ಕರ್ನಾಟಕ

ಒಳ್ಳೆಯವರು ಒಗ್ಗಟ್ಟಾಗಬೇಕು: ವಿಚಾರ ಸಂಕಿರಣದಲ್ಲಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಕರೆ

Pinterest LinkedIn Tumblr

pvec19-CPI(M)-01

ಬೆಂಗಳೂರು: ‘ಕೋಮುವಾದಿಗಳಿಂದ ಹಿಂದೂ ಧರ್ಮದ ರಕ್ಷಣೆ ಮಾಡ­ಬೇಕಾ­ಗಿದೆ, ಆತಂಕವಾದಿಗಳಿಂದ ಇಸ್ಲಾಂ ಧರ್ಮ ಹಾಗೂ ಸಾಮ್ರಾಜ್ಯ­ಶಾಹಿಗಳಿಂದ ಕ್ರೈಸ್ತ ಧರ್ಮ ರಕ್ಷಿಸ­ಬೇಕಾಗಿದೆ. ಪ್ರತಿಯೊಂದು ಧರ್ಮ­ದಲ್ಲಿನ ಒಳ್ಳೆಯ ಜನರು ಒಗ್ಗಟ್ಟಾಗಿ ಕೆಡುಕಿನ ವಿರುದ್ಧ ಹೋರಾಡಬೇಕು’ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಕರೆ ನೀಡಿದರು.

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌­ವಾದಿ) ನಗರದಲ್ಲಿ ಗುರು­ವಾರ ಆಯೋಜಿಸಿದ್ದ ಸಾಚಾರ್‌ ಸಮಿತಿ ವರದಿ, ರಾಜ್ಯದ ಮುಸ್ಲಿಂ ಸಮುದಾ­ಯದ ಸ್ಥಿತಿಗತಿ ಮತ್ತು ಸಾಮಾಜಿಕ ನ್ಯಾಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ಬರೀ ಹಿಂದೂಗಳು ಒಟ್ಟಾಗಬೇಕು, ಬರೀ ಮುಸ್ಲಿಮರು, ಕ್ರೈಸ್ತರು ಒಟ್ಟಾಗಬೇಕು ಎಂದಲ್ಲ. ಪ್ರತಿಯೊಂದು ಧರ್ಮದ ಜನ ತಮ್ಮ ಧರ್ಮದೊಳಗೆ ಬೇರು ಬಿಡುತ್ತಿರುವ ಕೋಮು­ವಾದ ಮತ್ತು ಆತಂಕವಾದವನ್ನು ಖಂಡಿಸಿ, ಅಪಪ್ರಚಾರ ಮಾಡುವವರನ್ನು ದೂರ­ವಿಡ­ಬೇಕು. ಇಲ್ಲದಿದ್ದರೆ ಪ್ರಜಾಸತ್ತೆಗೆ ಅಪಾಯ ಎದುರಾಗು­ತ್ತದೆ. ಕೋಮುವಾದ ನೋಡಿ ಉಗ್ರವಾದ ಬೆಳೆಯುತ್ತೆ, ಉಗ್ರವಾದ ನೋಡಿ ಕೋಮುವಾದ ಬೆಳೆಯುತ್ತೆ’ ಎಂದರು.

‘ಮುಸ್ಲಿಮರ ಬಗ್ಗೆ ಬಹುಸಂಖ್ಯಾತ ಸಮಾಜಕ್ಕೆ ತಪ್ಪು ಕಲ್ಪನೆ ಮೂಡಲು ಕೋಮುವಾದ ಸೃಷ್ಟಿಸಿದ ದ್ವೇಷ ಮತ್ತು ಉಗ್ರವಾದ ಸೃಷ್ಟಿಸಿದ ಭಯವೇ ಕಾರಣ. ಜಾತ್ಯತೀತ  ಸರ್ಕಾರಗಳು ಮುಸ್ಲಿಮರನ್ನು ಮತಬ್ಯಾಂಕ್‌ ಆಗಿ ನೋಡಿದವೇ ವಿನಾಃ ಮನುಷ್ಯರನ್ನಾಗಿ ನೋಡಲಿಲ್ಲ. ಹೀಗೆ ಎರಡೂ ಕಡೆ­ಯಿಂದ ಅನ್ಯಾಯವಾಗಿ ಮುಸ್ಲಿಮರ ಪ್ರಗತಿ ಸಾಧ್ಯವಾಗಿಲ್ಲ’ ಎಂದು ವ್ಯಾಖ್ಯಾನಿಸಿದರು.

