ಕರ್ನಾಟಕ

ಪಿಲ್ಲಗುಂಪೆ: ರೂ7.5ಲಕ್ಷ ದರೋಡೆ; ಹಣ ತೆಗೆದುಕೊಂಡು ಹೋಗುತ್ತಿದ್ದಾಗ ಲೆಕ್ಕಾಧಿಕಾರಿಗೆ ಗುಂಡೇಟು

Pinterest LinkedIn Tumblr

pvec19shoot-out-2ಗಾಯ­ಗೊಂಡ­ ವೀರೇಂದ್ರ­ಗುಪ್ತ

ಹೊಸಕೋಟೆ: ಬ್ಯಾಂಕಿನಿಂದ ಹಣ  ತೆಗೆದು­ಕೊಂಡು ಹೋಗುತ್ತಿದ್ದ ಲೆಕ್ಕಾಧಿ­ಕಾರಿ ಒಬ್ಬರ ಮೇಲೆ ಹಾಡಹಗಲೇ ಗುಂಡು ಹಾರಿಸಿದ ದುಷ್ಕರ್ಮಿಗಳು, ಅವರಿಂದ ₨7.5ಲಕ್ಷ ದೋಚಿ ಪರಾರಿ­ಯಾ­ಗಿರುವ ಘಟನೆ ಪಿಲ್ಲಗುಂಪೆ ಕೈಗಾ­ರಿಕೆ ಪ್ರದೇಶದಲ್ಲಿ ಗುರುವಾರ ನಡೆದಿದೆ.

ಉತ್ತರ ಪ್ರದೇಶ ಮೂಲದ ವೀರೇಂದ್ರ­ಗುಪ್ತ (26) ಗಾಯ­ಗೊಂಡ­ವರು. ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ, ಒಳಹೊಕ್ಕಿದ್ದ 3 ಗುಂಡುಗಳನ್ನು ತೆಗೆಯಲಾಯಿತು. ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಕರೆದೊಯ್ಯಲಾಯಿತು.

ಕಾಡುಗೋಡಿಯಲ್ಲಿ ನೆಲೆಸಿದ್ದ ವೀರೇಂದ್ರಗುಪ್ತ, ಆರು ತಿಂಗಳಿನಿಂದ ‘ವಾರ್ಮ್ ಗೇರ್ಸ್’ ವಾಹನಗಳ ಬಿಡಿ­ಭಾಗಗಳ ತಯಾರಿಕಾ ಕಾರ್ಖಾನೆ­ಯಲ್ಲಿ ಕೆಲಸ ಮಾಡುತ್ತಿದ್ದರು. ಗುರುವಾರ ಮಧ್ಯಾಹ್ನ 3 ಗಂಟೆಗೆ ಹೊಸಕೋಟೆಯಲ್ಲಿನ ಸ್ಟೇಟ್‌ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ₨7.5ಲಕ್ಷ ಹಣ ಡ್ರಾ ಮಾಡಿದ ಅವರು, ನಂತರ ಕಾರಿನಲ್ಲಿ ಕಾರ್ಖಾನೆ ಕಡೆಗೆ ಹೊರಟರು.

ಕಾರ್ಖಾನೆ ಮುಂದೆ ಕಾರಿನಿಂದ ಇಳಿಯುತ್ತಿದ್ದಂತೆಯೇ ಮೂವರು ದುಷ್ಕರ್ಮಿಗಳು, ಹಠಾತ್ ಆಗಿ ಅವರ ಮೇಲೆ 3 ಸುತ್ತು ಗುಂಡು ಹಾರಿಸಿದರು. ಈ ದಾಳಿಯಿಂದ ಅವರು ಕುಸಿದು  ಬಿದ್ದಾಗ ದುಷ್ಕರ್ಮಿಗಳು, ಹಣದ ಬ್ಯಾಗ್ ಕಸಿದು ಬೈಕ್‌ನಲ್ಲಿ  ಪರಾರಿ­ಯಾದರು.
ಸೂಲಿಬೆಲೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ. ಸ್ಥಳಕ್ಕೆ ಕೇಂದ್ರವಲಯ ಐಜಿಪಿ ಸೈಯದ್ ಉಲ್ಫತ್ ಹುಸೇನ್, ಎಸ್ಪಿ ರಮೇಶ್ ಬಾನೋತ್ ಪರಿಶೀಲಿಸಿದರು.

‘ವೀರೇಂದ್ರಗುಪ್ತ ಅವರ ಸ್ಥಿತಿ ಗಂಭೀರವಾಗಿದೆ. ಸದ್ಯ ಅವರನ್ನು ಮಣಿಪಾಲ ಆಸ್ಪತ್ರೆಗೆ ವರ್ಗಾಯಿಸ­ಲಾಗಿದೆ. ಕಾರ್ಖಾನೆ ಸಮೀಪದ ಜಂಕ್ಷನ್‌ನಲ್ಲಿರುವ ಸಿ.ಸಿ.ಕ್ಯಾಮೆರಾ ಪರಿಶೀಲಿಸಲಾಗಿದೆ. ದುಷ್ಕರ್ಮಿಗಳ ಸುಳಿವು ಸಿಕ್ಕಿದ್ದು, ಶೀಘ್ರವೇ ಅವರನ್ನು ಬಂಧಿಸಲಾಗುವುದು’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Write A Comment