ಕರ್ನಾಟಕ

ಚಿಕ್ಕಮಗಳೂರು: ಕಚೇರಿಯಲ್ಲೇ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಅಧೀಕ್ಷಕ ಆತ್ಮಹತ್ಯೆ

Pinterest LinkedIn Tumblr

pvec20dec14ckm3

ಚಿಕ್ಕಮಗಳೂರು: ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ ವಿಭಾಗ) ಕಚೇರಿ ಅಧೀಕ್ಷಕರು ಕಚೇರಿ­ಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಿಗ್ಗೆ ಇಲ್ಲಿ ನಡೆದಿದೆ.

ಸಾಮಾಜಿಕ ಅರಣ್ಯ ಇಲಾಖೆ ವಿಭಾಗದ ಕಾರ್ಯ ಯೋಜನೆ ಮತ್ತು ಭೂ ಮಾಪನ ಅಧೀಕ್ಷಕ ಗವಿರಂಗಪ್ಪ (57) ಮೃತಪಟ್ಟವರು. ಅವರು ಮೂಲತಃ ಕಡೂರು ತಾಲ್ಲೂಕಿನ ದಾಸನಹಳ್ಳಿಯ­ವರು. ನಗರದ ರಾಂಪುರದಲ್ಲಿ­ರುವ ಅರಣ್ಯ ಇಲಾಖೆ ವಸತಿ ಗೃಹದಲ್ಲಿ ವಾಸವಿದ್ದರು. ಅವರಿಗೆ ಪತ್ನಿ, ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿ ಇದ್ದಾರೆ.

ಕಚೇರಿಗೆ ಸಿಬ್ಬಂದಿ, ಅಧಿಕಾರಿಗಳು ಬರುವ ಮೊದಲೇ ಅವರು ಬಂದಿದ್ದರು. ಮಾನಸಿಕ ಖಿನ್ನತೆ ಮತ್ತು ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿ­ರುವುದಾಗಿ ಪತ್ರ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

‘ಶವವನ್ನು ಸಂಬಂಧಿಕರಿಗೆ ನೀಡಬಾರದು ಮತ್ತು ಸ್ವಗ್ರಾಮಕ್ಕೂ ಕೊಂಡೊಯ್ಯಬಾರದು. ಪತ್ನಿ ಮತ್ತು ಮಕ್ಕಳ ಸಮ್ಮುಖದಲ್ಲಿ ಇಲಾಖೆ ಸಿಬ್ಬಂದಿಯೇ ಅಂತ್ಯಕ್ರಿಯೆ ನಡೆಸಬೇಕು. ಪತ್ನಿ ಮತ್ತು ಮಕ್ಕಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಿಸಬೇಕು’ ಎಂದು ಪತ್ರದಲ್ಲಿ ಬರೆದಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಡಿಎಫ್‌ಒ ವಿರುದ್ಧ ದೂರು: ಅಧಿಕಾರಿಗಳ ಕಿರುಕುಳ­ದಿಂದಲೇ ಗವಿರಂಗಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸುವವರೆಗೂ ಮರಣೋತ್ತರ ಪರೀಕ್ಷೆಯ ವರದಿಗೆ ಸಹಿ ಮಾಡುವುದಿಲ್ಲ ಮತ್ತು ಅರಣ್ಯ ಇಲಾಖೆ ಕಚೇರಿ ಎದುರು ಶವ ಇಟ್ಟು ಪ್ರತಿಭಟಿಸುವುದಾಗಿ ಬಿಗಿಪಟ್ಟು ಹಿಡಿದರು.

ಗವಿರಂಗಪ್ಪ ಪತ್ನಿ ಅನುಸೂಯಮ್ಮ ನೀಡಿರುವ ದೂರು ಆಧರಿಸಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನಕುಮಾರ್‌ ವಿರುದ್ಧ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಮೇಲೆ ಮೃತರ ಕುಟುಂಬದ ಸದಸ್ಯರು, ಶವವನ್ನು ಕೊಂಡೊಯ್ದರು.

Write A Comment