‘ಎರಡು ಬಾರಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರವೇ ಸಾಚಾರ್‌ ವರದಿ­ಯನ್ನು ಸಮರ್ಪಕವಾಗಿ ಜಾರಿಗೊಳಿ­ಸಲಿಲ್ಲ. ಇನ್ನು  ಮುಸ್ಲಿಮರ ಬಗ್ಗೆ ಪೂರ್ವಗ್ರಹಪೀಡಿತವಾಗಿರುವ ಈಗಿನ ಸರ್ಕಾರ, ವರದಿ ಬಗೆಗೆ ಕಾಳಜಿ ವಹಿಸುವುದು ಅನುಮಾನ’ ಎಂದರು.

ಸಿಪಿಎಂ ರಾಜ್ಯ ಸಮಿತಿ ಸದಸ್ಯ ಸೈಯದ್‌ ಮುಜೀಬ್‌ ಅಹ್ಮದ್‌, ‘ಭಾರತ­­ದಲ್ಲಿ ಮುಸ್ಲಿಮರಾಗಿ ಹುಟ್ಟಿದ್ದಕ್ಕೆ ಪದೇಪದೇ ದೇಶಪ್ರೇಮ ಸಾಬೀತು­ಪಡಿಸಬೇಕಾದ ಅನಿವಾರ್ಯ ನಿರ್ಮಾಣವಾಗಿದೆ. ಸಮುದಾಯವು ಶಿಕ್ಷಣದಿಂದ ವಂಚಿತವಾಗಿದೆ. ಕೇವಲ ಶೇ 3ರಷ್ಟು ಮಂದಿ ಪದವಿ ಪೂರೈಸಿದ್ದಾರೆ’ ಎಂದರು.

ನಿವೃತ್ತ ಐಎಎಸ್‌ ಅಧಿಕಾರಿ ಎಂ.ಎ.­ಕೆ.­ತಯ್ಯಬ್‌ ಅವರು, ‘ಸಾಚಾರ್‌ ವರದಿ ಬಗ್ಗೆ ಸಮುದಾಯದ ಹೆಚ್ಚಿನ ಜನರಿಗೆ ಮಾಹಿತಿ ಇಲ್ಲ. ಕಾರಣ ಹೆಚ್ಚಿನ­ವರು ಅವಿದ್ಯಾವಂತರು. ಹಾಗಾಗಿ ಮುಸ್ಲಿಮರ ಪ್ರಗತಿ ಶಿಕ್ಷಣದಿಂದ ಮಾತ್ರ ಸಾಧ್ಯ’ ಎಂದು ಹೇಳಿದರು. ಕವಯತ್ರಿ ಕೆ.ಷರೀಫ ಮಾತನಾಡಿ, ‘ಶಿಕ್ಷಣಕ್ಕೆ ಕೊಡುವ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳದೆ ಶಾದಿ­ಭಾಗ್ಯಕ್ಕೆ ಸರತಿ ಸಾಲಿನಲ್ಲಿ ನಿಲ್ಲುತ್ತೇವೆ. ಈ ಅಲ್ಪ ಆಸೆಗೆ ನಾವು ಏಕೆ ಮುಗಿಬೀಳಬೇಕು’ ಎಂದು ಪ್ರಶ್ನಿಸಿದರು.

ನಿವೃತ್ತ ಐಎಎಸ್‌ ಅಧಿಕಾರಿ ಜಮೀರ್‌ ಪಾಷ ಅವರು, ‘ಏಳೆಂಟು ವರ್ಷಗಳಿಂದ ಸಮುದಾಯದ ಅಭಿವೃದ್ಧಿಗೆ ಕೆಲಸಗಳು ನಡೆಯುತ್ತಿವೆ. ಏನೂ ಆಗಿಲ್ಲ ಎಂದು ಹೇಳುವುದು ಸರಿಯಲ್ಲ. ಮುಸ್ಲಿ­ಮರ ಅಭ್ಯುದಯ­ಕ್ಕಾಗಿ 15 ಅಂಶಗಳ ಕಾರ್ಯ­ಕ್ರಮ ರೂಪಿಸಲಾಗಿದೆ’ ಎಂದರು.
ವಿದ್ಯಾರ್ಥಿ ವೇತನಕ್ಕಾಗಿ ₨ 100 ಕೋಟಿ ಹಣ ಮೀಸಲಿರಿಸಲಾಗಿದೆ. ಈ ಯೋಜನೆ ಅನುಷ್ಠಾನವಾಗಬೇಕು’ ಎಂದರು.

Write A Comment