ಟೆಂಪೊ ಟ್ರಾವೆಲರ್‌ನಲ್ಲಿ  (ಕೆಎ 16 9294) ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಳೆದ ಭಾನುವಾರ (ಡಿ.14) ಕೆಂಗೇರಿ ಚೆಕ್‌ ಪೋಸ್ಟ್‌ ಬಳಿ ದಾಳಿ ನಡೆಸಿ  ರೆಹಮಾನ್‌ನನ್ನು ಬಂಧಿಸಿ 73 ರಕ್ತ ಚಂದನದ ತುಂಡುಗಳನ್ನು ವಶಕ್ಕೆ ಪಡೆಯಲಾಯಿತು. ಬಳಿಕ ಆತ ನೀಡಿದ ಮಾಹಿತಿ ಆಧರಿಸಿ ಲೋಕೇಶ್ ಮತ್ತು ಹನೀಫ್‌­ನನ್ನು ಬಂಧಿಸಿ ಆಲೆಮನೆಯಲ್ಲಿ ಸಂಗ್ರಹಿಸಿ­ಡ­ಲಾ­ಗಿದ್ದ 104 ರಕ್ತ ಚಂದನದ ತುಂಡುಗಳನ್ನು ಜಪ್ತಿ ಮಾಡಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರೋಪಿ ರೆಹಮಾನ್ ವಿರುದ್ಧ ಗಂಧದ ಮರ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ತರೀಕೆರೆ, ಹೊನ್ನಹಳ್ಳಿ ಮತ್ತು ಸಿಸಿಬಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಅಲ್ಲದೇ, ಹನೀಫ್‌ ವಿರುದ್ಧ ಸ್ಪಿರಿಟ್‌ ಮತ್ತು ಸಾರಾಯಿ ಸಾಗಾಣಿಕೆ ಪ್ರಕರಣಕ್ಕೆ ಸಬಂಧಿ­ಸಿ­­ದಂತೆ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರ­­ಗೋಡಿನಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.

ಮತ್ತೊಂದು ಪ್ರಕರಣ: ಹರಿಯಾಣ ಮೂಲದ ಪೋಲ್‌ ಸಿಂಗ್‌, ರಕ್ತ ಚಂದನದ ತುಂಡುಗಳನ್ನು ಖರೀದಿಸಿ  ಸೈಯದ್ ಮುಬಾರಕ್‌ ಮತ್ತು ಶೇಖ್‌ ಖಾದರ್‌ನ ನೆರವಿನಿಂದ ಕಟ್ಟಿಗೇನಹಳ್ಳಿ­ಯಲ್ಲಿ ಸಂಗ್ರಹಿಸಿಡುತ್ತಿದ್ದ. ಬಳಿಕ ಅವುಗಳನ್ನು ಲಾರಿ ಮತ್ತು ಕಾರಿನಲ್ಲಿ  ಮಂಗಳೂರಿಗೆ ಸಾಗಿಸುತ್ತಿದ್ದ.

ಈ ಬಗ್ಗೆ ಶುಕ್ರವಾರ (ಡಿ.19) ಜಾಲಹಳ್ಳಿ ಕ್ರಾಸ್‌ ಬಳಿ ದಾಳಿ ನಡೆಸಿ ಬಂಧಿಸಿ ವಾಹನಗಳ­ಲ್ಲಿದ್ದ 125 ರಕ್ತ ಚಂದನದ ತುಂಡುಗಳನ್ನು ವಶಕ್ಕೆ ಪಡೆಯಲಾಯಿತು. ಬಳಿಕ ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಕಟ್ಟಿಗೇನಹಳ್ಳಿಯ ಹೊರವಲಯದ ಶೆಡ್‌ವೊಂದರಲ್ಲಿ ಸಂಗ್ರಹಿಸಿ­ಡಲಾಗಿದ್ದ 240 ರಕ್ತ ಚಂದನ ತುಂಡುಗಳನ್ನು ಜಪ್ತಿ ಮಾಡಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಆರೋಪಿ ಸೈಯದ್ ಮುಬಾರಕ್‌ ಮೆಕ್ಯಾನಿಕ್‌ ಆಗಿದ್ದಾನೆ.

ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಗೇರಿ ಮತ್ತು ಪೀಣ್ಯ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.  ರಾಜ್ಯದಲ್ಲಿ ದೊಡ್ಡ ಮಟ್ಟದ ರಕ್ತ ಚಂದನ ಕಳ್ಳ ಸಾಗಣೆ ಜಾಲ ಇರುವ ಶಂಕೆ ಇದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ವಶಪಡಿಸಿಕೊಳ್ಳಲಾಗಿರುವ ರಕ್ತ ಚಂದನ ತುಂಡುಗಳ ಮೌಲ್ಯ ರಾಷ್ಟ್ರ­ಮಟ್ಟದ ಮಾರುಕಟ್ಟೆಯಲ್ಲಿ ₨ 9.61 ಕೋಟಿ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ₨ 36.41 ಕೋಟಿ. ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರು, ಲಾರಿ ಮತ್ತು ಟೆಂಪೊ ಟ್ರಾವೆಲರನ್ನು ಜಪ್ತಿ ಮಾಡಲಾಗಿದೆ.

₨ 5 ಲಕ್ಷ ನಗದು ಬಹುಮಾನ
ರಕ್ತ ಚಂದನ ಕಳ್ಳ ಸಾಗಣೆ ಜಾಲ ಪತ್ತೆ ಮಾಡಿದ ತಂಡಕ್ಕೆ ₨ 5 ಲಕ್ಷ ನಗದು ಬಹುಮಾನ ಕೊಡಿಸುವ ಸಂಬಂಧ ಅರಣ್ಯ ಇಲಾಖೆ ಜೊತೆಗೆ ಮಾತುಕತೆ ನಡೆಸಲಾಗುವುದು’
–ಎಂ.ಎನ್‌.ರೆಡ್ಡಿ ನಗರ ಪೊಲೀಸ್‌ ಕಮಿಷನರ್‌

Write A Comment