ಕರ್ನಾಟಕ

ಭಾರತೀಯರಿಗೆ ದುಬೈ ಬಹು ಪ್ರವೇಶ ವೀಸಾ

Pinterest LinkedIn Tumblr

de

ಬೆಂಗಳೂರು: ‘ಹಡಗು (ಕ್ರೂಸ್‌) ಪ್ರಯಾಣದ ಮೂಲಕ ಬರುವ ಭಾರತೀಯ ಪ್ರವಾಸಿಗರಿಗಾಗಿ ದುಬೈ ಪ್ರವಾಸೋದ್ಯಮ ಇಲಾಖೆಯು ನೂತನ ಬಹು ಪ್ರವೇಶ (ಮಲ್ಟಿ ಎಂಟ್ರಿ) ವೀಸಾ ಪರಿಚಯಿಸಿದೆ’ ಎಂದು ಇಲಾಖೆ ಕಾರ್ಯನಿರ್ವಾಹಕ ನಿರ್ದೇಶಕ ಹಮ್ಮದ್‌ ಬಿನ್‌ ಮೆಜ್ರಿನ್‌ ಹೇಳಿದರು.

ಇಲಾಖೆಯು ನಗರದಲ್ಲಿ ಗುರು­ವಾರ ಆಯೋಜಿಸಿದ್ದ ‘ದುಬೈ ಕ್ರೂಸ್‌ ಟೂರಿಸಂ ರೋಡ್‌ ಶೋ’ ಕಾರ್ಯ­ಕ್ರಮದಲ್ಲಿ ಅವರು ಮಾತನಾಡಿದರು. ‘ದುಬೈಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಭಾರತೀಯರು ಕೂಡ ಪ್ರಮುಖ­ರಾಗಿ­ದ್ದಾರೆ. 2013ರಲ್ಲಿ ಭಾರತದ 8.88 ಲಕ್ಷಕ್ಕೂ ಅಧಿಕ ಪ್ರವಾಸಿಗರು ದುಬೈಗೆ ಭೇಟಿ ನೀಡಿ­ದ್ದಾರೆ. ಇದು 2012ನೇ ಸಾಲಿಗೆ ಹೋಲಿ­ಸಿದರೆ ಶೇ 16 ರಷ್ಟು ಏರಿಕೆಯಾ­ಗಿದೆ. ಇದೀಗ ಕ್ರೂಸ್‌ ಪ್ರವಾಸ­ವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಈ ಅಭಿ­ಯಾನ ಹಮ್ಮಿ­ಕೊಂಡಿದ್ದೇವೆ. ಈ ನೂತನ ವೀಸಾ ಅವಧಿ 30 ದಿನ ಇರುತ್ತದೆ’ ಎಂದರು.

‘ಪ್ರಪಂಚದಲ್ಲಿರುವ ಮೂರು ಅತ್ಯುತ್ತಮ ಕ್ರೂಸ್‌ ಪ್ರವಾಸಿ ತಾಣಗಳ ಪೈಕಿ ದುಬೈ ಕೂಡ ಒಂದಾಗಿದೆ. ಒಮಾನ್‌, ಅಬುಧಾಬಿ ಪ್ರವಾ­ಸೋದ್ಯಮ ಸಚಿವಾಲಯಗಳ ಸಹಭಾಗಿತ್ವ­ದಲ್ಲಿ ಕ್ರೂಸ್‌ ಪ್ರವಾ­ಸೋದ್ಯಮಕ್ಕೆ ಉತ್ತೇಜನ ನೀಡಲು ಇಲಾಖೆ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ.   ಜತೆಗೆ, ಐದು ಕ್ರೂಸ್‌ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅಭಿವೃದ್ಧಿಯ ಮೊದಲ ಹೆಜ್ಜೆಯಾಗಿ ಮಿನಾ ರಷೀದ್‌­ನಲ್ಲಿ ನೂತನವಾಗಿ ನಿರ್ಮಿಸಿದ  ಪ್ರಮುಖ ಕ್ರೂಸ್‌ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಾಯಿತು’ ಎಂದು ಹೇಳಿದರು.

‘ದುಬೈ ಕ್ರೂಸ್‌ ಪ್ರವಾಸದ ಋತು ಅಕ್ಟೋಬರ್‌ನಿಂದ ಆರಂಭಗೊಂಡು ಜೂನ್‌ ವರೆಗೆ ಇರುತ್ತದೆ. ಈ ಅವಧಿ­ಯಲ್ಲಿ 110 ಕ್ರೂಸ್‌ಗಳ ಮೂಲಕ 3.80 ಲಕ್ಷಕ್ಕೂ ಅಧಿಕ ಪ್ರವಾಸಿಗರು ಬರುತ್ತಾರೆ. 2013–14ನೇ ಸಾಲಿನಲ್ಲಿ ಈ ಪ್ರವಾಸಿಗರ ಸಂಖ್ಯೆ­ಯಲ್ಲಿ ಶೇ 19ರಷ್ಟು ಏರಿಕೆಯಾಗಿದೆ. ಈ ಸಂಖ್ಯೆ 2016ರ ಹೊತ್ತಿಗೆ 4.50 ಲಕ್ಷಕ್ಕೆ ಹೆಚ್ಚಳವಾಗುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.

Write A Comment